ಸರಕಾರಿ ಶಾಲೆಗಳಲ್ಲಿ ಮಾತೃಭಾಷೆಯ ಜತೆಗೆ ಹಿಂದಿ, ಇಂಗ್ಲಿಷ್ ಕಲಿಯುವುದು ಸಾಮಾನ್ಯ. ಆದರೆ ಕಾಸರಗೋಡು ಸಮೀಪದ ಪಾಂಡಿ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ, ತುಳು, ಕೊಂಕಣಿ, ಮರಾಠಿ ಸೇರಿದಂತೆ ಸುಮಾರು ಒಂಬತ್ತು ಭಾಷೆಗಳ ಪರಿಚಯ ಮಾಡಿಕೊಡಲಾಗುತ್ತಿದೆ.
ಹಳ್ಳಿ ಪ್ರದೇಶದಲ್ಲಿರುವ ಪಾಂಡಿ ಶಾಲೆಯಲ್ಲಿ ಅಸೆಂಬ್ಲಿ ವೇಳೆ ತುಳು, ಕನ್ನಡ, ಮರಾಠಿ, ಕೊಂಕಣಿ, ಅರೇಬಿಕ್, ಮಲಯಾಳ, ಹಿಂದಿ, ಇಂಗ್ಲಿಷ್, ಬ್ಯಾರಿ ಭಾಷೆಯ ಸೊಗಡು ಹರಿಯುತ್ತದೆ. ನಾರಾಯಣ ದೇಲಂಪಾಡಿ ಮುಖ್ಯ ಶಿಕ್ಷಕರಾಗಿದ್ದ ವೇಳೆ ವಿದ್ಯಾರ್ಥಿಗಳ ವಿಕಸನಕ್ಕಾಗಿ ಈ ಕ್ಲಾಸ್ ಅಸೆಂಬ್ಲಿ ಎಂಬ ವಿನೂತನ ಯೋಜನೆ ಆರಂಭಿಸಿದ್ದರು.
ಈಗ ವಾರದಲ್ಲಿ ಎರಡು ದಿನ, ಸೋಮವಾರ ಮತ್ತು ಗುರುವಾರ ಶಾಲೆಯಲ್ಲಿ 9ಕ್ಕೂ ಹೆಚ್ಚು ಭಾಷೆಗಳನ್ನು ಪರಿಚಯ ಮಾಡಿಕೊಡಲಾಗುತ್ತಿದೆ. ಇಲ್ಲಿ 12ರ ವರೆಗೆ ತರಗತಿಗಳು ಇವೆಯಾದರೂ ಈ ಚಟುವಟಿಕೆಯನ್ನು 1-10ನೇ ತರಗತಿಯ ಮಕ್ಕಳಿಗೆ ಮಾತ್ರ ನಡೆಸಲಾಗುತ್ತಿದೆ.
ಬೆಳಗ್ಗಿನ ಪ್ರಾರ್ಥನೆ ಸಮಯದಲ್ಲಿ ಸುಮಾರು 12 ವಿದ್ಯಾರ್ಥಿಗಳು ಎದುರು ನಿಂತು ಒಂದೊಂದು ಭಾಷೆಯಲ್ಲಿ ಗೀತಾ ವಾಚನ, ವಾರ್ತೆಗಳು, ಪುಸ್ತಕ ಪರಿಚಯ, ಚಿಂತನೆ, ದಿನ ವಿಶೇಷ ಇತ್ಯಾದಿ ನಡೆಸುತ್ತಾರೆ. ಸಾಮಾನ್ಯ ಪ್ರಶ್ನೆಗಳನ್ನು ಕೇಳಿ ಸರಿಯುತ್ತರ ನೀಡಿದವರಿಗೆ ಬಹುಮಾನ ನೀಡಲಾಗುತ್ತದೆ. ಪ್ರತೀ ಬಾರಿ ತರಗತಿ, ವಿದ್ಯಾರ್ಥಿಗಳು ಬದಲಾಗುತ್ತಾರೆ.
ಪಾಂಡಿ ಪ್ರೌಢಶಾಲೆಯು ಕಾಸರಗೋಡಿನಿಂದ ಸುಮಾರು 40 ಕಿ.ಮೀ., ಅಡೂರಿನಿಂದ ಸುಮಾರು 6 ಕಿ.ಮೀ. ದೂರದಲ್ಲಿದೆ. ಮುಖ್ಯ ಶಿಕ್ಷಕರಾಗಿದ್ದ ನಾರಾಯಣ ದೇಲಂಪಾಡಿ ಆರಂಭಿಸಿದ ಚಟುವಟಿಕೆಗಳು ಶಾಲೆಯ ಸ್ವರೂಪವನ್ನೇ ಬದಲಾಯಿಸಿವೆ.