ಪ್ಲಾಸ್ಟಿಕ್ ಬ್ರಿಕ್ಸ್ ಬೆಂಚ್ ಕುಡ್ಲಕ್ಕೆ ಜರ್ಮನ್ ಐಡಿಯಾ !

ಕಡಲಿನ ಊರು ಕುಡ್ಲಕ್ಕೂ ದೂರದ ಜರ್ಮನಿ ದೇಶಕ್ಕೂ ಎಲ್ಲಿಯ ಎಲ್ಲಿಯ ಸಂಬಂಧ ಮಾರಾಯ್ರೆ. ಪ್ಲಾಸ್ಟಿಕ್ ಎನ್ನುವ ಬ್ರಹ್ಮ ರಾಕ್ಷಸನನ್ನು ಮುಗಿಸಲು ಜರ್ಮನಿಯ ಮಂದಿ ಮಾಡಿರುವ ಪ್ಲ್ಯಾನ್ ಮಂಗಳೂರಿನಲ್ಲೂ ವರ್ಕ್ ಔಟ್ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಬ್ರಿಕ್ಸ್‌ಗಳನ್ನು ಮಾಡಿಕೊಂಡು ಬೆಂಚು, ಕುರ್ಚಿ, ಹೂವಿನ ಚಟ್ಟಿ, ಆವರಣ ಗೋಡೆಗಳು ಕುಡ್ಲದಲ್ಲಿ ನಿರ್ಮಾಣ ಮಾಡುವ ಯೋಜನೆಯೊಂದು ರೂಪುಗೊಳ್ಳುತ್ತಿದೆ.
ಈಗಾಗಲೇ ಪ್ಲಾಸ್ಟಿಕ್ ಬ್ರಿಕ್ ಬೆಂಚುಗಳ ಕಲ್ಪನೆಗೆ ಪಜೀರು ಚರ್ಚ್‌ನ ಮೈದಾನದಲ್ಲಿ ಎರಡು ಪ್ಲಾಸ್ಟಿಕ್ ಬ್ರಿಕ್ಸ್ ಬೆಂಚುಗಳನ್ನು ನಿರ್ಮಾಣ ಮಾಡಲಾಗಿದೆ. ಮಂಗಳೂರಿನ ಸಿಒಡಿಪಿ ಸಂಸ್ಥೆಯ ಮುಂಭಾಗದಲ್ಲೂ ಇಂತಹ ಒಂದು ಬೆಂಚು ನಿರ್ಮಾಣವಾಗಿದೆ.
ಮಂಗಳೂರಿನ ಕ್ರೈಸ್ತಧರ್ಮ ಪ್ರಾಂತ್ಯದ ಅಧೀನದಲ್ಲಿರುವ ಸಿಒಡಿಪಿ ಸಂಸ್ಥೆಯ ಪ್ರತಿ ವರ್ಷನೂ ಜರ್ಮನಿ ಕಡೆಯಿಂದ ಇಬ್ಬರು ವಿದ್ಯಾರ್ಥಿಗಳು ಎರಡು ತಿಂಗಳ ಕಾಲ ಅಧ್ಯಯನಕ್ಕಾಗಿ ಬರುತ್ತಾರೆ. ಎರಡು ವರ್ಷಗಳ ಹಿಂದೆ ಜರ್ಮನಿಯಿಂದ ಬಂದ ಹೀಡಾ ಹಾಗೂ ಕಳೆದ ವರ್ಷ ಬಂದ ಜರ್ಮನಿಯ ಸೋಪಿಯಾ ಎಲ್‌ತಾಲ್ ಹಾಗೂ ಲಿಯೋನಿ ಅಲ್‌ವೆಲ್ ಜರ್ಮನಿ ದೇಶದಲ್ಲಿ ಪ್ಲಾಸ್ಟಿಕ್ ನಿಯಂತ್ರಣದ ಜತೆಗೆ ಅದರ ಬಳಕೆಯ ಕುರಿತಾಗಿ ಅಲ್ಲಿ ಮಾಡುತ್ತಿದ್ದ ಐಡಿಯಾವನ್ನು ಮಂಗಳೂರಿನ ಸಿಒಡಿಪಿ ಸಂಸ್ಥೆಯ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಟ್ಟರು ಇದರ ಜತೆಯಲ್ಲಿ ಇಂತಹ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಿದ ಬಳಿಕ ಇಲ್ಲೂ ಇಂತಹ ವ್ಯವಸ್ಥೆಯನ್ನು ಮಾಡಬಹುದು ಎನ್ನುವ ಕಲ್ಪನೆ ಹುಟ್ಟಿಕೊಂಡಿತು .
ಸಾಮಾನ್ಯವಾಗಿ ತಂಪು ಪಾನೀಯದ ಬಾಟಲಿಗಳನ್ನು ಬಳಸಿಕೊಂಡು ಈ ಪ್ಲಾಸ್ಟಿಕ್ ಬ್ರಿಕ್ಸ್ ಬೆಂಚುಗಳನ್ನು ನಿರ್ಮಾಣ ಮಾಡಲಾಗುತ್ತದೆ. ಮುಖ್ಯವಾಗಿ ಈ ಬಾಟಲಿಗಳ ಒಳಗಡೆ ಪ್ಲಾಸ್ಟಿಕ್‌ಗಳನ್ನು ಚಿಕ್ಕ ಚಿಕ್ಕ ಚೂರುಗಳಾಗಿ ತುರುಕಿಸಲಾಗುತ್ತದೆ. ಒಂದೂವರೆ ಲೀಟರ್‌ನ ಒಂದು ಬಾಟಲಿ ತುಂಬಿಸಲು ಭರ್ತಿ 8 ರಿಂದ 10 ಗಂಟೆಗಳ ಅವಧಿ ಬೇಕಾಗುತ್ತದೆ. ಪೂರ್ಣವಾಗಿ ತುಂಬಿಸಿದ ಬಳಿಕ ಈ ಬಾಟಲ್‌ಗಳು ಕಲ್ಲಿನಷ್ಟು ಗಟ್ಟಿಯಾಗುತ್ತದೆ. ಜರ್ಮನಿ ದೇಶದಲ್ಲಿ ಇದನ್ನು ಜಾಸ್ತಿಯಾಗಿ ಬಳಕೆ ಮಾಡಲಾಗುತ್ತಿದೆ .
ಆರಂಭದಲ್ಲಿ ಬೆಂಚು ಮಾಡಲು ಸಿಮೆಂಟ್‌ನ ತಳಪಾಯ ಮಾಡಬೇಕು ಇದರ ಬಳಿಕ ಪ್ಲಾಸ್ಟಿಕ್ ಚೂರು ತುಂಬಿಸಿದ ಬಾಟಲಿಗಳನ್ನು ಬೇಕಾದ ರೀತಿಯ ವಿನ್ಯಾಸಕ್ಕೆ ಹೊಂದಿಕೆಯಾಗುವಂತೆ ನಿಲ್ಲಿಸಬೇಕು. ಈ ಸಮಯದಲ್ಲಿ ಆವೆ ಮಣ್ಣಿನ ನೆರವು ಅಗತ್ಯ ಇರುತ್ತದೆ. ಎಲ್ಲ ಪ್ಲಾಸ್ಟಿಕ್ ಬಾಟಲಿಗಳನ್ನು ಇಟ್ಟ ಬಳಿಕ ಅದರ ಮೇಲ್ಭಾಗದಲ್ಲಿ ಸಿಮೆಂಟ್‌ನಿಂದ ಗಾರೆ ಮಾಡಿದರೆ ಸಾಕು. ಪ್ಲಾಸ್ಟಿಕ್ ಹೇಗೆ 450 ವರ್ಷಗಳ ಕಾಲ ಉಳಿಯುತ್ತದೆ ಅದೇ ಮಾದರಿಯಲ್ಲಿ ಈ ಬೆಂಚು, ಕುರ್ಚಿ,ಮನೆ, ಆವರಣಗೋಡೆ ಕೂಡ ಉಳಿಯುತ್ತದೆ.

Share