Tagged: kudlacity6

ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ

ಮಂಗಳೂರಿನ ಹರೇಕಳದ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಇಡೀ ತುಳುನಾಡಿಗೆ ಮಾತ್ರವಲ್ಲ ಇಡೀ ಕರ್ನಾಟಕ ಇದು ಹೆಮ್ಮೆಯ ವಿಚಾರ.
ಅಂದಹಾಗೆ ಇವರು ಕೋಟ್ಯಾಧಿಪತಿಯಲ್ಲ. ಉನ್ನತ ವಿದ್ಯಾಭ್ಯಾಸವಂತೂ ಅವರಿಗೆ ದೂರದ ಬೆಟ್ಟವಾದರೂ ಪಕ್ಕಾ ಅಕ್ಷರ ಸ್ನೇಹಿ. ಮಂಗಳೂರಿನ ರಸ್ತೆ ಬದಿಗಳಲ್ಲಿ ಕಿತ್ತಳೆ ಹಣ್ಣು ಮಾರಿಕೊಂಡು ನಿತ್ಯ ಜೀವನ ಸಾಗಿಸುತ್ತಿರುವ ಹಾಜಬ್ಬನವರು ತಮ್ಮ ಜೀವನ ಸುಖಗಿಂತಲೂ ಬೇರೆಯವರ ನೋವಿಗೆ ಸ್ಪಂದಿಸುವವರು.

ಹಾಜಬ್ಬನವರು ಕಿತ್ತಳೆ ವ್ಯಾಪಾರದಿಂದ ಅವರಿಗೆ ದಿನಕ್ಕೆ ಲಭಿಸುವುದು ಕೇವಲ 100 ರಿಂದ 150 ರೂಪಾಯಿ. ಮಂಗಳೂರು ನಗರದಲ್ಲಿ ಕಿತ್ತಳೆ ಹಣ್ಣು ಮಾರುವ ಮೂಲಕ ಅಕ್ಷರದ ಕನಸು ಕಂಡ ಅವರು ತನ್ನೂರಾದ ಹರೇಕಳ ನ್ಯೂಪಡು ಎಂಬ ಪುಟ್ಟ ಹಳ್ಳಿಯಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದು ಕೊನೆಗೂ ಪ್ರಾಥಮಿಕ ಶಾಲೆಗೆ ಅನುದಾನ ತಂದು ಕೊಡುವ ಕೆಲಸದಲ್ಲಿ ಯಶಸ್ಸು ಪಡೆದವರು.
ವಿಶೇಷ ಎಂದರೆ ಈ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರನ್ನಾಗಿ ಹಾಜಬ್ಬ ಅವರನ್ನು ಆಯ್ಕೆ ಮಾಡಿದ ನಂತರ ಅವರು ನಾನಾ ಇಲಾಖೆಗಳಿಗೆ ಭೇಟಿ ಕೊಟ್ಟು ಅನುದಾನ ಕೊಡುವ ತನಕನೂ ಅಲ್ಲಿಂದ ಕದಲದೇ ಅಧಿಕಾರಿಗಳು ಕೊನೆಗೆ ಅನುದಾನ ಮಂಜೂರು ಮಾಡುವಂತಹ ಸ್ಥಿತಿಗೆ ತಂದು ಬಿಟ್ಟಿದ್ದರು. ನಿಜವಾಗಿಯೂ ಅವರ ಹೋರಾಟದ ಬದುಕು ಈಗ ಜಗತ್ತು ಅರಿತಿದೆ.

ತುಳುನಾಡಿನವರಿಗೆ ಉಡುಪಿ ಸೀರೆ ಗೊತ್ತಿರಲಿ‌ ಮಾರಾಯ್ರೆ

ಮೈಸೂರು ರೇಷ್ಮೆ ಸೀರೆ , ಇಳಕಲ್ ಸೀರೆ ಯಾವುದಾದರೂ ಇರಲಿ ಮಾರಾಯ್ರೆ‌ ಉಡುಪಿ ಸೀರೆಗಳ ಬಗ್ಗೆ ನಮ್ಮ ತುಳುನಾಡಿನ ಜನರು ತಿಳಿದುಕೊಳ್ಳಬೇಕು ಮಾರಾಯ್ರೆ.
ಉಡುಪಿ ಸೀರೆಯ ಮೈಬಣ್ಣ ತಿಳಿಯಾಗಿರುತ್ತದೆ. ಸೆರಗು ಮತ್ತು ಪಟ್ಟಿಯ ಬಣ್ಣ ಕಡುವಾಗಿರುತ್ತದೆ. ಮಲಬಾರ್ ಲೂಮ್ಸ್‌ನಲ್ಲಿ ಇದನ್ನು ತಯಾರಿಸಲಾಗುತ್ತಿದ್ದು, ಸೀರೆ ನೈಯುವಾಗಲೇ ನೂಲಿಗೆ ಗಂಜಿಯನ್ನು ಹಾಕಲಾಗುತ್ತದೆ.
ಕರಾವಳಿಯ ಮಣ್ಣಿನ ಪರಿಮಳದಲ್ಲಿ ಹುಟ್ಟಿದ ಉಡುಪಿ ಸೀರೆ, ಅಸಹಜ ಬಣ್ಣದ್ದಲ್ಲ. ಇದರ ಸಹಜತೆ, ಸರಳತೆ, ಕಲಾತ್ಮಕ ಬಣ್ಣ ನಮ್ಮೊಳಗೆ ಉಂಟು ಮಾಡುವ ಆಪ್ತತೆಯೇ ಬೇರೆ. ಈ ಸೀರೆಯ ಸೆರಗು ಒಂದಷ್ಟು ಗಾಢ ಬಣ್ಣ, ಅಂಚು ತಿಳಿ ಬಣ್ಣ. ಕೃತಕ ನೂಲುಗಳಿಲ್ಲದ, ಕೃತಕ ಬಣ್ಣಗಳಿಲ್ಲದ, ಶುದ್ಧ ಕೈಮಗ್ಗದ ಹತ್ತಿ ನೂಲುಗಳಿಂದ ತಯಾರಿಸಿದ ಉತ್ಪನ್ನ. ಇದನ್ನು ಧರಿಸಿದಾಗ ಸಿಗುವ ಸಂತಸ ಮತ್ತು ಆರಾಮದ ಅನುಭವ ಬೇರೆ ಯಾವ ಸೀರೆಗಳಿಂದಲೂ ಸಿಗುವುದಿಲ್ಲ ಎನ್ನುವುದು ಗ್ರಾಹಕರ ಅಭಿಪ್ರಾಯ. ‘ಮಳೆಗಾಲದಲ್ಲಿ ಬೆಚ್ಚಗಿನ ಹಾಗೂ ಬೇಸಿಗೆಯಲ್ಲಿ ತಂಪಿನ, ಹಿತವಾದ ಅನುಭವ ನೀಡುತ್ತದೆ. ಮಾತ್ರವಲ್ಲ, ತೊಟ್ಟು ಹಳೆಯದಾದರೂ ಬಳಕೆಗೆ ಬರುವ ಈ ಸೀರೆ ನಿಜವಾಗಿಯೂ ನಮ್ಮ ಸಾತ್ವಿಕ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುತ್ತದೆ’ ಎನ್ನುವುದು ಈ ಸೀರೆ ಉಟ್ಟ ಮಹಿಳೆಯರ ಮಾತು.
ಸ್ವಾತಂತ್ರೃ ಹೋರಾಟಗಾರ್ತಿ ಮಂಗಳೂರು ಮೂಲದ ಕಮಲಾದೇವಿ ಚಟ್ಟೋಪಾಧ್ಯಾಯ 70ರ ದಶಕದಲ್ಲಿ ಬ್ರಹ್ಮಾವರದ ಹಿರಿಯ ನೇಕಾರರೊಬ್ಬರ ಮನೆಯಿಂದ ಯಕ್ಷಗಾನದ ಸ್ತ್ರೀ ಪಾತ್ರಕ್ಕೆ ಬಳಸುವ 8 ಕಸೆಸೀರೆ ಖರೀದಿಸಿದ್ದರು. ಇದರಲ್ಲಿ ಒಂದು ಸೀರೆಯನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೂ ನೀಡಿದ್ದರು ಎನ್ನಲಾಗಿದೆ. ಖಾದಿ ಗ್ರಾಮೋದ್ಯೋಗ, ಪಾರಂಪರಿಕ ಕರಕುಶಲತೆ ಬಗ್ಗೆ ವಿಶೇಷ ಒಲವು ಹೊಂದಿದ್ದ ಕಮಲಾದೇವಿ ಅವರು ಉಡುಪಿ ಸೀರೆ ಬೆಳವಣಿಗೆಗೆ ಒಂದಷ್ಟು ಪ್ರಯತ್ನ ಮಾಡಿದ್ದರು.
*ಮಮತಾ ಬ್ಯಾನರ್ಜಿ ಒಲವು: *2010ರಲ್ಲಿ ಅಂದಿನ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿಯವರು ಕರ್ನಾಟಕ ಕೈಮಗ್ಗ ನಿಗಮಕ್ಕೆ 300 ಸೀರೆಗಳಿಗೆ ಬೇಡಿಕೆ ಸಲ್ಲಿಸಿದ್ದು, ಪ್ರಿಯದರ್ಶಿನಿ ಸಂಸ್ಥೆ ಕೋರಿಕೆ ಮೇರೆಗೆ ಶಿರ್ವದ ಹಿರಿಯ ನೇಕಾರ ಹರಿಶ್ಚಂದ್ರ ಶೆಟ್ಟಿಗಾರ್ 60 ಉಡುಪಿ ಸೀರೆಗಳನ್ನು ನೇಯ್ದು ಕೊಟ್ಟಿದ್ದರು. ನಂತರದ ದಿನಗಳಲ್ಲಿ ಬ್ಯಾನರ್ಜಿ ಅವರಿಂದ ಬೇಡಿಕೆ ಬಂದಿಲ್ಲ. ಕೋಲ್ಕತ ಪ್ರಿಯದರ್ಶಿನಿ ಸಂಸ್ಥೆಯವರೇ ಸೀರೆಯನ್ನು ತಯಾರಿಸುತ್ತಿದ್ದಾರೆ ಎನ್ನುತ್ತಾರೆ ಕರ್ನಾಟಕ ಕೈಮಗ್ಗ ನಿಗಮದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹರಿಶ್ಚಂದ್ರ ಶೆಟ್ಟಿಗಾರ್.

ಪುತ್ತೂರಿನ ಮುತ್ತುಗಳು ಬೆಳೆದ ದೇವಸ್ಥಾನ

ಈ ಕೆರೆಯಲ್ಲಿ ಮುತ್ತುಗಳು ಸಿಕ್ಕಿತ್ತು ಇದೇ ಕಾರಣದಿಂದ ಪುತ್ತೂರು ಎನ್ನುವ ಊರಿಗೆ ಮುತ್ತು(ಹವಳ)ಗಳ ಊರು ಎಂದೇ ಕರೆಯಲಾಗುತ್ತದೆ. ಮುತ್ತು ಸಿಕ್ಕಿದ ಶ್ರೀಮಹಾಲಿಂಗೇಶ್ವರ ದೇವರ ಕೆರೆಯ ವಿಶೇಷತೆ ಎಂದರೆ ದೇವಳದ ಯಾವುದೇ ಪೂಜೆ ಕಾರ್ಯಕ್ಕೆ ಈ ನೀರನ್ನು ಬಳಸುತ್ತಿಲ್ಲ.

ತೀರ್ಥ ನೀಡುವ ವಿಚಾರವಾಗಲಿ ಅಥವಾ ಭಕ್ತರು ಸ್ನಾನ ಮಾಡುವುದಕ್ಕೆ ಈ ನೀರು ಬಳಕೆಯಾಗುತ್ತಿಲ್ಲ. ಇಡೀ ದ.ಕ ಅಥವಾ ರಾಜ್ಯದ ದೇವಳದ ಕೆರೆಗಳಲ್ಲಿ ಇಲ್ಲಿಯ ಕೆರೆ ಬಹಳ ವಿಶೇಷತೆಯನ್ನು ಹೊಂದಿದೆ. ಕೆರೆಯಲ್ಲಿ ಸಾಕಷ್ಟು ಸಂಖ್ಯೆಯ ಬಣ್ಣ ಬಣ್ಣದ ಮೀನುಗಳನ್ನು ನೋಡುವುದು ಭಕ್ತರ ಪಾಲಿಗಂತೂ ವಿಶೇಷತೆಯೇ ಹೌದು ಎನ್ನಬಹುದು.

ಈಗ ವಿಪರೀತ ಬಿಸಿಲು ಇರುವುದರಿಂದ ಈ ಪುಷ್ಕರಣಿಯ ಸುತ್ತಮುತ್ತ ಮೀನುಗಳಿಗಾಗಿ ಕಾರಂಜಿ ಮಾಡುವ ಮೂಲಕ ಅಮ್ಲ ಜನಕ ನೀಡುವ ಕೆಲಸವಾಗುತ್ತಿದೆ. ಅದರಲ್ಲೂ‌ ಮುಖ್ಯವಾಗಿ ಈ ಕೆರೆ ಎಂದಿಗೂ ಬತ್ತಿಲ್ಲ. ಒಟ್ಟಾಗಿ ಹೇಳುವುದಾದರೆ ಶ್ರೀಮಹಾಲಿಂಗೇಶ್ವರ ನ ಅದ್ಬುತ ಕೆಲಸಗಳಲ್ಲಿ ಈ ಕೆರೆ ಕೂಡ ಒಂದಾಗಿದೆ.

ಮಹಾಲಿಂಗೇಶ್ವರ ದೇವರಿಗೆ ಪ್ರೀತಿ, ಭಕ್ತಿ ತೋರಿಸುವ ಕಂಬಳ ಕೋಣಗಳು

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಪ್ರತಿ ವರ್ಷ ನಡೆಯುವ ಕಂಬಳದ ವಿಶೇಷತೆ ಎಂದರೆ ಕಂಬಳದ ಕೆರೆಗೆ ಇಳಿಯುವ ಮೊದಲು ಕಂಬಳದ ಕೋಣಗಳು ದೇವಸ್ಥಾನದ ಮುಂಭಾಗದಲ್ಲಿ ತಮ್ಮ ಪ್ರೀತಿ, ಭಕ್ತಿ ವಿಶ್ವಾಸವನ್ನು ತೋರಿಸುತ್ತದೆ.

ಕಳೆದ 27 ವರ್ಷಗಳಿಂದ ಇಲ್ಲಿ ಕೋಟಿ ಚೆನ್ನಯ ಕಂಬಳ ನಡೆಯುತ್ತಿದೆ. ಕರಾವಳಿ ಕಂಬಳದಲ್ಲಿಯೇ ಅತೀ ಹೆಚ್ಚು ಜನ ಸೇರುವ ಕಂಬಳ ಎಂದೇ ಈ ಕಂಬಳವನ್ನು ಹೇಳಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ದೇವರ ಗದ್ದೆಯಲ್ಲಿ ನಡೆಯುವ ಕಂಬಳದಲ್ಲಿ ಹೆಚ್ಚು ಕಡಿಮೆ 150ಕ್ಕೂ ಅಧಿಕ ಕೋಣದ ಜೋಡಿಗಳು ಕಾಣಿಸಿಕೊಳ್ಳುತ್ತದೆ.

ಧರ್ಮಪಾಲನಾಥ ಸ್ವಾಮೀಜಿ ಅವರ `ಚಿಂತನ ಗಂಗಾ’ ಕೃತಿ ಬಿಡುಗಡೆ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶನಿವಾರ ನಡೆದ ಪದ್ಮಭೂಷಣ ಪುರಸ್ಕøತ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 75ನೇ ಜಯಂತ್ಯುತ್ಸವದ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರ ವಿಜಯ ಕರ್ನಾಟಕದ ಬೋಧಿವೃಕ್ಷದಲ್ಲಿ ಬರೆದ ಅಂಕಣ ಬರಹಗಳನ್ನು ಒಳಗೊಂಡ `ಚಿಂತನ ಗಂಗಾ’ ಕೃತಿಯನ್ನು ಬಿಡುಗಡೆ ಮಾಡಿದರು.
ಈ ಸಂದರ್ಭ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠಗಳ ಸ್ವಾಮೀಜಿಗಳು, ಬೆಂಗಳೂರು ಬೇಲಿಮಠದ ಶ್ರೀ ಶಿವರುದ್ರ ಮಹಾ ಸ್ವಾಮೀಜಿ, ಪತ್ರಕರ್ತ ರವಿ ಹೆಗಡೆ, ಶಾಸಕರಾದ ಪುಟ್ಟರಾಜು, ಸುರೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.