Tagged: Plastic

ಬಳಸಿದ ಪ್ಲಾಸ್ಟಿಕ್ ಗೆ ದುಡ್ಡು ಕೊಡುವ ಜಯಣ್ಣ!

ಇಡೀ ವಿಶ್ವವೇ ಪ್ಲಾಸ್ಟಿಕ್ ಕುರಿತು ತಲೆ ಕಡೆಸಿಕೊಂಡಿದೆ. ಎಲ್ಲಿ ನೋಡಿದರೂ ಪ್ಲಾಸ್ಟಿಕ್ ನಮ್ಮ ಅವಿಭಾಜ್ಯ ಅಂಗವಾಗಿ ಹೋಗುತ್ತಿದೆ. ಇಂತಹ ಪ್ಲಾಸ್ಟಿಕ್ ಬಳಕೆಯ ವಿರುದ್ದ ಶ್ರೀಸಾಮಾನ್ಯರೊಬ್ಬರು ಡಿಫರೆಂಟ್ ಶೈಲಿಯಲ್ಲಿ ಹೋರಾಟ ಮಾಡಿದ್ದಾರೆ. ಇವರ ಹೆಸರು ಜಯಪ್ರಕಾಶ್ ಎಕ್ಕೂರು .

ಕಂಕನಾಡಿ ಹತ್ತಿರ ಪುಟ್ಟದಾದ ಲಾಂಡ್ರಿ ಶಾಫ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇದರ ಜತೆಯಲ್ಲಿ ಅವರು ಪ್ಲಾಸ್ಟಿಕ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇವರು ಒಂದು ಬಳಸಿದ ಪ್ಲಾಸ್ಟಿಕ್ ಗೆ ಐವತ್ತು ಪೈಸೆ ನೀಡುತ್ತಾರೆ. ಒಬ್ಬರು ಎರಡು ಪ್ಲಾಸ್ಟಿಕ್ ಮಾತ್ರ ನೀಡಬಹುದು. ಎರಡು ಪ್ಲಾಸ್ಟಿಕ್ ಗೆ ಒಂದು ರೂಪಾಯಿ ಕೊಟ್ಟು ಖರೀದಿ ಮಾಡಿ ಅದನ್ನು ನಗರಪಾಲಿಕೆ ಗೆ ಕೊಟ್ಟು ಬಿಡುತ್ತಾರೆ ಅದರಿಂದ ಅವರಿಗೆ ಏನೂ ಲಾಭ ವಿಲ್ಲ. ಇದರ ಜತೆಯಲ್ಲಿ ಅವರ ಪರಿಸರ ಸ್ನೇಹಿ ಪೆನ್, ಬಟ್ಟೆ ಚೀಲ ಹೀಗೆ ಪರಿಸರ ಪೂರಕ ವಸ್ತುಗಳನ್ನು ಮಾರಾಟ ಮಾಡುತ್ತಾರೆ.

ಇದು ಅವರ ಲಾಭದ ಬ್ಯುಸಿನೆಸ್ ಅಲ್ಲ. ಆದರೆ ಇಂತಹ ವಿಚಾರದಿಂದ ಜನರಲ್ಲಿ ಪರಿಸರ ಕಾಳಜಿ ಬೆಳೆಸುವುದು ಅವರ ಉದ್ದೇಶ. ಅವರಲ್ಲಿ ನೂರು ರೂಪಾಯಿ ಯ ಐಟಂ ತೆಗೆದುಕೊಂಡರೆ ಶೇ.10ರಷ್ಟು ಬಳಸಿದ ಪ್ಲಾಸ್ಟಿಕ್ ಕೊಟ್ಟರೆ ಸಾಕು ನಂತರ 90 ರೂ ಕೊಟ್ಟು ಐಟಂ ತೆಗೆದುಕೊಳ್ಳಬಹುದು. ಕುಡ್ಲದ ಕದ್ರಿ ಪಾರ್ಕ್ ಮುಂಭಾಗ ಪ್ರತಿ ಭಾನುವಾರ ಸಂಜೆ ಹೊತ್ತು ಕಾಣಿಸಿಕೊಳ್ಳಲಿದ್ದಾರೆ.

ಕಿಸ್ ದಿ ಬೊಂಡ ವಿದ್ಯಾರ್ಥಿಗಳ ಅಭಿಯಾನ

ಮಂಗಳೂರಿನಲ್ಲಿ ಹೊಸ ಅಭಿಯಾನವೊಂದು ಆರಂಭವಾಗಿದೆ. ‘ಕಿಸ್ ದಿ ಬೊಂಡ’ ಎನ್ನುವ ಮೂಲಕ ಬೊಂಡವನ್ನು ಪ್ಲಾಸ್ಟಿಕ್ ಸ್ಟ್ರಾ ಇಲ್ಲದೇ ಕುಡಿಯುವ ವಿನೂತನ ಕೆಲಸವಿದು. ಪ್ಲಾಸ್ಟಿಕ್ ಬಳಕೆಯನ್ನೇ ಪೂರ್ಣವಾಗಿ ಬಿಟ್ಟು ಬಿಡೋಣ ಎನ್ನುವ ಸಂದೇಶ ಸಾರುವ ಈ ಅಭಿಯಾನದ ಹಿಂದೆ ವಿದ್ಯಾರ್ಥಿಗಳ ತಂಡವೊಂದು ಕೆಲಸ ಮಾಡಿದೆ.
ಜ್ಯೂಸ್ ಅಂಗಡಿ ಸೇರಿದಂತೆ ಪ್ರತಿಯೊಂದು ಕಡೆಯಲ್ಲೂ ಜ್ಯೂಸ್ ಸೇರಿದಂತೆ ತಂಪು ಪಾನೀಯಗಳನ್ನು ಪ್ಲಾಸ್ಟಿಕ್ ಸ್ಟ್ರಾ ಬಿಟ್ಟು ಉಳಿದ ರೀತಿಯಲ್ಲಿ ಕುಡಿಯಲು ಮುಂದಾಗಿ ಎನ್ನುವುದೇ ಈ ಅಭಿಯಾನದ ಮೂಲ ಉದ್ದೇಶ. ವಿದ್ಯಾರ್ಥಿಗಳ ಈ ಚಾಲೆಂಜ್‌ಗೆ ನೀವು ಸಹಕರಿಸಿ.

ಪ್ಲಾಸ್ಟಿಕ್ ಬ್ರಿಕ್ಸ್ ಬೆಂಚ್ ಕುಡ್ಲಕ್ಕೆ ಜರ್ಮನ್ ಐಡಿಯಾ !

ಕಡಲಿನ ಊರು ಕುಡ್ಲಕ್ಕೂ ದೂರದ ಜರ್ಮನಿ ದೇಶಕ್ಕೂ ಎಲ್ಲಿಯ ಎಲ್ಲಿಯ ಸಂಬಂಧ ಮಾರಾಯ್ರೆ. ಪ್ಲಾಸ್ಟಿಕ್ ಎನ್ನುವ ಬ್ರಹ್ಮ ರಾಕ್ಷಸನನ್ನು ಮುಗಿಸಲು ಜರ್ಮನಿಯ ಮಂದಿ ಮಾಡಿರುವ ಪ್ಲ್ಯಾನ್ ಮಂಗಳೂರಿನಲ್ಲೂ ವರ್ಕ್ ಔಟ್ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಬ್ರಿಕ್ಸ್‌ಗಳನ್ನು ಮಾಡಿಕೊಂಡು ಬೆಂಚು, ಕುರ್ಚಿ, ಹೂವಿನ ಚಟ್ಟಿ, ಆವರಣ ಗೋಡೆಗಳು ಕುಡ್ಲದಲ್ಲಿ ನಿರ್ಮಾಣ ಮಾಡುವ ಯೋಜನೆಯೊಂದು ರೂಪುಗೊಳ್ಳುತ್ತಿದೆ.
ಈಗಾಗಲೇ ಪ್ಲಾಸ್ಟಿಕ್ ಬ್ರಿಕ್ ಬೆಂಚುಗಳ ಕಲ್ಪನೆಗೆ ಪಜೀರು ಚರ್ಚ್‌ನ ಮೈದಾನದಲ್ಲಿ ಎರಡು ಪ್ಲಾಸ್ಟಿಕ್ ಬ್ರಿಕ್ಸ್ ಬೆಂಚುಗಳನ್ನು ನಿರ್ಮಾಣ ಮಾಡಲಾಗಿದೆ. ಮಂಗಳೂರಿನ ಸಿಒಡಿಪಿ ಸಂಸ್ಥೆಯ ಮುಂಭಾಗದಲ್ಲೂ ಇಂತಹ ಒಂದು ಬೆಂಚು ನಿರ್ಮಾಣವಾಗಿದೆ.
ಮಂಗಳೂರಿನ ಕ್ರೈಸ್ತಧರ್ಮ ಪ್ರಾಂತ್ಯದ ಅಧೀನದಲ್ಲಿರುವ ಸಿಒಡಿಪಿ ಸಂಸ್ಥೆಯ ಪ್ರತಿ ವರ್ಷನೂ ಜರ್ಮನಿ ಕಡೆಯಿಂದ ಇಬ್ಬರು ವಿದ್ಯಾರ್ಥಿಗಳು ಎರಡು ತಿಂಗಳ ಕಾಲ ಅಧ್ಯಯನಕ್ಕಾಗಿ ಬರುತ್ತಾರೆ. ಎರಡು ವರ್ಷಗಳ ಹಿಂದೆ ಜರ್ಮನಿಯಿಂದ ಬಂದ ಹೀಡಾ ಹಾಗೂ ಕಳೆದ ವರ್ಷ ಬಂದ ಜರ್ಮನಿಯ ಸೋಪಿಯಾ ಎಲ್‌ತಾಲ್ ಹಾಗೂ ಲಿಯೋನಿ ಅಲ್‌ವೆಲ್ ಜರ್ಮನಿ ದೇಶದಲ್ಲಿ ಪ್ಲಾಸ್ಟಿಕ್ ನಿಯಂತ್ರಣದ ಜತೆಗೆ ಅದರ ಬಳಕೆಯ ಕುರಿತಾಗಿ ಅಲ್ಲಿ ಮಾಡುತ್ತಿದ್ದ ಐಡಿಯಾವನ್ನು ಮಂಗಳೂರಿನ ಸಿಒಡಿಪಿ ಸಂಸ್ಥೆಯ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಟ್ಟರು ಇದರ ಜತೆಯಲ್ಲಿ ಇಂತಹ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಿದ ಬಳಿಕ ಇಲ್ಲೂ ಇಂತಹ ವ್ಯವಸ್ಥೆಯನ್ನು ಮಾಡಬಹುದು ಎನ್ನುವ ಕಲ್ಪನೆ ಹುಟ್ಟಿಕೊಂಡಿತು .
ಸಾಮಾನ್ಯವಾಗಿ ತಂಪು ಪಾನೀಯದ ಬಾಟಲಿಗಳನ್ನು ಬಳಸಿಕೊಂಡು ಈ ಪ್ಲಾಸ್ಟಿಕ್ ಬ್ರಿಕ್ಸ್ ಬೆಂಚುಗಳನ್ನು ನಿರ್ಮಾಣ ಮಾಡಲಾಗುತ್ತದೆ. ಮುಖ್ಯವಾಗಿ ಈ ಬಾಟಲಿಗಳ ಒಳಗಡೆ ಪ್ಲಾಸ್ಟಿಕ್‌ಗಳನ್ನು ಚಿಕ್ಕ ಚಿಕ್ಕ ಚೂರುಗಳಾಗಿ ತುರುಕಿಸಲಾಗುತ್ತದೆ. ಒಂದೂವರೆ ಲೀಟರ್‌ನ ಒಂದು ಬಾಟಲಿ ತುಂಬಿಸಲು ಭರ್ತಿ 8 ರಿಂದ 10 ಗಂಟೆಗಳ ಅವಧಿ ಬೇಕಾಗುತ್ತದೆ. ಪೂರ್ಣವಾಗಿ ತುಂಬಿಸಿದ ಬಳಿಕ ಈ ಬಾಟಲ್‌ಗಳು ಕಲ್ಲಿನಷ್ಟು ಗಟ್ಟಿಯಾಗುತ್ತದೆ. ಜರ್ಮನಿ ದೇಶದಲ್ಲಿ ಇದನ್ನು ಜಾಸ್ತಿಯಾಗಿ ಬಳಕೆ ಮಾಡಲಾಗುತ್ತಿದೆ .
ಆರಂಭದಲ್ಲಿ ಬೆಂಚು ಮಾಡಲು ಸಿಮೆಂಟ್‌ನ ತಳಪಾಯ ಮಾಡಬೇಕು ಇದರ ಬಳಿಕ ಪ್ಲಾಸ್ಟಿಕ್ ಚೂರು ತುಂಬಿಸಿದ ಬಾಟಲಿಗಳನ್ನು ಬೇಕಾದ ರೀತಿಯ ವಿನ್ಯಾಸಕ್ಕೆ ಹೊಂದಿಕೆಯಾಗುವಂತೆ ನಿಲ್ಲಿಸಬೇಕು. ಈ ಸಮಯದಲ್ಲಿ ಆವೆ ಮಣ್ಣಿನ ನೆರವು ಅಗತ್ಯ ಇರುತ್ತದೆ. ಎಲ್ಲ ಪ್ಲಾಸ್ಟಿಕ್ ಬಾಟಲಿಗಳನ್ನು ಇಟ್ಟ ಬಳಿಕ ಅದರ ಮೇಲ್ಭಾಗದಲ್ಲಿ ಸಿಮೆಂಟ್‌ನಿಂದ ಗಾರೆ ಮಾಡಿದರೆ ಸಾಕು. ಪ್ಲಾಸ್ಟಿಕ್ ಹೇಗೆ 450 ವರ್ಷಗಳ ಕಾಲ ಉಳಿಯುತ್ತದೆ ಅದೇ ಮಾದರಿಯಲ್ಲಿ ಈ ಬೆಂಚು, ಕುರ್ಚಿ,ಮನೆ, ಆವರಣಗೋಡೆ ಕೂಡ ಉಳಿಯುತ್ತದೆ.

ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಬಾಳೆಲೆ ಬೆಂಬಲಿಸಿ

ಕುಡ್ಲ ಮಾತ್ರವಲ್ಲ ಮೆಟ್ರೋ ಸಿಟಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಿತಿಮೀರಿ ನಡೆಯುತ್ತದೆ ಅದನ್ನು ನಿಯಂತ್ರಣ ಮಾಡುವುದೇ ದೊಡ್ಡ ಕಿರಿಕಿರಿ. ನಗರದ ಜನರು ಮಾಲ್ ಸಂಸ್ಕೃತಿಯ ಅಡಿಯಲ್ಲಿ ಇರುವುದರಿಂದ ಮಾಲ್ ಗಳ ಲ್ಲಿ ಪ್ಲಾಸ್ಟಿಕ್ ಬದಲು ಬಾಳೆಲೆ ಬಳಸುವ ವಿಚಾರದಲ್ಲಿ ಗ್ರಾಹಕರೇ ಮಾಲ್ ನ‌ ಮುಖ್ಯಸ್ಥ ರಿಗೆ ಫೀಡ್ ಬ್ಯಾಕ್ ನೀಡುವ ಕೆಲಸ ಮಾಡಬಹುದು. ಇದರಿಂದ ಕೊಂಚ ಮಟ್ಟಿ ನ ಪ್ಲಾಸ್ಟಿಕ್ ನಿಯಂತ್ರಣ ಕ್ಕೆ ಕೊಡುಗೆ ನೀಡಬಹುದು ಜತೆಗೆ ರೈತನಿಗೂ ಆದಾಯ ಮಾಡುವ ಕೆಲಸವಿದು.

ಕುಡ್ಲದ ಹುಡುಗನ ಬಿಸಿನೀರಿನಲ್ಲಿ ಕರಗುವ ಪ್ಲಾಸ್ಟಿಕ್

ಪ್ಲಾಸ್ಟಿಕ್ ಎಂದಾದರೂ ಬಿಸಿನೀರಿನಲ್ಲಿ ಕರಗುತ್ತಾ….ಎಲ್ಲಾದರೂ ಕರಗಿದರು ಅದನ್ನು ನೀರಿನಂತೆ ಕುಡಿಯಬಹುದಾ…? ಈ ಎರಡು ಪ್ರಶ್ನೆಗಳನ್ನು ಕೇಳುವ ಮಂದಿಗೆ ಮಂಡೆ ಸರಿಯಿಲ್ಲ ಎಂದು‌ ನೀವು ಭಾವಿಸಿಕೊಂಡರೆ ಅದು ನಿಮ್ಮ ತಪ್ಪು ಅಭಿಪ್ರಾಯ.

ಹೌದು. ಕುಡ್ಲ ಬಟ್ ಬೇಸಿಕಲಿ ಬೆಳ್ತಂಗಡಿ ಯ ಬಳ್ಳಂಜದ ಯುವ ಉದ್ಯಮಿ ಅಶ್ವಥ್ ಹೆಗ್ಡೆ ಅವರ ಎನ್ವೀ ಗ್ರೀನ್ ಎನ್ನುವ ಪ್ಲಾಸ್ಟಿಕ್ ಬಿಸಿ ನೀರಿನಲ್ಲಿ ಕರಗುತ್ತೆ ಜತೆಗೆ ಅದನ್ನು‌ಕುಡಿದರೂ ಏನೂ ಆಗೋಲ್ಲ. ಕಾರಣ ಇದು ತರಕಾರಿ ತ್ಯಾಜ್ಯ ದಿಂದ ಮಾಡಿದ ಪ್ಲಾಸ್ಟಿಕ್. ಇತರ ಪ್ಲಾಸ್ಟಿಕ್ ಗೆ ಹೋಲಿಕೆ ಮಾಡಿದರೆ ರೇಟು ಮಾತ್ರ ಜಾಸ್ತಿ ಆದರೆ ಪರಿಸರಕ್ಕೆ ಈ ಪ್ಲಾಸ್ಟಿಕ್ ಪೂರಕವಾಗಿದೆ. ಮಂಗಳೂರಿನ ಮೀನು ಮಾರಾಟದ ಮಹಿಳೆಯೊಬ್ಬರು ನೀಡಿದ ಅಭಿಪ್ರಾಯ ಈಗ ಈ ಪ್ಲಾಸ್ಟಿಕ್ ರೂಪುಗೊಳ್ಳಲು ಕಾರಣವಾಯಿತು ಎನ್ನುವುದು ಅಶ್ವಥ್ ಅವರ ಮಾತು.