Kudla City

ಡಿಸಿಗಳಿಗೆ ಒಳಿಯಿತು ಧ್ವಜಾರೋಹಣದ ಚಾನ್ಸ್

ರಾಜ್ಯದಲ್ಲಿ ಸರಕಾರ ಅಸ್ತಿತ್ವದ ಲ್ಲಿದ್ದರೂ ಇದೇ ಮೊದಲ ಬಾರಿಗೆ ಸ್ವಾತಂತ್ರ್ಯೋ ತ್ಸವದಂದು ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೇ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಈ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು ನಿಭಾಯಿಸಲಿದ್ದಾರೆ.
ಈ ಹಿಂದೆ ರಾಜ್ಯ ಪಾಲರ ಆಡಳಿತವಿದ್ದ ಸಂದರ್ಭದಲ್ಲಿ ಮಾತ್ರ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನಡೆಸಿದ್ದಾರೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಸಿಎಂ ಯಡಿಯೂರಪ್ಪ ಧ್ವಜ ವಂದನೆ ಸಲ್ಲಿಸಲಿದ್ದಾರೆ.
ಉಳಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳು, ಉಪವಿಭಾಗಗಳಲ್ಲಿ ಉಪ ವಿಭಾಗಾಧಿಕಾರಿಗಳು, ತಾಲೂಕು ಕೇಂದ್ರಗಳಲ್ಲಿತಹಶೀಲ್ದಾರರು ಈ ಪ್ರಕ್ರಿಯೆ ನಡೆಸಲಿದ್ದು, ನೆರೆಯ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಕಾರ್ಯಕ್ರಮ ನಡೆಸಲು ಸೂಚನೆ ನೀಡಲಾಗಿದೆ.
ಈ ಹಿಂದೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವಿತ್ತು. ಈ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ಮಾತ್ರ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನಡೆಸಿದ್ದಾರೆ.

ಪರಿಸರದೊಂದಿಗೆ ಪ್ರೀತಿಯ ಸ್ವಾತಂತ್ರ್ಯ ಆಚರಿಸಿ

ಪರಿಸರ ಹಾಗೂ ಸ್ವಾತಂತ್ರ್ಯಕ್ಕೆ ಎಲ್ಲಿಂದ ಎಲ್ಲಿ ಸಂಬಂಧ ಅಂದುಕೊಳ್ಳಬೇಡಿ. ಮಕ್ಕಳು ಕೈಯಲ್ಲಿ ಪ್ಲಾಸ್ಟಿಕ್ ಬಾವುಟ ಹಿಡಿದುಕೊಂಡು ಪರಿಸರಕ್ಕೆ ಹಾನಿ ಮಾಡುವುದು ಪ್ರತಿ ವರ್ಷನೂ ನಡೆದುಕೊಂಡು ಬರುವ ವಿಚಾರ. ಆದರೆ ಈ ಬಾರಿಯಂತೂ ಪರಿಸರದ ಜತೆಯಲ್ಲಿ ಸ್ವಾತಂತ್ರ್ಯವನ್ನು ಆಚರಿಸಲು ಪಕ್ಷಿಕರೆಯ ನಿತಿನ್ ವಾಸ್ ಸೂಪರ್ ಐಡಿಯಾ ನೀಡಿದ್ದಾರೆ ಅದನ್ನು ಫಾಲೋ ಮಾಡಿಕೊಂಡು ಹೋದರೆ ಬಾವುಟದಲ್ಲೂ ಗಿಡ ಬೆಳೆಸಬಹುದು.
ಹಳೆಯ ರದ್ದಿ ಪೇಪರ್‌ಗಳನ್ನು ಸಂಗ್ರಹಿಸಿ ಹಳೆಯ ವಿಧಾನಗಳನ್ನು ಬಳಸಿ ಹೊಸದಾಗಿ ಪೇಪರ್ ತಯಾರಿಸಿ ಇದರಿಂದ ಆಮಂತ್ರಣ ಪತ್ರಿಕೆ, ಬುಕ್ ಪ್ಯಾಡ್, ಜುವೆಲ್ಲರಿ ಬಾಕ್ಸ್, ಡಿಸೈನ್ ಬೌಲ್, ವಿಗ್ರಹಗಳು, ಪೆನ್‌ಸ್ಟ್ಯಾಂಡ್, ಪೆನ್ಸಿಲ್, ಪೆನ್ ಮತ್ತಿತರ ವಸ್ತುಗಳನ್ನು ತಯಾರಿಸುತ್ತಾರೆ. ಬಳಕೆಯ ನಂತರ ಪೇಪರ್ ತಯಾರಿಸುವಾಗ ಅದಕ್ಕೆ ನಾನಾ ಜಾತಿಯ ಹೂವಿನ ಗಿಡಗಳ ಹಾಗೂ ತರಕಾರಿ ಬೀಜಗಳನ್ನು ಅಳವಡಿಸುತ್ತಾರೆ. ಇವುಗಳನ್ನು ಮಣ್ಣಲ್ಲಿ ಹಾಕಿದರೆ ಮೊಳಕೆ ಒಡೆದು ನಾನಾ ಜಾತಿಯ ಹೂ, ತರಕಾರಿ ಗಿಡಗಳಾಗಿ ಬೆಳೆಯುತ್ತದೆ.

ಮಾರ್ಕೆಟ್ ನಲ್ಲಿ ಎಲ್ಲ ವಸ್ತುಗಳಿಗೂ ಟಾಪ್ ರೇಟ್ !

ಕರಾವಳಿಯ ಪ್ರಮುಖ ಮಾರ್ಕೆಟ್ ಗೆ‌ ತರಕಾರಿ, ಆಡು,ಕೋಳಿ ಯಾವುದು ಕೂಡ ಬೇಡಿಕೆಯಷ್ಟು ಪೂರೈಕೆ ಇಲ್ಲ ಘಾಟ್ ಸೆಕ್ಷನ್ ನಲ್ಲಿ ಸಂಚಾರ ಬಂದ್, ವಿಪರೀತ ಮಳೆಯ ಸಮಸ್ಯೆಯಿಂದ ಎಲ್ಲ ದರಗಳು ಗಗನಕ್ಕೆ ಏಣಿ ಹಾಕಿದೆ. ಒಂದೆಡೆ ಬಕ್ರೀದ್ ಹಬ್ಬದ ಆಚರಣೆ ಗೂ ಈ ವಿಚಾರಗಳು ಅಡ್ಡಿ ಮಾಡಿದೆ.

ಕರಾವಳಿಯ ನೆರೆಗೆ ಸಮರ್ಥ ಉತ್ತರ ನೀಡಿದ ಡಿಸಿ ಸೆಂಥಿಲ್

ಕರಾವಳಿಯಲ್ಲಿ ಸುರಿದ ಮಳೆ ಇಡೀ ಜಿಲ್ಲೆಯ ಜನತೆಗೆ ಭಯ ಹುಟ್ಟಿಸಿದ್ದು ನಿಜ. ಆದರೆ ಇಷ್ಟೆಲ್ಲ ಮಳೆ ಬರುತ್ತದೆ ಅದಕ್ಕೆ ಮೊದಲೇ ಎಚ್ಚರಗೊಳ್ಳಬೇಕು ಎನ್ನುವ ಕುರಿತು ಯೋಜನೆ ರೂಪಿಸಿದ ಕೀರ್ತಿ ಪೂರ್ತಿಯಾಗಿ ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಾಹೇಬ್ರಿಗೆ ಸಲ್ಲಬೇಕು.

ಕಾರಣ ಕಳೆದ ವರ್ಷದ ಮಳೆಯಿಂದ ಯಾರು ಪಾಠ ಕಲಿಯದೇ ಇದ್ದರೂ ಕೂಡ ಡಿಸಿ ಸೆಂಥಿಲ್ ಪೂರ್ಣ ಪಾಠ ಕಲಿಯುವ ಜತೆಗೆ ಅದಕ್ಕೆ ಬೇಕಾದ ಯೋಜನೆಯನ್ನು ಮಾಡುವ ಮೂಲಕ ಇಂಥ ಸಂಭಾವ್ಯ ದುರ್ಘಟನೆ ಎದುರಿಸಲು ದಕ್ಷಿಣ ಕನ್ನಡ ಜಿಲ್ಲೆ ಎಲ್ಲ ಸಿದ್ಧತೆ ಮಾಡಿತ್ತು ಎನ್ನುವುದು ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಪ್ರಕೃತಿ ವಿಕೋಪ, ಆಸ್ತಿಪಾಸ್ತಿಗೆ ಹಾನಿಯಾಗುವ ಸಾಧ್ಯತೆಗಳ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲೇ ಆಧುನಿಕ ಉಪಕರಣಗಳನ್ನು ಖರೀದಿಸಿ, ಅಗ್ನಿಶಾಮಕ ದಳಕ್ಕೆ ಒಪ್ಪಿಸಲಾಗಿತ್ತು.

ಮೇ ತಿಂಗಳಲ್ಲೇ ಅಧಿಕಾರಿಗಳ ಸಭೆ ಕರೆದು, ಭಾರಿ ಮಳೆಯಿಂದ ನದಿಗಳು ಉಕ್ಕುವ, ಕಡಲ್ಕೊರೆತ, ಕೈಗಾರಿಕೆಗಳಿಂದ ದುರಂತ, ಗ್ಯಾಸ್ ಟ್ಯಾಂಕರ್‌ಗಳ ಅವಘಡ, ಘಾಟಿ ರಸ್ತೆಗಳು ಕುಸಿಯುವ ಭೀತಿ ಮೊದಲಾದ ಅಪಾಯದ ಬಗ್ಗೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿ, ಪೂರಕ ಉಪಕರಣಗಳಿಂದ ಸಜ್ಜುಗೊಳಿಸಿದ್ದರು. ಎಲ್ಲರ ಫೋನ್ ನಂಬರ್‌ಗಳ ಪಟ್ಟಿ ಮಾಡಲಾಗಿತ್ತು.
ಜಿಲ್ಲಾಧಿಕಾರಿ ನಿಧಿಯಿಂದ ಆರು ಬೋಟ್, ನಾಲ್ಕು ಔಟ್ ಬೋರ್ಡ್ ಬೋಟ್‌ಗಳನ್ನು ಖರೀದಿಸಿದ್ದು, ಮುಳುಗಿದವರ ರಕ್ಷಣೆಗೆ ಮೂರು ಅಂಡರ್ ವಾಟರ್ ಡೈವಿಂಗ್ ಸೆಟ್, ಸೆಫ್ಟಿ ಬೆಲ್ಟ್, ನೈಲಾನ್ ಹಗ್ಗ, ಪೆಟ್ರೋಲ್ ಚಾಲಿತ ಮರ ಕಡಿಯುವ ಯಂತ್ರಗಳ ಸಹಿತ ಸಾಕಷ್ಟು ಸಲಕರಣೆಗಳ ಖರೀದಿಸಲಾಗಿತ್ತು.

ಕುಡ್ಲದ ಮಳೆಯಲ್ಲಿ ಮನಸ್ಸು ಗೆದ್ದವರು !

ಕರಾವಳಿಯ ಯಾವುದೇ ಭಾಗದಲ್ಲಿ ನೋಡಿದರೂ ಕೂಡ ಮಳೆ ಅಬ್ಬರ ಕಡಿಮೆಯಾಗುತ್ತಿಲ್ಲ. ನೆರೆ ಜತೆಗೆ ಪರಿಹಾರ ನೀಡುವ ಯುವಕರು, ಸಮಾಜದ ಜಾತಿ ಮತವನ್ನು ಲೆಕ್ಕಿಸದೇ ನೆರವಿಗೆ ಹಸ್ತ ಚಾಚುವ ಮಂದಿಯ ಮುಂದೆ ಈ ಎರಡು ತಂಡಗಳು ವಿಶೇಷವಾಗಿ ಗಮನ ಸೆಳೆದಿದೆ.
ಒಂದು ಎನ್‌ಡಿಆರ್‌ಎಫ್( ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ)ದ ಸಮರ್ಥ ಅಧಿಕಾರಿಗಳು ಹಾಗೂ ಉಳ್ಳಾಲದಲ್ಲಿ ಎಸ್‌ಕೆಎಸ್‌ಎಸ್‌ಎಫ್‌ನ ವಿಖಾಯ ತಂಡದವರು ಮಾಡುತ್ತಿರುವ ಕಾರ‍್ಯಕ್ಕೆ ಎಲ್ಲೆಡೆ ಶ್ಲಾಘನೆಯ ಮಾತುಗಳು ಕೇಳಿ ಬಂದಿದೆ. ಎನ್‌ಡಿಆರ್‌ಎಫ್ ತಂಡದವರು ನಿರಂತರರಾಗಿ ರಾತ್ರಿ ಹಗಲು ಜಿಲ್ಲೆಯ ನಾನಾ ಕಡೆ ಬೋಟಿನಲ್ಲಿ ಹೋಗಿ ನಿರಾಶ್ರಿತರನ್ನು ಕರೆದುಕೊಂಡು ಸುರಕ್ಷಿತ ಸ್ಥಳಕ್ಕೆ ಮುಟ್ಟಿಸುವ ಕೆಲಸ ಕೈಗೊಂಡರೆ ಮತ್ತೊಂದೆಡೆ ಉಳ್ಳಾಲದಲ್ಲಿ ಬಂದ ನೆರೆಗೆ ಎಸ್‌ಕೆಎಸ್‌ಎಸ್‌ಎಫ್‌ನ ವಿಖಾಯ ತಂಡದ ಸದಸ್ಯರು ಆಂಬುಲೆನ್ಸ್ ಜತೆಗೆ ನಿರಾಶ್ರಿತರ ಸೇವೆ ಮಾಡುವ ದೃಶ್ಯಗಳು ಕಾಣಿಸಿಕೊಂಡಿದೆ.