Tagged: udupi

ಪಿಲಿಕುಳ ಜೈವಿಕ ಪಾರ್ಕ್ ನಲ್ಲಿ ನೈಟ್ ವಿಶನ್ ಕಣ್ಗಾವಲು

ಕರಾವಳಿಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿರುವ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿ-ಪಕ್ಷಿಗಳು ಮತ್ತು ಪ್ರವಾಸಿಗರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಹೈ ರೆಸೊಲ್ಯೂಷನ್ ಹೊಂದಿರುವ ನೈಟ್ ವಿಷನ್ (ರಾತ್ರಿಯೂ ಸ್ಪಷ್ಟವಾಗಿ ಗೋಚರಿಸುವ) ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಹದಿನೈದು ದಿನಗಳಲ್ಲಿ ಅಳವಡಿಕೆ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕೆ ಕೇಂದ್ರ ಮೃಗಾಲಯ ಪ್ರಾಧಿಕಾರ ಹಣಕಾಸಿನ ನೆರವು ನೀಡಿದೆ.

150 ಎಕರೆ ವಿಸ್ತೀರ್ಣ ಹೊಂದಿರುವ ಪಾರ್ಕ್‌ನಲ್ಲಿ ಪ್ರಸ್ತುತ 16 ಕ್ಯಾಮರಾಗಳಿವೆ. ಇವುಗಳಲ್ಲಿ ಪ್ರವೇಶ ದ್ವಾರದಲ್ಲಿ ಹೊರತು ಪಡಿಸಿದರೆ, ಹೆಚ್ಚಿನವು ರಸ್ತೆಯತ್ತ ಮುಖ ಮಾಡಿವೆ. ನಿಗದಿತ ಸ್ಥಳಗಳಲ್ಲಿ ಕ್ಯಾಮರಾಗಳಿಲ್ಲದೆ ಪಾರ್ಕ್ ಒಳಗಿನ ಬಹುತೇಕ ಪ್ರದೇಶವನ್ನು ಒಂದು ಕಡೆಯಲ್ಲಿ ಕುಳಿತು ಮಾನೀಟರ್ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪಾರ್ಕ್ ಒಳಗೆ ಕ್ಯಾಮರಾ ಅಳವಡಿಸಲು ಜೈವಿಕ ಉದ್ಯಾನ ಆಡಳಿತ ಸಮಿತಿ ನಿರ್ಧರಿಸಿದೆ.

*2 ಕಿ.ಮೀ. ವ್ಯಾಪ್ತಿ:* 50 ಹೊಸ ಕ್ಯಾಮರಾ ಹಾಗೂ ಬೃಹತ್ ಟಿವಿ ಸ್ಕ್ರೀನ್ ಅಳವಡಿಸುವ ಕುರಿತ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಸುಮಾರು 15 ಲಕ್ಷ ರೂ. ವೆಚ್ಚವಾಗಲಿದೆ. ಪಾರ್ಕ್‌ನ ಎರಡು ಕಿ.ಮೀ. ವ್ಯಾಪ್ತಿಯನ್ನು ಪ್ರಧಾನ ಕಚೇರಿಯಲ್ಲಿ ಕುಳಿತು ಟಿವಿ ಪರದೆ ಮೂಲಕ ಪರಿಶೀಲಿಸಬಹುದಾಗಿದೆ. ಉದ್ಯಾನವನದಲ್ಲಿರುವ ಪಶ್ಚಿಮ ಘಟ್ಟದ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿ ಸಂಕುಲಗಳ ಕುರಿತು ವಿಶೇಷ ಗಮನ ನೀಡುವುದು ಆಡಳಿತ ಸಮಿತಿ ಉದ್ದೇಶವಾಗಿದೆ. ಜತೆಗೆ ಪ್ರವಾಸಿಗರು ಪ್ರಾಣಿಗಳಿಗೆ ತೊಂದರೆ ನೀಡಿದರೆ, ಆಹಾರ ಪದಾರ್ಥಗಳನ್ನು ಎಸೆದರೆ, ಅನುಚಿತವಾಗಿ ವರ್ತಿಸಿದರೆ ಎಚ್ಚರಿಕೆ ನೀಡಲೂ ಇದರಿಂದ ಅನುಕೂಲವಾಗಲಿದೆ.

*ಏನಿದು ನೈಟ್ ವಿಷನ್ ಕ್ಯಾಮರಾ?: *ಸಾಮಾನ್ಯ ಸಿಸಿಟಿವಿ ಕ್ಯಾಮರಾಗಳು ಹಗಲು ವೇಳೆ ಉತ್ತಮವಾಗಿ ಚಿತ್ರೀಕರಿಸಿದರೂ, ರಾತ್ರಿಯ ಚಿತ್ರೀಕರಣ ಮಬ್ಬಾಗಿರುತ್ತದೆ. ಆದರೆ ನೈಟ್ ವಿಷನ್ ಕ್ಯಾಮರಾಗಳು ಹಗಲಿನಂತೆ ರಾತ್ರಿ ವೇಳೆಯೂ ಸ್ಪಷ್ಟವಾಗಿ ಸೆರೆ ಹಿಡಿಯುತ್ತದೆ. ಇದಕ್ಕೆ ಬೆಳಕಿನ ಅವಶ್ಯಕತೆಯಿಲ್ಲ, ಆದರೆ ಕಪ್ಪು ಬಿಳುಪಿನಲ್ಲಿ ದೃಶ್ಯಗಳನ್ನು ಚಿತ್ರೀಕರಿಸುತ್ತದೆ.

ತುಳುನಾಡಿನವರಿಗೆ ಉಡುಪಿ ಸೀರೆ ಗೊತ್ತಿರಲಿ‌ ಮಾರಾಯ್ರೆ

ಮೈಸೂರು ರೇಷ್ಮೆ ಸೀರೆ , ಇಳಕಲ್ ಸೀರೆ ಯಾವುದಾದರೂ ಇರಲಿ ಮಾರಾಯ್ರೆ‌ ಉಡುಪಿ ಸೀರೆಗಳ ಬಗ್ಗೆ ನಮ್ಮ ತುಳುನಾಡಿನ ಜನರು ತಿಳಿದುಕೊಳ್ಳಬೇಕು ಮಾರಾಯ್ರೆ.
ಉಡುಪಿ ಸೀರೆಯ ಮೈಬಣ್ಣ ತಿಳಿಯಾಗಿರುತ್ತದೆ. ಸೆರಗು ಮತ್ತು ಪಟ್ಟಿಯ ಬಣ್ಣ ಕಡುವಾಗಿರುತ್ತದೆ. ಮಲಬಾರ್ ಲೂಮ್ಸ್‌ನಲ್ಲಿ ಇದನ್ನು ತಯಾರಿಸಲಾಗುತ್ತಿದ್ದು, ಸೀರೆ ನೈಯುವಾಗಲೇ ನೂಲಿಗೆ ಗಂಜಿಯನ್ನು ಹಾಕಲಾಗುತ್ತದೆ.
ಕರಾವಳಿಯ ಮಣ್ಣಿನ ಪರಿಮಳದಲ್ಲಿ ಹುಟ್ಟಿದ ಉಡುಪಿ ಸೀರೆ, ಅಸಹಜ ಬಣ್ಣದ್ದಲ್ಲ. ಇದರ ಸಹಜತೆ, ಸರಳತೆ, ಕಲಾತ್ಮಕ ಬಣ್ಣ ನಮ್ಮೊಳಗೆ ಉಂಟು ಮಾಡುವ ಆಪ್ತತೆಯೇ ಬೇರೆ. ಈ ಸೀರೆಯ ಸೆರಗು ಒಂದಷ್ಟು ಗಾಢ ಬಣ್ಣ, ಅಂಚು ತಿಳಿ ಬಣ್ಣ. ಕೃತಕ ನೂಲುಗಳಿಲ್ಲದ, ಕೃತಕ ಬಣ್ಣಗಳಿಲ್ಲದ, ಶುದ್ಧ ಕೈಮಗ್ಗದ ಹತ್ತಿ ನೂಲುಗಳಿಂದ ತಯಾರಿಸಿದ ಉತ್ಪನ್ನ. ಇದನ್ನು ಧರಿಸಿದಾಗ ಸಿಗುವ ಸಂತಸ ಮತ್ತು ಆರಾಮದ ಅನುಭವ ಬೇರೆ ಯಾವ ಸೀರೆಗಳಿಂದಲೂ ಸಿಗುವುದಿಲ್ಲ ಎನ್ನುವುದು ಗ್ರಾಹಕರ ಅಭಿಪ್ರಾಯ. ‘ಮಳೆಗಾಲದಲ್ಲಿ ಬೆಚ್ಚಗಿನ ಹಾಗೂ ಬೇಸಿಗೆಯಲ್ಲಿ ತಂಪಿನ, ಹಿತವಾದ ಅನುಭವ ನೀಡುತ್ತದೆ. ಮಾತ್ರವಲ್ಲ, ತೊಟ್ಟು ಹಳೆಯದಾದರೂ ಬಳಕೆಗೆ ಬರುವ ಈ ಸೀರೆ ನಿಜವಾಗಿಯೂ ನಮ್ಮ ಸಾತ್ವಿಕ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುತ್ತದೆ’ ಎನ್ನುವುದು ಈ ಸೀರೆ ಉಟ್ಟ ಮಹಿಳೆಯರ ಮಾತು.
ಸ್ವಾತಂತ್ರೃ ಹೋರಾಟಗಾರ್ತಿ ಮಂಗಳೂರು ಮೂಲದ ಕಮಲಾದೇವಿ ಚಟ್ಟೋಪಾಧ್ಯಾಯ 70ರ ದಶಕದಲ್ಲಿ ಬ್ರಹ್ಮಾವರದ ಹಿರಿಯ ನೇಕಾರರೊಬ್ಬರ ಮನೆಯಿಂದ ಯಕ್ಷಗಾನದ ಸ್ತ್ರೀ ಪಾತ್ರಕ್ಕೆ ಬಳಸುವ 8 ಕಸೆಸೀರೆ ಖರೀದಿಸಿದ್ದರು. ಇದರಲ್ಲಿ ಒಂದು ಸೀರೆಯನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೂ ನೀಡಿದ್ದರು ಎನ್ನಲಾಗಿದೆ. ಖಾದಿ ಗ್ರಾಮೋದ್ಯೋಗ, ಪಾರಂಪರಿಕ ಕರಕುಶಲತೆ ಬಗ್ಗೆ ವಿಶೇಷ ಒಲವು ಹೊಂದಿದ್ದ ಕಮಲಾದೇವಿ ಅವರು ಉಡುಪಿ ಸೀರೆ ಬೆಳವಣಿಗೆಗೆ ಒಂದಷ್ಟು ಪ್ರಯತ್ನ ಮಾಡಿದ್ದರು.
*ಮಮತಾ ಬ್ಯಾನರ್ಜಿ ಒಲವು: *2010ರಲ್ಲಿ ಅಂದಿನ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿಯವರು ಕರ್ನಾಟಕ ಕೈಮಗ್ಗ ನಿಗಮಕ್ಕೆ 300 ಸೀರೆಗಳಿಗೆ ಬೇಡಿಕೆ ಸಲ್ಲಿಸಿದ್ದು, ಪ್ರಿಯದರ್ಶಿನಿ ಸಂಸ್ಥೆ ಕೋರಿಕೆ ಮೇರೆಗೆ ಶಿರ್ವದ ಹಿರಿಯ ನೇಕಾರ ಹರಿಶ್ಚಂದ್ರ ಶೆಟ್ಟಿಗಾರ್ 60 ಉಡುಪಿ ಸೀರೆಗಳನ್ನು ನೇಯ್ದು ಕೊಟ್ಟಿದ್ದರು. ನಂತರದ ದಿನಗಳಲ್ಲಿ ಬ್ಯಾನರ್ಜಿ ಅವರಿಂದ ಬೇಡಿಕೆ ಬಂದಿಲ್ಲ. ಕೋಲ್ಕತ ಪ್ರಿಯದರ್ಶಿನಿ ಸಂಸ್ಥೆಯವರೇ ಸೀರೆಯನ್ನು ತಯಾರಿಸುತ್ತಿದ್ದಾರೆ ಎನ್ನುತ್ತಾರೆ ಕರ್ನಾಟಕ ಕೈಮಗ್ಗ ನಿಗಮದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹರಿಶ್ಚಂದ್ರ ಶೆಟ್ಟಿಗಾರ್.

ಮಹಾಲಿಂಗೇಶ್ವರ ದೇವರಿಗೆ ಪ್ರೀತಿ, ಭಕ್ತಿ ತೋರಿಸುವ ಕಂಬಳ ಕೋಣಗಳು

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಪ್ರತಿ ವರ್ಷ ನಡೆಯುವ ಕಂಬಳದ ವಿಶೇಷತೆ ಎಂದರೆ ಕಂಬಳದ ಕೆರೆಗೆ ಇಳಿಯುವ ಮೊದಲು ಕಂಬಳದ ಕೋಣಗಳು ದೇವಸ್ಥಾನದ ಮುಂಭಾಗದಲ್ಲಿ ತಮ್ಮ ಪ್ರೀತಿ, ಭಕ್ತಿ ವಿಶ್ವಾಸವನ್ನು ತೋರಿಸುತ್ತದೆ.

ಕಳೆದ 27 ವರ್ಷಗಳಿಂದ ಇಲ್ಲಿ ಕೋಟಿ ಚೆನ್ನಯ ಕಂಬಳ ನಡೆಯುತ್ತಿದೆ. ಕರಾವಳಿ ಕಂಬಳದಲ್ಲಿಯೇ ಅತೀ ಹೆಚ್ಚು ಜನ ಸೇರುವ ಕಂಬಳ ಎಂದೇ ಈ ಕಂಬಳವನ್ನು ಹೇಳಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ದೇವರ ಗದ್ದೆಯಲ್ಲಿ ನಡೆಯುವ ಕಂಬಳದಲ್ಲಿ ಹೆಚ್ಚು ಕಡಿಮೆ 150ಕ್ಕೂ ಅಧಿಕ ಕೋಣದ ಜೋಡಿಗಳು ಕಾಣಿಸಿಕೊಳ್ಳುತ್ತದೆ.

ಮಾರ್ನೆಮಿಯ ಕುಡ್ಲದ ಪಿಲಿವೇಶ

ನವರಾತ್ರಿ, ಮಹಾನವಮಿ ಎಂದರೆ ಕರಾವಳಿ ಮಂದಿಗೆ ಥಟ್ಟನೆ ಹುಲಿ ವೇಷದ ನೆನಪು. ನವರಾತ್ರಿ ಆರಂಭವಾಗುತ್ತಿದ್ದಂತೆ ಕರಾವಳಿಯಲ್ಲಿ ‘ಡೆರೆಮೆ ಟೆಟ್ಟೆ.. ಡೆರೆಮೆ ಟೆಟ್ಟೆ….’ ತಾರ್ಸೆ(ತಮಟೆ) ಸದ್ದು ಅನುರಣನ. ಥೇಟ್ ಹುಲಿಯಂತೇ ಕಾಣುವ ವೇಷಧಾರಿಗಳಿಂದ ರಸ್ತೆ-ವೃತ್ತಗಳಲ್ಲಿ ವಿಶಿಷ್ಟ ನರ್ತನ.
ಮಂಗಳೂರು ದಸರಾ ವೇಳೆ ರಥಬೀದಿ ವೆಂಕಟರಮಣ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಬೋಳಾರ ಮಂಗಳಾದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಆರಂಭ ಮತ್ತು ದಸರಾ ಮೆರವಣಿಗೆಗೆ ಹುಲಿವೇಷ ಆಚರಣೆ.
ಮಂಗಳೂರಿನಲ್ಲಿ ಹುಲಿವೇಷದ 40ಕ್ಕೂ ಅಧಿಕ ತಂಡಗಳಿದ್ದು, ಒಂದೊಂದು ತಂಡದಲ್ಲಿ 25 ವೇಷಧಾರಿಗಳವರೆಗೂ ಇರುತ್ತಾರೆ. ಶಾರದೆ ಮೆರವಣಿಗೆ ಮುಗಿದ ಬಳಿಕ ತಂಡಗಳಿಗೆ ‘ಮರ್ಯಾದೆ’ ಹೆಸರಿನ ಗೌರವ. ಈ ಬಿರುದು ಪಡೆಯುವುದು ತಂಡಗಳಿಗೆ ಪ್ರತಿಷ್ಠೆ.
ಕರಾವಳಿಯ ಹುಲಿವೇಷ ವಿಶಿಷ್ಟ. ತಾರ್ಸೆ, ಡೋಲಿನ ಲಯಕ್ಕೆ ವೇಷಧಾರಿಗಳು ಪ್ರದರ್ಶಿಸುವ ಆಟಗಳ ವರಸೆ ಇತರೆಡೆಗಿಂಥ ಭಿನ್ನ. ಇತ್ತೀಚೆಗೆ ರಾಜ್ಯದ ವಿವಿಧೆಡೆಗೂ ಇಲ್ಲಿನ ಹುಲಿವೇಷ ನರ್ತನಕ್ಕೆ ಬೇಡಿಕೆ ಬರುತ್ತಿದೆ. ಇಲ್ಲಿನ ಹುಲಿವೇಷ ತಂಡವೊಂದು ಫ್ರಾನ್ಸ್‌ಗೂ ತೆರಳಿ ಕರಾವಳಿಯ ಜಾನಪದ ಕಲೆ ಪ್ರದರ್ಶಿಸಿ ಬಂದಿದೆ.
ವೇಷಧಾರಿ ತಾಯಿ ಹುಲಿ ಮರಿಗಳಿಗೆ ಬೇಟೆ ಕಲಿಸುವುದು, ಹಾಲುಣಿಸುವುದು, ಮರಿ ಹುಲಿಗಳ ಆಟ, ವಯಸ್ಸಿಗೆ ಬಂದ ಹುಲಿಗಳ ಕಾದಾಟವನ್ನು ಕುಣಿತದಲ್ಲಿಯೇ ಪ್ರದರ್ಶಿಸುತ್ತಾರೆ. ಪಲ್ಟಿ ಹೊಡೆಯುವುದು, ಮೆಣಸಿನ ಹುಡಿ ಕಲಕಿದ ನೀರಿನಿಂದ ಹಿಮ್ಮುಖವಾಗಿ ನಾಣ್ಯ ತೆಗೆಯವುದು, ಝಂಡಾ ಕಸರತ್ತು, ಬಾಯಿಂದ ಜೀವಂತ ಕುರಿ ಕಚ್ಚಿ ಎಸೆಯುವುದು, ‘ಅಕ್ಕಿ ಮುಡಿ’ ಎತ್ತುವ ಕಸರತ್ತು ಹುಲಿವೇಷದ ಗತ್ತು.
ನವರಾತ್ರಿಗೆ ವೇಷ ಧರಿಸುವುದಾದರೆ ಚೌತಿಗೆ ಅಥವಾ ನವರಾತ್ರಿ ಮೊದಲ ದಿನ ತೆಂಗಿನ ಕಾಯಿ, ಅಕ್ಕಿ, ಬಾಳೆಹಣ್ಣು ಇಟ್ಟು, ಗಣಪತಿ ನೆನೆದು ಸಂಕಲ್ಪ ಮಾಡಬೇಕು. ಅಂದು ತಾರ್ಸೆಯವರಿಂದ ಕುಣಿತದ ಅಭ್ಯಾಸ. ಮಕ್ಕಳಾದರೆ ನುರಿತ ಹುಲಿವೇಷಧಾರಿಗಳ ಬಳಿ ಒಂದೆರಡು ವಾರ ಕುಣಿತ ಕಲಿಯುತ್ತಾರೆ. ವೇಷ ಹಾಕುವವರು ಮಾಂಸಾಹಾರ, ಮದ್ಯ ಸೇವಿಸುವಂತಿಲ್ಲ. ಈ ಸಂಪ್ರದಾಯಕ್ಕೆ ಕರಾವಳಿ ಭಾಗದಲ್ಲಿ ಊದು ಹಾಕುವುದು ಎಂಬ ಹೆಸರು.
ಈ ವೇಷ ಬಣ್ಣದ ಮೂಲಕ ಗಮನ ಸೆಳೆಯುತ್ತದೆ. 10-12 ಮಂದಿ ತಂಡಕ್ಕೆ ಬಣ್ಣ ಹಚ್ಚಬೇಕೆಂದರೆ ಇಡೀ ರಾತ್ರಿ ಕೆಲಸ. ಒಬ್ಬ ವೇಷಧಾರಿಗೆ ಬಣ್ಣ ಬಳಿಯಲು 3 ತಾಸು ಬೇಕಾಗುತ್ತದೆ. ಬಣ್ಣ ಹಾಕಲು ವೇಷಧಾರಿ ಮೈಯ ರೋಮವನ್ನೆಲ್ಲ ತೆಗೆಯಬೇಕು. ಇದಕ್ಕೆಲ್ಲ ನುರಿತವರನ್ನು ಮೊದಲೇ ಬುಕ್ ಮಾಡಿಟ್ಟುಕೊಳ್ಳಬೇಕು. ಹಿಂದೆಲ್ಲ ಸಾಂಪ್ರದಾಯಿಕ ಬಣ್ಣ ಬಳಸುತ್ತಿದ್ದರು. ಬಣ್ಣ ವಾರಗಟ್ಟಲೆ ಉಳಿಯಲು ಮೊಟ್ಟೆಯ ಬಿಳಿ ದ್ರವ ಬಳಸುತ್ತಿದ್ದರು. ಈಗ ರಾಸಾಯನಿಕ ಬಣ್ಣವೇ ಗತಿಯಾಗಿದ್ದು, ಬೇಗನೇ ಕಿತ್ತು ಹೋಗುತ್ತದೆ.
ಕುರಿ ಹೊಡೆಯುವ ಆಚರಣೆ ಅಂದುಕೊಂಡಷ್ಟು ಸುಲಭವಲ್ಲ. ಎರಡು ವಾರ ಗೋಣಿಚೀಲದಲ್ಲಿ ಮರಳು ತುಂಬಿಸಿ ಹಲ್ಲುಕಚ್ಚಿ ಎತ್ತುವ ಅಭ್ಯಾಸ ನಡೆಸಬೇಕು. ಇಲ್ಲದೆ ಹೋದರೆ ಹಲ್ಲು ಕಿತ್ತುಹೋಗುತ್ತದೆ. ಹಲ್ಲು ಮುರಿದುಕೊಂಡವರು, ವೇಷ ತ್ಯಜಿಸಿದವರೂ ಇದ್ದಾರೆ.
ಹುಲಿವೇಷ ಕುಣಿತವನ್ನೂ ಹೆಜ್ಜೆ ಆಧರಿಸಿ ಒಂದು ಪೌಲ, ಎರಡು ಪೌಲ… ಎಂಟು ಪೌಲ.. ಕುಣಿತ ಎಂದು ವಿಂಗಡಿಸಲಾಗುತ್ತದೆ. ಕುಳಿತೇ ಕುಣಿಯುವ ಹಾಗೂ ನಿಂತು ಕುಣಿಯುವ ಆಟಗಳಲ್ಲಿ 20ಕ್ಕೂ ಅಧಿಕ ವರಸೆಗಳಿವೆ.

ಶಂಕರಪುರ ಮಲ್ಲಿಗೆ ರೇಟ್ ಭರ್ಜರಿ !

ಸುಗಂಧಯುಕ್ತ ಶ್ವೇತಪುಷ್ಪ ಶಂಕರಪುರ ಮಲ್ಲಿಗೆಗೆ ಈಗ ಚಿನ್ನದ ಬೆಲೆ ಬಂದಿದೆ. ಕಳೆದ 6 ದಿನಗಳಲ್ಲಿ 4 ಬಾರಿ ಕಟ್ಟೆಯ ಗರಿಷ್ಠ ಬೆಲೆ 1250 ರೂ. ತಲುಪಿದೆ.ವಾಡಿಕೆಗಿಂತ ಅತಿಯಾಗಿ ಸುರಿದ ನಿರಂತರ ಮಳೆಯಿಂದಾಗಿಮಲ್ಲಿಗೆ ಇಳುವರಿಯಲ್ಲಾದ ಕೊರತೆಯಿಂದ ಬೇಡಿಕೆಯಿದ್ದಷ್ಟುಹೂ ಸಿಗದ ಕಾರಣಮಾರುಕಟ್ಟೆಯಲ್ಲಿ ದರ ಏರುತ್ತಿದೆ.

ಆದರೆ ಮಾರುಕಟ್ಟೆಯಲ್ಲಿ ಹೂವಿಗೆ ಎಷ್ಟೇ ಬೇಡಿಕೆಹೆಚ್ಚಾದರೂ ಬೆಳೆಗಾರರಿಗೆ ಮಾತ್ರ 1250 ರೂ.ಗಿಂತ ಹೆಚ್ಚುಬೆಲೆ ಸಿಗುವುದಿಲ್ಲ. ಪೂರೈಕೆಗಿಂತ ಬೇಡಿಕೆ ಹೆಚ್ಚಾಗಿ ದರಏರಿಕೆಯಾದಾಗ ಇದರ ಲಾಭ ಬೆಳೆಗಾರರಿಗಿಂತ ಹೆಚ್ಚಾಗಿವ್ಯಾಪಾರಿಗಳಿಗೆ ಹೋಗುತ್ತದೆ.ಕಳೆದ ಒಂದು ತಿಂಗಳಲ್ಲಿ ಕಟ್ಟೆಯಲ್ಲಿ 12 ಬಾರಿ ಮಲ್ಲಿಗೆಬೆಲೆ ನಾಲ್ಕಂಕಿ ತಲುಪಿದ್ದು 6 ಬಾರಿ ಬೆಳೆಗಾರರಿಗೆ ಗರಿಷ್ಠ ದರ 1250 ರೂ. ಸಿಕ್ಕಿದೆ. ಈ ಅವಧಿಯಲ್ಲಿ ಕನಿಷ್ಠ ದರ 280 ರೂ. ಆಗಿತ್ತು. ಕಳೆದ 30 ದಿನಗಳಲ್ಲಿ ಬೆಳೆಗಾರರಿಗೆ ಸರಾಸರಿಅಟ್ಟೆಗೆ 818ರೂ. ಬೆಲೆ ಸಿಕ್ಕಿದೆ.