Kudla City

ಆಸ್ಪತ್ರೆಗೆ ಹೋಗುವಾಗ ಜಾಗ್ರತೆ ಮಾರಾಯ್ರೆ !

ಮಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಜತೆಯಲ್ಲಿ ಆಸ್ಪತ್ರೆಗಳು ಕೂಡ ಬೇಕಾದಷ್ಟು ಹುಟ್ಟಿಕೊಳ್ಳುತ್ತಿದೆ. ವಿಶೇಷ ಎಂದರೆ ಕುಡ್ಲದ ಆಸ್ಪತ್ರೆಗಳಿಗೆ ರೋಗಿಗಳು ಬಂದಾಗ ಯಾವ ಚಿಕಿತ್ಸೆಗೆ ಬರುತ್ತಿದ್ದೇವೆ ಎನ್ನುವ ಅರಿವು ರೋಗಿಗಳಿಗೆ ಇದ್ದರೆ ಬಹಳ ಒಳ್ಳೆಯದು. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ.

ಕಾಸರಗೋಡಿನ ಮಹಿಳೆಯೊಬ್ಬರು ಕಾಲುನೋವಿನ ಕಾರಣಕ್ಕೆ ನಗರದ ಖ್ಯಾತ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ತಪಾಸಣೆ ನಡೆಸಿದ ವೈದ್ಯರು ಅವರ ಬಲಕಾಲನ್ನು ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸಲಹೆ ನೀಡುತ್ತಾರೆ. ಅದರಂತೆ ಬೆಳಗ್ಗೆ ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲಾಗುತ್ತದೆ.

ಆದರೆ ಆಪರೇಷನ್ ಮಾಡಿ ಮರಳಿ ಬರುವಾಗ ಎಡಗಾಲಿಗೆ ಆಪರೇಷನ್ ಮಾಡಲಾಗಿತ್ತು. ಈ ಕಾರಣದಿಂದ ಮಂಗಳೂರಿನ ಖ್ಯಾತ ಆಸ್ಪತ್ರೆಯ ವೈದ್ಯರು ಎಡವಟ್ಟು ಮಾಡುವ ಮೂಲಕ ವೈದ್ಯ ಲೋಕದಲ್ಲೂ ಇಂತಹ ಘಟನೆಗಳು ನಡೆಯುತ್ತದೆ ಎನ್ನುವ ಮಾತು ಫ್ರೂವ್ ಆಗಿದೆ. ಮಾಡಿದ ತಪ್ಪಿಗೆ ಆಸ್ಪತ್ರೆಯವರು ಮಹಿಳೆಯ ಪೂರ್ಣ ಖರ್ಚು ವೆಚ್ಚವನ್ನು ಕೊಡುವ ಕೆಲಸಕ್ಕೆ ಮುಂದಾಗಿರುವ ಪರಿಣಾಮ ಪ್ರಕರಣ ರಾಜಿಯಲ್ಲಿ ಮುಗಿದಿದೆ.

ಕುಡ್ಲದಲ್ಲಿ ಸಿಗುವ ಇಂದಿನ ತಾಜಾ ಮಾತು ಎಂಚಿನ ಬರ್ಸಾ ಮಾರಾಯ್ರೆ

ಮಳೆಗಾಲ ಎನ್ನುವ ಮಾತು ಕುಡ್ಲಕ್ಕೆ ಸರಿಯಾಗಿ ಅನ್ವಯವಾಗಲೇ ಇಲ್ಲ. ಆದರೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಕುಡ್ಲದ ಜನರಿಗೆ ರಿಯಲ್ ಮಳೆಗಾಲವನ್ನು ನೆನಪಿಸಿತು. ಬಹಳ ದಿನಗಳ ನಂತರ ಕುಡ್ಲದ ಜನರು ಎಂಚಿನ ಬರ್ಸಾ ಮಾರಾಯ್ರೆ ನನಲಾ ಬೋಡು( ಎಂತಹ ಮಳೆ ಮಾರಾಯ್ರೆ ಇನ್ನಷ್ಟು ಬರಲಿ) ಎನ್ನುವ ಮಾತುಗಳೇ ಜಾಸ್ತಿಯಾಗಿ ಕೇಳಲು ಸಿಕ್ಕಿದೆ. ಮಳೆರಾಯನ ಅದ್ಭುತ ಆಟ ಕ್ರಿಕೆಟ್, ರಾಜಕೀಯಕ್ಕಿಂತಲ್ಲೂ ವಿಶೇಷ ದಾಖಲೆಯಾಗಿದೆ.

ಕುಡ್ಲದಲ್ಲಿ ಪರಿಚಯವಾದ ಚಾಂದಿನಿ ಮೀನು !

ಮಳೆಗಾಲದಲ್ಲಿ ಮೀನು ಮಾರುಕಟ್ಟೆಯಲ್ಲಿ ಸಮುದ್ರದ ತಾಜಾ ಮೀನು ವಿರಳವಾಗುತ್ತಿದ್ದಂತೆ ಹೊಳೆ ಮೀನುಗಳು ಬರಲಾರಂಭಿಸುತ್ತವೆ. ಈಗ ಉತ್ತರ ಕನ್ನಡ ಕಡೆಯ ಡ್ಯಾಮ್‌ಗಳಲ್ಲಿ ಗಾಳ ಹಾಕಿ ಹಿಡಿಯಲಾಗುವ ಅಪರೂಪದ ಚಾಂದಿನಿ ಮೀನು ಮಾರುಕಟ್ಟೆಗೆ ಬರಲಾರಂಭವಾಗಿದೆ.
ಇದು ನೋಡಲು ಸಮುದ್ರದ ಕೆಂಬೇರಿ ಮೀನಿನ ಮಾದರಿಯದ್ದು. ರುಚಿಯಲ್ಲೂ ಅದೇ ಹೋಲಿಕೆ. ಹಾಗಾಗಿ ತಾಜಾ ಚಾಂದಿನಿ ಮೀನನ್ನು ಗ್ರಾಹಕರು ಇಷ್ಟಪಡುವಂತಾಗಿದೆ. ಹೊಟೇಲುಗಳಲ್ಲಿಯೂ ಈ ಮೀನು ಬೇಡಿಕೆ ಗಳಿಸಿದೆ.
ಕೆಜಿಯೊಂದಕ್ಕೆ 300 ರೂ. ಬೆಲೆ ಇದೆ. ಸುಮಾರು 3 ಕೆಜಿಯಷ್ಟು ತೂಕದ ಮೀನು ಕೂಡ ಮೀನು ಮಾರಾಟ ಮಹಿಳೆಯ ಬಳಿ ಕಾಣಸಿಕ್ಕಿದೆ. ಸಿಹಿ ನೀರಿನ ಬಲು ಅಪರೂಪದ ಈ ಮೀನನ್ನು ಒಳನಾಡಿನ ಕೆಲವೆಡೆ ಕೃಷಿ ಮಾಡುತ್ತಾರೆ. ವ್ಯಾಪಾರಿಗಳು ತರಿಸಿ ವ್ಯಾಪಾರ ಮಾಡುತ್ತಿದ್ದಾರೆ. ಒಮ್ಮೆ ಖರೀದಿಸಿದ ಮಂದಿ ಮತ್ತೆ ಕೇಳುತ್ತಿದ್ದಾರೆ ಎನ್ನುವುದು ಫಿಶ್ ಮಾರ್ಕೆಟ್‌ನವರ ಮಾತು.

ಕುಡ್ಲ ಪೊಲೀಸರ ಹೈಟೆಕ್ ಮಂತ್ರ

ಪೊಲೀಸ್ ಎಂದಾಕ್ಷಣ ಏನೋ ಅವರ ಕುರಿತು ಭಾವನೆಯೊಂದು ಬೆಳೆದು ಬಿಡುತ್ತದೆ. ಆದರೆ ಇಂತಹ ಭಾವನೆಗಳನ್ನು ಬದಲಿಸುವ ಜತೆಯಲ್ಲಿ ಜನರು ಕೂಡ ಪೊಲೀಸ್ ರಿಗೆ ನೆರವಾಗಿ ಎನ್ನುವ ಮಾತು ಪದೇ ಪದೇ ಇಲಾಖೆ ಹೇಳುತ್ತಾ ಬಂದಿದೆ.

ಆದರೆ‌ ಕುಡ್ಲದ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಸಮಸ್ಯೆಯನ್ನು ನೇರವಾಗಿ ನನಗೆ ತಿಳಿಸಿ ಯಾವುದೇ ಮಾಹಿತಿ‌ ಇದ್ದರೂ ಸಾಮಾಜಿಕ ಜಾಲತಾಣ ವಾದ ವ್ಯಾಟ್ಸಪ್ , ಟ್ವಿಟರ್ ಜತೆಗೆ ಇಮೇಲ್ ಮೂಲಕವೂ ಹಂಚಿಕೊಳ್ಳುವ ಕೆಲಸ ಮಾಡಿ ಎಂದಿದ್ದಾರೆ. ಈ ಮೂಲಕ ಪೊಲೀಸ್ ಕಮೀಷನರ್ ಜನರ ಸಮಸ್ಯೆಗಳಿಗೆ ಕಿವಿ ಯಾಗಿದ್ದಾರೆ.

ಕುಡ್ಲದ ಮಲ್ಲಿಗೆ ಮಕ್ಕಳಿಗೆ ವಿದ್ಯೆ ‌ಕೊಟ್ಟಿತು!

ಸರಕಾರಿ ಶಾಲೆಗಳಲ್ಲಿ ಸರಕಾರ ನೀಡಿದ ಶಿಕ್ಷಕರ ಸಂಖ್ಯೆ ಸಾಲದಾದಾಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾಭಿವೃದ್ಧಿ ಸಮಿತಿ ಗೌರವ ಶಿಕ್ಷಕರನ್ನು ನೇಮಿಸುತ್ತದೆ. ಆದರೆ ಹೀಗೆ ನೇಮಕ ಮಾಡುವ ಗೌರವ ಶಿಕ್ಷಕರಿಗೆ ವೇತನ ನೀಡಲು ಪರದಾಡುವಂತಹ ಪರಿಸ್ಥಿತಿ ಇದೆ. ಇದಕ್ಕೆ ಭಿನ್ನವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಲ ಶಾಲೆ ಮಲ್ಲಿಗೆ ಬೆಳೆದು ಶಿಕ್ಷಕಿಯರ ವೇತನ ಭರಿಸುತ್ತಿದೆ.

ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ಶಾಲೆಯ ಒಳಗೆ ವಿದ್ಯಾಭ್ಯಾಸ ನಡೆಯುತ್ತಿದ್ದರೆ ಹೊರಗೆ ಮಲ್ಲಿಗೆ ಗಿಡಗಳ ಕಂಪು ಶಾಲೆಯನ್ನು ಅಲಂಕರಿಸಿದೆ. ಈ ಮಲ್ಲಿಗೆ ಗಿಡ ನೆಟ್ಟದ್ದು ಶಾಲೆಯ ಅಲಂಕಾರಕ್ಕೆ ಅಲ್ಲ. ಈ ಶಾಲೆಯ ಗೌರವ ಶಿಕ್ಷಕಿಯರಿಗೆ ನೀಡುವ ವೇತನ ಭರಿಸಲು ಎನ್ನುವುದು ವಿಶೇಷ.

ಇಲ್ಲಿ ಇರುವ ಮಲ್ಲಿಗೆ ಗಿಡಗಳಿಂದ ದಿನಕ್ಕೆ ಒಂದು ಅಟ್ಟೆ ಮಲ್ಲಿಗೆ ಹೂಗಳು ಸಿಗುತ್ತದೆ . ಮಲ್ಲಿಗೆ ಹೂಗಳನ್ನು ಮುಂಜಾನೆ ಶಾಲೆ ಆರಂಭಕ್ಕೆ ಮುನ್ನ ವಿದ್ಯಾರ್ಥಿಗಳು ಶಿಕ್ಷಕರು ಕೊಯ್ದಿಟ್ಟರೆ ಶಾಲೆಯ ಸಿಬ್ಬಂದಿಯೊಬ್ಬರು ಅದನ್ನು ಪೋಣಿಸುತ್ತಾರೆ. ಹೀಗೆ ಮಲ್ಲಿಗೆ ಗಿಡಗಳಿಂದ ಸಿಗುವ ಹೂವನ್ನು ಹೂವಿನ ಅಂಗಡಿಗೆ ನೀಡುವ ಮೂಲಕ ವರುಷಕ್ಕೆ 40ರಿಂದ 50 ಸಾವಿರದವರೆಗೆ ಆದಾಯ ಬರುತ್ತದೆ. ಈ ಆದಾಯದಲ್ಲಿ ಮೂರು ಗೌರವ ಶಿಕ್ಷಕರ ಪೈಕಿ ಪೂರ್ವ ಶಿಕ್ಷಕಿಗೆ ವೇತನ ನೀಡಲು ಸಾಕಾಗುತ್ತದೆ. ಉಳಿದ ಶಿಕ್ಷಕರ ವೇತನಕ್ಕೆ ಬೇರೆ ಮೂಲಗಳನ್ನು ಅವಳ ಮೀಸಲಾಗುತ್ತದೆ ಎನ್ನುತ್ತಾರೆ ಓಜಾಲ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಅವರು.

ಶಾಲೆಯ ಇತರ ಶಿಕ್ಷಕರಿಗೆ ನೀಡುವ ವೇತನದ ಆದಾಯಕ್ಕಾಗಿ ಇನ್ನಷ್ಟು ಮಲ್ಲಿಗೆ ಗಿಡಗಳನ್ನು ನೀಡಬಹುದಾದರೂ ಅದರ ನಿರ್ವಹಣೆ ಕಷ್ಟ. ಆದುದರಿಂದ ಇತರ ಮೂಲದ ಆದಾಯವನ್ನು ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ವಿಲ್ಮಾ ಸಿಕ್ವೇರಾ.

ಈ ಶಾಲೆಯಲ್ಲಿ ಸರಕಾರದ ಇಬ್ಬರು ಶಿಕ್ಷಕರಿದ್ದಾರೆ. ಇಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಇಬ್ಬರು ಶಿಕ್ಷಕರು ಸಾಲದು ಎಂದು ಮೂವರು ಗೌರವ ಶಿಕ್ಷಕರನ್ನು ನೇಮಿಸಿ ಅದಕ್ಕೆ ಬೇಕಾದ ಆದಾಯವನ್ನು ಶಾಲೆಯಲ್ಲಿ ಮಲ್ಲಿಗೆ ಗಿಡಗಳನ್ನು ನೆಡುವ ಮೂಲಕ ಮಾಡಿರುವ ಪ್ರಯತ್ನ ಶ್ಲಾಘನೀಯವಾದದ್ದು