Tagged: mangalore

ಪಿಲಿಕುಳ ಜೈವಿಕ ಪಾರ್ಕ್ ನಲ್ಲಿ ನೈಟ್ ವಿಶನ್ ಕಣ್ಗಾವಲು

ಕರಾವಳಿಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿರುವ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿ-ಪಕ್ಷಿಗಳು ಮತ್ತು ಪ್ರವಾಸಿಗರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಹೈ ರೆಸೊಲ್ಯೂಷನ್ ಹೊಂದಿರುವ ನೈಟ್ ವಿಷನ್ (ರಾತ್ರಿಯೂ ಸ್ಪಷ್ಟವಾಗಿ ಗೋಚರಿಸುವ) ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಹದಿನೈದು ದಿನಗಳಲ್ಲಿ ಅಳವಡಿಕೆ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕೆ ಕೇಂದ್ರ ಮೃಗಾಲಯ ಪ್ರಾಧಿಕಾರ ಹಣಕಾಸಿನ ನೆರವು ನೀಡಿದೆ.

150 ಎಕರೆ ವಿಸ್ತೀರ್ಣ ಹೊಂದಿರುವ ಪಾರ್ಕ್‌ನಲ್ಲಿ ಪ್ರಸ್ತುತ 16 ಕ್ಯಾಮರಾಗಳಿವೆ. ಇವುಗಳಲ್ಲಿ ಪ್ರವೇಶ ದ್ವಾರದಲ್ಲಿ ಹೊರತು ಪಡಿಸಿದರೆ, ಹೆಚ್ಚಿನವು ರಸ್ತೆಯತ್ತ ಮುಖ ಮಾಡಿವೆ. ನಿಗದಿತ ಸ್ಥಳಗಳಲ್ಲಿ ಕ್ಯಾಮರಾಗಳಿಲ್ಲದೆ ಪಾರ್ಕ್ ಒಳಗಿನ ಬಹುತೇಕ ಪ್ರದೇಶವನ್ನು ಒಂದು ಕಡೆಯಲ್ಲಿ ಕುಳಿತು ಮಾನೀಟರ್ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪಾರ್ಕ್ ಒಳಗೆ ಕ್ಯಾಮರಾ ಅಳವಡಿಸಲು ಜೈವಿಕ ಉದ್ಯಾನ ಆಡಳಿತ ಸಮಿತಿ ನಿರ್ಧರಿಸಿದೆ.

*2 ಕಿ.ಮೀ. ವ್ಯಾಪ್ತಿ:* 50 ಹೊಸ ಕ್ಯಾಮರಾ ಹಾಗೂ ಬೃಹತ್ ಟಿವಿ ಸ್ಕ್ರೀನ್ ಅಳವಡಿಸುವ ಕುರಿತ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಸುಮಾರು 15 ಲಕ್ಷ ರೂ. ವೆಚ್ಚವಾಗಲಿದೆ. ಪಾರ್ಕ್‌ನ ಎರಡು ಕಿ.ಮೀ. ವ್ಯಾಪ್ತಿಯನ್ನು ಪ್ರಧಾನ ಕಚೇರಿಯಲ್ಲಿ ಕುಳಿತು ಟಿವಿ ಪರದೆ ಮೂಲಕ ಪರಿಶೀಲಿಸಬಹುದಾಗಿದೆ. ಉದ್ಯಾನವನದಲ್ಲಿರುವ ಪಶ್ಚಿಮ ಘಟ್ಟದ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿ ಸಂಕುಲಗಳ ಕುರಿತು ವಿಶೇಷ ಗಮನ ನೀಡುವುದು ಆಡಳಿತ ಸಮಿತಿ ಉದ್ದೇಶವಾಗಿದೆ. ಜತೆಗೆ ಪ್ರವಾಸಿಗರು ಪ್ರಾಣಿಗಳಿಗೆ ತೊಂದರೆ ನೀಡಿದರೆ, ಆಹಾರ ಪದಾರ್ಥಗಳನ್ನು ಎಸೆದರೆ, ಅನುಚಿತವಾಗಿ ವರ್ತಿಸಿದರೆ ಎಚ್ಚರಿಕೆ ನೀಡಲೂ ಇದರಿಂದ ಅನುಕೂಲವಾಗಲಿದೆ.

*ಏನಿದು ನೈಟ್ ವಿಷನ್ ಕ್ಯಾಮರಾ?: *ಸಾಮಾನ್ಯ ಸಿಸಿಟಿವಿ ಕ್ಯಾಮರಾಗಳು ಹಗಲು ವೇಳೆ ಉತ್ತಮವಾಗಿ ಚಿತ್ರೀಕರಿಸಿದರೂ, ರಾತ್ರಿಯ ಚಿತ್ರೀಕರಣ ಮಬ್ಬಾಗಿರುತ್ತದೆ. ಆದರೆ ನೈಟ್ ವಿಷನ್ ಕ್ಯಾಮರಾಗಳು ಹಗಲಿನಂತೆ ರಾತ್ರಿ ವೇಳೆಯೂ ಸ್ಪಷ್ಟವಾಗಿ ಸೆರೆ ಹಿಡಿಯುತ್ತದೆ. ಇದಕ್ಕೆ ಬೆಳಕಿನ ಅವಶ್ಯಕತೆಯಿಲ್ಲ, ಆದರೆ ಕಪ್ಪು ಬಿಳುಪಿನಲ್ಲಿ ದೃಶ್ಯಗಳನ್ನು ಚಿತ್ರೀಕರಿಸುತ್ತದೆ.

ತುಳುನಾಡಿನವರಿಗೆ ಉಡುಪಿ ಸೀರೆ ಗೊತ್ತಿರಲಿ‌ ಮಾರಾಯ್ರೆ

ಮೈಸೂರು ರೇಷ್ಮೆ ಸೀರೆ , ಇಳಕಲ್ ಸೀರೆ ಯಾವುದಾದರೂ ಇರಲಿ ಮಾರಾಯ್ರೆ‌ ಉಡುಪಿ ಸೀರೆಗಳ ಬಗ್ಗೆ ನಮ್ಮ ತುಳುನಾಡಿನ ಜನರು ತಿಳಿದುಕೊಳ್ಳಬೇಕು ಮಾರಾಯ್ರೆ.
ಉಡುಪಿ ಸೀರೆಯ ಮೈಬಣ್ಣ ತಿಳಿಯಾಗಿರುತ್ತದೆ. ಸೆರಗು ಮತ್ತು ಪಟ್ಟಿಯ ಬಣ್ಣ ಕಡುವಾಗಿರುತ್ತದೆ. ಮಲಬಾರ್ ಲೂಮ್ಸ್‌ನಲ್ಲಿ ಇದನ್ನು ತಯಾರಿಸಲಾಗುತ್ತಿದ್ದು, ಸೀರೆ ನೈಯುವಾಗಲೇ ನೂಲಿಗೆ ಗಂಜಿಯನ್ನು ಹಾಕಲಾಗುತ್ತದೆ.
ಕರಾವಳಿಯ ಮಣ್ಣಿನ ಪರಿಮಳದಲ್ಲಿ ಹುಟ್ಟಿದ ಉಡುಪಿ ಸೀರೆ, ಅಸಹಜ ಬಣ್ಣದ್ದಲ್ಲ. ಇದರ ಸಹಜತೆ, ಸರಳತೆ, ಕಲಾತ್ಮಕ ಬಣ್ಣ ನಮ್ಮೊಳಗೆ ಉಂಟು ಮಾಡುವ ಆಪ್ತತೆಯೇ ಬೇರೆ. ಈ ಸೀರೆಯ ಸೆರಗು ಒಂದಷ್ಟು ಗಾಢ ಬಣ್ಣ, ಅಂಚು ತಿಳಿ ಬಣ್ಣ. ಕೃತಕ ನೂಲುಗಳಿಲ್ಲದ, ಕೃತಕ ಬಣ್ಣಗಳಿಲ್ಲದ, ಶುದ್ಧ ಕೈಮಗ್ಗದ ಹತ್ತಿ ನೂಲುಗಳಿಂದ ತಯಾರಿಸಿದ ಉತ್ಪನ್ನ. ಇದನ್ನು ಧರಿಸಿದಾಗ ಸಿಗುವ ಸಂತಸ ಮತ್ತು ಆರಾಮದ ಅನುಭವ ಬೇರೆ ಯಾವ ಸೀರೆಗಳಿಂದಲೂ ಸಿಗುವುದಿಲ್ಲ ಎನ್ನುವುದು ಗ್ರಾಹಕರ ಅಭಿಪ್ರಾಯ. ‘ಮಳೆಗಾಲದಲ್ಲಿ ಬೆಚ್ಚಗಿನ ಹಾಗೂ ಬೇಸಿಗೆಯಲ್ಲಿ ತಂಪಿನ, ಹಿತವಾದ ಅನುಭವ ನೀಡುತ್ತದೆ. ಮಾತ್ರವಲ್ಲ, ತೊಟ್ಟು ಹಳೆಯದಾದರೂ ಬಳಕೆಗೆ ಬರುವ ಈ ಸೀರೆ ನಿಜವಾಗಿಯೂ ನಮ್ಮ ಸಾತ್ವಿಕ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುತ್ತದೆ’ ಎನ್ನುವುದು ಈ ಸೀರೆ ಉಟ್ಟ ಮಹಿಳೆಯರ ಮಾತು.
ಸ್ವಾತಂತ್ರೃ ಹೋರಾಟಗಾರ್ತಿ ಮಂಗಳೂರು ಮೂಲದ ಕಮಲಾದೇವಿ ಚಟ್ಟೋಪಾಧ್ಯಾಯ 70ರ ದಶಕದಲ್ಲಿ ಬ್ರಹ್ಮಾವರದ ಹಿರಿಯ ನೇಕಾರರೊಬ್ಬರ ಮನೆಯಿಂದ ಯಕ್ಷಗಾನದ ಸ್ತ್ರೀ ಪಾತ್ರಕ್ಕೆ ಬಳಸುವ 8 ಕಸೆಸೀರೆ ಖರೀದಿಸಿದ್ದರು. ಇದರಲ್ಲಿ ಒಂದು ಸೀರೆಯನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೂ ನೀಡಿದ್ದರು ಎನ್ನಲಾಗಿದೆ. ಖಾದಿ ಗ್ರಾಮೋದ್ಯೋಗ, ಪಾರಂಪರಿಕ ಕರಕುಶಲತೆ ಬಗ್ಗೆ ವಿಶೇಷ ಒಲವು ಹೊಂದಿದ್ದ ಕಮಲಾದೇವಿ ಅವರು ಉಡುಪಿ ಸೀರೆ ಬೆಳವಣಿಗೆಗೆ ಒಂದಷ್ಟು ಪ್ರಯತ್ನ ಮಾಡಿದ್ದರು.
*ಮಮತಾ ಬ್ಯಾನರ್ಜಿ ಒಲವು: *2010ರಲ್ಲಿ ಅಂದಿನ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿಯವರು ಕರ್ನಾಟಕ ಕೈಮಗ್ಗ ನಿಗಮಕ್ಕೆ 300 ಸೀರೆಗಳಿಗೆ ಬೇಡಿಕೆ ಸಲ್ಲಿಸಿದ್ದು, ಪ್ರಿಯದರ್ಶಿನಿ ಸಂಸ್ಥೆ ಕೋರಿಕೆ ಮೇರೆಗೆ ಶಿರ್ವದ ಹಿರಿಯ ನೇಕಾರ ಹರಿಶ್ಚಂದ್ರ ಶೆಟ್ಟಿಗಾರ್ 60 ಉಡುಪಿ ಸೀರೆಗಳನ್ನು ನೇಯ್ದು ಕೊಟ್ಟಿದ್ದರು. ನಂತರದ ದಿನಗಳಲ್ಲಿ ಬ್ಯಾನರ್ಜಿ ಅವರಿಂದ ಬೇಡಿಕೆ ಬಂದಿಲ್ಲ. ಕೋಲ್ಕತ ಪ್ರಿಯದರ್ಶಿನಿ ಸಂಸ್ಥೆಯವರೇ ಸೀರೆಯನ್ನು ತಯಾರಿಸುತ್ತಿದ್ದಾರೆ ಎನ್ನುತ್ತಾರೆ ಕರ್ನಾಟಕ ಕೈಮಗ್ಗ ನಿಗಮದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹರಿಶ್ಚಂದ್ರ ಶೆಟ್ಟಿಗಾರ್.

ಪುತ್ತೂರಿನ ಮುತ್ತುಗಳು ಬೆಳೆದ ದೇವಸ್ಥಾನ

ಈ ಕೆರೆಯಲ್ಲಿ ಮುತ್ತುಗಳು ಸಿಕ್ಕಿತ್ತು ಇದೇ ಕಾರಣದಿಂದ ಪುತ್ತೂರು ಎನ್ನುವ ಊರಿಗೆ ಮುತ್ತು(ಹವಳ)ಗಳ ಊರು ಎಂದೇ ಕರೆಯಲಾಗುತ್ತದೆ. ಮುತ್ತು ಸಿಕ್ಕಿದ ಶ್ರೀಮಹಾಲಿಂಗೇಶ್ವರ ದೇವರ ಕೆರೆಯ ವಿಶೇಷತೆ ಎಂದರೆ ದೇವಳದ ಯಾವುದೇ ಪೂಜೆ ಕಾರ್ಯಕ್ಕೆ ಈ ನೀರನ್ನು ಬಳಸುತ್ತಿಲ್ಲ.

ತೀರ್ಥ ನೀಡುವ ವಿಚಾರವಾಗಲಿ ಅಥವಾ ಭಕ್ತರು ಸ್ನಾನ ಮಾಡುವುದಕ್ಕೆ ಈ ನೀರು ಬಳಕೆಯಾಗುತ್ತಿಲ್ಲ. ಇಡೀ ದ.ಕ ಅಥವಾ ರಾಜ್ಯದ ದೇವಳದ ಕೆರೆಗಳಲ್ಲಿ ಇಲ್ಲಿಯ ಕೆರೆ ಬಹಳ ವಿಶೇಷತೆಯನ್ನು ಹೊಂದಿದೆ. ಕೆರೆಯಲ್ಲಿ ಸಾಕಷ್ಟು ಸಂಖ್ಯೆಯ ಬಣ್ಣ ಬಣ್ಣದ ಮೀನುಗಳನ್ನು ನೋಡುವುದು ಭಕ್ತರ ಪಾಲಿಗಂತೂ ವಿಶೇಷತೆಯೇ ಹೌದು ಎನ್ನಬಹುದು.

ಈಗ ವಿಪರೀತ ಬಿಸಿಲು ಇರುವುದರಿಂದ ಈ ಪುಷ್ಕರಣಿಯ ಸುತ್ತಮುತ್ತ ಮೀನುಗಳಿಗಾಗಿ ಕಾರಂಜಿ ಮಾಡುವ ಮೂಲಕ ಅಮ್ಲ ಜನಕ ನೀಡುವ ಕೆಲಸವಾಗುತ್ತಿದೆ. ಅದರಲ್ಲೂ‌ ಮುಖ್ಯವಾಗಿ ಈ ಕೆರೆ ಎಂದಿಗೂ ಬತ್ತಿಲ್ಲ. ಒಟ್ಟಾಗಿ ಹೇಳುವುದಾದರೆ ಶ್ರೀಮಹಾಲಿಂಗೇಶ್ವರ ನ ಅದ್ಬುತ ಕೆಲಸಗಳಲ್ಲಿ ಈ ಕೆರೆ ಕೂಡ ಒಂದಾಗಿದೆ.

ಒಂದು ರೂಪಾಯಿಯಲ್ಲಿ ತರಕಾರಿ ಸಸಿ ನೆಡಿ

ಒಂದು ರೂಪಾಯಿಯಲ್ಲಿ ಬೆಂಡೆ, ಬದನೆ, ಅಲಸಂಡೆ ಹೀಗೆ ಯಾವುದೇ ತರಕಾರಿಯನ್ನು ಕೂಡ ಬೆಳೆಸಬಹುದು. ಅಂದಹಾಗೆ ಈ ಗಿಡಗಳನ್ನು ಬೆಳೆಸುವ ಮಂದಿ ರೈತರು ಅಲ್ಲ ಸರಕಾರಿ ಕಚೇರಿಯಲ್ಲಿ ಕೂರುವ ಅಧಿಕಾರಿಗಳೇ ಗಿಡಗಳನ್ನು ಬೆಳೆಸಿಕೊಂಡು ರೈತರಿಗೆ ನೀಡುವ ಕೆಲಸ ಮಾಡುತ್ತಿದ್ದಾರೆ.
ಹೌದು. ಬೆಳ್ತಂಗಡಿಯ ಮದ್ದಡ್ಕ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಲಿಖಿತಾ ಸೇರಿದಂತೆ ಅವರ ಅಧೀನದಲ್ಲಿ ಕಾರ್ಯ ನಿರ್ವಹಣೆ ಮಾಡುವ ಇಬ್ಬರು ತೋಟಗಾರರು ಸೇರಿಕೊಂಡು ತಟ್ಟೆ(ಟ್ರೈ)ಯಲ್ಲಿ 14 ಬಗೆಯ ತರಕಾರಿ ಸಸಿಗಳನ್ನು ಬೆಳೆಸಿದ ಬಳಿಕ ಅದನ್ನು ರೈತರಿಗೆ ನೀಡುವ ಕೆಲಸ ಮಾಡುತ್ತಾರೆ. ಒಂದು ಗಿಡಕ್ಕೆ 1 ರೂ.ನಂತೆ ಮಾರಾಟ ಮಾಡಲಾಗುತ್ತದೆ. ಅದರಲ್ಲಿ 87 ಪೈಸೆ ಸಸಿಗೆ ಖರ್ಚಾದರೆ ಉಳಿದ ಮೊತ್ತ ಇಲಾಖೆಗೆ ಲಾಭವಾಗಿ ಬದಲಾಗುತ್ತದೆ.
ಮುಖ್ಯವಾಗಿ ಒಂದು ತಟ್ಟೆ(ಟ್ರೈ)ಯಲ್ಲಿ 98 ಸಸಿಗಳನ್ನು ನೆಡಲಾಗುತ್ತದೆ. ಎರೆಹುಳ ಗೊಬ್ಬರ, ಕೋಳಿ ಗೊಬ್ಬರ ಬಳಸಿಕೊಂಡು ಈ ಸಸಿಯನ್ನು ಬೆಳೆಸಲಾಗುತ್ತದೆ . ಕಳೆದ ವರ್ಷ ಒಂದೆರಡು ತರಕಾರಿ ಸಸಿಗಳಲ್ಲಿ ಈ ಪ್ರಯೋಗ ಮಾಡಲಾಗಿತ್ತು ಈ ಬಾರಿ 14 ನಾನಾ ಬಗೆಯ ತರಕಾರಿ ಸಸಿಗಳನ್ನು ಬೆಳೆಸಿಕೊಂಡು ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ಲಿಖಿತಾ ಅವರು.

ಕಟೀಲು ದೇವಳಕ್ಕೆ ಭೂಮಿ ದಾನ ಮಾಡುವ ಅವಕಾಶ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭವಿಷ್ಯದ ಅಭಿವೃದ್ಧಿ ಹಾಗೂ ಮೂಲಸೌಲಭ್ಯ ಕಲ್ಪಿಸುವ ಉದ್ದೇಶದಿಂದ `ಭೂ ದಾನ ನಿಧಿ’ ಹೊಸ ಯೋಜನೆ ಆರಂಭಿಸಲು ಕ್ಷೇತ್ರದ ಆಡಳಿತ ಸಮಿತಿ ನಿರ್ಧರಿಸಿದೆ.

ಕಟೀಲು ದೇವಸ್ಥಾನ ಪರಿಸರ ಬಹಳ ಇಕ್ಕಟ್ಟಿನಿಂದ ಕೂಡಿದೆ. ಜಾತ್ರೆ, ವಿವಾಹ, ನವರಾತ್ರಿ ಮಹೋತ್ಸವ ಮುಂತಾದ ಸಂದರ್ಭ ಕಟೀಲು ರಥಬೀದಿ ಹಾಗೂ ದೇವಸ್ಥಾನ ವಠಾರ ಭಕ್ತಾದಿಗಳಿಂದ ತುಂಬಿಹೋಗುತ್ತದೆ. ಈ ಸಂದರ್ಭ ಯಾವುದೇ ವ್ಯವಸ್ಥೆಗಳನ್ನು ಸುಸೂತ್ರವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈಗ ಬ್ರಹ್ಮಕಲಶೋತ್ಸವ ಪ್ರಯುಕ್ತ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ಭವಿಷ್ಯದ ವ್ಯವಸ್ಥೆಗಾಗಿ ಪ್ರತ್ಯೇಕ ಭೂಮಿಯ ಅಗತ್ಯತೆ ಇರುವುದರಿಂದ ಭೂದಾನ ನಿಧಿ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ.
ಎಷ್ಟು ಭೂಮಿ ಅಗತ್ಯತೆ?: ಸದ್ಯದ ಲೆಕ್ಕಾಚಾರದಂತೆ ಭವಿಷ್ಯದ ಹಿತದೃಷ್ಟಿಯಿಂದ ಕಟೀಲು ಸುತ್ತಮುತ್ತಲಿನ ಸುಮಾರು 15 ಎಕರೆ ಭೂಮಿಯನ್ನು ದೇವಸ್ಥಾನಕ್ಕೆ ದಾನ ವಾಗಿ ಪಡೆದುಕೊಳ್ಳುವ ಚಿಂತನೆಯನ್ನು ಆಡಳಿತ ಸಮಿತಿ ಹೊಂದಿದೆ. ಇದಕ್ಕಾಗಿ ಕೆಲವರು ಈಗಾಗಲೇ ಸ್ವಯಂ ಆಗಿ ಮುಂದೆ ಬಂದಿದ್ದು, ಇನ್ನು ಕೆಲವು ಮಾತುಕತೆ ಹಂತದಲ್ಲಿದೆ.
ಮುಂದಿನ ಒಂದೆರಡು ವರ್ಷದೊಳಗಾಗಿ ಕಟೀಲು ದೇವಸ್ಥಾನದ ಹೆಸರಿನಲ್ಲಿ 15ರಿಂದ 20 ಎಕರೆ ಜಾಗವನ್ನು ದೇವಸ್ಥಾನಕ್ಕೆ ಕಾದಿರಿಸುವುದು ಆಡಳಿತ ಸಮಿತಿಯ ಚಿಂತನೆ. ಇಷ್ಟು ಜಾಗ ದೇವಸ್ಥಾನಕ್ಕೆ ಸಿಕ್ಕರೆ ಎಲ್ಲ ಕಾರ್ಯಕ್ರಮಗಳ ಸಂದರ್ಭ ವ್ಯವಸ್ಥೆಗಳಿಗೆ ಇದು ಅನುಕೂಲವಾಗಲಿದ್ದು, 20-30 ವರ್ಷದವರೆಗೆ ಸಾಕಾಗಬಹುದು ಎಂದು ಅಂದಾಜಿಸಲಾಗಿದೆ.
ಭೂದಾನ ನಿಧಿ ಯೋಜನೆಯಲ್ಲಿ ಎರಡು ವಿಧವಾಗಿ ದಾನಿಗಳು ತೊಡಗಿಸಿಕೊಳ್ಳಬಹುದು. ಭೂದಾನವನ್ನು ನೀಡುವ ಭೂ ಮಾಲೀಕರು ನೇರವಾಗಿ ದೇವಸ್ಥಾನಕ್ಕೆ ಭೂಮಿ ಹಸ್ತಾಂತರಿಸಬಹುದು. ಆದರೆ ಧರ್ಮಾರ್ಥ ಭೂಮಿ ನೀಡಲು ಸಾಧ್ಯವಿಲ್ಲದವರಿಗೆ ಪ್ರಾಯೋಜಕರನ್ನು ಗೊತ್ತುಪಡಿಸಿ ಅವರ ಮೂಲಕ ನೇರವಾಗಿ ಭೂ ಮಾಲೀಕರಿಗೆ ಹಣ ಸಂದಾಯ ಮಾಡಿ, ಹಣ ನೀಡುವ ದಾನಿಗಳ ಹೆಸರಿನಲ್ಲಿ ಭೂಮಿಯನ್ನು ದೇವಸ್ಥಾನಕ್ಕೆ ನೀಡುವ ಯೋಜನೆ ಇದೆ.