ರಾಜ್ಯದ ಹೆಚ್ಚು ಮಳೆ ಬೀಳುವ, ಕಡಲತಡಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಕುಡಿವ ನೀರಿಗೆ ತತ್ವಾರ ಆರಂಭವಾಗಿದೆ. ಈ ನೀರಿನ ಬರ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 2018ರಲ್ಲಿ 4616.7ಮಿಮೀ ಮಳೆಯಾಗುವ ಮೂಲಕ ಒಂದು ಹೊಸ ದಾಖಲೆ ನಿರ್ಮಾಣವಾಗಿತ್ತು. ಆದರೆ ಪ್ರಾಕೃತಿಕ ವೈಪರೀತ್ಯವೋ ಎಂಬಂತೆ ಡಿಸೆಂಬರ್ ತಿಂಗಳಾಂತ್ಯಕ್ಕೆ ಜಿಲ್ಲೆಯಾದ್ಯಂತ ಭೂಮಿಯ ಒರತೆ ಕಡಿಮೆಯಾಗಿ, ಕುಡಿಯುವ ನೀರಿಗೂ ತತ್ವಾರ ಬಂದಿದೆ.
ಮಳೆಗಾಲದಲ್ಲಿ ಕರಾವಳಿ ಜಿಲ್ಲೆಗಳು ನೆರೆಯಲ್ಲಿ ಮುಳುಗಿದರೆ, ಬೇಸಗೆಯಲ್ಲಿ ಬಿಸಿಲ ಬೇಗೆಗೆ ಹೈರಾಣಾಗುತ್ತಿವೆ. ಕರಾವಳಿ ಭಾಗದಲ್ಲಿ ಗುರುವಾರ ಬಿಸಿಲ ತಾಪ 37 ಡಿಗ್ರಿಗೆ ತಲುಪಿದ್ದು, ಜನ ಮಳೆಯ ನಿರೀಕ್ಷೆಯಲ್ಲಿದ್ದಾರೆ.