Tagged: citykudla

ಕುಡ್ಲ ಸಿಟಿ ವಿಶ್ವದಲ್ಲೇ ಸೇಫ್ ಸಿಟಿ‌ ಮಾರಾಯ್ರೆ

ಹೊಸ ವರ್ಷದಲ್ಲಿ ವಿಶ್ವ ಪರ್ಯಟನೆ ಮಾಡುವ ಆಕಾಂಕ್ಷಿಗಳಿಗೆ, ವಿದೇಶಿ ಹೂಡಿಕೆದಾರರಿಗೆ ಸಿಹಿ ಸುದ್ದಿ ಬಂದಿದೆ. ವಿಶ್ವದ 100 ಅತೀ ಸುರಕ್ಷಿತ ನಗರಗಳ ಸಾಲಿನಲ್ಲಿ ಕಡಲನಗರಿ ಮಂಗಳೂರಿಗೆ 43ನೇ ಸ್ಥಾನ ದೊರೆತಿದೆ.

ನ್ಯೂಯಾರ್ಕ್‌ನ ಸಿಇಒ ವಲ್ಡ್ ಮ್ಯಾಗಸೀನ್ 2019ರ ಸಾಲಿನ ಅಂತ್ಯದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತದ ನಗರಗಳ ಪೈಕಿ ಮಂಗಳೂರು ನಂ. 1 ಅತೀ ಸುರಕ್ಷಿತ ನಗರ ಸ್ಥಾನ ಪಡೆದಿದೆ. ಉಳಿದಂತೆ ಟಾಪ್ 100ನಲ್ಲಿ ಗುಜರಾತ್‌ನ ವಡೋದರಾ, ಕೇರಳದ ತಿರುವನಂತಪುರ ಹಾಗೂ ಕೊಚ್ಚಿ, ಗುಜರಾತ್‌ನ ಅಹಮ್ಮದಾಬಾದ್ ಹಾಗೂ ಮಹಾರಾಷ್ಟ್ರದ ನವ ಮುಂಬೈ ಸ್ಥಾನ ಪಡೆದಿದೆ. ಸಿಇಒ ವಲ್ಡ್ ಮ್ಯಾಗಸೀನ್ ನಡೆಸಿದ ಸರ್ವೆಯಲ್ಲಿ ಕಳೆದ ಮೂರು ವರ್ಷಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುದಾಬಿ ಮೊದಲ ಸ್ಥಾನ ಅಲಂಕರಿಸಿದೆ. ಕತಾರ್‌ನ ದೋಹಾ ಎರಡನೇ ಹಾಗೂ ಕೆನಡಾದ ಕ್ಯೂಬೆಕ್ ಸಿಟಿ ಮೂರನೇ ಸ್ಥಾನ ಪಡೆದಿದೆ.

ಉಳಿದಂತೆ ತೈವಾನ್‌ನ ತೈಪೆ, ಜರ್ಮನಿಯ ಮುನೀಚ್, ಯುಎಇಯ ದುಬೈ, ಸ್ವಿಜರ್‌ಲ್ಯಾಂಡ್‌ನ ಝೂರಿಚ್ ಹಾಗೂ ಬೆರ್ನ್, ಟರ್ಕಿಯ ಎಸ್ಕಿಸಿಹಿರ್ ಹಾಗೂ ಹಾಂಕಾಂಗ್ ಟಾನ್ 10 ಪಟ್ಟಿಯಲ್ಲಿದೆ. ಪ್ರಥಮ ಮೂರು ಸ್ಥಾನಗಳನ್ನು ಪಡೆದಿರುವ ಯುಎಇಯ ಅಬುದಾಬಿ ಶೇ.89.03, ಕತಾರ್‌ನ ದೋಹಾ ಶೇ.88.43 ಹಾಗೂ ಕೆನಡಾದ ಕ್ಯುಬೆಕ್ ಸಿಟಿ ಶೇ.85.19 ಅಂಕ ಪಡೆದರೆ ಕರ್ನಾಟಕದ ಮಂಗಳೂರು ಶೇ.74.39 ಅಂಕ ಪಡೆದು 43ನೇ ಸ್ಥಾನದಲ್ಲಿದೆ.ಅಪರಾಧ ಸೂಚ್ಯಂಕದ ಆಧಾರದಲ್ಲಿ ನಗರಗಳಿಗೆ ರೇಟಿಂಗ್ ನೀಡಲಾಗಿದೆ.

ಪ್ರಪಂಚ ಸುತ್ತುವ ಪ್ರವಾಸಿಗರು ತಮ್ಮ ಯಾತ್ರೆಯ ಮುನ್ನ ಸುರಕ್ಷತೆಯ ಬಗ್ಗೆ ಸಾಕಷ್ಟು ಮುತುವರ್ಜಿ ವಹಿಸುತ್ತಾರೆ. ತಾವು ಹೋಗುತ್ತಿರುವ ನಗರ ಪ್ರವಾಸಕ್ಕೆ ಸುರಕ್ಷಿತವೇ ಎಂಬುವುದನ್ನು ಖಾತರಿಪಡಿಸಿದ ಬಳಿಕವಷ್ಟೇ ಪ್ರಯಾಣ ಆರಂಭಿಸುತ್ತಾರೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನ ಸಿಇಒ ವಲ್ಡ್ ಮ್ಯಾಗಸೀನ್ ಸಮೀಕ್ಷೆಗೆ ಮಹತ್ವ ಬಂದಿದೆ. ಪ್ರಪಂಚದ ಸುರಕ್ಷಿತ ನಗರಗಳ ಸಾಲಿನಲ್ಲಿ ಮಂಗಳೂರು ಸೇರಿರುವುದು ಪ್ರವಾಸೋದ್ಯಮ ಹಾಗೂ ವಿದೇಶಿ ಹೂಡಿಕೆಗೆ ಇನ್ನಷ್ಟು ಬಲ ನೀಡಲಿದೆ.

2018ರಲ್ಲಿ ಅಮೆರಿಕದ ಚಿಕಾಗೋ ಮೂಲದ ’ದಿ ಡೈಲಿ ಮೀಲ್’ ವೆಬ್‌ಸೈಟ್ ನಡೆಸಿದ ಸಮೀಕ್ಷೆಯಲ್ಲಿ ಮಂಗಳೂರು ವಿಶ್ವದ ಅತ್ಯಂತ ಸುರಕ್ಷಿತ ನಗರದಲ್ಲಿ 31ನೇ ಸ್ಥಾನ ಪಡೆದಿತ್ತು.

ಕಾಸರಗೋಡಿನ ಸರಕಾರಿ ಶಾಲೆಯಲ್ಲಿ ಒಂಬತ್ತು ಭಾಷೆಗಳ ಕಲರವ

ಸರಕಾರಿ ಶಾಲೆಗಳಲ್ಲಿ ಮಾತೃಭಾಷೆಯ ಜತೆಗೆ ಹಿಂದಿ, ಇಂಗ್ಲಿಷ್ ಕಲಿಯುವುದು ಸಾಮಾನ್ಯ. ಆದರೆ ಕಾಸರಗೋಡು ಸಮೀಪದ ಪಾಂಡಿ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ, ತುಳು, ಕೊಂಕಣಿ, ಮರಾಠಿ ಸೇರಿದಂತೆ ಸುಮಾರು ಒಂಬತ್ತು ಭಾಷೆಗಳ ಪರಿಚಯ ಮಾಡಿಕೊಡಲಾಗುತ್ತಿದೆ.

ಹಳ್ಳಿ ಪ್ರದೇಶದಲ್ಲಿರುವ ಪಾಂಡಿ ಶಾಲೆಯಲ್ಲಿ ಅಸೆಂಬ್ಲಿ ವೇಳೆ ತುಳು, ಕನ್ನಡ, ಮರಾಠಿ, ಕೊಂಕಣಿ, ಅರೇಬಿಕ್, ಮಲಯಾಳ, ಹಿಂದಿ, ಇಂಗ್ಲಿಷ್, ಬ್ಯಾರಿ ಭಾಷೆಯ ಸೊಗಡು ಹರಿಯುತ್ತದೆ. ನಾರಾಯಣ ದೇಲಂಪಾಡಿ ಮುಖ್ಯ ಶಿಕ್ಷಕರಾಗಿದ್ದ ವೇಳೆ ವಿದ್ಯಾರ್ಥಿಗಳ ವಿಕಸನಕ್ಕಾಗಿ ಈ ಕ್ಲಾಸ್ ಅಸೆಂಬ್ಲಿ ಎಂಬ ವಿನೂತನ ಯೋಜನೆ ಆರಂಭಿಸಿದ್ದರು.

ಈಗ ವಾರದಲ್ಲಿ ಎರಡು ದಿನ, ಸೋಮವಾರ ಮತ್ತು ಗುರುವಾರ ಶಾಲೆಯಲ್ಲಿ 9ಕ್ಕೂ ಹೆಚ್ಚು ಭಾಷೆಗಳನ್ನು ಪರಿಚಯ ಮಾಡಿಕೊಡಲಾಗುತ್ತಿದೆ. ಇಲ್ಲಿ 12ರ ವರೆಗೆ ತರಗತಿಗಳು ಇವೆಯಾದರೂ ಈ ಚಟುವಟಿಕೆಯನ್ನು 1-10ನೇ ತರಗತಿಯ ಮಕ್ಕಳಿಗೆ ಮಾತ್ರ ನಡೆಸಲಾಗುತ್ತಿದೆ.
ಬೆಳಗ್ಗಿನ ಪ್ರಾರ್ಥನೆ ಸಮಯದಲ್ಲಿ ಸುಮಾರು 12 ವಿದ್ಯಾರ್ಥಿಗಳು ಎದುರು ನಿಂತು ಒಂದೊಂದು ಭಾಷೆಯಲ್ಲಿ ಗೀತಾ ವಾಚನ, ವಾರ್ತೆಗಳು, ಪುಸ್ತಕ ಪರಿಚಯ, ಚಿಂತನೆ, ದಿನ ವಿಶೇಷ ಇತ್ಯಾದಿ ನಡೆಸುತ್ತಾರೆ. ಸಾಮಾನ್ಯ ಪ್ರಶ್ನೆಗಳನ್ನು ಕೇಳಿ ಸರಿಯುತ್ತರ ನೀಡಿದವರಿಗೆ ಬಹುಮಾನ ನೀಡಲಾಗುತ್ತದೆ. ಪ್ರತೀ ಬಾರಿ ತರಗತಿ, ವಿದ್ಯಾರ್ಥಿಗಳು ಬದಲಾಗುತ್ತಾರೆ.

ಪಾಂಡಿ ಪ್ರೌಢಶಾಲೆಯು ಕಾಸರಗೋಡಿನಿಂದ ಸುಮಾರು 40 ಕಿ.ಮೀ., ಅಡೂರಿನಿಂದ ಸುಮಾರು 6 ಕಿ.ಮೀ. ದೂರದಲ್ಲಿದೆ. ಮುಖ್ಯ ಶಿಕ್ಷಕರಾಗಿದ್ದ ನಾರಾಯಣ ದೇಲಂಪಾಡಿ ಆರಂಭಿಸಿದ ಚಟುವಟಿಕೆಗಳು ಶಾಲೆಯ ಸ್ವರೂಪವನ್ನೇ ಬದಲಾಯಿಸಿವೆ.

ಹೊಸ ವರ್ಷ ಕುಡ್ಲದ ಯುವಜನತೆಗೆ ಖಡಕ್ ರೂಲ್ಸ್ ಬಂತು

ಹೊಸ ವರ್ಷ ಕುಡ್ಲದ ಯುವಜನತೆಗೆ ಖಡಕ್ ರೂಲ್ಸ್ ಬಂತು 2020ರ ಹೊಸ ವರ್ಷದ ಆಚರಣೆ ಪ್ರಯುಕ್ತ ಮಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು, ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಿಗೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ.

ಹೊಸ ವರ್ಷಾಚರಣೆಯ ಸಂತೋಷ ಕೂಟಗಳನ್ನು ನಡೆಸುವ ನಗರದ ಎಲ್ಲ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ಪಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳ ಮಾಲೀಕರು/ ವ್ಯವಸ್ಥಾಪಕರು/ಆಡಳಿತ ವರ್ಗ ಕಡ್ಡಾಯವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಡಿ.24ರಂದು ಸಂಜೆ 4 ಗಂಟೆಯೊಳಗೆ ಅರ್ಜಿ ಸಲ್ಲಿಸಿ, ಪೂರ್ವಾನುಮತಿ ಪಡೆದುಕೊಳ್ಳಬೇಕು ಎನ್ನುವುದು ಮಂಗಳೂರು ಪೊಲೀಸ್ ಕಮೀಷನರ್ ಡಾ. ಹರ್ಷ ಮಾಹಿತಿ ನೀಡಿದ್ದಾರೆ.

ಪೂರ್ವಾನುಮತಿ ಪಡೆಯದೆ ನೂತನ ವರ್ಷ ಆಚರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಕಾರ್ಯಕ್ರಮಗಳನ್ನು ಮಧ್ಯರಾತ್ರಿ 12 ಗಂಟೆಯೊಳಗೆ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕು. ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜಿಸುವವರು ಸಂಬಂಧಪಟ್ಟ ಇಲಾಖೆಗಳಿಂದ ಪಡೆದ ಪರವಾನಗಿಯಲ್ಲಿ ನೀಡಿದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೊಸ ವರ್ಷ ಆಚರಿಸುವವರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಅಂಥವರ ಬಗ್ಗೆ ನಿಗಾ ವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಕಾರ್ಯಪಡೆ ಮಂಗಳೂರು ನಗರದ ಎಲ್ಲ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಏರ್ಪಡಿಸಲಾಗಿರುವ ಹೊಸ ವರ್ಷಚರಣೆ ಕಾರ್ಯಕ್ರಮ ನೆಪದಲ್ಲಿ ಬಸ್ ತಂಗುದಾಣ, ಸಾರ್ವಜನಿಕ ಉದ್ಯಾನವನಗಳು, ಕ್ರೀಡಾಂಗಣ, ರೈಲ್ವೆ ಸ್ಟೇಶನ್ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ.

ವಿದ್ಯಾರ್ಥಿಗಳು ಹಾಗೂ ಯುವಕರು ಡಿ.31ರ ರಾತ್ರಿ ಹೊಸ ವರ್ಷಾಚರಣೆ ನೆಪದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ಅಸಭ್ಯವಾಗಿ ವರ್ತಿಸಬಾರದು. ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ವಾಹನಗಳನ್ನು ವೀಲಿಂಗ್ ಮತ್ತು ಡ್ರಾಗ್ ರೇಸ್ ಮಾಡುವುದನ್ನು, ಬೊಬ್ಬೆ ಹಾಕುವುದು ಹಾಗೂ ಅತೀ ವೇಗವಾಗಿ ವಾಹನಗಳನ್ನು ಚಲಾಯಿಸುವುದು ಮತ್ತು ಕರ್ಕಶ ಶಬ್ದ ಮಾಡುವುದನ್ನು ತಡೆಗಟ್ಟಲು ಕೂಡ ಸಂಚಾರ ಪೆÇಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಪಡೆಯು ಮಂಗಳೂರು ನಗರದ ಎಲ್ಲ ಪ್ರದೇಶಗಳಲ್ಲಿ ಚಾಲನೆಯಲ್ಲಿರುತ್ತದೆ. ಕಾನೂನು ಉಲ್ಲಂಘಿಸುವ ಪ್ರಕರಣಗಳು ಕಂಡುಬಂದಲ್ಲಿ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ.

ತುಳುನಾಡಿನ ಜನರಿಗೆ ತುಳು ಕ್ಯಾಲೆಂಡರ್

ತುಳುನಾಡಿನ ಜನರಿಗೆ ಎಲ್ಲ ರೀತಿಯ ಕ್ಯಾಲೆಂಡರ್ ಗೊತ್ತು. ಆದರೆ ತುಳು ಭಾಷೆ, ತುಳು ಲಿಪಿಯನ್ನು ಹೊಂದಿರುವ ಕ್ಯಾಲೆಂಡರ್‍ವೊಂದು ಕಳೆದ ಏಳು ವರ್ಷಗಳಿಂದ ಹೊರ ಬರುತ್ತಿದೆ. ಅದರ ಹೆಸರು `ಕಾಲ ಕೋಂದೆ’ ಎಂದರೆ ಇದರ ಅರ್ಥ ಕಾಲ ಗೊಂಚಲು. ಇದರ ವಿಶೇಷವೇನೆಂದರೆ ತುಳುನಾಡಿನ ಸರ್ವ ಧರ್ಮೀಯರ ಹಬ್ಬ, ಆಚರಣೆ ಹಾಗೂ ತುಳುನಾಡಿನ ಸಮಸ್ತರಿಗೂ ಪ್ರಯೋಜನವಾಗುವ ಈ ಕ್ಯಾಲೆಂಡರ್ ಉಪಯುಕ್ತ ಪಂಚಾಂಗವೂ ಹೌದು.

ತುಳುವರ ವಿಶೇಷ ದಿನಗಳು ತುಳುವರ ಆಚರಣೆ ಹಬ್ಬ,ವಿóಶಿಷ್ಟ ತಿಂಗಳು, ಕಾಲದ ಬಗ್ಗೆ ತಿಳಿಸುವ ಅಂದರೆ ಸಂಕ್ರಾಂದಿ, ಸಿಂಗೊಡೆ, ತಿಥಿ,ನಕ್ಸತ್ರ,ಗಳನ್ನು (ಭರಣಿ, ಕಿರ್ತಿಕೆ) ಕೆಡ್ವಾಸ, ಬಲಿಲೆಪ್ಪುನ ದಿನ, ಪತ್ತನಾಜೆ, ಕೋಲ,ಕೊಡಿ, ತೇರ್,ಆಯನ, ಆಟಿ, ಸೋಣ ತಿಂಗಳ ವಿಷೇಷತೆ, ಜಾತ್ರೆಗಳ ಬಗ್ಗೆ, ಹಾಗೆಯೇ ಗ್ರಹಣ, ಮೌಢ್ಯ ಕಾಲಗಳ ಬಗೆಗೆ ನಿಖರವಾಗಿ ತಿಳಿಸಲಾಗಿದೆ.

ವಾಸ್ತವವಾಗಿ ಈ ತುಳುವಿನ ಕ್ಯಾಲೆಂಡರ್ ಪ್ರಾರಂಭವಾಗುವುದು `ಸೌರಮಾನ ಯುಗಾದಿ’ಯ ದಿನವಾದ `ಬಿಸು’ವಿನಿಂದ ಅಂದರೆ ಈ ಸಲ 2020ರ ಎಪ್ರಿಲ್ 14ರ `ಪಗ್ಗು’ವಿನಿಂದ ಹಾಗೆಯೇ ತುಳು ತಿಂಗಳು ಅಂತ್ಯವಾಗುವುದು 2021ರ ಸುಗ್ಗಿ ತಿಂಗಳಿನಲ್ಲಿ, ಪ್ರತಿ ಸಂಕ್ರಾತಿಯಂದು ತುಳುವರು ದೈವ,ದೇವರುಗಳ ಆಲಯವನ್ನು ತೊಳೆದು,ಒಪ್ಪವಾಗಿರಿಸಿ ಪೂಜೆ, ಪುನಸ್ಕಾರವನ್ನು ಕೈಗೊಳ್ಳುತ್ತಾರೆ. ಅಂದೇ ತುಳು ತಿಂಗಳು ಕೊನೆಗೊಳ್ಳುವುದು ಹಾಗೆಯೇ ಮರುದಿನ ತುಳು ತಿಂಗಳಿನ ಆರಂಭ. ಆ ದಿನವನ್ನು `ಸಿಂಗೊಡೆ’ ಎಂದು ಕರೆಯುತ್ತಾರೆ. ಅಂದಹಾಗೆ ಪ್ರತಿ ತಿಂಗಳ ಈ ದಿನ ತುಳುವರಿಗೆ ವಿಶಿಷ್ಟವಾದದ್ದು. ತುಳುನಾಡಿನ ರೈತರಿಗೂ ರಜೆಯ ದಿನ.ಅಂದು ಅವರು ಯಾವೊಂದು ಹೊಸ ಕೆಲಸವನ್ನು ಪ್ರಾರಂಭ ಮಾಡುವುದಿಲ್ಲ.ಆದುದರಿಂದ ಅವರ ಪಾಲಿಗೆ `ಸಿಂಗೊಡೆ’ ಕಾದಿರಿಸಲ್ಪಟ್ಟ ವಿಶೇಷ ದಿನ.

ತುಳು ತಿಂಗಳು ಪ್ರತಿ ವರುಷ ಪಗ್ಗು ತಿಂಗಳಿನಿಂದ ಆರಂಭವಾಗಿ ಬೇಶ, ಕಾರ್ತೆಲ್, ಆಟಿ,ಸೋಣ, ನಿರ್ನಾಲ, ಬೊಂತೆಲ್, ಜಾರ್ದೆ, ಪೆರಾರ್ದೆ, ಪೊನ್ನಿ, ಮಾಯಿ, ಸುಗ್ಗಿ ವರೆಗೆ ಒಟ್ಟು 12 ತಿಂಗಳುಗಳಿಂದ ಕೂಡಿದೆ. ಕಳೆದ ವರ್ಷದಂತೆಯೇ ಈ ವರ್ಷವೂ ಅಧಿಕ ಮಾಸದ ಪ್ರಭಾವದಿಂದಾಗಿ ತುಳುವಿನ ಕ್ಯಾಲೆಂಡರ್‍ನಲ್ಲಿ ಸಹ ಅಧಿಕ ಮಾಸದ ದಿನಗಳು ಕಂಡುಬರುತ್ತದೆ. ಅದೆಂದರೆ `ಕಾರ್ತೆಲ್’ತಿಂಗಳು ಅಂದರೆ 2020 ಜೂನ್ ತಿಂಗಳು 15 ರಿಂದ ಜುಲೈ 16 ತಾರೀಕಿನ ವರೆಗಿನ. ಈ ಅವಧಿಯು ಸುಧೀರ್ಘವಾಗಿದ್ದು ಒಟ್ಟು 32 ದಿನಗಳಿಂದ ಕೂಡಿರುತ್ತದೆ. ಇದೇ ವರ್ಷದಲ್ಲಿ ಎರಡು ತಿಂಗಳು ಕಿರು ಅವಧಿಯ ತಿಂಗಳಾಗಿರುತ್ತದೆ. ಅವುಗಳೆಂದರೆ ಪೆರಾರ್ದೆ ತುಳು ತಿಂಗಳಿನ ಅಂದರೆ 2019 ಡಿಸೆಂಬರ್ ತಿಂಗಳಿನ 17 ರಿಂದ 2019 ರ ಜನವರಿಯ 14 ರವರೆಗೆ ಹಾಗೂ 2020ರ ನವೆಂಬರ್ 17ರಿಂದ 2021 ಡಿಸೆಂಬರ್15 ವರೆಗಿನ `ಜಾರ್ದೆ’ ತುಳು ತಿಂಗಳಿನ ಈ ಅವಧಿಯು 29 ದಿನಗಳಿಂದ ಮಾತ್ರವೇ ಕೂಡಿರುವುದು ಒಂದು ವಿಶೇಷವಾಗಿದೆ.

ತುಳುನಾಡಿನ ಗೇರು ಹಣ್ಣಿಗೂ ಫಾರಿನ್ ನಲ್ಲಿ ಸೂಪರ್ ಡಿಮ್ಯಾಂಡ್ !

ಎಳೆಯದರಲ್ಲಿ ಗೇರುಹಣ್ಣಿನಿಂದ ಬೀಜ ತೆಗೆದು ಹಣ್ಣನ್ನು ಬಿಸಾಡುತ್ತಿದ್ದೆವು. ಈಗ ಹಾಗಲ್ಲ. ಬೀಜಕ್ಕಿಂತಲೂ ಗೇರುಹಣ್ಣಿಗೆ ಭಯಂಕರ ಡಿಮ್ಯಾಂಡು. ವಿದೇಶದಲ್ಲಿ ಕೇವಲ ಮೂರು ಗೇರು ಹಣ್ಣಿನ ಬೆಲೆ ಬರೋಬ್ಬರಿ 480/- ರೂಪಾಯಿ..! ಅಂದರೆ 23.95 AED. ಗೇರುಹಣ್ಣನ್ನು ತಿಂದು ತೇಗಿ ಕೋಲಲ್ಲಿ ಪೋಣಿಸಿ ಆಟವಾಡುತ್ತಿದ್ದ ಒಂದು ಕಾಲವಿತ್ತು. ಆದರೀಗ ಅಪರೂಪ. ಗೇರು ಮರಗಳು ಕಣ್ಮರೆಯಾಗುತ್ತಿವೆ. ಗೇರುಬೀಜ ಶೇಖರಣೆ ಮರೀಚಿಕೆಯಾಗುತ್ತಿದೆ. ಆದರೆ ಹಳ್ಳಿ ಪ್ರದೇಶದಲ್ಲಿ ಈಗಲೂ ಇದೆ. ಗೇರುಮರದ ಕೂಪು ಮಾಡುವವರೂ ಇದ್ದಾರೆ. ಏನೇ ಇದ್ದರೂ ಬೀಜಕ್ಕಷ್ಟೇ ಮೌಲ್ಯವಿತ್ತು. ಮುಂದಿನ ದಿನಗಳಲ್ಲಿ ಗೇರುಹಣ್ಣನ್ನೂ ವಿದೇಶದ ಮಾರುಕಟ್ಟೆಗೆ ರಫ್ತು ಮಾಡಬಹುದು. ಅದಕ್ಕೂ ಮಾನ ಬಂದಿದೆ.