ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭವಿಷ್ಯದ ಅಭಿವೃದ್ಧಿ ಹಾಗೂ ಮೂಲಸೌಲಭ್ಯ ಕಲ್ಪಿಸುವ ಉದ್ದೇಶದಿಂದ `ಭೂ ದಾನ ನಿಧಿ’ ಹೊಸ ಯೋಜನೆ ಆರಂಭಿಸಲು ಕ್ಷೇತ್ರದ ಆಡಳಿತ ಸಮಿತಿ ನಿರ್ಧರಿಸಿದೆ.
ಕಟೀಲು ದೇವಸ್ಥಾನ ಪರಿಸರ ಬಹಳ ಇಕ್ಕಟ್ಟಿನಿಂದ ಕೂಡಿದೆ. ಜಾತ್ರೆ, ವಿವಾಹ, ನವರಾತ್ರಿ ಮಹೋತ್ಸವ ಮುಂತಾದ ಸಂದರ್ಭ ಕಟೀಲು ರಥಬೀದಿ ಹಾಗೂ ದೇವಸ್ಥಾನ ವಠಾರ ಭಕ್ತಾದಿಗಳಿಂದ ತುಂಬಿಹೋಗುತ್ತದೆ. ಈ ಸಂದರ್ಭ ಯಾವುದೇ ವ್ಯವಸ್ಥೆಗಳನ್ನು ಸುಸೂತ್ರವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈಗ ಬ್ರಹ್ಮಕಲಶೋತ್ಸವ ಪ್ರಯುಕ್ತ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ಭವಿಷ್ಯದ ವ್ಯವಸ್ಥೆಗಾಗಿ ಪ್ರತ್ಯೇಕ ಭೂಮಿಯ ಅಗತ್ಯತೆ ಇರುವುದರಿಂದ ಭೂದಾನ ನಿಧಿ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ.
ಎಷ್ಟು ಭೂಮಿ ಅಗತ್ಯತೆ?: ಸದ್ಯದ ಲೆಕ್ಕಾಚಾರದಂತೆ ಭವಿಷ್ಯದ ಹಿತದೃಷ್ಟಿಯಿಂದ ಕಟೀಲು ಸುತ್ತಮುತ್ತಲಿನ ಸುಮಾರು 15 ಎಕರೆ ಭೂಮಿಯನ್ನು ದೇವಸ್ಥಾನಕ್ಕೆ ದಾನ ವಾಗಿ ಪಡೆದುಕೊಳ್ಳುವ ಚಿಂತನೆಯನ್ನು ಆಡಳಿತ ಸಮಿತಿ ಹೊಂದಿದೆ. ಇದಕ್ಕಾಗಿ ಕೆಲವರು ಈಗಾಗಲೇ ಸ್ವಯಂ ಆಗಿ ಮುಂದೆ ಬಂದಿದ್ದು, ಇನ್ನು ಕೆಲವು ಮಾತುಕತೆ ಹಂತದಲ್ಲಿದೆ.
ಮುಂದಿನ ಒಂದೆರಡು ವರ್ಷದೊಳಗಾಗಿ ಕಟೀಲು ದೇವಸ್ಥಾನದ ಹೆಸರಿನಲ್ಲಿ 15ರಿಂದ 20 ಎಕರೆ ಜಾಗವನ್ನು ದೇವಸ್ಥಾನಕ್ಕೆ ಕಾದಿರಿಸುವುದು ಆಡಳಿತ ಸಮಿತಿಯ ಚಿಂತನೆ. ಇಷ್ಟು ಜಾಗ ದೇವಸ್ಥಾನಕ್ಕೆ ಸಿಕ್ಕರೆ ಎಲ್ಲ ಕಾರ್ಯಕ್ರಮಗಳ ಸಂದರ್ಭ ವ್ಯವಸ್ಥೆಗಳಿಗೆ ಇದು ಅನುಕೂಲವಾಗಲಿದ್ದು, 20-30 ವರ್ಷದವರೆಗೆ ಸಾಕಾಗಬಹುದು ಎಂದು ಅಂದಾಜಿಸಲಾಗಿದೆ.
ಭೂದಾನ ನಿಧಿ ಯೋಜನೆಯಲ್ಲಿ ಎರಡು ವಿಧವಾಗಿ ದಾನಿಗಳು ತೊಡಗಿಸಿಕೊಳ್ಳಬಹುದು. ಭೂದಾನವನ್ನು ನೀಡುವ ಭೂ ಮಾಲೀಕರು ನೇರವಾಗಿ ದೇವಸ್ಥಾನಕ್ಕೆ ಭೂಮಿ ಹಸ್ತಾಂತರಿಸಬಹುದು. ಆದರೆ ಧರ್ಮಾರ್ಥ ಭೂಮಿ ನೀಡಲು ಸಾಧ್ಯವಿಲ್ಲದವರಿಗೆ ಪ್ರಾಯೋಜಕರನ್ನು ಗೊತ್ತುಪಡಿಸಿ ಅವರ ಮೂಲಕ ನೇರವಾಗಿ ಭೂ ಮಾಲೀಕರಿಗೆ ಹಣ ಸಂದಾಯ ಮಾಡಿ, ಹಣ ನೀಡುವ ದಾನಿಗಳ ಹೆಸರಿನಲ್ಲಿ ಭೂಮಿಯನ್ನು ದೇವಸ್ಥಾನಕ್ಕೆ ನೀಡುವ ಯೋಜನೆ ಇದೆ.