Tagged: flight

ಕುಡ್ಲದಲ್ಲಿರುವ ಆರ್ಮಿ ಫ್ಯಾಮಿಲಿ ಕತೆ

ದೇಶ ಸೇವೆಗೂ ಕುಡ್ಲದ ಮಂದಿಗೂ ಆಗಿ ಬರುವುದಿಲ್ಲ ಎನ್ನುವ ಮಾತೇ ಎಲ್ಲೆಡೆ ಜೋರಾಗಿ ಕೇಳಿ ಬರುತ್ತಿದ್ದಾಗ ಕುಡ್ಲದ ಅರ್ಮಿ ಫ್ಯಾಮಿಲಿಯ ಕತೆ ತುಂಬಾನೇ ವಿಶೇಷವಾಗಿದೆ.
ಒಂದೇ ಫ್ಯಾಮಿಲಿಯ ಎಲ್ಲರೂ ಅರ್ಮಿಯಲ್ಲಿದ್ದಾರೆ. ತಂದೆ, ಮಗ, ಸೊಸೆ, ತಾಯಿ ಎಲ್ಲರೂ ದೇಶಸೇವೆಗೆ ತಮ್ಮ ಭಕ್ತಿಯನ್ನು ಮುಡಿಪಾಗಿಟ್ಟುಕೊಂಡಿದ್ದಾರೆ. ಅದರಲ್ಲಿ ಪುತ್ರ ಯುದ್ದದಲ್ಲಿ ಮೃತಪಡುತ್ತಾನೆ.
ಇದು ಕುಲಶೇಖರದ ಪ್ಲೈಟ್ ಲೆಫ್ಟಿನಂಟ್ ರೊನಾಲ್ಡ್ ಕೇವಿನ್ ಸೆರಾವೋ ಎನ್ನುವ ವೀರ ಯೋಧನ ಕತೆ. ಕುಲಶೇಖರದಲ್ಲಿ ಇವರ ಹೆಸರಿನ ರಸ್ತೆ ಕೂಡ ಇದೆ. ಕೆವಿನ್ ತಂದೆ ಜೋನ್ ಸೆರಾವೋ ಭಾರತೀಯ ಸೇನಾ ಪಡೆಯಲ್ಲಿ ತೋಪು ಪಡೆಯ ಲೆಫ್ಟಿನಂಟ್ ಕರ್ನಲ್ , ಆರ್ಮಿಯಲ್ಲಿ ವೈದ್ಯರಾಗಿ ದುಡಿದ ಡಾ. ಜೆಸ್ಸಿಕಾ ಸೆರಾವೋ, ನಂತರ ಅವರ ಸೊಸೆ ಪ್ಲೈಟ್ ಲೆಫ್ಟಿನಂಟ್ ದೀಪಿಕಾ. ಈ ಕುಟುಂಬದ ಕೇವಿನ್ 2007ರ ಇದೇ ಗಣರಾಜೋತ್ಸವದ ಪೆರೇಟ್‌ನಲ್ಲಿ ಫ್ಲೈ ಪಾಸ್ಟ್ ಏರ್ ಶೋನಲ್ಲಿ ಭಾಗವಹಿಸಲು ಯುದ್ಧ ವಿಮಾನ ಜಾಗ್ವರ್ ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ 2007ರಲ್ಲಿ ವೀರಮರಣ ಪಡೆದವರು.

ಕುಡ್ಲದಲ್ಲಿ ಎರಡು ಆರ್ಮಿ ರಸ್ತೆ ! ಭಾರತೀಯ ಸೇನಾ ಪಡೆಯಲ್ಲಿ ವಿಶೇಷವಾದ ಸ್ಥಾನ ಪಡೆದುಕೊಂಡು ಮೃತರಾದ ಎರಡು ಆರ್ಮಿಯ ಆಫೀಸರ್‌ಗಳ ಸವಿನೆನಪಿಗಾಗಿ ಮಂಗಳೂರಿನಲ್ಲಿ ಎರಡು ರಸ್ತೆಗಳನ್ನು ಅವರ ಹೆಸರುಗಳಿಂದ ಕರೆಯಲಾಗುತ್ತಿದೆ.
ಕದ್ರಿಯ ಒಂದು ರಸ್ತೆಯನ್ನು ನೌಕಾ ಪಡೆಯ ಹಿರಿಯ ಅಧಿಕಾರಿ ಮಂಗಳೂರು ಮೂಲದ ಈಗ ದಿವಂಗತ ಜಾನ್ ಮಾರ್ಟಿಸ್ ಅವರ ರಸ್ತೆ ಎಂದು ಕರೆದರೆ, ಕುಲಶೇಖರದ ಕುಚ್ಚಿಕಾಡ್ ರಸ್ತೆಯನ್ನು ಪ್ಲೈಟ್ ಲೆಫ್ಟಿನಂಟ್ ಕೆವಿನ್ ರೋನಾಲ್ಡ್ ಸೆರಾವೋ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಇದು ಕುಡ್ಲದ ಎರಡು ಸೇನಾ ರಸ್ತೆಗಳೆಂದು ಈಗಾಗಲೇ ಮಾತಾಗಿದೆ.

ವಿಮಾನ ನಿಲ್ದಾಣ ದುರಂತಕ್ಕೆ ಭರ್ತಿ 9

ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿ ಮಾಡಿದ ಮಂಗಳೂರು ವಿಮಾನ ದುರಂತಕ್ಕೆ ಇದೀಗ 9 ವರ್ಷ ಕಳೆದಿದೆ. 2010 ಮೇ 22ರಂದು ಬಜಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರಸ್ ವಿಮಾನ ದುರಂತಕ್ಕೀಡಾಗಿತ್ತು.

ವಿಮಾನ ದುಬೈಯಿಂದ ಮಂಗಳೂರಿಗೆ ಆಗಮಿಸಿತ್ತು. ಇನ್ನೇನು ವಿಮಾನ ಲ್ಯಾಂಡ್ ಆಗಲಿದೆ ಎನ್ನುವಷ್ಟರಲ್ಲಿ ರನ್ ವೇಯಿಂದ ಜಿಗಿದು ಇಬ್ಭಾಗವಾಗಿತ್ತು. ವಿಮಾನದಲ್ಲಿದ್ದ 166 ಮಂದಿಯಲ್ಲಿ 158 ಮಂದಿ ಸುಟ್ಟು ಕರಕಲಾಗಿದ್ದರು. ಸತ್ತವರಲ್ಲಿ ಏರ್ ಇಂಡಿಯಾದ ಪೈಲಟ್ ಸೇರಿದಂತೆ ಎಂಟು ಸಿಬ್ಬಂದಿಗಳಿದ್ದರು. ವಿಮಾನದಿಂದ ಜಿಗಿದು 8 ಮಂದಿ ಪವಾಡಸದೃಶ ಪಾರಾಗಿದ್ದರು.

ಸಾವಿಗೀಡಾದವರಲ್ಲಿ 135 ಮಂದಿ ವಯಸ್ಕರು, 19 ಮಂದಿ ಮಕ್ಕಳು ಹಾಗೂ 4 ಮಂದಿ ಪುಟಾಣಿಗಳಿದ್ದರು. ದುರಂತದ ಭೀಕರತೆ ಎಷ್ಟಿತೆಂದರೆ ಕೇವಲ 22 ಮೃತದೇಹಗಳ ಗುರುತು ಪತ್ತೆ ಹಚ್ಚಲು ಮಾತ್ರ ಸಾಧ್ಯವಾಗಿತ್ತು. ಡಿಎನ್‌ಎ ಪರೀಕ್ಷೆಯ ಬಳಿಕವೂ 12 ಮೃತದೇಹಗಳು ಅನಾಥವಾಗಿದ್ದವು.

ನಂತರ ಕೂಳೂರು- ತಣ್ಣೀರುಬಾವಿ ರಸ್ತೆಯ ಪಕ್ಕದಲ್ಲೇ ಇರುವ ಸರಕಾರಿ ಜಾಗದಲ್ಲಿ ಅನಾಥ ಮೃತದೇಹಗಳಿಗೆ ಸರ್ವಧರ್ಮ ಪ್ರಾರ್ಥನೆ ಮೂಲಕ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ನಂತರ ಆ ಸ್ಥಳಕ್ಕೆ ವಿಮಾನ ದುರಂತ ಉದ್ಯಾನವನ ಎಂದು ಹೆಸರಿಟ್ಟು ದುರಂತದಲ್ಲಿ ಮಡಿದವರ ಸ್ಮರಣಾರ್ಥವಾಗಿ ಸ್ಮಾರಕವನ್ನು ನಿರ್ಮಿಸಲಾಯಿತು.