ಈಗ ಎಲ್ಲೆಡೆ ಮಾವಿನ ಸೀಸನ್. ಮಾರುಕಟ್ಟೆಯೊಳಗಂತೂ ತರೇವಾರಿ ಮಾವಿನ ಹಣ್ಣುಗಳು ಈಗಾಗಲೇ ಬಂದು ಬಿದ್ದಿದೆ. ಆದರೆ ಅಲ್ಲಿ ಎಲ್ಲವೂ ಉತ್ತಮವಾದ ಮಾವಿನ ಹಣ್ಣುಗಳು ಸಿಗೋದಿಲ್ಲ. ಕೆಮಿಕಲ್, ಕಾರ್ಬೈಡ್ ಹಾಕಿ ಮಾಗಿಸಿದ ಮಾವಿನ ಹಣ್ಣುಗಳೇ ಈಗ ಸಿಗುವಂತದ್ದು ಎನ್ನುವುದು ಕುಡ್ಲ ಸಿಟಿಯ ಮಂದಿಗೆ ಗೊತ್ತು.
ಆದರೆ ಒಂದಲ್ಲ ಎರಡಲ್ಲ ಬರೋಬರಿ ಹತ್ತರಿಂದ ಹದಿನೈದರಷ್ಟು ಹೆಚ್ಚಿನ ನಾನಾ ತಳಿಗಳ ಮಾವು ಕದ್ರಿ ಪಾರ್ಕ್‌ನ ಉದ್ಯಾನವನದ ಮಾವು ಪ್ರದರ್ಶನದಲ್ಲಿ ಕಾಣಿಸಿಕೊಂಡಿದೆ. ಮೂರು ದಿನಗಳ ಕಾಲ ನಡೆಯುವ ಈ ಮಾವು ಪ್ರದರ್ಶನ ಮಾರಾಟದಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ಕಾರ್ಬೈಡ್ ಮುಕ್ತ, ನೈಸರ್ಗಿಕವಾಗಿ ಮಾಗಿಸಿದ ಮಾವು ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮಾವು ಪ್ರಿಯರಿಗೆ ನಾನಾ ಮಾವು ತಳಿಗಳನ್ನು ಬೆಳೆಯುವ ಜಿಲ್ಲೆಗಳಾದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಿಂದ ರೈತರು ನೇರವಾಗಿ ಮಾರಾಟ ಮಾಡಲು ಮಾವು ಮೇಳದಲ್ಲಿ ಮಾರಾಟ ಕಲ್ಪಿಸಲಾಗಿದೆ. ವಿಶೇಷವಾಗಿ ಅಲ್ಪೋನ್ಸಾ, ಮಲ್ಲಿಕಾ, ರಸಪೂರಿ, ಮಲಗೋವಾ, ದಸೇರಿ, ಸೆಂದೂರು, ತೋತಾಪುರಿ, ಬೆಗನ್ ಪಲ್ಲಿ, ಶುಗರ್ ಬೇಬಿ ಸೇರಿದಂತೆ ಹಿಮಾಯತ್ ಮಾವುಗಳ ಮಾರಾಟ ನಡೆಯಲಿದೆ.