ನಿಗರ್ತಿಕರ ಆಶಾಕಿರಣ ಜೆಪ್ಪು ಸಂತ ಆಂತೋನಿ ಆಶ್ರಮ

ಮಂಗಳೂರಿನ ಜೆಪ್ಪು ಸಂತ ಆಂತೋನಿ ಆಶ್ರಮ ಸಮಾಜದ ದುರ್ಬಲ ಹಾಗೂ ದೀನ ದಲಿತರಿಗೆ ನೆಮ್ಮದಿಯ ಬದುಕು ನೀಡುವ ನಿಟ್ಟಿನಲ್ಲಿ ಆಶ್ರಮ ಕಳೆದ 120 ವರ್ಷಗಳಿಗಿಂತಲೂ ನಿರಂತರವಾಗಿ ದುಡಿಯುತ್ತಿದೆ. ನಗರದ ಜೆಪ್ಪುವಿನಲ್ಲಿರುವ ಆಶ್ರಮದ ವಠಾರಕ್ಕೆ ಹೋದಂತೆ ಸದ್ದಗದ್ದಲದ ಪ್ರಪಂಚದಿಂದ ನೆಮ್ಮದಿ, ಶಾಂತಿ- ಸಮಾಧಾನ ತಾಣಕ್ಕೆ ಹೋಗುತ್ತಿದ್ದೇವೆ ಎನ್ನುವ ಭಾವ ಪ್ರತಿಯೊಬ್ಬನಲ್ಲಿಯೂ ಬೆಳೆಯುತ್ತದೆ. ಹಸಿರು ತೋಟ, ಮರಗಿಡ, ಹೂಗಳಿಂದ ಆಶ್ರಮದ ವಠಾರ ಹಸಿರು ಪ್ರೀತಿಗೆ ಮುನ್ನುಡಿ ಬರೆದಂತೆ ಭಾಸವಾಗುತ್ತದೆ.
ಆಶ್ರಮದಲ್ಲಿ 400ಕ್ಕೂ ಅಧಿಕ ಪುರುಷರು ಹಾಗೂ ಮಹಿಳೆಯರು ಬದುಕು ಕಟ್ಟುತ್ತಿದ್ದಾರೆ. ಸಾಕಷ್ಟು ಸಂಖ್ಯೆಯ ಯುವಕರ ಶೈಕ್ಷಣಿಕ ಬದುಕು ಕೂಡ ಇಲ್ಲಿಯೇ ರೂಪುಗೊಳ್ಳುತ್ತಿದೆ. ಆಶ್ರಮವಾಸಿಗಳಲ್ಲಿ ಕಾಣಿಸಿಕೊಳ್ಳುವ ಶಿಸ್ತು ಅವರ ಬದುಕಿನ ಪ್ರಯಾಣಕ್ಕೊಂದು ಸುಲಭ ರಹದಾರಿಯನ್ನು ಕಲ್ಪಿಸಿಕೊಡುತ್ತದೆ. ತಮಗೆ ಬೇಕಾದ ತರಕಾರಿಯನ್ನು ತಾವೇ ಬೆಳೆಯುವ ಮೂಲಕ ಆಶ್ರಮದ ನಿವಾಸಿಗಳು ಬದುಕಿನಲ್ಲಿ ಸ್ವಾವಲಂಬನೆಯ ಪಾಠವನ್ನು ದಿನಾಲೂ ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ.
ತೀರಾ ವಯಸ್ಸಾದ ಹಿರಿಯರು ಕೆಲಸ ಮಾಡಲು ಕೂಡದವರು ಕೂಡ ತಮ್ಮಲ್ಲಿ ಆಗುವ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿ ಬದುಕು ಕಲಿಸುತ್ತಿದ್ದಾರೆ. ಕಳೆದ ವರ್ಷ ಆಶ್ರಮ 120ವರ್ಷಗಳ ಆಚರಣೆಗೆ ಸಂಬಂಧಪಟ್ಟಂತೆ ನಾನಾ ಯೋಜನೆಗಳನ್ನು ಹಾಕಿಕೊಂಡು ಅದನ್ನು ಕಾರ‍್ಯಗತ ಮಾಡುವ ಕೆಲಸದಲ್ಲಿ ಮುಂದಾಗಿದೆ. ಮಾನಸಿಕ ರೋಗಿಗಳ ಚಿಕಿತ್ಸೆ ಹಾಗೂ ವಾಸಕ್ಕೆ 100 ಬೆಡ್‌ಗಳ ಸುಸಜ್ಜಿತ ಕಟ್ಟಡದ ನಿರ್ಮಾಣ ಕೆಲಸ ಸಾಗುತ್ತಿದೆ.

Share