Tagged: germany

ಕುಡ್ಲದ ರಿಕ್ಷಾವನ್ನು ಇಷ್ಟಪಟ್ಟ ಜರ್ಮನಿಗರು !

ಎಲ್ಲಿಯ ಕುಡ್ಲ ಎಲ್ಲಿಯ ಜರ್ಮನಿ ಮಾರಾಯ್ರೆ. ವಿಶ್ವ ಪರ್ಯಟನೆ ಅಂಗವಾಗಿ ಜರ್ಮನಿಯಿಂದ ಮಂಗಳೂರಿಗೆ ಆಗಮಿಸಿದ ವಿದೇಶಿ ಪ್ರವಾಸಿಗರ ಐಷಾರಾಮಿ ಹಡಗು ಐಡಾ ವೀಟಾದಲ್ಲಿ ಬಂದ ಬಹುತೇಕ ಪ್ರವಾಸಿಗರು ಕುಡ್ಲದ ರಿಕ್ಷಾದಲ್ಲಿಯೇ ಊರೂರು ಸುತ್ತುವ ಕೆಲಸಕ್ಕೆ ಮುಂದಾಗಿದ್ದಾರೆ.

ನಗರದ ದರ್ಶನ ಮಾಡಿಸಲು ಇದಕ್ಕಾಗಿ 63 ಆಟೋ ರಿಕ್ಷಾಗಳ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಲೋಟಸ್ ಟೂರಿಸ್ಟ್ ಸಂಸ್ಥೆ ಮೂಲಕ ಆಟೊಗಳನ್ನು ಬಂದರಿನ ಒಳಗೆ ಆಗಮಿಸಲು ಅವಕಾಶ ಕಲ್ಪಿಸಲಾಗಿತ್ತು. ಆಟೊಗಳನ್ನು ಸಾಲಾಗಿ ನಂಬರ್ ಹಾಕಿ ನಿಲ್ಲಿಸಲಾಗಿತ್ತು. ಒಟ್ಟು 1,154 ಪ್ರವಾಸಿಗರಲ್ಲಿ 1೦೦ಕ್ಕೂ ಹೆಚ್ಚು ಪ್ರವಾಸಿಗರು ಆಟೊಗಳನ್ನೇ ಆಯ್ಕೆ ಮಾಡಿಕೊಂಡು, ನಗರದ ಪ್ರವಾಸಿ ತಾಣಗಳ ದರ್ಶನ ಮಾಡಿದರು.

ಉರ್ವಾದ ರೈಸ್ ಮಿಲ್, ಬೈಕಂಪಾಡಿಯ ಗೇರುಬೀಜ ಕಾರ್ಖಾನೆ, ಸೆಂಟ್ರಲ್ ಮಾರುಕಟ್ಟೆ, ಮೀನು ಮಾರುಕಟ್ಟೆ, ಹೋಟೆಲ್ ತಾಜ್ ಗೇಟ್‌ವೇಯಲ್ಲಿ ಊಟ ಮತ್ತು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಹೀಗೆ ಮಂಗಳೂರಿನ ನಾನಾ ಕಡೆಯಲ್ಲಿ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಿಂದ ಕುಡ್ಲದ ರಿಕ್ಷಾ ಡ್ರೈವರ್‌ಗಳಿಗೆ ಈ ಬಾರಿ ಡಾಲರ್ ಕರೆನ್ಸಿಯ ನೋಟುಗಳು ಟಿಪ್ಸ್‌ಗಳಾಗಿ ಸಿಗುವ ಸಾಧ್ಯತೆಯಿದೆ.

ಪ್ಲಾಸ್ಟಿಕ್ ಬ್ರಿಕ್ಸ್ ಬೆಂಚ್ ಕುಡ್ಲಕ್ಕೆ ಜರ್ಮನ್ ಐಡಿಯಾ !

ಕಡಲಿನ ಊರು ಕುಡ್ಲಕ್ಕೂ ದೂರದ ಜರ್ಮನಿ ದೇಶಕ್ಕೂ ಎಲ್ಲಿಯ ಎಲ್ಲಿಯ ಸಂಬಂಧ ಮಾರಾಯ್ರೆ. ಪ್ಲಾಸ್ಟಿಕ್ ಎನ್ನುವ ಬ್ರಹ್ಮ ರಾಕ್ಷಸನನ್ನು ಮುಗಿಸಲು ಜರ್ಮನಿಯ ಮಂದಿ ಮಾಡಿರುವ ಪ್ಲ್ಯಾನ್ ಮಂಗಳೂರಿನಲ್ಲೂ ವರ್ಕ್ ಔಟ್ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಬ್ರಿಕ್ಸ್‌ಗಳನ್ನು ಮಾಡಿಕೊಂಡು ಬೆಂಚು, ಕುರ್ಚಿ, ಹೂವಿನ ಚಟ್ಟಿ, ಆವರಣ ಗೋಡೆಗಳು ಕುಡ್ಲದಲ್ಲಿ ನಿರ್ಮಾಣ ಮಾಡುವ ಯೋಜನೆಯೊಂದು ರೂಪುಗೊಳ್ಳುತ್ತಿದೆ.
ಈಗಾಗಲೇ ಪ್ಲಾಸ್ಟಿಕ್ ಬ್ರಿಕ್ ಬೆಂಚುಗಳ ಕಲ್ಪನೆಗೆ ಪಜೀರು ಚರ್ಚ್‌ನ ಮೈದಾನದಲ್ಲಿ ಎರಡು ಪ್ಲಾಸ್ಟಿಕ್ ಬ್ರಿಕ್ಸ್ ಬೆಂಚುಗಳನ್ನು ನಿರ್ಮಾಣ ಮಾಡಲಾಗಿದೆ. ಮಂಗಳೂರಿನ ಸಿಒಡಿಪಿ ಸಂಸ್ಥೆಯ ಮುಂಭಾಗದಲ್ಲೂ ಇಂತಹ ಒಂದು ಬೆಂಚು ನಿರ್ಮಾಣವಾಗಿದೆ.
ಮಂಗಳೂರಿನ ಕ್ರೈಸ್ತಧರ್ಮ ಪ್ರಾಂತ್ಯದ ಅಧೀನದಲ್ಲಿರುವ ಸಿಒಡಿಪಿ ಸಂಸ್ಥೆಯ ಪ್ರತಿ ವರ್ಷನೂ ಜರ್ಮನಿ ಕಡೆಯಿಂದ ಇಬ್ಬರು ವಿದ್ಯಾರ್ಥಿಗಳು ಎರಡು ತಿಂಗಳ ಕಾಲ ಅಧ್ಯಯನಕ್ಕಾಗಿ ಬರುತ್ತಾರೆ. ಎರಡು ವರ್ಷಗಳ ಹಿಂದೆ ಜರ್ಮನಿಯಿಂದ ಬಂದ ಹೀಡಾ ಹಾಗೂ ಕಳೆದ ವರ್ಷ ಬಂದ ಜರ್ಮನಿಯ ಸೋಪಿಯಾ ಎಲ್‌ತಾಲ್ ಹಾಗೂ ಲಿಯೋನಿ ಅಲ್‌ವೆಲ್ ಜರ್ಮನಿ ದೇಶದಲ್ಲಿ ಪ್ಲಾಸ್ಟಿಕ್ ನಿಯಂತ್ರಣದ ಜತೆಗೆ ಅದರ ಬಳಕೆಯ ಕುರಿತಾಗಿ ಅಲ್ಲಿ ಮಾಡುತ್ತಿದ್ದ ಐಡಿಯಾವನ್ನು ಮಂಗಳೂರಿನ ಸಿಒಡಿಪಿ ಸಂಸ್ಥೆಯ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಟ್ಟರು ಇದರ ಜತೆಯಲ್ಲಿ ಇಂತಹ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಿದ ಬಳಿಕ ಇಲ್ಲೂ ಇಂತಹ ವ್ಯವಸ್ಥೆಯನ್ನು ಮಾಡಬಹುದು ಎನ್ನುವ ಕಲ್ಪನೆ ಹುಟ್ಟಿಕೊಂಡಿತು .
ಸಾಮಾನ್ಯವಾಗಿ ತಂಪು ಪಾನೀಯದ ಬಾಟಲಿಗಳನ್ನು ಬಳಸಿಕೊಂಡು ಈ ಪ್ಲಾಸ್ಟಿಕ್ ಬ್ರಿಕ್ಸ್ ಬೆಂಚುಗಳನ್ನು ನಿರ್ಮಾಣ ಮಾಡಲಾಗುತ್ತದೆ. ಮುಖ್ಯವಾಗಿ ಈ ಬಾಟಲಿಗಳ ಒಳಗಡೆ ಪ್ಲಾಸ್ಟಿಕ್‌ಗಳನ್ನು ಚಿಕ್ಕ ಚಿಕ್ಕ ಚೂರುಗಳಾಗಿ ತುರುಕಿಸಲಾಗುತ್ತದೆ. ಒಂದೂವರೆ ಲೀಟರ್‌ನ ಒಂದು ಬಾಟಲಿ ತುಂಬಿಸಲು ಭರ್ತಿ 8 ರಿಂದ 10 ಗಂಟೆಗಳ ಅವಧಿ ಬೇಕಾಗುತ್ತದೆ. ಪೂರ್ಣವಾಗಿ ತುಂಬಿಸಿದ ಬಳಿಕ ಈ ಬಾಟಲ್‌ಗಳು ಕಲ್ಲಿನಷ್ಟು ಗಟ್ಟಿಯಾಗುತ್ತದೆ. ಜರ್ಮನಿ ದೇಶದಲ್ಲಿ ಇದನ್ನು ಜಾಸ್ತಿಯಾಗಿ ಬಳಕೆ ಮಾಡಲಾಗುತ್ತಿದೆ .
ಆರಂಭದಲ್ಲಿ ಬೆಂಚು ಮಾಡಲು ಸಿಮೆಂಟ್‌ನ ತಳಪಾಯ ಮಾಡಬೇಕು ಇದರ ಬಳಿಕ ಪ್ಲಾಸ್ಟಿಕ್ ಚೂರು ತುಂಬಿಸಿದ ಬಾಟಲಿಗಳನ್ನು ಬೇಕಾದ ರೀತಿಯ ವಿನ್ಯಾಸಕ್ಕೆ ಹೊಂದಿಕೆಯಾಗುವಂತೆ ನಿಲ್ಲಿಸಬೇಕು. ಈ ಸಮಯದಲ್ಲಿ ಆವೆ ಮಣ್ಣಿನ ನೆರವು ಅಗತ್ಯ ಇರುತ್ತದೆ. ಎಲ್ಲ ಪ್ಲಾಸ್ಟಿಕ್ ಬಾಟಲಿಗಳನ್ನು ಇಟ್ಟ ಬಳಿಕ ಅದರ ಮೇಲ್ಭಾಗದಲ್ಲಿ ಸಿಮೆಂಟ್‌ನಿಂದ ಗಾರೆ ಮಾಡಿದರೆ ಸಾಕು. ಪ್ಲಾಸ್ಟಿಕ್ ಹೇಗೆ 450 ವರ್ಷಗಳ ಕಾಲ ಉಳಿಯುತ್ತದೆ ಅದೇ ಮಾದರಿಯಲ್ಲಿ ಈ ಬೆಂಚು, ಕುರ್ಚಿ,ಮನೆ, ಆವರಣಗೋಡೆ ಕೂಡ ಉಳಿಯುತ್ತದೆ.