ಮಂಗಳೂರು,ಪುಣೆ, ಕಾಸರಗೋಡು: ಕೆಎಸ್ಸಾರ್ಟಿಸಿ ಅಂಬಾರಿ

ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಮಂಗಳೂರು-ಪುಣೆ ನಡುವೆ ಸೇವೆ ಆರಂಭಿಸಲಿರುವ ‘ಅಂಬಾರಿ ಡ್ರೀಮ್ ಕ್ಲಾಸ್ ಮಲ್ಲಿ ಆಕ್ಸ್‌ಲ್ ಎಸಿ ಸ್ಲೀಪರ್’ ಹಾಗೂ ಮಂಗಳೂರು- ಕಾಸರಗೋಡು ನಡುವೆ ನೂತನ ವೋಲ್ವೊ ಬಸ್‌ಗೆ ಚಾಲನೆ ಸಿಕ್ಕಿದೆ.

ಮಂಗಳೂರು ವಿಭಾಗದಲ್ಲಿ ಇದೇ ಮೊದಲ ಬಾರಿಗೆ 14.2ಮೀಟರ್ ಉದ್ದದ ವೋಲ್ವೊ ಸ್ಲೀಪರ್ ಗಾಡಿ ಪುಣೆಗೆ ಪ್ರಯಾಣ ಬೆಳೆಸಲಿದೆ. ಮಂಗಳೂರಿನಿಂದ ಪುಣೆಗೆ ತೆರಳುವ ಬಸ್ ಉಡುಪಿ, ಭಟ್ಕಳ, ಹೊನ್ನಾವರ, ಅಂಕೋಲ ಮಾರ್ಗವಾಗಿ ಸಂಚರಿಸುತ್ತದೆ. ಪ್ರತೀ ಒಬ್ಬ ಪ್ರಯಾಣಿಕರಿಗೆ 1350 ರೂ. ಪ್ರಯಾಣದರ ನಿಗದಿಪಡಿಸಲಾಗಿದೆ. ಪ್ರತೀ ದಿನ ಸಂಜೆ 4 ಗಂಟೆಗೆ ಮಂಗಳೂರಿನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 6.45 ಕ್ಕೆ ಪುಣೆ ತಲುಪಲಿದೆ. ಪುಣೆಯಿಂದ ಸಂಜೆ 6.30 ಗೆ ಹೊರಡುವ ಬಸ್ಸು ಮರುದಿನ ಬೆಳಗ್ಗೆ 9.15ಕ್ಕೆ ಮಂಗಳೂರು ತಲುಪಲಿದೆ .

ಅಂಬಾರಿ ವೈಶಿಷ್ಟ್ಯ: ಅಂಬಾರಿ ಡ್ರೀಮ್ ಮಲ್ಟಿ ಆಕ್ಸ್‌ಲ್ ಎಸಿ ಸ್ಲೀಪರ್ ಬಸ್ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. ಆರಾಮದಾಯಕ ಪ್ರಯಾಣ, ಸುಲಭ ಚಾಲನೆಗಾಗಿ ವಿದ್ಯುನ್ಮಾನ ನಿಯಂತ್ರಿತ ಸಸ್ಪೆನ್ಷನ್ಸ್, ಆಕರ್ಷಕ ಹಾಗೂ ಮೋಹಕ ಒಳಾಂಗಣ ವಿನ್ಯಾಸ, ವಿಸ್ತಾರವಾದ ಸ್ಥಳಾವಕಾಶ, ಪ್ರತ್ಯೇಕ ಮೊಬಲ್ ಚಾರ್ಜಿಂಗ್ ಪಾಯಿಂಟ್ಸ್, ನೀರಿನ ಬಾಟಲಿಗಳಿಗಾಗಿ ಸ್ಥಳ, ವಿಶಾಲ ಕಿಟಕಿ, ಮೇಲ್ಛಾವಣಿ ಕಿಟಕಿ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತು ನಿರ್ಗಮನ ಬಾಗಿಲುಗಳು, ಅಗ್ನಿ ಅನಾಹುತ ತಪ್ಪಿಸಲು ಫಯರ್ ಡಿಟೆಕ್ಷನ್ ಮತ್ತು ಸಪ್ರೆಶನ್ ಸಿಸ್ಟಮ್‌ಗಳ ಜೋಡಣೆ, ಶಕ್ತಿಯುತ ಮತ್ತು ಪರಿಣಾಮಕಾರಿ ಹವಾನಿಯಂತ್ರಕಗಳನ್ನು ಹೊಂದಿದೆ.

ವೇಳಾಪಟ್ಟಿ: ಮಂಗಳೂರಿನಿಂದ ಕಾಸರಗೋಡಿಗೆ ಮೊದಲ ಹಂತದಲ್ಲಿ ಎರಡು ಎಸಿ ವೋಲ್ವೊ ಬಸ್ ಕಾರ್ಯಾಚರಣೆ ಮಾಡಲಿದೆ. ಬೆಳಗ್ಗೆ 7 ಗಂಟೆ, 7.30, 7.45, 8, 10, 10.30, 10.45, 11.15, 2, 2.30, 2.45, 3.15, 6, 6.30ಕ್ಕೆ ಮತ್ತು ಕಾಸರಗೋಡಿನಿಂದ ಬೆಳಗ್ಗೆ 5.30, 5.55, 8.30, 9, 9.15, 9.45, 12, 12.30, 1, 1.30, 4.15, 4.45, 5.15 ಮತ್ತು 5.30ಕ್ಕೆ ಬಸ್ ಸಂಚರಿಸಲಿದೆ. ಮಂಗಳೂರಿನಿಂದ ಕಾಸರಗೋಡಿಗೆ ಕೇವಲ ಆರು ನಿಲುಗಡೆಯೊಂದಿಗೆ ಎರಡೂ ವಿಭಾಗದಿಂದ ಪ್ರತೀ ದಿನ 14ಟ್ರಿಪ್ ಎಸಿ ವೋಲ್ವೊ ಬಸ್ ಸಂಚರಿಸಲಿದ್ದು, ಪ್ರಯಾಣಿಕರೊಬ್ಬರಿಗೆ 75 ರೂ. ದರ ನಿಗದಿಪಡಿಸಲಾಗಿದೆ. ದಿನದ ಪಾಸಿಗೆ 130 ರೂ. ದರ ನಿಗದಿಪಡಿಸಲಾಗಿದ್ದು, ದಿನದಲ್ಲಿ ಎರಡು ಬಾರಿ ಪ್ರಯಾಣ ಮಾಡಬಹುದಾಗಿದೆ.

Share