ಹಸಿರು ಶಾರದೆ ಎನ್ನುವ ಕಲ್ಪನೆಯೇ ಬಹಳ ಅಪರೂಪ. ಜಾಗತಿಕ ಮಟ್ಟದಲ್ಲಿ ಹಸಿರು ಉಳಿಸಲು ಹೋರಾಟ ನಡೆಯುತ್ತಿದ್ದಾಗ ಮಂಗಳೂರಿನ ಪಡೀಲ್ ಕರ್ಮಾರ್‌ನಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿಯವರು ಈ ಬಾರಿ ತಮ್ಮ ಶಾರದೆ ಮಾತೆಯನ್ನು ಹಸಿರೀಕರಣದ ಮೂಲಕ ಅಭಿವ್ಯಕ್ತಗೊಳಿಸಿದ್ದಾರೆ.
ಶಾರದಾ ಮಾತೆಯ ಮೂರ್ತಿಯ ಅಸುಪಾಸಿನಲ್ಲಿ ವಿಶೇಷವಾದ ಗಿಡಗಳನ್ನು ಇಡುವ ಜತೆಯಲ್ಲಿ ಭಕ್ತರಿಗೂ ಹಸಿರಿನ ಕುರಿತು ಜಾಗೃತಿ, ಮಾಹಿತಿಯನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಪೂರ್ತಿಯಾಗಿ ಶಾರದಾ ಮಾತೆಯ ವೇದಿಕೆಯ ತುಂಬಾ ಹಸಿರಿನ ತೋರಣ, ಚಪ್ಪರ ಎಲ್ಲವೂ ಭಕ್ತರಿಗೆ ಹೊಸ ಅನುಭವವನ್ನು ನೀಡಬಲ್ಲದು.
Kudla City
ಒಂದೇ ದಿನದಲ್ಲಿ ಕೋಟಿ ಗಳಿಸಿದ ಸುಳ್ಯದ ಹುಡುಗ
ಸುಳ್ಯದ ಯುವಕನೋರ್ವನಿಗೆ ಅದೃಷ್ಟದ ಬಾಗಿಲು ತೆರೆದಿದ್ದು, 12 ಮಿಲಿಯನ್ ದಿರ್ಹಂ (ಸುಮಾರು 23 ಕೋಟಿ) ಅಬುದಾಬಿ ಲಾಟರಿಯ ಪ್ರಥಮ ಬಹುಮಾನ ಲಭಿಸಿದೆ.
ಉದ್ಯಾನ ನಗರಿ ಮುಂಬೈನ ಕಂಪನಿಯೊಂದರಲ್ಲಿ ಅಕೌಂಟೆಂಟ್ ಅಗಿರುವ ಸುಳ್ಯದ ಜಟ್ಟಿಪಳ್ಳ ನಿವಾಸಿ ಫಯಾಝ್ ಈ ಅದೃಷ್ಟದಾತ. ಕಳೆದ ಆರು ತಿಂಗಳಿನಿಂದ ತನ್ನ ಸ್ನೇಹಿತನೋರ್ವನ ಮೂಲಕ ಅಬುದಾಬಿ ಲಾಟರಿ ಟಿಕೆಟ್ ಗಳನ್ನು ಖರೀದಿಸುತ್ತಿದ್ದ ಫಯಾಝ್ ಗೆ ಅದೃಷ್ಟ ಖುಲಾಯಿಸಿದ್ದು, ಸುಮಾರು 23 ಕೋಟಿಯನ್ನು ಗೆಲ್ಲುವ ಮೂಲಕ ದಿನ ಬೆಳಗಾಗುವುದರೊಳಗೆ ಕೋಟಿಯಾಧಿಪತಿಯಾಗಿದ್ದಾರೆ.
ದೇವಿಯ ಆರಾಧನೆಯೇ ಪಿಲಿವೇಷಕ್ಕೆ ಮುಖ್ಯ
ಪಿಲಿವೇಷ ಮೊದಲ ಕುಣಿತ ಆರಂಭವಾಗುವುದು ದೇವಸ್ಥಾನದಿಂದ. ವೇಷ ಹಾಕಿ ಮೊದಲು ದೇವರ ಮುಂದೆ ಕುಣಿದ ಬಳಿಕ ಪೇಟೆ ಬೀದಿಗಳಿಗೆ, ಮನೆಮನೆಗಳಿಗೆ ತೆರಳುತ್ತಾರೆ. ಹತ್ತು ದಿನಗಳ ಕುಣಿತದ ಕೊನೆಯಲ್ಲಿ ವೇಷ ಕಳಚುವ ಮುನ್ನ ಕೊನೆಯಕುಣಿತವೂ ದೇವರ ಮುಂದೆಯೇ ನಡೆಯುತ್ತದೆ.
ಕುಣಿತ ಮೆಚ್ಚಿ ಜನರು ಕೊಟ್ಟ ಹಣದಲ್ಲಿ ಸ್ವಲ್ಪ ಭಾಗವನ್ನು ದೇವರಿಗೆ ಕಾಣಿಕೆ ಹಾಕಿ ಉಳಿದದ್ದನ್ನು ತಮಗಾಗಿ ಬಳಸುತ್ತಾರೆ ಈ ವೇಷಧಾರಿಗಳು. ಹೀಗೆ ಪ್ರತಿ ಕುಣಿತದ ಹಿಂದೆ ದೈವೀ ಸಮರ್ಪಣೆಯ ನಂಬಿಕೆಯೂ ಇದೆ.
ಕಿಸ್ ದಿ ಬೊಂಡ ವಿದ್ಯಾರ್ಥಿಗಳ ಅಭಿಯಾನ
ಮಂಗಳೂರಿನಲ್ಲಿ ಹೊಸ ಅಭಿಯಾನವೊಂದು ಆರಂಭವಾಗಿದೆ. ‘ಕಿಸ್ ದಿ ಬೊಂಡ’ ಎನ್ನುವ ಮೂಲಕ ಬೊಂಡವನ್ನು ಪ್ಲಾಸ್ಟಿಕ್ ಸ್ಟ್ರಾ ಇಲ್ಲದೇ ಕುಡಿಯುವ ವಿನೂತನ ಕೆಲಸವಿದು. ಪ್ಲಾಸ್ಟಿಕ್ ಬಳಕೆಯನ್ನೇ ಪೂರ್ಣವಾಗಿ ಬಿಟ್ಟು ಬಿಡೋಣ ಎನ್ನುವ ಸಂದೇಶ ಸಾರುವ ಈ ಅಭಿಯಾನದ ಹಿಂದೆ ವಿದ್ಯಾರ್ಥಿಗಳ ತಂಡವೊಂದು ಕೆಲಸ ಮಾಡಿದೆ.
ಜ್ಯೂಸ್ ಅಂಗಡಿ ಸೇರಿದಂತೆ ಪ್ರತಿಯೊಂದು ಕಡೆಯಲ್ಲೂ ಜ್ಯೂಸ್ ಸೇರಿದಂತೆ ತಂಪು ಪಾನೀಯಗಳನ್ನು ಪ್ಲಾಸ್ಟಿಕ್ ಸ್ಟ್ರಾ ಬಿಟ್ಟು ಉಳಿದ ರೀತಿಯಲ್ಲಿ ಕುಡಿಯಲು ಮುಂದಾಗಿ ಎನ್ನುವುದೇ ಈ ಅಭಿಯಾನದ ಮೂಲ ಉದ್ದೇಶ. ವಿದ್ಯಾರ್ಥಿಗಳ ಈ ಚಾಲೆಂಜ್‌ಗೆ ನೀವು ಸಹಕರಿಸಿ.
ಮಾರ್ನೆಮಿಯ ಕುಡ್ಲದ ಪಿಲಿವೇಶ
ನವರಾತ್ರಿ, ಮಹಾನವಮಿ ಎಂದರೆ ಕರಾವಳಿ ಮಂದಿಗೆ ಥಟ್ಟನೆ ಹುಲಿ ವೇಷದ ನೆನಪು. ನವರಾತ್ರಿ ಆರಂಭವಾಗುತ್ತಿದ್ದಂತೆ ಕರಾವಳಿಯಲ್ಲಿ ‘ಡೆರೆಮೆ ಟೆಟ್ಟೆ.. ಡೆರೆಮೆ ಟೆಟ್ಟೆ….’ ತಾರ್ಸೆ(ತಮಟೆ) ಸದ್ದು ಅನುರಣನ. ಥೇಟ್ ಹುಲಿಯಂತೇ ಕಾಣುವ ವೇಷಧಾರಿಗಳಿಂದ ರಸ್ತೆ-ವೃತ್ತಗಳಲ್ಲಿ ವಿಶಿಷ್ಟ ನರ್ತನ.
ಮಂಗಳೂರು ದಸರಾ ವೇಳೆ ರಥಬೀದಿ ವೆಂಕಟರಮಣ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಬೋಳಾರ ಮಂಗಳಾದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಆರಂಭ ಮತ್ತು ದಸರಾ ಮೆರವಣಿಗೆಗೆ ಹುಲಿವೇಷ ಆಚರಣೆ.
ಮಂಗಳೂರಿನಲ್ಲಿ ಹುಲಿವೇಷದ 40ಕ್ಕೂ ಅಧಿಕ ತಂಡಗಳಿದ್ದು, ಒಂದೊಂದು ತಂಡದಲ್ಲಿ 25 ವೇಷಧಾರಿಗಳವರೆಗೂ ಇರುತ್ತಾರೆ. ಶಾರದೆ ಮೆರವಣಿಗೆ ಮುಗಿದ ಬಳಿಕ ತಂಡಗಳಿಗೆ ‘ಮರ್ಯಾದೆ’ ಹೆಸರಿನ ಗೌರವ. ಈ ಬಿರುದು ಪಡೆಯುವುದು ತಂಡಗಳಿಗೆ ಪ್ರತಿಷ್ಠೆ.
ಕರಾವಳಿಯ ಹುಲಿವೇಷ ವಿಶಿಷ್ಟ. ತಾರ್ಸೆ, ಡೋಲಿನ ಲಯಕ್ಕೆ ವೇಷಧಾರಿಗಳು ಪ್ರದರ್ಶಿಸುವ ಆಟಗಳ ವರಸೆ ಇತರೆಡೆಗಿಂಥ ಭಿನ್ನ. ಇತ್ತೀಚೆಗೆ ರಾಜ್ಯದ ವಿವಿಧೆಡೆಗೂ ಇಲ್ಲಿನ ಹುಲಿವೇಷ ನರ್ತನಕ್ಕೆ ಬೇಡಿಕೆ ಬರುತ್ತಿದೆ. ಇಲ್ಲಿನ ಹುಲಿವೇಷ ತಂಡವೊಂದು ಫ್ರಾನ್ಸ್‌ಗೂ ತೆರಳಿ ಕರಾವಳಿಯ ಜಾನಪದ ಕಲೆ ಪ್ರದರ್ಶಿಸಿ ಬಂದಿದೆ.
ವೇಷಧಾರಿ ತಾಯಿ ಹುಲಿ ಮರಿಗಳಿಗೆ ಬೇಟೆ ಕಲಿಸುವುದು, ಹಾಲುಣಿಸುವುದು, ಮರಿ ಹುಲಿಗಳ ಆಟ, ವಯಸ್ಸಿಗೆ ಬಂದ ಹುಲಿಗಳ ಕಾದಾಟವನ್ನು ಕುಣಿತದಲ್ಲಿಯೇ ಪ್ರದರ್ಶಿಸುತ್ತಾರೆ. ಪಲ್ಟಿ ಹೊಡೆಯುವುದು, ಮೆಣಸಿನ ಹುಡಿ ಕಲಕಿದ ನೀರಿನಿಂದ ಹಿಮ್ಮುಖವಾಗಿ ನಾಣ್ಯ ತೆಗೆಯವುದು, ಝಂಡಾ ಕಸರತ್ತು, ಬಾಯಿಂದ ಜೀವಂತ ಕುರಿ ಕಚ್ಚಿ ಎಸೆಯುವುದು, ‘ಅಕ್ಕಿ ಮುಡಿ’ ಎತ್ತುವ ಕಸರತ್ತು ಹುಲಿವೇಷದ ಗತ್ತು.
ನವರಾತ್ರಿಗೆ ವೇಷ ಧರಿಸುವುದಾದರೆ ಚೌತಿಗೆ ಅಥವಾ ನವರಾತ್ರಿ ಮೊದಲ ದಿನ ತೆಂಗಿನ ಕಾಯಿ, ಅಕ್ಕಿ, ಬಾಳೆಹಣ್ಣು ಇಟ್ಟು, ಗಣಪತಿ ನೆನೆದು ಸಂಕಲ್ಪ ಮಾಡಬೇಕು. ಅಂದು ತಾರ್ಸೆಯವರಿಂದ ಕುಣಿತದ ಅಭ್ಯಾಸ. ಮಕ್ಕಳಾದರೆ ನುರಿತ ಹುಲಿವೇಷಧಾರಿಗಳ ಬಳಿ ಒಂದೆರಡು ವಾರ ಕುಣಿತ ಕಲಿಯುತ್ತಾರೆ. ವೇಷ ಹಾಕುವವರು ಮಾಂಸಾಹಾರ, ಮದ್ಯ ಸೇವಿಸುವಂತಿಲ್ಲ. ಈ ಸಂಪ್ರದಾಯಕ್ಕೆ ಕರಾವಳಿ ಭಾಗದಲ್ಲಿ ಊದು ಹಾಕುವುದು ಎಂಬ ಹೆಸರು.
ಈ ವೇಷ ಬಣ್ಣದ ಮೂಲಕ ಗಮನ ಸೆಳೆಯುತ್ತದೆ. 10-12 ಮಂದಿ ತಂಡಕ್ಕೆ ಬಣ್ಣ ಹಚ್ಚಬೇಕೆಂದರೆ ಇಡೀ ರಾತ್ರಿ ಕೆಲಸ. ಒಬ್ಬ ವೇಷಧಾರಿಗೆ ಬಣ್ಣ ಬಳಿಯಲು 3 ತಾಸು ಬೇಕಾಗುತ್ತದೆ. ಬಣ್ಣ ಹಾಕಲು ವೇಷಧಾರಿ ಮೈಯ ರೋಮವನ್ನೆಲ್ಲ ತೆಗೆಯಬೇಕು. ಇದಕ್ಕೆಲ್ಲ ನುರಿತವರನ್ನು ಮೊದಲೇ ಬುಕ್ ಮಾಡಿಟ್ಟುಕೊಳ್ಳಬೇಕು. ಹಿಂದೆಲ್ಲ ಸಾಂಪ್ರದಾಯಿಕ ಬಣ್ಣ ಬಳಸುತ್ತಿದ್ದರು. ಬಣ್ಣ ವಾರಗಟ್ಟಲೆ ಉಳಿಯಲು ಮೊಟ್ಟೆಯ ಬಿಳಿ ದ್ರವ ಬಳಸುತ್ತಿದ್ದರು. ಈಗ ರಾಸಾಯನಿಕ ಬಣ್ಣವೇ ಗತಿಯಾಗಿದ್ದು, ಬೇಗನೇ ಕಿತ್ತು ಹೋಗುತ್ತದೆ.
ಕುರಿ ಹೊಡೆಯುವ ಆಚರಣೆ ಅಂದುಕೊಂಡಷ್ಟು ಸುಲಭವಲ್ಲ. ಎರಡು ವಾರ ಗೋಣಿಚೀಲದಲ್ಲಿ ಮರಳು ತುಂಬಿಸಿ ಹಲ್ಲುಕಚ್ಚಿ ಎತ್ತುವ ಅಭ್ಯಾಸ ನಡೆಸಬೇಕು. ಇಲ್ಲದೆ ಹೋದರೆ ಹಲ್ಲು ಕಿತ್ತುಹೋಗುತ್ತದೆ. ಹಲ್ಲು ಮುರಿದುಕೊಂಡವರು, ವೇಷ ತ್ಯಜಿಸಿದವರೂ ಇದ್ದಾರೆ.
ಹುಲಿವೇಷ ಕುಣಿತವನ್ನೂ ಹೆಜ್ಜೆ ಆಧರಿಸಿ ಒಂದು ಪೌಲ, ಎರಡು ಪೌಲ… ಎಂಟು ಪೌಲ.. ಕುಣಿತ ಎಂದು ವಿಂಗಡಿಸಲಾಗುತ್ತದೆ. ಕುಳಿತೇ ಕುಣಿಯುವ ಹಾಗೂ ನಿಂತು ಕುಣಿಯುವ ಆಟಗಳಲ್ಲಿ 20ಕ್ಕೂ ಅಧಿಕ ವರಸೆಗಳಿವೆ.