ವಿಮಾನ ನಿಲ್ದಾಣ ದುರಂತಕ್ಕೆ ಭರ್ತಿ 9

ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿ ಮಾಡಿದ ಮಂಗಳೂರು ವಿಮಾನ ದುರಂತಕ್ಕೆ ಇದೀಗ 9 ವರ್ಷ ಕಳೆದಿದೆ. 2010 ಮೇ 22ರಂದು ಬಜಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರಸ್ ವಿಮಾನ ದುರಂತಕ್ಕೀಡಾಗಿತ್ತು.

ವಿಮಾನ ದುಬೈಯಿಂದ ಮಂಗಳೂರಿಗೆ ಆಗಮಿಸಿತ್ತು. ಇನ್ನೇನು ವಿಮಾನ ಲ್ಯಾಂಡ್ ಆಗಲಿದೆ ಎನ್ನುವಷ್ಟರಲ್ಲಿ ರನ್ ವೇಯಿಂದ ಜಿಗಿದು ಇಬ್ಭಾಗವಾಗಿತ್ತು. ವಿಮಾನದಲ್ಲಿದ್ದ 166 ಮಂದಿಯಲ್ಲಿ 158 ಮಂದಿ ಸುಟ್ಟು ಕರಕಲಾಗಿದ್ದರು. ಸತ್ತವರಲ್ಲಿ ಏರ್ ಇಂಡಿಯಾದ ಪೈಲಟ್ ಸೇರಿದಂತೆ ಎಂಟು ಸಿಬ್ಬಂದಿಗಳಿದ್ದರು. ವಿಮಾನದಿಂದ ಜಿಗಿದು 8 ಮಂದಿ ಪವಾಡಸದೃಶ ಪಾರಾಗಿದ್ದರು.

ಸಾವಿಗೀಡಾದವರಲ್ಲಿ 135 ಮಂದಿ ವಯಸ್ಕರು, 19 ಮಂದಿ ಮಕ್ಕಳು ಹಾಗೂ 4 ಮಂದಿ ಪುಟಾಣಿಗಳಿದ್ದರು. ದುರಂತದ ಭೀಕರತೆ ಎಷ್ಟಿತೆಂದರೆ ಕೇವಲ 22 ಮೃತದೇಹಗಳ ಗುರುತು ಪತ್ತೆ ಹಚ್ಚಲು ಮಾತ್ರ ಸಾಧ್ಯವಾಗಿತ್ತು. ಡಿಎನ್‌ಎ ಪರೀಕ್ಷೆಯ ಬಳಿಕವೂ 12 ಮೃತದೇಹಗಳು ಅನಾಥವಾಗಿದ್ದವು.

ನಂತರ ಕೂಳೂರು- ತಣ್ಣೀರುಬಾವಿ ರಸ್ತೆಯ ಪಕ್ಕದಲ್ಲೇ ಇರುವ ಸರಕಾರಿ ಜಾಗದಲ್ಲಿ ಅನಾಥ ಮೃತದೇಹಗಳಿಗೆ ಸರ್ವಧರ್ಮ ಪ್ರಾರ್ಥನೆ ಮೂಲಕ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ನಂತರ ಆ ಸ್ಥಳಕ್ಕೆ ವಿಮಾನ ದುರಂತ ಉದ್ಯಾನವನ ಎಂದು ಹೆಸರಿಟ್ಟು ದುರಂತದಲ್ಲಿ ಮಡಿದವರ ಸ್ಮರಣಾರ್ಥವಾಗಿ ಸ್ಮಾರಕವನ್ನು ನಿರ್ಮಿಸಲಾಯಿತು.

Share