ಮಾರ್ನೆಮಿಯ ಕುಡ್ಲದ ಪಿಲಿವೇಶ

ನವರಾತ್ರಿ, ಮಹಾನವಮಿ ಎಂದರೆ ಕರಾವಳಿ ಮಂದಿಗೆ ಥಟ್ಟನೆ ಹುಲಿ ವೇಷದ ನೆನಪು. ನವರಾತ್ರಿ ಆರಂಭವಾಗುತ್ತಿದ್ದಂತೆ ಕರಾವಳಿಯಲ್ಲಿ ‘ಡೆರೆಮೆ ಟೆಟ್ಟೆ.. ಡೆರೆಮೆ ಟೆಟ್ಟೆ….’ ತಾರ್ಸೆ(ತಮಟೆ) ಸದ್ದು ಅನುರಣನ. ಥೇಟ್ ಹುಲಿಯಂತೇ ಕಾಣುವ ವೇಷಧಾರಿಗಳಿಂದ ರಸ್ತೆ-ವೃತ್ತಗಳಲ್ಲಿ ವಿಶಿಷ್ಟ ನರ್ತನ.
ಮಂಗಳೂರು ದಸರಾ ವೇಳೆ ರಥಬೀದಿ ವೆಂಕಟರಮಣ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಬೋಳಾರ ಮಂಗಳಾದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಆರಂಭ ಮತ್ತು ದಸರಾ ಮೆರವಣಿಗೆಗೆ ಹುಲಿವೇಷ ಆಚರಣೆ.
ಮಂಗಳೂರಿನಲ್ಲಿ ಹುಲಿವೇಷದ 40ಕ್ಕೂ ಅಧಿಕ ತಂಡಗಳಿದ್ದು, ಒಂದೊಂದು ತಂಡದಲ್ಲಿ 25 ವೇಷಧಾರಿಗಳವರೆಗೂ ಇರುತ್ತಾರೆ. ಶಾರದೆ ಮೆರವಣಿಗೆ ಮುಗಿದ ಬಳಿಕ ತಂಡಗಳಿಗೆ ‘ಮರ್ಯಾದೆ’ ಹೆಸರಿನ ಗೌರವ. ಈ ಬಿರುದು ಪಡೆಯುವುದು ತಂಡಗಳಿಗೆ ಪ್ರತಿಷ್ಠೆ.
ಕರಾವಳಿಯ ಹುಲಿವೇಷ ವಿಶಿಷ್ಟ. ತಾರ್ಸೆ, ಡೋಲಿನ ಲಯಕ್ಕೆ ವೇಷಧಾರಿಗಳು ಪ್ರದರ್ಶಿಸುವ ಆಟಗಳ ವರಸೆ ಇತರೆಡೆಗಿಂಥ ಭಿನ್ನ. ಇತ್ತೀಚೆಗೆ ರಾಜ್ಯದ ವಿವಿಧೆಡೆಗೂ ಇಲ್ಲಿನ ಹುಲಿವೇಷ ನರ್ತನಕ್ಕೆ ಬೇಡಿಕೆ ಬರುತ್ತಿದೆ. ಇಲ್ಲಿನ ಹುಲಿವೇಷ ತಂಡವೊಂದು ಫ್ರಾನ್ಸ್‌ಗೂ ತೆರಳಿ ಕರಾವಳಿಯ ಜಾನಪದ ಕಲೆ ಪ್ರದರ್ಶಿಸಿ ಬಂದಿದೆ.
ವೇಷಧಾರಿ ತಾಯಿ ಹುಲಿ ಮರಿಗಳಿಗೆ ಬೇಟೆ ಕಲಿಸುವುದು, ಹಾಲುಣಿಸುವುದು, ಮರಿ ಹುಲಿಗಳ ಆಟ, ವಯಸ್ಸಿಗೆ ಬಂದ ಹುಲಿಗಳ ಕಾದಾಟವನ್ನು ಕುಣಿತದಲ್ಲಿಯೇ ಪ್ರದರ್ಶಿಸುತ್ತಾರೆ. ಪಲ್ಟಿ ಹೊಡೆಯುವುದು, ಮೆಣಸಿನ ಹುಡಿ ಕಲಕಿದ ನೀರಿನಿಂದ ಹಿಮ್ಮುಖವಾಗಿ ನಾಣ್ಯ ತೆಗೆಯವುದು, ಝಂಡಾ ಕಸರತ್ತು, ಬಾಯಿಂದ ಜೀವಂತ ಕುರಿ ಕಚ್ಚಿ ಎಸೆಯುವುದು, ‘ಅಕ್ಕಿ ಮುಡಿ’ ಎತ್ತುವ ಕಸರತ್ತು ಹುಲಿವೇಷದ ಗತ್ತು.
ನವರಾತ್ರಿಗೆ ವೇಷ ಧರಿಸುವುದಾದರೆ ಚೌತಿಗೆ ಅಥವಾ ನವರಾತ್ರಿ ಮೊದಲ ದಿನ ತೆಂಗಿನ ಕಾಯಿ, ಅಕ್ಕಿ, ಬಾಳೆಹಣ್ಣು ಇಟ್ಟು, ಗಣಪತಿ ನೆನೆದು ಸಂಕಲ್ಪ ಮಾಡಬೇಕು. ಅಂದು ತಾರ್ಸೆಯವರಿಂದ ಕುಣಿತದ ಅಭ್ಯಾಸ. ಮಕ್ಕಳಾದರೆ ನುರಿತ ಹುಲಿವೇಷಧಾರಿಗಳ ಬಳಿ ಒಂದೆರಡು ವಾರ ಕುಣಿತ ಕಲಿಯುತ್ತಾರೆ. ವೇಷ ಹಾಕುವವರು ಮಾಂಸಾಹಾರ, ಮದ್ಯ ಸೇವಿಸುವಂತಿಲ್ಲ. ಈ ಸಂಪ್ರದಾಯಕ್ಕೆ ಕರಾವಳಿ ಭಾಗದಲ್ಲಿ ಊದು ಹಾಕುವುದು ಎಂಬ ಹೆಸರು.
ಈ ವೇಷ ಬಣ್ಣದ ಮೂಲಕ ಗಮನ ಸೆಳೆಯುತ್ತದೆ. 10-12 ಮಂದಿ ತಂಡಕ್ಕೆ ಬಣ್ಣ ಹಚ್ಚಬೇಕೆಂದರೆ ಇಡೀ ರಾತ್ರಿ ಕೆಲಸ. ಒಬ್ಬ ವೇಷಧಾರಿಗೆ ಬಣ್ಣ ಬಳಿಯಲು 3 ತಾಸು ಬೇಕಾಗುತ್ತದೆ. ಬಣ್ಣ ಹಾಕಲು ವೇಷಧಾರಿ ಮೈಯ ರೋಮವನ್ನೆಲ್ಲ ತೆಗೆಯಬೇಕು. ಇದಕ್ಕೆಲ್ಲ ನುರಿತವರನ್ನು ಮೊದಲೇ ಬುಕ್ ಮಾಡಿಟ್ಟುಕೊಳ್ಳಬೇಕು. ಹಿಂದೆಲ್ಲ ಸಾಂಪ್ರದಾಯಿಕ ಬಣ್ಣ ಬಳಸುತ್ತಿದ್ದರು. ಬಣ್ಣ ವಾರಗಟ್ಟಲೆ ಉಳಿಯಲು ಮೊಟ್ಟೆಯ ಬಿಳಿ ದ್ರವ ಬಳಸುತ್ತಿದ್ದರು. ಈಗ ರಾಸಾಯನಿಕ ಬಣ್ಣವೇ ಗತಿಯಾಗಿದ್ದು, ಬೇಗನೇ ಕಿತ್ತು ಹೋಗುತ್ತದೆ.
ಕುರಿ ಹೊಡೆಯುವ ಆಚರಣೆ ಅಂದುಕೊಂಡಷ್ಟು ಸುಲಭವಲ್ಲ. ಎರಡು ವಾರ ಗೋಣಿಚೀಲದಲ್ಲಿ ಮರಳು ತುಂಬಿಸಿ ಹಲ್ಲುಕಚ್ಚಿ ಎತ್ತುವ ಅಭ್ಯಾಸ ನಡೆಸಬೇಕು. ಇಲ್ಲದೆ ಹೋದರೆ ಹಲ್ಲು ಕಿತ್ತುಹೋಗುತ್ತದೆ. ಹಲ್ಲು ಮುರಿದುಕೊಂಡವರು, ವೇಷ ತ್ಯಜಿಸಿದವರೂ ಇದ್ದಾರೆ.
ಹುಲಿವೇಷ ಕುಣಿತವನ್ನೂ ಹೆಜ್ಜೆ ಆಧರಿಸಿ ಒಂದು ಪೌಲ, ಎರಡು ಪೌಲ… ಎಂಟು ಪೌಲ.. ಕುಣಿತ ಎಂದು ವಿಂಗಡಿಸಲಾಗುತ್ತದೆ. ಕುಳಿತೇ ಕುಣಿಯುವ ಹಾಗೂ ನಿಂತು ಕುಣಿಯುವ ಆಟಗಳಲ್ಲಿ 20ಕ್ಕೂ ಅಧಿಕ ವರಸೆಗಳಿವೆ.

Share