ಮೈಸೂರು ರೇಷ್ಮೆ ಸೀರೆ , ಇಳಕಲ್ ಸೀರೆ ಯಾವುದಾದರೂ ಇರಲಿ ಮಾರಾಯ್ರೆ ಉಡುಪಿ ಸೀರೆಗಳ ಬಗ್ಗೆ ನಮ್ಮ ತುಳುನಾಡಿನ ಜನರು ತಿಳಿದುಕೊಳ್ಳಬೇಕು ಮಾರಾಯ್ರೆ.
ಉಡುಪಿ ಸೀರೆಯ ಮೈಬಣ್ಣ ತಿಳಿಯಾಗಿರುತ್ತದೆ. ಸೆರಗು ಮತ್ತು ಪಟ್ಟಿಯ ಬಣ್ಣ ಕಡುವಾಗಿರುತ್ತದೆ. ಮಲಬಾರ್ ಲೂಮ್ಸ್‌ನಲ್ಲಿ ಇದನ್ನು ತಯಾರಿಸಲಾಗುತ್ತಿದ್ದು, ಸೀರೆ ನೈಯುವಾಗಲೇ ನೂಲಿಗೆ ಗಂಜಿಯನ್ನು ಹಾಕಲಾಗುತ್ತದೆ.
ಕರಾವಳಿಯ ಮಣ್ಣಿನ ಪರಿಮಳದಲ್ಲಿ ಹುಟ್ಟಿದ ಉಡುಪಿ ಸೀರೆ, ಅಸಹಜ ಬಣ್ಣದ್ದಲ್ಲ. ಇದರ ಸಹಜತೆ, ಸರಳತೆ, ಕಲಾತ್ಮಕ ಬಣ್ಣ ನಮ್ಮೊಳಗೆ ಉಂಟು ಮಾಡುವ ಆಪ್ತತೆಯೇ ಬೇರೆ. ಈ ಸೀರೆಯ ಸೆರಗು ಒಂದಷ್ಟು ಗಾಢ ಬಣ್ಣ, ಅಂಚು ತಿಳಿ ಬಣ್ಣ. ಕೃತಕ ನೂಲುಗಳಿಲ್ಲದ, ಕೃತಕ ಬಣ್ಣಗಳಿಲ್ಲದ, ಶುದ್ಧ ಕೈಮಗ್ಗದ ಹತ್ತಿ ನೂಲುಗಳಿಂದ ತಯಾರಿಸಿದ ಉತ್ಪನ್ನ. ಇದನ್ನು ಧರಿಸಿದಾಗ ಸಿಗುವ ಸಂತಸ ಮತ್ತು ಆರಾಮದ ಅನುಭವ ಬೇರೆ ಯಾವ ಸೀರೆಗಳಿಂದಲೂ ಸಿಗುವುದಿಲ್ಲ ಎನ್ನುವುದು ಗ್ರಾಹಕರ ಅಭಿಪ್ರಾಯ. ‘ಮಳೆಗಾಲದಲ್ಲಿ ಬೆಚ್ಚಗಿನ ಹಾಗೂ ಬೇಸಿಗೆಯಲ್ಲಿ ತಂಪಿನ, ಹಿತವಾದ ಅನುಭವ ನೀಡುತ್ತದೆ. ಮಾತ್ರವಲ್ಲ, ತೊಟ್ಟು ಹಳೆಯದಾದರೂ ಬಳಕೆಗೆ ಬರುವ ಈ ಸೀರೆ ನಿಜವಾಗಿಯೂ ನಮ್ಮ ಸಾತ್ವಿಕ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುತ್ತದೆ’ ಎನ್ನುವುದು ಈ ಸೀರೆ ಉಟ್ಟ ಮಹಿಳೆಯರ ಮಾತು.
ಸ್ವಾತಂತ್ರೃ ಹೋರಾಟಗಾರ್ತಿ ಮಂಗಳೂರು ಮೂಲದ ಕಮಲಾದೇವಿ ಚಟ್ಟೋಪಾಧ್ಯಾಯ 70ರ ದಶಕದಲ್ಲಿ ಬ್ರಹ್ಮಾವರದ ಹಿರಿಯ ನೇಕಾರರೊಬ್ಬರ ಮನೆಯಿಂದ ಯಕ್ಷಗಾನದ ಸ್ತ್ರೀ ಪಾತ್ರಕ್ಕೆ ಬಳಸುವ 8 ಕಸೆಸೀರೆ ಖರೀದಿಸಿದ್ದರು. ಇದರಲ್ಲಿ ಒಂದು ಸೀರೆಯನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೂ ನೀಡಿದ್ದರು ಎನ್ನಲಾಗಿದೆ. ಖಾದಿ ಗ್ರಾಮೋದ್ಯೋಗ, ಪಾರಂಪರಿಕ ಕರಕುಶಲತೆ ಬಗ್ಗೆ ವಿಶೇಷ ಒಲವು ಹೊಂದಿದ್ದ ಕಮಲಾದೇವಿ ಅವರು ಉಡುಪಿ ಸೀರೆ ಬೆಳವಣಿಗೆಗೆ ಒಂದಷ್ಟು ಪ್ರಯತ್ನ ಮಾಡಿದ್ದರು.
*ಮಮತಾ ಬ್ಯಾನರ್ಜಿ ಒಲವು: *2010ರಲ್ಲಿ ಅಂದಿನ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿಯವರು ಕರ್ನಾಟಕ ಕೈಮಗ್ಗ ನಿಗಮಕ್ಕೆ 300 ಸೀರೆಗಳಿಗೆ ಬೇಡಿಕೆ ಸಲ್ಲಿಸಿದ್ದು, ಪ್ರಿಯದರ್ಶಿನಿ ಸಂಸ್ಥೆ ಕೋರಿಕೆ ಮೇರೆಗೆ ಶಿರ್ವದ ಹಿರಿಯ ನೇಕಾರ ಹರಿಶ್ಚಂದ್ರ ಶೆಟ್ಟಿಗಾರ್ 60 ಉಡುಪಿ ಸೀರೆಗಳನ್ನು ನೇಯ್ದು ಕೊಟ್ಟಿದ್ದರು. ನಂತರದ ದಿನಗಳಲ್ಲಿ ಬ್ಯಾನರ್ಜಿ ಅವರಿಂದ ಬೇಡಿಕೆ ಬಂದಿಲ್ಲ. ಕೋಲ್ಕತ ಪ್ರಿಯದರ್ಶಿನಿ ಸಂಸ್ಥೆಯವರೇ ಸೀರೆಯನ್ನು ತಯಾರಿಸುತ್ತಿದ್ದಾರೆ ಎನ್ನುತ್ತಾರೆ ಕರ್ನಾಟಕ ಕೈಮಗ್ಗ ನಿಗಮದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹರಿಶ್ಚಂದ್ರ ಶೆಟ್ಟಿಗಾರ್.
ತುಳುನಾಡಿನವರಿಗೆ ಉಡುಪಿ ಸೀರೆ ಗೊತ್ತಿರಲಿ ಮಾರಾಯ್ರೆ
January 25, 2020