Kudla City

ಟೈಪ್-2 ಮಧುಮೇಹಕ್ಕೆ ಅತ್ಯಂತ ಪರಿಣಾಮಕಾರಿ ಮದ್ದು !

ಮಧುಮೇಹ ಅರ್ಥಾತ್ ಡಯಾಬಿಟಿಸ್ ಎನ್ನುವುದು ಸಿಟಿಯಿಂದ ಹಿಡಿದು ಗ್ರಾಮೀಣ ಭಾಗದವರೆಗೂ ರೋಗಿಗಳ ವ್ಯಾಪ್ತಿ ಜಾಸ್ತಿಯಾಗುತ್ತಾ ಹೋಗುತ್ತಿದೆ. ಇದರಲ್ಲಿ ಟೈಪ್-2 ಮಧುಮೇಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.
ಮಂಗಳೂರಿನ ಗಂಜಿಮಠದಲ್ಲಿರುವ ಆಯುರ್‍ಸ್ಪರ್ಶ ಆರ್ಯುವೇದ ಆಸ್ಪತ್ರೆಯ ವೈದ್ಯರಾದ ಡಾ. ಸತೀಶ್ ಶಂಕರ ತಮ್ಮ ಸಂಶೋಧನೆಯ ಮೂಲಕ ಟೈಪ್-2 ಮಧುಮೇಹಕ್ಕೆ ಅತ್ಯಂತ ಪರಿಣಾಮಕಾರಿ ಮದ್ದು `ಮಹಾಮೇಹಾರಿವಟಿ’ ಕಂಡು ಹುಡುಕಿದ್ದಾರೆ. ಇದರಲ್ಲಿ ತ್ರಿಫಲ, ನೆಲ್ಲಿಕಾಯಿ, ಅರಿಶಿನ ಮತ್ತು ಏಕನಾಯಕನ ಬೇರು ಒಳಗೊಂಡಿದೆ. ಟೈಪ್-2 ಮಧುಮೇಹಿ ನಿಯಂತ್ರಣಕ್ಕೆ ಅತ್ಯಂತ ಉಪಯುಕ್ತವಾಗಿದೆ.

ಮಧುಮೇಹಿಗಳಿಗೆ ಬರುವ ಕಣ್ಣಿನ ತೊಂದರೆಗಳು ಮತ್ತು ಮಲಬದ್ಧತೆಯನ್ನು ನಿವಾರಿಸುವಲ್ಲಿಯೂ ಇದು ಅತ್ಯಂತ ಉಪಯುಕ್ತವಾಗಿದೆ. ಅತ್ಯಂತ ಕಡಿಮೆ ದರ ನಿಗದಿಪಡಿಸಿಕೊಂಡು ಇದನ್ನು ರಾಜ್ಯದ ನಾನಾ ಭಾಗಗಳಿಗೆ ನೀಡುವ ಮೂಲಕ ವೈದ್ಯರು ಮಧುಮೇಹಿಗಳಿಗೆ ವರವಾಗುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ 9482167168

ಮಕ್ಕಳು ಬೆಳೆಯಲು, ಬೀಳಲು ನಾವೇ ಹೊಣೆ: ಸ್ವಾಮೀಜಿ

ಮಕ್ಕಳು ಬೆಳೆಯಲೂ ನಾವೇ ಕಾರಣ, ಬೀಳಲೂ ನಾವೇ ಕಾರಣ. ಮಕ್ಕಳ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯ ಎಲ್ಲರಿಗೂ ಇರಬೇಕು ಎಂದು ಮಂಗಳೂರು ಬಿಜಿಎಸ್ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರ ಮಾತು.
ಅವರು ಶನಿವಾರ ಕಾವೂರಿನ ಬಿಜಿಎಸ್ ಎಜುಕೇಶನ್ ಸೆಂಟರ್‍ನಲ್ಲಿ ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಬಿಜಿಎಸ್ ಚುಂಚಾದ್ರಿ ಹಾಗೂ ಬಿಜಿಎಸ್ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕುಡ್ಲೋತ್ಸವ 2019 ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ಅವರ ಬೆಳವಣಿಗೆಗೆ ಪೂರಕ ಪ್ರಯತ್ನ ಸಂಸ್ಥೆಯಿಂದ ನಡೆಯುತ್ತಾ ಇದೆ. ಶಿಕ್ಷಣದ ಕ್ರಾಂತಿಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ಕನಸನ್ನು ನಿಜಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಮಕ್ಕಳು ಕೆಡುವುದಿಲ್ಲ ಅವರು ಬಿಳಿ ಹಾಳೆ ಇದ್ದ ಹಾಗೆ ನಾವು ಏನು ಗೀಚುತ್ತೇವೊ ಅದು ಅಚ್ಚಾಗುತ್ತಾ ಹೋಗುತ್ತದೆ. ಸಂಸ್ಕಾರ, ಉತ್ತಮ ಶಿಕ್ಷಣ ಹಾಗೂ ಜೀವನ ಕೌಶಲ್ಯ ಈ ಬಗೆಯಲ್ಲಿ ನಾವೇನು ನೀಡುತ್ತೇವೆಯೊ ಅದು ಎಳೆಯರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದರು.
ಈ ಸಂದರ್ಭ ಮನಪಾ ಕಮೀಷನರ್ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ನಾಗಮಂಗಲ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಿಇಒ ಎನ್.ಎಸ್.ರಾಮೇಗೌಡ, ಎಜುಕೇಶನ್ ಸೆಂಟರ್‍ನ ವ್ಯವಸ್ಥಾಪಕ ಸುಬ್ಬ ಕಾರಡ್ಕ ಉಪಸ್ಥಿತರಿದ್ದರು.

ಕರಾವಳಿಯಲ್ಲಿ ನೀರುಳ್ಳಿ ದರ ಇಳಿಯಲು ಕಾರಣ ಏನೂ ಗೊತ್ತಾ?

ಕಳೆದ ಎರಡು ವಾರಗಳಿಂದ ನಿರಂತರವಾಗಿ ಗ್ರಾಹಕರಿಗೆ ಕಣ್ಣೀರು ತರಿಸಿದ ನೀರುಳ್ಳಿಯ ರೇಟ್ ನಿಧಾನವಾಗಿ ಇಳಿಮುಖವಾಗುತ್ತಾ ಸಾಗುತ್ತಿದೆ. ಎರಡು ವಾರಗಳಲ್ಲಿ 150 ರೂ. ದಾಖಲಿಸಿದ ರೇಟ್ ಈಗ 70ರಿಂದ 80 ರೂ.ಗೆ ಬಂದು ನಿಂತಿದೆ. ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‍ನಲ್ಲಿ ಎರಡು ವಾರಗಳಿಂದ ರೇಟ್ ಏರುಗತಿಯಲ್ಲಿಯೇ ಸಾಗುತ್ತಿತ್ತು.
ಆದರೆ ಸೋಮವಾರದಿಂದ ನಿಧಾನವಾಗಿ ನೀರುಳ್ಳಿಯ ದರ ಇಳಿಕೆಯ ಕಡೆಗೆ ಸಾಗಿದೆ. ಸೋಮವಾರ ಒಂದೇ ದಿನ 50 ರೂ. ಇಳಿಕೆಯಾದರೆ ಮತ್ತೆ ಉಳಿದ ದಿನಗಳಲ್ಲಿ ಸಾಧಾರಣವಾಗಿ 10 ರೂ. ನಂತೆ ಇಳಿಯುತ್ತಾ ಈಗ ಕೆಜಿ ನೀರುಳ್ಳಿಗೆ ಭರ್ತಿ 70ರಿಂದ 80 ರೂ.ಗೆ ಮಾರಾಟ ಮಾಡಲಾಗುತ್ತಿದೆ. ವಿಶೇಷವಾಗಿ ಮಹಾರಾಷ್ಟ್ರದ ಹಾಗೂ ಪುಣೆಯಿಂದ ನೀರುಳ್ಳಿ ಜಾಸ್ತಿಯಾಗಿ ಪೂರೈಕೆಯಾಗುತ್ತಿದ್ದಂತೆ ಇಲ್ಲಿ ದರ ಕುಸಿತ ಕಾಣುತ್ತಿದೆ. ಮುಂದಿನ ವಾರ ಮತ್ತಷ್ಟೂ ದರ ಕುಸಿತವಾಗುವ ನಿರೀಕ್ಷೆಯಿದೆ.

ಹೊಸ ವರ್ಷ ಕುಡ್ಲದ ಯುವಜನತೆಗೆ ಖಡಕ್ ರೂಲ್ಸ್ ಬಂತು

ಹೊಸ ವರ್ಷ ಕುಡ್ಲದ ಯುವಜನತೆಗೆ ಖಡಕ್ ರೂಲ್ಸ್ ಬಂತು 2020ರ ಹೊಸ ವರ್ಷದ ಆಚರಣೆ ಪ್ರಯುಕ್ತ ಮಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು, ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಿಗೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ.

ಹೊಸ ವರ್ಷಾಚರಣೆಯ ಸಂತೋಷ ಕೂಟಗಳನ್ನು ನಡೆಸುವ ನಗರದ ಎಲ್ಲ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ಪಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳ ಮಾಲೀಕರು/ ವ್ಯವಸ್ಥಾಪಕರು/ಆಡಳಿತ ವರ್ಗ ಕಡ್ಡಾಯವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಡಿ.24ರಂದು ಸಂಜೆ 4 ಗಂಟೆಯೊಳಗೆ ಅರ್ಜಿ ಸಲ್ಲಿಸಿ, ಪೂರ್ವಾನುಮತಿ ಪಡೆದುಕೊಳ್ಳಬೇಕು ಎನ್ನುವುದು ಮಂಗಳೂರು ಪೊಲೀಸ್ ಕಮೀಷನರ್ ಡಾ. ಹರ್ಷ ಮಾಹಿತಿ ನೀಡಿದ್ದಾರೆ.

ಪೂರ್ವಾನುಮತಿ ಪಡೆಯದೆ ನೂತನ ವರ್ಷ ಆಚರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಕಾರ್ಯಕ್ರಮಗಳನ್ನು ಮಧ್ಯರಾತ್ರಿ 12 ಗಂಟೆಯೊಳಗೆ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕು. ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜಿಸುವವರು ಸಂಬಂಧಪಟ್ಟ ಇಲಾಖೆಗಳಿಂದ ಪಡೆದ ಪರವಾನಗಿಯಲ್ಲಿ ನೀಡಿದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೊಸ ವರ್ಷ ಆಚರಿಸುವವರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಅಂಥವರ ಬಗ್ಗೆ ನಿಗಾ ವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಕಾರ್ಯಪಡೆ ಮಂಗಳೂರು ನಗರದ ಎಲ್ಲ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಏರ್ಪಡಿಸಲಾಗಿರುವ ಹೊಸ ವರ್ಷಚರಣೆ ಕಾರ್ಯಕ್ರಮ ನೆಪದಲ್ಲಿ ಬಸ್ ತಂಗುದಾಣ, ಸಾರ್ವಜನಿಕ ಉದ್ಯಾನವನಗಳು, ಕ್ರೀಡಾಂಗಣ, ರೈಲ್ವೆ ಸ್ಟೇಶನ್ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ.

ವಿದ್ಯಾರ್ಥಿಗಳು ಹಾಗೂ ಯುವಕರು ಡಿ.31ರ ರಾತ್ರಿ ಹೊಸ ವರ್ಷಾಚರಣೆ ನೆಪದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ಅಸಭ್ಯವಾಗಿ ವರ್ತಿಸಬಾರದು. ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ವಾಹನಗಳನ್ನು ವೀಲಿಂಗ್ ಮತ್ತು ಡ್ರಾಗ್ ರೇಸ್ ಮಾಡುವುದನ್ನು, ಬೊಬ್ಬೆ ಹಾಕುವುದು ಹಾಗೂ ಅತೀ ವೇಗವಾಗಿ ವಾಹನಗಳನ್ನು ಚಲಾಯಿಸುವುದು ಮತ್ತು ಕರ್ಕಶ ಶಬ್ದ ಮಾಡುವುದನ್ನು ತಡೆಗಟ್ಟಲು ಕೂಡ ಸಂಚಾರ ಪೆÇಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಪಡೆಯು ಮಂಗಳೂರು ನಗರದ ಎಲ್ಲ ಪ್ರದೇಶಗಳಲ್ಲಿ ಚಾಲನೆಯಲ್ಲಿರುತ್ತದೆ. ಕಾನೂನು ಉಲ್ಲಂಘಿಸುವ ಪ್ರಕರಣಗಳು ಕಂಡುಬಂದಲ್ಲಿ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ.

ಉರ್ವ ಪೊಂಪೈ ಮಾತೆಯ ಹಬ್ಬ

ಉರ್ವದಲ್ಲಿರುವ ಪೊಂಪೈ ಮಾತೆಯ ಪುಣ್ಯಕ್ಷೇತ್ರ ವಾರ್ಷಿಕ ಹಬ್ಬ ಮತ್ತೆ ಬಂದಿದೆ. ಡಿ. 8,2019 ರಂದು ಹಬ್ಬದ ಸಂಭ್ರಮದ ಪೂಜೆ, ಧಾರ್ಮಿಕ ಕಾರ‍್ಯಕ್ರಮಗಳು ನಡೆಯಲಿದೆ.
ವಿಶೇಷವಾಗಿ ಮಂಗಳೂರು ನಗರದೊಳಗೆ ಇರುವ ಚರ್ಚ್‌ಗಳಲ್ಲಿ ಈ ಮಾತೆಯ ಪುಣ್ಯಕ್ಷೇತ್ರಕ್ಕೆ ಸಾಕಷ್ಟು ಭಕ್ತಾದಿಗಳು ಬರುತ್ತಾರೆ. ಅಂದಹಾಗೆ ಪೊಂಪೈ ಮಾತೆ ಯಾರು ಎಂದರೆ ಯೇಸುವಿನ ತಾಯಿ ಮರಿಯಳನ್ನು ಪೊಂಪೈ ಮಾತೆ ಎಂದು ಕರೆಯಲಾಗುತ್ತದೆ.
ಇಟಲಿಯ ಪೊಂಪೈ ಕಣಿವೆ ಪ್ರದೇಶದಲ್ಲಿ ಜನರು ದೈವಭಕ್ತಿಯಾಗಲಿ, ಪರಸ್ಪರ ಕಾಳಜಿಯಾಗಲೀ ಇಲ್ಲದೆ ಅನಾಗರಿಕರಂತೆ ಬಾಳುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಜನರ ಮನಪರಿವರ್ತನೆಗಾಗಿ ಬಾರ್ತೊಲೊ ಲೊಂಗೊ ಎಂಬ ಯುವ ವಕೀಲರಿಗೆ ಮಾತೆ ಮರಿಯಳು ದರ್ಶನವಿತ್ತು ಪ್ರಾರ್ಥಿಸಲು ಕರೆ ನೀಡಿದರು. ಈ ದರ್ಶನದ ನಂತರ ಪೊಂಪೈ ಊರಿನಲ್ಲಿ ಜನರ ಮನ ಪರಿವರ್ತನೆ ಯಾಯಿತು ಮತ್ತು ಊರಿಗೇ ಊರೇ ಸರಿದಾರಿಗೆ ಬಂತು.
ಪೊಂಪೈ ನಗರದಲ್ಲಿ ಮಾತೆ ಮರಿಯಳ ದರ್ಶನವಾಗಿರುವುದರಿಂದ ಆಕೆಯನ್ನು ಪೊಂಪೈ ಮಾತೆಯೆಂಬುದಾಗಿ ಕರೆಯುತ್ತಾರೆ. ಪೊಂಪೈ ಮಾತೆಯ ಭಕ್ತಿ ಪ್ರಪಂಚಾದಾದ್ಯಂತ ಹಬ್ಬಿತು. ಉರ್ವ ಚರ್ಚ್‌ನಲ್ಲಿ ಪೊಂಪೈಮಾತೆಗಾಗಿ 1895 ರಲ್ಲಿ ಒಂದು ಪೀಠವನ್ನು ಸ್ಥಾಪಿಸುವುದರ ಮುಖಾಂತರ ಪೊಂಪೈ ಮಾತೆಯ ಭಕ್ತಿ ಆರಂಭವಾಯ್ತು. 1995 ರಲ್ಲಿ ಈಗಿರುವ ಪುಣ್ಯಕ್ಶೇತ್ರದ ಕಟ್ಟಡವನ್ನು ಕಟ್ಟಲಾಯಿತು.