Tagged: tulu

ತುಳುನಾಡಿನ ಜನರಿಗೆ ತುಳು ಕ್ಯಾಲೆಂಡರ್

ತುಳುನಾಡಿನ ಜನರಿಗೆ ಎಲ್ಲ ರೀತಿಯ ಕ್ಯಾಲೆಂಡರ್ ಗೊತ್ತು. ಆದರೆ ತುಳು ಭಾಷೆ, ತುಳು ಲಿಪಿಯನ್ನು ಹೊಂದಿರುವ ಕ್ಯಾಲೆಂಡರ್‍ವೊಂದು ಕಳೆದ ಏಳು ವರ್ಷಗಳಿಂದ ಹೊರ ಬರುತ್ತಿದೆ. ಅದರ ಹೆಸರು `ಕಾಲ ಕೋಂದೆ’ ಎಂದರೆ ಇದರ ಅರ್ಥ ಕಾಲ ಗೊಂಚಲು. ಇದರ ವಿಶೇಷವೇನೆಂದರೆ ತುಳುನಾಡಿನ ಸರ್ವ ಧರ್ಮೀಯರ ಹಬ್ಬ, ಆಚರಣೆ ಹಾಗೂ ತುಳುನಾಡಿನ ಸಮಸ್ತರಿಗೂ ಪ್ರಯೋಜನವಾಗುವ ಈ ಕ್ಯಾಲೆಂಡರ್ ಉಪಯುಕ್ತ ಪಂಚಾಂಗವೂ ಹೌದು.

ತುಳುವರ ವಿಶೇಷ ದಿನಗಳು ತುಳುವರ ಆಚರಣೆ ಹಬ್ಬ,ವಿóಶಿಷ್ಟ ತಿಂಗಳು, ಕಾಲದ ಬಗ್ಗೆ ತಿಳಿಸುವ ಅಂದರೆ ಸಂಕ್ರಾಂದಿ, ಸಿಂಗೊಡೆ, ತಿಥಿ,ನಕ್ಸತ್ರ,ಗಳನ್ನು (ಭರಣಿ, ಕಿರ್ತಿಕೆ) ಕೆಡ್ವಾಸ, ಬಲಿಲೆಪ್ಪುನ ದಿನ, ಪತ್ತನಾಜೆ, ಕೋಲ,ಕೊಡಿ, ತೇರ್,ಆಯನ, ಆಟಿ, ಸೋಣ ತಿಂಗಳ ವಿಷೇಷತೆ, ಜಾತ್ರೆಗಳ ಬಗ್ಗೆ, ಹಾಗೆಯೇ ಗ್ರಹಣ, ಮೌಢ್ಯ ಕಾಲಗಳ ಬಗೆಗೆ ನಿಖರವಾಗಿ ತಿಳಿಸಲಾಗಿದೆ.

ವಾಸ್ತವವಾಗಿ ಈ ತುಳುವಿನ ಕ್ಯಾಲೆಂಡರ್ ಪ್ರಾರಂಭವಾಗುವುದು `ಸೌರಮಾನ ಯುಗಾದಿ’ಯ ದಿನವಾದ `ಬಿಸು’ವಿನಿಂದ ಅಂದರೆ ಈ ಸಲ 2020ರ ಎಪ್ರಿಲ್ 14ರ `ಪಗ್ಗು’ವಿನಿಂದ ಹಾಗೆಯೇ ತುಳು ತಿಂಗಳು ಅಂತ್ಯವಾಗುವುದು 2021ರ ಸುಗ್ಗಿ ತಿಂಗಳಿನಲ್ಲಿ, ಪ್ರತಿ ಸಂಕ್ರಾತಿಯಂದು ತುಳುವರು ದೈವ,ದೇವರುಗಳ ಆಲಯವನ್ನು ತೊಳೆದು,ಒಪ್ಪವಾಗಿರಿಸಿ ಪೂಜೆ, ಪುನಸ್ಕಾರವನ್ನು ಕೈಗೊಳ್ಳುತ್ತಾರೆ. ಅಂದೇ ತುಳು ತಿಂಗಳು ಕೊನೆಗೊಳ್ಳುವುದು ಹಾಗೆಯೇ ಮರುದಿನ ತುಳು ತಿಂಗಳಿನ ಆರಂಭ. ಆ ದಿನವನ್ನು `ಸಿಂಗೊಡೆ’ ಎಂದು ಕರೆಯುತ್ತಾರೆ. ಅಂದಹಾಗೆ ಪ್ರತಿ ತಿಂಗಳ ಈ ದಿನ ತುಳುವರಿಗೆ ವಿಶಿಷ್ಟವಾದದ್ದು. ತುಳುನಾಡಿನ ರೈತರಿಗೂ ರಜೆಯ ದಿನ.ಅಂದು ಅವರು ಯಾವೊಂದು ಹೊಸ ಕೆಲಸವನ್ನು ಪ್ರಾರಂಭ ಮಾಡುವುದಿಲ್ಲ.ಆದುದರಿಂದ ಅವರ ಪಾಲಿಗೆ `ಸಿಂಗೊಡೆ’ ಕಾದಿರಿಸಲ್ಪಟ್ಟ ವಿಶೇಷ ದಿನ.

ತುಳು ತಿಂಗಳು ಪ್ರತಿ ವರುಷ ಪಗ್ಗು ತಿಂಗಳಿನಿಂದ ಆರಂಭವಾಗಿ ಬೇಶ, ಕಾರ್ತೆಲ್, ಆಟಿ,ಸೋಣ, ನಿರ್ನಾಲ, ಬೊಂತೆಲ್, ಜಾರ್ದೆ, ಪೆರಾರ್ದೆ, ಪೊನ್ನಿ, ಮಾಯಿ, ಸುಗ್ಗಿ ವರೆಗೆ ಒಟ್ಟು 12 ತಿಂಗಳುಗಳಿಂದ ಕೂಡಿದೆ. ಕಳೆದ ವರ್ಷದಂತೆಯೇ ಈ ವರ್ಷವೂ ಅಧಿಕ ಮಾಸದ ಪ್ರಭಾವದಿಂದಾಗಿ ತುಳುವಿನ ಕ್ಯಾಲೆಂಡರ್‍ನಲ್ಲಿ ಸಹ ಅಧಿಕ ಮಾಸದ ದಿನಗಳು ಕಂಡುಬರುತ್ತದೆ. ಅದೆಂದರೆ `ಕಾರ್ತೆಲ್’ತಿಂಗಳು ಅಂದರೆ 2020 ಜೂನ್ ತಿಂಗಳು 15 ರಿಂದ ಜುಲೈ 16 ತಾರೀಕಿನ ವರೆಗಿನ. ಈ ಅವಧಿಯು ಸುಧೀರ್ಘವಾಗಿದ್ದು ಒಟ್ಟು 32 ದಿನಗಳಿಂದ ಕೂಡಿರುತ್ತದೆ. ಇದೇ ವರ್ಷದಲ್ಲಿ ಎರಡು ತಿಂಗಳು ಕಿರು ಅವಧಿಯ ತಿಂಗಳಾಗಿರುತ್ತದೆ. ಅವುಗಳೆಂದರೆ ಪೆರಾರ್ದೆ ತುಳು ತಿಂಗಳಿನ ಅಂದರೆ 2019 ಡಿಸೆಂಬರ್ ತಿಂಗಳಿನ 17 ರಿಂದ 2019 ರ ಜನವರಿಯ 14 ರವರೆಗೆ ಹಾಗೂ 2020ರ ನವೆಂಬರ್ 17ರಿಂದ 2021 ಡಿಸೆಂಬರ್15 ವರೆಗಿನ `ಜಾರ್ದೆ’ ತುಳು ತಿಂಗಳಿನ ಈ ಅವಧಿಯು 29 ದಿನಗಳಿಂದ ಮಾತ್ರವೇ ಕೂಡಿರುವುದು ಒಂದು ವಿಶೇಷವಾಗಿದೆ.

ತುಳುನಾಡಿನ ಯುವಕರ ತುಳು ಅಪ್ಪೆಯ ಸೇವೆ

ತುಳುನಾಡಿನ ಜೈ ತುಳುನಾಡ್ (ರಿ.) ಸಂಘಟನೆಯ ಸದಸ್ಯರು ತುಳು ಲಿಪಿಯ ಜಾಗೃತಿಯನ್ನು ವಿಶಿಷ್ಟ ರೀತಿಯಲ್ಲಿ ಆಂದೋಲನದಂತೆ ಮುಂದುವರಿಸುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿರುವ ತುಳುನಾಡಿನ ಊರಿನ ಹೆಸರಿನ ಜತೆಯಲ್ಲಿ ತುಳು ಲಿಪಿಯಲ್ಲೂ ಇದರ ಮಾಹಿತಿಯ ಕಾರ‍್ಯವಂತೂ ನಡೆಯುತ್ತಿದೆ. ಅಂದಹಾಗೆ ಯುವ ಕೇಸರಿ ಕೊಯ್ಕುಡೆ ಎಂಬ ಸಂಘದ ನೇತೃತ್ವದಲ್ಲಿ ಪ್ರಪ್ರಥಮ ತುಳು ಲಿಪಿ ನಾಮಫಲಕವನ್ನು ಮುಲ್ಕಿಯ ಕೊಯ್ಕುಡೆ ಎಂಬ ಊರಿನಲ್ಲಿ ಹಾಕುವ ಮೂಲಕ ತುಳು ಲಿಪಿಯ ಜಾಗೃತಿಯಲ್ಲಿ ಕೆಲಸ ಮಾಡಿದ್ದಾರೆ.

ಇದರ ಜತೆಯಲ್ಲಿ ಮುಂದೆಯೂ ಊರಿನ ಹೆಸರುಗಳು ಸೇರಿದಂತೆ ಹಂತ ಹಂತವಾಗಿ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ, ಅಂಗಡಿ-ಕಂಪೆನಿ, ವಾಹನ ಸೇರಿದಂತೆ ಎಲ್ಲ ಕಡೆ ತುಳು ಲಿಪಿಯ ಬಳಕೆಯನ್ನು ಹೆಚ್ಚಾಗಿ ಬಳಸುವಂತೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುವ ಮೂಲಕ ತುಳುನಾಡಿನ ಜೈ ತುಳುನಾಡಿನ ಸಂಘಟನೆಯ ಯುವಕರು ಪೂರ್ಣ ಪ್ರಮಾಣದಲ್ಲಿ ತುಳು ಅಪ್ಪೆಯ ಸೇವೆಯಲ್ಲಿ ಸಂತೃಪ್ತಿಯ ಭಾವವನ್ನು ಕಾಣುತ್ತಿದ್ದಾರೆ.

ಮಾರ್ನೆಮಿಯ ಕುಡ್ಲದ ಪಿಲಿವೇಶ

ನವರಾತ್ರಿ, ಮಹಾನವಮಿ ಎಂದರೆ ಕರಾವಳಿ ಮಂದಿಗೆ ಥಟ್ಟನೆ ಹುಲಿ ವೇಷದ ನೆನಪು. ನವರಾತ್ರಿ ಆರಂಭವಾಗುತ್ತಿದ್ದಂತೆ ಕರಾವಳಿಯಲ್ಲಿ ‘ಡೆರೆಮೆ ಟೆಟ್ಟೆ.. ಡೆರೆಮೆ ಟೆಟ್ಟೆ….’ ತಾರ್ಸೆ(ತಮಟೆ) ಸದ್ದು ಅನುರಣನ. ಥೇಟ್ ಹುಲಿಯಂತೇ ಕಾಣುವ ವೇಷಧಾರಿಗಳಿಂದ ರಸ್ತೆ-ವೃತ್ತಗಳಲ್ಲಿ ವಿಶಿಷ್ಟ ನರ್ತನ.
ಮಂಗಳೂರು ದಸರಾ ವೇಳೆ ರಥಬೀದಿ ವೆಂಕಟರಮಣ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಬೋಳಾರ ಮಂಗಳಾದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಆರಂಭ ಮತ್ತು ದಸರಾ ಮೆರವಣಿಗೆಗೆ ಹುಲಿವೇಷ ಆಚರಣೆ.
ಮಂಗಳೂರಿನಲ್ಲಿ ಹುಲಿವೇಷದ 40ಕ್ಕೂ ಅಧಿಕ ತಂಡಗಳಿದ್ದು, ಒಂದೊಂದು ತಂಡದಲ್ಲಿ 25 ವೇಷಧಾರಿಗಳವರೆಗೂ ಇರುತ್ತಾರೆ. ಶಾರದೆ ಮೆರವಣಿಗೆ ಮುಗಿದ ಬಳಿಕ ತಂಡಗಳಿಗೆ ‘ಮರ್ಯಾದೆ’ ಹೆಸರಿನ ಗೌರವ. ಈ ಬಿರುದು ಪಡೆಯುವುದು ತಂಡಗಳಿಗೆ ಪ್ರತಿಷ್ಠೆ.
ಕರಾವಳಿಯ ಹುಲಿವೇಷ ವಿಶಿಷ್ಟ. ತಾರ್ಸೆ, ಡೋಲಿನ ಲಯಕ್ಕೆ ವೇಷಧಾರಿಗಳು ಪ್ರದರ್ಶಿಸುವ ಆಟಗಳ ವರಸೆ ಇತರೆಡೆಗಿಂಥ ಭಿನ್ನ. ಇತ್ತೀಚೆಗೆ ರಾಜ್ಯದ ವಿವಿಧೆಡೆಗೂ ಇಲ್ಲಿನ ಹುಲಿವೇಷ ನರ್ತನಕ್ಕೆ ಬೇಡಿಕೆ ಬರುತ್ತಿದೆ. ಇಲ್ಲಿನ ಹುಲಿವೇಷ ತಂಡವೊಂದು ಫ್ರಾನ್ಸ್‌ಗೂ ತೆರಳಿ ಕರಾವಳಿಯ ಜಾನಪದ ಕಲೆ ಪ್ರದರ್ಶಿಸಿ ಬಂದಿದೆ.
ವೇಷಧಾರಿ ತಾಯಿ ಹುಲಿ ಮರಿಗಳಿಗೆ ಬೇಟೆ ಕಲಿಸುವುದು, ಹಾಲುಣಿಸುವುದು, ಮರಿ ಹುಲಿಗಳ ಆಟ, ವಯಸ್ಸಿಗೆ ಬಂದ ಹುಲಿಗಳ ಕಾದಾಟವನ್ನು ಕುಣಿತದಲ್ಲಿಯೇ ಪ್ರದರ್ಶಿಸುತ್ತಾರೆ. ಪಲ್ಟಿ ಹೊಡೆಯುವುದು, ಮೆಣಸಿನ ಹುಡಿ ಕಲಕಿದ ನೀರಿನಿಂದ ಹಿಮ್ಮುಖವಾಗಿ ನಾಣ್ಯ ತೆಗೆಯವುದು, ಝಂಡಾ ಕಸರತ್ತು, ಬಾಯಿಂದ ಜೀವಂತ ಕುರಿ ಕಚ್ಚಿ ಎಸೆಯುವುದು, ‘ಅಕ್ಕಿ ಮುಡಿ’ ಎತ್ತುವ ಕಸರತ್ತು ಹುಲಿವೇಷದ ಗತ್ತು.
ನವರಾತ್ರಿಗೆ ವೇಷ ಧರಿಸುವುದಾದರೆ ಚೌತಿಗೆ ಅಥವಾ ನವರಾತ್ರಿ ಮೊದಲ ದಿನ ತೆಂಗಿನ ಕಾಯಿ, ಅಕ್ಕಿ, ಬಾಳೆಹಣ್ಣು ಇಟ್ಟು, ಗಣಪತಿ ನೆನೆದು ಸಂಕಲ್ಪ ಮಾಡಬೇಕು. ಅಂದು ತಾರ್ಸೆಯವರಿಂದ ಕುಣಿತದ ಅಭ್ಯಾಸ. ಮಕ್ಕಳಾದರೆ ನುರಿತ ಹುಲಿವೇಷಧಾರಿಗಳ ಬಳಿ ಒಂದೆರಡು ವಾರ ಕುಣಿತ ಕಲಿಯುತ್ತಾರೆ. ವೇಷ ಹಾಕುವವರು ಮಾಂಸಾಹಾರ, ಮದ್ಯ ಸೇವಿಸುವಂತಿಲ್ಲ. ಈ ಸಂಪ್ರದಾಯಕ್ಕೆ ಕರಾವಳಿ ಭಾಗದಲ್ಲಿ ಊದು ಹಾಕುವುದು ಎಂಬ ಹೆಸರು.
ಈ ವೇಷ ಬಣ್ಣದ ಮೂಲಕ ಗಮನ ಸೆಳೆಯುತ್ತದೆ. 10-12 ಮಂದಿ ತಂಡಕ್ಕೆ ಬಣ್ಣ ಹಚ್ಚಬೇಕೆಂದರೆ ಇಡೀ ರಾತ್ರಿ ಕೆಲಸ. ಒಬ್ಬ ವೇಷಧಾರಿಗೆ ಬಣ್ಣ ಬಳಿಯಲು 3 ತಾಸು ಬೇಕಾಗುತ್ತದೆ. ಬಣ್ಣ ಹಾಕಲು ವೇಷಧಾರಿ ಮೈಯ ರೋಮವನ್ನೆಲ್ಲ ತೆಗೆಯಬೇಕು. ಇದಕ್ಕೆಲ್ಲ ನುರಿತವರನ್ನು ಮೊದಲೇ ಬುಕ್ ಮಾಡಿಟ್ಟುಕೊಳ್ಳಬೇಕು. ಹಿಂದೆಲ್ಲ ಸಾಂಪ್ರದಾಯಿಕ ಬಣ್ಣ ಬಳಸುತ್ತಿದ್ದರು. ಬಣ್ಣ ವಾರಗಟ್ಟಲೆ ಉಳಿಯಲು ಮೊಟ್ಟೆಯ ಬಿಳಿ ದ್ರವ ಬಳಸುತ್ತಿದ್ದರು. ಈಗ ರಾಸಾಯನಿಕ ಬಣ್ಣವೇ ಗತಿಯಾಗಿದ್ದು, ಬೇಗನೇ ಕಿತ್ತು ಹೋಗುತ್ತದೆ.
ಕುರಿ ಹೊಡೆಯುವ ಆಚರಣೆ ಅಂದುಕೊಂಡಷ್ಟು ಸುಲಭವಲ್ಲ. ಎರಡು ವಾರ ಗೋಣಿಚೀಲದಲ್ಲಿ ಮರಳು ತುಂಬಿಸಿ ಹಲ್ಲುಕಚ್ಚಿ ಎತ್ತುವ ಅಭ್ಯಾಸ ನಡೆಸಬೇಕು. ಇಲ್ಲದೆ ಹೋದರೆ ಹಲ್ಲು ಕಿತ್ತುಹೋಗುತ್ತದೆ. ಹಲ್ಲು ಮುರಿದುಕೊಂಡವರು, ವೇಷ ತ್ಯಜಿಸಿದವರೂ ಇದ್ದಾರೆ.
ಹುಲಿವೇಷ ಕುಣಿತವನ್ನೂ ಹೆಜ್ಜೆ ಆಧರಿಸಿ ಒಂದು ಪೌಲ, ಎರಡು ಪೌಲ… ಎಂಟು ಪೌಲ.. ಕುಣಿತ ಎಂದು ವಿಂಗಡಿಸಲಾಗುತ್ತದೆ. ಕುಳಿತೇ ಕುಣಿಯುವ ಹಾಗೂ ನಿಂತು ಕುಣಿಯುವ ಆಟಗಳಲ್ಲಿ 20ಕ್ಕೂ ಅಧಿಕ ವರಸೆಗಳಿವೆ.

ಬಲೆ ರೆಡಿ ಇನ್ನು ಪರ್ಸಿನ್ ಮೀನುಗಾರಿಕೆ ಆರಂಭ

ಯಾಂತ್ರೀಕೃತ ಮೀನುಗಾರಿಕೆ ಸಮುದ್ರ ಪೂಜೆಯ ಬಳಿಕ ಸೋಮವಾರದಿಂದ ಪರ್ಸಿನ್ ಬೋಟುಗಳು ಮೀನುಗಾರಿಕೆ ಇಳಿಯಲಿದೆ. ಈಗಾಗಲೇ ಲಾರಿಗಳಿಗೆ ಬಲೆಯನ್ನು ತುಂಬಿಸುವ ಕೆಲಸ ಪೂರ್ಣಗೊಂಡಿದೆ. ಸೋಮವಾರ (august 19) ಧಾರ ಮೂಹೂರ್ತ ಬಳಿಕ ಮೀನುಗಾರಿಕೆಗೆ ಪರ್ಸಿನ್ ಬೋಟುಗಳು ಇಳಿಯಲಿದೆ.

ತುಳುವರು ಆಟಿ ಕಷಾಯ ಯಾಕೆ ಕುಡಿಯುತ್ತಾರಾ ಗೊತ್ತಾ?

ತುಳುನಾಡಿನ ಜನಕ್ಕೆ ಆಟಿ ಅಮವಾಸ್ಯೆ ಒಂದು ವಿಶೇಷ ಹಬ್ಬ. ಅಂದು ಹಾಲೆ ಮರದ ತೊಗಟೆಯ ರಸ ತೆಗೆದು ಕುಡಿಯುವ ಪದ್ಧತಿ ಪುರಾತನ ಕಾಲದಿಂದ ಹಿಡಿದು ಇಂದಿನವರೆಗೂ ಬೆಳೆದು ಬಂದಿದೆ. ಅಗಸ್ಟ್ 1 ರಂದು ಆಟಿ ಅಮವಾಸ್ಯೆ. ಈ ಅಮವಾಸ್ಯೆಯ ಮದ್ದು ಕುಡಿದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ವೈದ್ಯಲೋಕ ಹೇಳುತ್ತದೆ.

ದೇಹದೊಳಗಿನ ನಂಜಿನ ಅಂಶಗಳನ್ನು ತೆಗೆಯುವ ಶಕ್ತಿ ಹಾಲೆಮರದ ರಸಕ್ಕಿದೆ. ಇದು ಕಿಡ್ನಿ ಉತ್ತಮವಾಗಿ ಕೆಲಸ ನಿರ್ವಹಿಸುವಂತೆ ಮಾಡುತ್ತದೆ. ಆಟಿ ಅಮವಾಸ್ಯೆಯಂದು ಔಷಧೀಯ ಗುಣ ಪೂರ್ಣ ಪ್ರಮಾಣದಲ್ಲಿರುತ್ತದೆ. ಹಾಲೆ ಮರದ ರಸ ಕುಡಿದ ನಂತರ ಮೆಂತೆಯ ಗಂಜಿ ಮಾಡುವ ಕ್ರಮ ಇದೆ. ಮರ ರಸದಿಂದ ದೇಹಕ್ಕಾಗುವ ಉಷ್ಣಬಾದೆಯನ್ನು ಸರಿಪಡಿಸುತ್ತದೆ.

ಹಾಲೆ ಮರದ ಔಷಧಗಳೊಂದಿಗೆ ಮಂತ್ರ, ತಂತ್ರ ಔಷಧ ಪರಿಕಲ್ಪನೆಗಳು ಸೇರಿ ಹೋಗಿವೆ. ಔಷಧೀಯ ಗುಣದ ಬಗ್ಗೆ ವೈಜ್ಞಾನಿಕವಾಗಿ ದೃಢಪಟ್ಟರೂ ಅದನ್ನು ಬೆಳಕು ಹರಿಯುವ ಮೊದಲೇ ಸಂಗ್ರಹಿಸಬೇಕು. ಹಾಲೆ ಮರದ ತೊಗಟೆಯನ್ನು ಕೂಡ ಹೊತ್ತಿನಲ್ಲಿ ತಂದರೆ ಅದರಲ್ಲಿರುವ ಔಷಧೀಯ ಗುಣ ಪೂರ್ತಿಯಾಗಿ ದೊರೆಯುತ್ತದೆ. ಇದರ ಜತೆಯಲ್ಲಿ ಇಂದಿನ ಜನಕ್ಕೆ ಹಾಲೆ ಮರದ ಪರಿಚಯ ಕೂಡಾ ಕಡಿಮೆ ಈ ಕಾರಣದಿಂದ ಹಾಲೆ‌‌ಮರ‌ ಎಂದು ದೃಢಪಟ್ಟ ಬಳಿಕವಷ್ಟೇ ಅದರ ಕೆತ್ತೆಯ ರಸ ಕುಡಿದರೆ ಒಳ್ಳೆಯದು ಎನ್ನುವುದು ಕುಡ್ಲ ಸಿಟಿಯ ಕಾಳಜಿಯ ಮಾತು.