ಒಂದಲ್ಲ ಎರಡಲ್ಲ ಭರ್ತಿ 3 ವರ್ಷದಲ್ಲಿ 3೦೦ಕ್ಕೂ ಹೆಚ್ಚು ಗಿಡ ನೆಟ್ಟು ಪರಿಸರ ಕಾಳಜಿಯನ್ನು ಹುಟ್ಟುಹಾಕಿದ ವಿದ್ಯಾರ್ಥಿನಿ ಹನಿ ಎಚ್. ಆರ್ ಅವರು ಇಂತಹ ಕೆಲಸವನ್ನು ಬರೀ ಹೆತ್ತವರು ಕೊಟ್ಟ ಪಾಕೆಟ್ ಮನಿಯನ್ನು ಇಟ್ಟುಕೊಂಡು ರಜಾ ದಿನಗಳಲ್ಲಿ ಮಾಡುತ್ತಿದ್ದಾರೆ.
ಪರಿಸರದ ಮೇಲೆ ಪ್ರೀತಿ ಹುಟ್ಟಲು ಯಾವುದೇ ವಯಸ್ಸಿನ ಹಂಗಿಲ್ಲ. ಯಾರು ಕೂಡ ಪರಿಸರವನ್ನು ಪ್ರೀತಿಸಬಹುದು, ಕಾಳಜಿಯನ್ನು ತೋರಿಸಬಹುದು ಎನ್ನುವುದಕ್ಕೆ ಅವರೇ ಬೆಸ್ಟ್ ಉದಾಹರಣೆ. ಮುಡಿಪಿನ ಜವಾಹರ್ ನವೋದಯ ವಿದ್ಯಾಲಯದ 7 ನೇ ತರಗತಿಯಲ್ಲಿ ಓದುತ್ತಿರುವ ಹನಿಗೆ ಪರಿಸರದ ಮೇಲೆ ವಿಶೇಷ ವ್ಯಾವೋಹ.
ಇದೇ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದ ಅವಳು ತನ್ನದೇ ಗ್ರೀನ್ ವಾರಿಯರ್ಸ್ ತಂಡ ಕಟ್ಟಿಕೊಂಡು ಜಪ್ಪಿನಮೊಗರು, ಕಡೆಕಾರು, ಚಿಕ್ಕಮಗಳೂರು, ಬಾಳೆಹೊನ್ನೂರು ಹೀಗೆ ಹತ್ತಾರು ಕಡೆಯಲ್ಲಿ 3೦೦ಕ್ಕೂ ಅಧಿಕ ಗಿಡಗಳನ್ನು ನೆಡುತ್ತಾ ಹಸಿರು ಉಳಿಸಿ ಎನ್ನುವ ಅಭಿಯಾನವನ್ನು ಯಾರಿಗೂ ಹೇಳದೇ ಹುಟ್ಟುಹಾಕಿದ್ದಾರೆ.
ಅದು ಕೂಡ ತನ್ನ ಶಾಲಾ ರಜಾ ದಿನಗಳಲ್ಲಿ ಎನ್ನುವುದು ವಿಶೇಷ. ಮಕ್ಕಳಿಗೆ ರಜೆ ಎಂದಾಕ್ಷಣ ಪ್ರವಾಸಕ್ಕೆ ಹೋಗುವುದು, ಆಟವಾಡುವುದು ಹೀಗೆ ಹತ್ತಾರು ಚಟುವಟಿಕೆಗಳಲ್ಲಿಯೇ ಮಗ್ನರಾಗುವುದು ಕಾಮನ್. ಆದರೆ ಹನಿ ಕೊಂಚ ಭಿನ್ನ ಹುಡುಗಿ ಅವಳಿಗೆ ರಜಾ ದಿನಗಳಲ್ಲಿ ಪರಿಸರದ ಬಗ್ಗೆಯೇ ಹೆಚ್ಚು ಕಾಳಜಿ ಬರುತ್ತದೆ.