Kudla City

ತುಳುನಾಡಿನ ಬಸ್, ರೈಲು,ವಿಮಾನ ನಿಲ್ದಾಣದಲ್ಲಿ ತುಳು ತಿನಸ್

ಮಂಗಳೂರು: ತುಳು ಸಾಹಿತ್ಯ ಅಕಾಡೆಮಿಯು ಬೆಳ್ಳಿ ಹಬ್ಬದ ಅಂಗವಾಗಿ ಕರಾವಳಿಯ ಪ್ರಮುಖ ಬಸ್‌ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣದಲ್ಲಿ ತುಳುನಾಡಿನ ತಿಂಡಿ ತಿನಸುಗಳನ್ನು ಪರಿಚಯ ಮಾಡುವ ಯೋಜನೆಯೊಂದನ್ನು ಕೈಗೊಳ್ಳಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಅನ್ಯ ರಾಜ್ಯ ಮತ್ತು ವಿದೇಶಗಳಿಂದಲೂ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು, ಅವರಿಗೆ ಈ ನೆಲದ ಭಾಷೆ, ಸಂಸ್ಕೃತಿ, ತಿಂಡಿ-ತಿನಿಸು ಪರಿಚಯಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ವಿದೇಶಗಳಿಗೆ ನಾವು ಹೋದಾಗ ಅಲ್ಲಿನವರು ಅವರ ಸಂಸ್ಕೃತಿಯನ್ನು ಪರಿಚಯಿಸುತ್ತಾರೆ. ಅದೇ ರೀತಿ ನಮ್ಮಲ್ಲಿಗೆ ಬರುವ ವಿದೇಶಿಗರಿಗೆ ತುಳು ನಾಡಿನ ಸಂಸ್ಕೃತಿಯ ಪರಿಚಯ ವಾಗಬೇಕು ಎಂಬ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯು ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ತುಳುನಾಡಿನ ಮಳಿಗೆಗಳಲ್ಲಿ ತುಳುನಾಡ ಮುಟ್ಟಾಳೆ, ಕಂಬಳದ ಬೆತ್ತ, ಗೆರಟೆ ಸಹಿತ ಕರಕುಶಲ ವಸ್ತುಗಳು ಅಲ್ಲದೆ ತುಳುನಾಡಿನ ಅಧ್ಯಯನದ ಪುಸ್ತಕ ಗಳೂ ಇರಲಿವೆ. ತುಳು ಲಿಪಿಯನ್ನು ಪರಿಚಯಿಸುವ ಉದ್ದೇಶದಿಂದ ಮರದ ಕೀ-ಬಂಚ್‌ನಲ್ಲಿ ತುಳು ಲಿಪಿಯಲ್ಲಿ ಹೆಸರು ಬರೆದುಕೊಡುವ ಸೌಲಭ್ಯವೂ ಇರುತ್ತದೆ.

ನೀರುದೋಸೆ, ಬನ್ಸ್‌, ಪತ್ರೊಡೆ, ಗೋಳಿಬಜೆ ಸಹಿತ ತುಳುನಾಡಿನ ಪ್ರಸಿದ್ಧ ತಿನಿಸುಗಳನ್ನು ಬಸ್‌, ರೈಲು ಮತ್ತು ವಿಮಾನ ನಿಲ್ದಾಣಗಳಿಗೆ ಹೊಂದಿಕೊಂಡಿರುವ ಹೊಟೇಲ್‌ಗ‌ಳಲ್ಲಿ ಸಿಗುವಂತೆ ಮಾಡಲು ಚಿಂತನೆ ನಡೆಯುತ್ತಿದೆ.

ಮಣ್ಣಗುಡ್ಡೆಯ ಗುರ್ಜಿಗೆ 150ರ ಸಂಭ್ರಮ

ಮಂಗಳೂರಿಗೆ ಬರುವ ಮಂದಿಗೆ ಗುರ್ಜಿಯ ವಿಚಾರ ಗೊತ್ತಿರಲು ಸಾಧ್ಯವಿಲ್ಲ. ಅಂದಹಾಗೆ ಮಂಗಳೂರಿನ ಮಂಗಳಾದೇವಿ, ಉರ್ವಸ್ಟೋರ್, ಉರ್ವ ಮಾರ್ಕೆಟ್, ಬಳ್ಳಾಲ್ ಬಾಗ್ ಹಾಗೂ ಮಣ್ಣಗುಡ್ಡೆ‌ ಇಲ್ಲಿ ಪ್ರತಿ ವರ್ಷ ಗುರ್ಜಿ ಸಂಭ್ರಮ ನಡೆಯುತ್ತದೆ. ವಿಶೇಷವಾಗಿ ಮಣ್ಣಗುಡ್ಡೆ ಗುರ್ಜಿಗೆ 150 ವರ್ಷ ತುಂಬಿದೆ.

ಇದರ ವಿಶೇಷತೆ ಏನೂ ಅಂದರೆ ಮಂಗಳೂರಿನ ಇತಿಹಾಸ ಪ್ರಸಿದ್ಧ ಮಣ್ಣಗುಡ್ಡೆ ಗುರ್ಜಿ ಆರಂಭವಾದ ಕಥೆ ರೋಚಕವಾದುದು. ಭಕ್ತಿಗೆ ದೇವರು ಒಲಿಯುತ್ತಾನೆ ಎನ್ನುವುದಕ್ಕೆ ಮಣ್ಣಗುಡ್ಡೆ ಗುರ್ಜಿ ಆರಂಭವಾದ ಕಥೆ ಸಾಕ್ಷಿ. ಏನಿದು ಇತಿಹಾಸ ಮುಂದೆ ಓದಿ…

ಗುರ್ಜಿ ಅಂದ್ರೆ ಚಲಿಸದ ರಥ ಎಂದರ್ಥ. ರಥದಂತೆ ಶೃಂಗರಿಸಿದ ತಾತ್ಕಾಲಿಕ ದೇವರ ಕಟ್ಟೆ ಇದು. ಮಣ್ಣಗುಡ್ಡೆ ಗುರ್ಜಿ ಆರಂಭಿಸಿದವರು ಕೋಟೇಶ್ವರ ಬ್ರಾಹ್ಮಣ ಮನೆತನದ ಹಿರಿಯ ವಾದಿರಾಜರು. ಕುಲೋದ್ಧಾರಕ ಇಲ್ಲದ ಚಿಂತೆಯಿಂದ ಶರವು ಮಹಾಗಣಪತಿಯನು ಪ್ರಾರ್ಥಿಸಿ ಪುತ್ರ ಸಂತಾನ ಕರುಣಿಸಿದರೆ ಪ್ರತಿ ವರ್ಷ ತಮ್ಮ ಮನೆಗೆ ಕರೆಸಿ ದೀಪಾರಾಧನೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ್ದರು.

ಅದರಂತೆ ದೇವರು ಆಶೀರ್ವಾದ ಮಾಡಿದ್ದಾರೆ. 1870ನೇ ಇಸವಿಯಲ್ಲಿ ಇಷ್ಟಾರ್ಥ ಸಿದ್ದಿ ನೆರವೇರಿಸಿದ ಶ್ರೀ ಶರವು ಮಹಾಗಣತಿಗೆ ಕದ್ರಿ ಕಂಬ್ಳದಲ್ಲಿದ್ದ ಮನೆಯಲ್ಲಿ ಉತ್ಸವ ಆರಂಭಿಸಿದರು. ಕ್ರಮೇಣ ಮಂಗಳೂರಿನ ಪ್ರಮುಖ ಧಾರ್ಮಿಕ ದೀಪಾರಾಧನೆ ಉತ್ಸವವಾಯಿತು. ಈ ಬಾರಿ 2019ನೇ ನವೆಂಬರ್ 24ರಂದು ಮಣ್ಣಗುಡ್ಡೆ ಗುರ್ಜಿ 150ನೇ ವರ್ಷವನ್ನು ಆಚರಿಸುತ್ತಿದೆ.

ತುಳುನಾಡಿನ ಈಂದ್ ಹುಡಿ ಗೊತ್ತಾಂಟಾ ಮಾರಾಯ್ರೆ

ತುಳುನಾಡಿನ ಗ್ರಾಮೀಣ ಊರುಗಳಲ್ಲಿ ನೀವು ಭೇಟಿ ನೀಡಿದಾಗ ಅಲ್ಲಿಯ ಪುಟ್ಟ ಗೂಡಂಗಡಿಯ ಮುಂಭಾಗದಲ್ಲಿ ಇಲ್ಲಿ ಈಂದ್ ಹುಡಿ ಸಿಗುತ್ತದೆ ಎನ್ನುವ ನಾಮಫಲಕ ಕಾಣ ಸಿಗುತ್ತದೆ. ಬಹುತೇಕ ಮಂದಿಗೆ ಇದು ಏನೂ, ಇದರ ಲಾಭವೇನು ಎನ್ನುವ ವಿಚಾರವೇ ಗೊತ್ತಿರಲು ಸಾಧ್ಯವಿಲ್ಲ.

ಆದರೆ ತುಳುನಾಡಿನಲ್ಲಿ ಬದುಕುವ ಪ್ರತಿಯೊಬ್ಬರಿಗೂ ಈಂದ್ ಹುಡಿಯ ಪರಿಚಯವಿದೆ. ಬೈನೆ ಅಥವಾ ತಾಳೆ ಮರದಿಂದ ಈಂದ್ ಹುಡಿಯನ್ನು ಮಾಡಲಾಗುತ್ತದೆ. ಇದರ ಗುಣವಿಶೇಷತೆಯಂತೂ ಬಹಳಷ್ಟು ಇದೆ. ಒಂದು ಚಮಚ ಈಂದ್ ಹುಡಿಯನ್ನು ನೀರಿಗೆ ಅಥವಾ ಹಾಲಿಗೆ ಹಾಕಿ ಕುಡಿಯಬೇಕು. ಹೊಟ್ಟೆನೋವು, ದೇಹದ ಬಳಲಿಕೆ ಸೇರಿದಂತೆ ಹತ್ತು ಹಲವು ರೋಗಕ್ಕೆ ಇದು ಮದ್ದು. ನಾವು ಜಾಹೀರಾತು ತೋರಿಸುವ ವಸ್ತುಗಳನ್ನು ತೆಗೆದುಕೊಂಡು ಬಂದ ಪರಿಣಾಮ ಬಹಳಷ್ಟು ಇಂತಹ ಮದ್ದುಗಳ ಪರಿಚಯ ಇಲ್ಲ.

ನವ ಮಂಗಳೂರಿನ ರೂವಾರಿ ಉಳ್ಳಾಲ ಶ್ರೀನಿವಾಸ್ ಮಲ್ಯರು

ಉಳ್ಳಾಲ ಶ್ರೀನಿವಾಸ್ ಮಲ್ಯ ಆಧುನಿಕ ದಕ್ಷಿಣ ಕನ್ನಡ ಜಿಲ್ಲೆಯ ನಿರ್ಮಾಣದ ರೂವಾರಿ. 18 ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ಮೂರು ಬಾರಿ ಸಂಸದರಾಗಿದ್ದರು. 1951,1957 ಹಾಗೂ 1962 ಸಂಸದರಾಗಿ ಅವರು ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಮಾಡಿದ ಕೆಲಸವಂತೂ ಶ್ಲಾಘನೀಯ.

ಎನ್‍ಐಟಿಕೆ, ನವಮಂಗಳೂರು ಬಂದರು, ಮಂಗಳೂರು ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ 66, ಉಳ್ಳಾಲ ಸೇತುವೆ ಅವರ ಕಾಲದಲ್ಲಿ ಮಾಡಿದ ಕಾರ್ಯಗಳನ್ನು ಇಂದಿನ ದಕ್ಷಿಣ ಕನ್ನಡ ಜಿಲ್ಲೆ ಜನರು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇಂದು( ನ.21)ರಂದು ಅವರ 117ನೇ ಹುಟ್ಟುಹಬ್ಬ. ಮಂಗಳೂರಿನ ನಂಬರ್ ವನ್ ಸಂಸದ ಉಳ್ಳಾಲ ಶ್ರೀನಿವಾಸ್ ಮಲ್ಯ ಎನ್ನುವುದರಲ್ಲಿ ಯಾವುದೇ ಸಂದೇಹ ಮಂಗಳೂರಿನ ಜನತೆಗೆ ಇಲ್ಲ.

ಕುಡ್ಲದಲ್ಲಿ ನ. 20 ರಂದು ನಂದಿನಿಯ ಈ ಐಟಂಗಳು ಪೂರ್ಣ ಫ್ರೀ !

ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಈ ಬಾರಿ ವಿಶೇಷವಾದ ಎರಡು ಐಟಂಗಳನ್ನು ಮಾರ್ಕೆಟ್‌ಗೆ ಇಳಿಸಿದೆ ಇದರ ಪರಿಣಾಮ ಎರಡು ಐಟಂಗಳು ಸ್ಟಾಕ್ ಇರುವ ವರೆಗೆ ಪೂರ್ಣವಾಗಿ ನಾಟ್ ಫಾರ್ ಸೇಲ್ ಎನ್ನುವ ಮುದ್ರೆಯ ಜತೆಯಲ್ಲಿ ನ. 20 ರಂದು ಬೆಳಗ್ಗೆ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ.

ಈ ಕುರಿತು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅವರ ಮಾತು ಕೇಳಿ ನ.20 ರಂದು ದ.ಕದಲ್ಲಿ 11,500 ಸಾವಿರ ಬಾಟಲ್ ನಂದಿನಿ ಕಷಾಯ ಹಾಗೂ ನಂದಿನಿ ಕೋಲ್ಡ್ ಕಾಫಿ ಆಯ್ದ ನಂದಿನಿ ಸುವಾಸಿತ ಹಾಲು ಮಾರಾಟ ಮಾಡುವ ಡೀಲರ್, ಪಾರ್ಲರ್‌ಗಳಲ್ಲಿ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ. ಅದು ಸ್ಟಾಕ್ ಮುಗಿಯುವರೆಗೆ ಮಾತ್ರ ಉಳಿದಂತೆ ಉಡುಪಿಯಲ್ಲಿ 5,500 ಸಾವಿರ ಬಾಟಲ್ ಕಷಾಯ, ಕೋಲ್ಡ್ ಕಾಫಿ ಸುವಾಸಿತ ಹಾಲು ಮಾರಾಟ ಮಾಡುವ ಡೀಲರ್, ಪಾರ್ಲರ್‌ಗಳಲ್ಲಿ ಸಿಗಲಿದೆ. ಈ ಮೂಲಕ 17 ಸಾವಿರ ಬಾಟಲಿ ಕಷಾಯ, ಕೋಲ್ಡ್ ಕಾಫಿ ಉಚಿತವಾಗಿ ಗ್ರಾಹಕರಿಗೆ ಸಿಗಲಿದೆ.