ಹೊಸ ವರ್ಷದಲ್ಲಿ ವಿಶ್ವ ಪರ್ಯಟನೆ ಮಾಡುವ ಆಕಾಂಕ್ಷಿಗಳಿಗೆ, ವಿದೇಶಿ ಹೂಡಿಕೆದಾರರಿಗೆ ಸಿಹಿ ಸುದ್ದಿ ಬಂದಿದೆ. ವಿಶ್ವದ 100 ಅತೀ ಸುರಕ್ಷಿತ ನಗರಗಳ ಸಾಲಿನಲ್ಲಿ ಕಡಲನಗರಿ ಮಂಗಳೂರಿಗೆ 43ನೇ ಸ್ಥಾನ ದೊರೆತಿದೆ.
ನ್ಯೂಯಾರ್ಕ್‌ನ ಸಿಇಒ ವಲ್ಡ್ ಮ್ಯಾಗಸೀನ್ 2019ರ ಸಾಲಿನ ಅಂತ್ಯದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತದ ನಗರಗಳ ಪೈಕಿ ಮಂಗಳೂರು ನಂ. 1 ಅತೀ ಸುರಕ್ಷಿತ ನಗರ ಸ್ಥಾನ ಪಡೆದಿದೆ. ಉಳಿದಂತೆ ಟಾಪ್ 100ನಲ್ಲಿ ಗುಜರಾತ್‌ನ ವಡೋದರಾ, ಕೇರಳದ ತಿರುವನಂತಪುರ ಹಾಗೂ ಕೊಚ್ಚಿ, ಗುಜರಾತ್‌ನ ಅಹಮ್ಮದಾಬಾದ್ ಹಾಗೂ ಮಹಾರಾಷ್ಟ್ರದ ನವ ಮುಂಬೈ ಸ್ಥಾನ ಪಡೆದಿದೆ. ಸಿಇಒ ವಲ್ಡ್ ಮ್ಯಾಗಸೀನ್ ನಡೆಸಿದ ಸರ್ವೆಯಲ್ಲಿ ಕಳೆದ ಮೂರು ವರ್ಷಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುದಾಬಿ ಮೊದಲ ಸ್ಥಾನ ಅಲಂಕರಿಸಿದೆ. ಕತಾರ್‌ನ ದೋಹಾ ಎರಡನೇ ಹಾಗೂ ಕೆನಡಾದ ಕ್ಯೂಬೆಕ್ ಸಿಟಿ ಮೂರನೇ ಸ್ಥಾನ ಪಡೆದಿದೆ.
ಉಳಿದಂತೆ ತೈವಾನ್‌ನ ತೈಪೆ, ಜರ್ಮನಿಯ ಮುನೀಚ್, ಯುಎಇಯ ದುಬೈ, ಸ್ವಿಜರ್‌ಲ್ಯಾಂಡ್‌ನ ಝೂರಿಚ್ ಹಾಗೂ ಬೆರ್ನ್, ಟರ್ಕಿಯ ಎಸ್ಕಿಸಿಹಿರ್ ಹಾಗೂ ಹಾಂಕಾಂಗ್ ಟಾನ್ 10 ಪಟ್ಟಿಯಲ್ಲಿದೆ. ಪ್ರಥಮ ಮೂರು ಸ್ಥಾನಗಳನ್ನು ಪಡೆದಿರುವ ಯುಎಇಯ ಅಬುದಾಬಿ ಶೇ.89.03, ಕತಾರ್‌ನ ದೋಹಾ ಶೇ.88.43 ಹಾಗೂ ಕೆನಡಾದ ಕ್ಯುಬೆಕ್ ಸಿಟಿ ಶೇ.85.19 ಅಂಕ ಪಡೆದರೆ ಕರ್ನಾಟಕದ ಮಂಗಳೂರು ಶೇ.74.39 ಅಂಕ ಪಡೆದು 43ನೇ ಸ್ಥಾನದಲ್ಲಿದೆ.ಅಪರಾಧ ಸೂಚ್ಯಂಕದ ಆಧಾರದಲ್ಲಿ ನಗರಗಳಿಗೆ ರೇಟಿಂಗ್ ನೀಡಲಾಗಿದೆ.
ಪ್ರಪಂಚ ಸುತ್ತುವ ಪ್ರವಾಸಿಗರು ತಮ್ಮ ಯಾತ್ರೆಯ ಮುನ್ನ ಸುರಕ್ಷತೆಯ ಬಗ್ಗೆ ಸಾಕಷ್ಟು ಮುತುವರ್ಜಿ ವಹಿಸುತ್ತಾರೆ. ತಾವು ಹೋಗುತ್ತಿರುವ ನಗರ ಪ್ರವಾಸಕ್ಕೆ ಸುರಕ್ಷಿತವೇ ಎಂಬುವುದನ್ನು ಖಾತರಿಪಡಿಸಿದ ಬಳಿಕವಷ್ಟೇ ಪ್ರಯಾಣ ಆರಂಭಿಸುತ್ತಾರೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನ ಸಿಇಒ ವಲ್ಡ್ ಮ್ಯಾಗಸೀನ್ ಸಮೀಕ್ಷೆಗೆ ಮಹತ್ವ ಬಂದಿದೆ. ಪ್ರಪಂಚದ ಸುರಕ್ಷಿತ ನಗರಗಳ ಸಾಲಿನಲ್ಲಿ ಮಂಗಳೂರು ಸೇರಿರುವುದು ಪ್ರವಾಸೋದ್ಯಮ ಹಾಗೂ ವಿದೇಶಿ ಹೂಡಿಕೆಗೆ ಇನ್ನಷ್ಟು ಬಲ ನೀಡಲಿದೆ.
2018ರಲ್ಲಿ ಅಮೆರಿಕದ ಚಿಕಾಗೋ ಮೂಲದ ’ದಿ ಡೈಲಿ ಮೀಲ್’ ವೆಬ್‌ಸೈಟ್ ನಡೆಸಿದ ಸಮೀಕ್ಷೆಯಲ್ಲಿ ಮಂಗಳೂರು ವಿಶ್ವದ ಅತ್ಯಂತ ಸುರಕ್ಷಿತ ನಗರದಲ್ಲಿ 31ನೇ ಸ್ಥಾನ ಪಡೆದಿತ್ತು.