ಪಿಲಿಕುಳ ಜೈವಿಕ ಪಾರ್ಕ್ ನಲ್ಲಿ ನೈಟ್ ವಿಶನ್ ಕಣ್ಗಾವಲು

ಕರಾವಳಿಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿರುವ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿ-ಪಕ್ಷಿಗಳು ಮತ್ತು ಪ್ರವಾಸಿಗರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಹೈ ರೆಸೊಲ್ಯೂಷನ್ ಹೊಂದಿರುವ ನೈಟ್ ವಿಷನ್ (ರಾತ್ರಿಯೂ ಸ್ಪಷ್ಟವಾಗಿ ಗೋಚರಿಸುವ) ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಹದಿನೈದು ದಿನಗಳಲ್ಲಿ ಅಳವಡಿಕೆ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕೆ ಕೇಂದ್ರ ಮೃಗಾಲಯ ಪ್ರಾಧಿಕಾರ ಹಣಕಾಸಿನ ನೆರವು ನೀಡಿದೆ.

150 ಎಕರೆ ವಿಸ್ತೀರ್ಣ ಹೊಂದಿರುವ ಪಾರ್ಕ್‌ನಲ್ಲಿ ಪ್ರಸ್ತುತ 16 ಕ್ಯಾಮರಾಗಳಿವೆ. ಇವುಗಳಲ್ಲಿ ಪ್ರವೇಶ ದ್ವಾರದಲ್ಲಿ ಹೊರತು ಪಡಿಸಿದರೆ, ಹೆಚ್ಚಿನವು ರಸ್ತೆಯತ್ತ ಮುಖ ಮಾಡಿವೆ. ನಿಗದಿತ ಸ್ಥಳಗಳಲ್ಲಿ ಕ್ಯಾಮರಾಗಳಿಲ್ಲದೆ ಪಾರ್ಕ್ ಒಳಗಿನ ಬಹುತೇಕ ಪ್ರದೇಶವನ್ನು ಒಂದು ಕಡೆಯಲ್ಲಿ ಕುಳಿತು ಮಾನೀಟರ್ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪಾರ್ಕ್ ಒಳಗೆ ಕ್ಯಾಮರಾ ಅಳವಡಿಸಲು ಜೈವಿಕ ಉದ್ಯಾನ ಆಡಳಿತ ಸಮಿತಿ ನಿರ್ಧರಿಸಿದೆ.

*2 ಕಿ.ಮೀ. ವ್ಯಾಪ್ತಿ:* 50 ಹೊಸ ಕ್ಯಾಮರಾ ಹಾಗೂ ಬೃಹತ್ ಟಿವಿ ಸ್ಕ್ರೀನ್ ಅಳವಡಿಸುವ ಕುರಿತ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಸುಮಾರು 15 ಲಕ್ಷ ರೂ. ವೆಚ್ಚವಾಗಲಿದೆ. ಪಾರ್ಕ್‌ನ ಎರಡು ಕಿ.ಮೀ. ವ್ಯಾಪ್ತಿಯನ್ನು ಪ್ರಧಾನ ಕಚೇರಿಯಲ್ಲಿ ಕುಳಿತು ಟಿವಿ ಪರದೆ ಮೂಲಕ ಪರಿಶೀಲಿಸಬಹುದಾಗಿದೆ. ಉದ್ಯಾನವನದಲ್ಲಿರುವ ಪಶ್ಚಿಮ ಘಟ್ಟದ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿ ಸಂಕುಲಗಳ ಕುರಿತು ವಿಶೇಷ ಗಮನ ನೀಡುವುದು ಆಡಳಿತ ಸಮಿತಿ ಉದ್ದೇಶವಾಗಿದೆ. ಜತೆಗೆ ಪ್ರವಾಸಿಗರು ಪ್ರಾಣಿಗಳಿಗೆ ತೊಂದರೆ ನೀಡಿದರೆ, ಆಹಾರ ಪದಾರ್ಥಗಳನ್ನು ಎಸೆದರೆ, ಅನುಚಿತವಾಗಿ ವರ್ತಿಸಿದರೆ ಎಚ್ಚರಿಕೆ ನೀಡಲೂ ಇದರಿಂದ ಅನುಕೂಲವಾಗಲಿದೆ.

*ಏನಿದು ನೈಟ್ ವಿಷನ್ ಕ್ಯಾಮರಾ?: *ಸಾಮಾನ್ಯ ಸಿಸಿಟಿವಿ ಕ್ಯಾಮರಾಗಳು ಹಗಲು ವೇಳೆ ಉತ್ತಮವಾಗಿ ಚಿತ್ರೀಕರಿಸಿದರೂ, ರಾತ್ರಿಯ ಚಿತ್ರೀಕರಣ ಮಬ್ಬಾಗಿರುತ್ತದೆ. ಆದರೆ ನೈಟ್ ವಿಷನ್ ಕ್ಯಾಮರಾಗಳು ಹಗಲಿನಂತೆ ರಾತ್ರಿ ವೇಳೆಯೂ ಸ್ಪಷ್ಟವಾಗಿ ಸೆರೆ ಹಿಡಿಯುತ್ತದೆ. ಇದಕ್ಕೆ ಬೆಳಕಿನ ಅವಶ್ಯಕತೆಯಿಲ್ಲ, ಆದರೆ ಕಪ್ಪು ಬಿಳುಪಿನಲ್ಲಿ ದೃಶ್ಯಗಳನ್ನು ಚಿತ್ರೀಕರಿಸುತ್ತದೆ.

Share