ಕಡಲಿನ ಊರು ಕುಡ್ಲಕ್ಕೂ ದೂರದ ಜರ್ಮನಿ ದೇಶಕ್ಕೂ ಎಲ್ಲಿಯ ಎಲ್ಲಿಯ ಸಂಬಂಧ ಮಾರಾಯ್ರೆ. ಪ್ಲಾಸ್ಟಿಕ್ ಎನ್ನುವ ಬ್ರಹ್ಮ ರಾಕ್ಷಸನನ್ನು ಮುಗಿಸಲು ಜರ್ಮನಿಯ ಮಂದಿ ಮಾಡಿರುವ ಪ್ಲ್ಯಾನ್ ಮಂಗಳೂರಿನಲ್ಲೂ ವರ್ಕ್ ಔಟ್ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಬ್ರಿಕ್ಸ್‌ಗಳನ್ನು ಮಾಡಿಕೊಂಡು ಬೆಂಚು, ಕುರ್ಚಿ, ಹೂವಿನ ಚಟ್ಟಿ, ಆವರಣ ಗೋಡೆಗಳು ಕುಡ್ಲದಲ್ಲಿ ನಿರ್ಮಾಣ ಮಾಡುವ ಯೋಜನೆಯೊಂದು ರೂಪುಗೊಳ್ಳುತ್ತಿದೆ.
ಈಗಾಗಲೇ ಪ್ಲಾಸ್ಟಿಕ್ ಬ್ರಿಕ್ ಬೆಂಚುಗಳ ಕಲ್ಪನೆಗೆ ಪಜೀರು ಚರ್ಚ್‌ನ ಮೈದಾನದಲ್ಲಿ ಎರಡು ಪ್ಲಾಸ್ಟಿಕ್ ಬ್ರಿಕ್ಸ್ ಬೆಂಚುಗಳನ್ನು ನಿರ್ಮಾಣ ಮಾಡಲಾಗಿದೆ. ಮಂಗಳೂರಿನ ಸಿಒಡಿಪಿ ಸಂಸ್ಥೆಯ ಮುಂಭಾಗದಲ್ಲೂ ಇಂತಹ ಒಂದು ಬೆಂಚು ನಿರ್ಮಾಣವಾಗಿದೆ.
ಮಂಗಳೂರಿನ ಕ್ರೈಸ್ತಧರ್ಮ ಪ್ರಾಂತ್ಯದ ಅಧೀನದಲ್ಲಿರುವ ಸಿಒಡಿಪಿ ಸಂಸ್ಥೆಯ ಪ್ರತಿ ವರ್ಷನೂ ಜರ್ಮನಿ ಕಡೆಯಿಂದ ಇಬ್ಬರು ವಿದ್ಯಾರ್ಥಿಗಳು ಎರಡು ತಿಂಗಳ ಕಾಲ ಅಧ್ಯಯನಕ್ಕಾಗಿ ಬರುತ್ತಾರೆ. ಎರಡು ವರ್ಷಗಳ ಹಿಂದೆ ಜರ್ಮನಿಯಿಂದ ಬಂದ ಹೀಡಾ ಹಾಗೂ ಕಳೆದ ವರ್ಷ ಬಂದ ಜರ್ಮನಿಯ ಸೋಪಿಯಾ ಎಲ್‌ತಾಲ್ ಹಾಗೂ ಲಿಯೋನಿ ಅಲ್‌ವೆಲ್ ಜರ್ಮನಿ ದೇಶದಲ್ಲಿ ಪ್ಲಾಸ್ಟಿಕ್ ನಿಯಂತ್ರಣದ ಜತೆಗೆ ಅದರ ಬಳಕೆಯ ಕುರಿತಾಗಿ ಅಲ್ಲಿ ಮಾಡುತ್ತಿದ್ದ ಐಡಿಯಾವನ್ನು ಮಂಗಳೂರಿನ ಸಿಒಡಿಪಿ ಸಂಸ್ಥೆಯ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಟ್ಟರು ಇದರ ಜತೆಯಲ್ಲಿ ಇಂತಹ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಿದ ಬಳಿಕ ಇಲ್ಲೂ ಇಂತಹ ವ್ಯವಸ್ಥೆಯನ್ನು ಮಾಡಬಹುದು ಎನ್ನುವ ಕಲ್ಪನೆ ಹುಟ್ಟಿಕೊಂಡಿತು .
ಸಾಮಾನ್ಯವಾಗಿ ತಂಪು ಪಾನೀಯದ ಬಾಟಲಿಗಳನ್ನು ಬಳಸಿಕೊಂಡು ಈ ಪ್ಲಾಸ್ಟಿಕ್ ಬ್ರಿಕ್ಸ್ ಬೆಂಚುಗಳನ್ನು ನಿರ್ಮಾಣ ಮಾಡಲಾಗುತ್ತದೆ. ಮುಖ್ಯವಾಗಿ ಈ ಬಾಟಲಿಗಳ ಒಳಗಡೆ ಪ್ಲಾಸ್ಟಿಕ್‌ಗಳನ್ನು ಚಿಕ್ಕ ಚಿಕ್ಕ ಚೂರುಗಳಾಗಿ ತುರುಕಿಸಲಾಗುತ್ತದೆ. ಒಂದೂವರೆ ಲೀಟರ್‌ನ ಒಂದು ಬಾಟಲಿ ತುಂಬಿಸಲು ಭರ್ತಿ 8 ರಿಂದ 10 ಗಂಟೆಗಳ ಅವಧಿ ಬೇಕಾಗುತ್ತದೆ. ಪೂರ್ಣವಾಗಿ ತುಂಬಿಸಿದ ಬಳಿಕ ಈ ಬಾಟಲ್‌ಗಳು ಕಲ್ಲಿನಷ್ಟು ಗಟ್ಟಿಯಾಗುತ್ತದೆ. ಜರ್ಮನಿ ದೇಶದಲ್ಲಿ ಇದನ್ನು ಜಾಸ್ತಿಯಾಗಿ ಬಳಕೆ ಮಾಡಲಾಗುತ್ತಿದೆ .
ಆರಂಭದಲ್ಲಿ ಬೆಂಚು ಮಾಡಲು ಸಿಮೆಂಟ್‌ನ ತಳಪಾಯ ಮಾಡಬೇಕು ಇದರ ಬಳಿಕ ಪ್ಲಾಸ್ಟಿಕ್ ಚೂರು ತುಂಬಿಸಿದ ಬಾಟಲಿಗಳನ್ನು ಬೇಕಾದ ರೀತಿಯ ವಿನ್ಯಾಸಕ್ಕೆ ಹೊಂದಿಕೆಯಾಗುವಂತೆ ನಿಲ್ಲಿಸಬೇಕು. ಈ ಸಮಯದಲ್ಲಿ ಆವೆ ಮಣ್ಣಿನ ನೆರವು ಅಗತ್ಯ ಇರುತ್ತದೆ. ಎಲ್ಲ ಪ್ಲಾಸ್ಟಿಕ್ ಬಾಟಲಿಗಳನ್ನು ಇಟ್ಟ ಬಳಿಕ ಅದರ ಮೇಲ್ಭಾಗದಲ್ಲಿ ಸಿಮೆಂಟ್‌ನಿಂದ ಗಾರೆ ಮಾಡಿದರೆ ಸಾಕು. ಪ್ಲಾಸ್ಟಿಕ್ ಹೇಗೆ 450 ವರ್ಷಗಳ ಕಾಲ ಉಳಿಯುತ್ತದೆ ಅದೇ ಮಾದರಿಯಲ್ಲಿ ಈ ಬೆಂಚು, ಕುರ್ಚಿ,ಮನೆ, ಆವರಣಗೋಡೆ ಕೂಡ ಉಳಿಯುತ್ತದೆ.
Author: Team Kudla City
ಹೀರೋಯಿನ್‌ಗಳಂತೆ ಮಿಂಚಿದ ಹಳೆಯ ಸ್ಕೂಟರ್
ಹಳೆಯ ಸ್ಕೂಟರ್‌ಗಳು ಬಣ್ಣ ಬಳಿದುಕೊಂಡು ಹೀರೋಯಿನ್‌ಗಳಂತೆ ಲಕಲಕವಾಗಿ ಹೊಳೆಯುತ್ತಾ ರಸ್ತೆಗೆ ಇಳಿದರೆ ನೋಡುವ ಕಣ್ಣುಗಳಿಗೆ ಹಬ್ಬವೇ ಸರಿ. ಇಂದಿನ ಮುಂದುವರಿದ ತಾಂತ್ರಿಕವಾಗಿ ಅಪ್‌ಗ್ರೇಡ್ ಟೂ ವೀಲರ್‌ಗಳ ಮುಂದೆ ಹಳೆಯ ಸ್ಕೂಟರ್‌ಗಳ ಓಡುವ ಖದರೇ ಬೇರೆ ಇಂತಹ ಸ್ಕೂಟರ್‌ಗಳ ಪ್ರದರ್ಶನ ಮಂಗಳೂರಿನ ಕುದ್ರೋಳಿಯ ಸಮೀಪದ ಮೈದಾನದಲ್ಲಿ ಭಾನುವಾರ ನಡೆಯಿತು.
ಮಂಗಳೂರು ಕ್ಲಾಸಿಕ್ ಸ್ಕೂಟರ್ ಕ್ಲಬ್ ವತಿಯಿಂದ ಪ್ರಪ್ರಥಮ ಬಾರಿಗೆ ಈ ಪ್ರದರ್ಶನ ಆಯೋಜಿಸಲಾಗಿತ್ತು. ಎಂದೋ ಗುಜರಿ ಅಂಗಡಿ ಸೇರಬೇಕಿದ್ದ 2 ಸ್ಟ್ರೋಕ್ ಸ್ಕೂಟರ್‌ಗಳೆಲ್ಲ ಹೊಸ ಲುಕ್‌ನೊಂದಿಗೆ ಅಲ್ಲಿ ಕಂಗೊಳಿಸುತ್ತಿದ್ದವು. ಬರೋಬ್ಬರಿ 70 ವರ್ಷಗಳಷ್ಟು ಹಳೆಯ, 2-3 ತಲೆಮಾರುಗಳನ್ನು ದಾಟಿ ಬಂದ 1960 ರ ದಶಕದ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳು ನೋಡುಗರ ಆಕರ್ಷಣೆಗೆ ಕಾರಣವಾಯಿತು. ಮೂಲ ರಚನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ, ಕೇವಲ ಹೊಸ ಬಣ್ಣ- ಟೈರ್‌ಗಳೊಂದಿಗೆ ಈ ಸ್ಕೂಟರ್‌ಗಳನ್ನು ಅವುಗಳ ಮಾಲೀಕರು ಕಾಪಿಟ್ಟುಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 10,11 ರಾಜ್ಯಗಳನ್ನು ದಾಟಿ ಬಂದ ಸ್ಕೂಟರ್‌ಗಳಿಂದ ಹಿಡಿದು 2000 ಇಸವಿವರೆಗಿನ ಬಜಾಜ್ ಚೇತಕ್‌ವರೆಗೆ ಸುಮಾರು 80 ಕ್ಕೂ ಅಧಿಕ ಸ್ಕೂಟರ್‌ಗಳು ತಮ್ಮ ‘ದೇಹ ಸಿರಿ’ಯ ಪ್ರದರ್ಶನ ಮಾಡಿದವು. ನೂರಾರು ಮಂದಿ ಕುತೂಹಲದಿಂದ ಬಂದು ನೋಡಿ ಹಳೆ ಸ್ಕೂಟರ್‌ಗಳೊಂದಿಗೆ ಸೆಲ್ಫಿ ತೆಗೆದುಕೊಂಡರು. ಅಜ್ಜನ ಕಾಲದ ಸ್ಕೂಟರ್‌ಗಳನ್ನು ನೋಡಿ ಮಕ್ಕಳು ರೋಮಾಂಚನಗೊಂಡರು.
ಕುಡ್ಲದ ಟವರ್‌ಗೆ ಇಟಲಿಯ ಕ್ಲಾಕ್
ಮಂಗಳೂರಿನ ಸ್ಮಾರ್ಟ್ ಸಿಟಿಯ ನಾನಾ ಯೋಜನೆಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟ ಕುಡ್ಲ ಸಿಟಿಯ ಕ್ಲಾಕ್ ಟವರ್‌ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಟಿಕ್ ಟಿಕ್ ಸದ್ದು ಕೇಳಿಸಲಿದೆ. ಇದಕ್ಕೆ ಇಟಲಿ ಮೂಲದ ಯಂತ್ರಗಳನ್ನು ಆಳವಡಿಸಲಾಗಿದೆ ಎನ್ನುವುದು ವಿಶೇಷ.
ಮಂಗಳೂರಿನ ಮಾರ್ನಮಿಕಟ್ಟೆಯ ನಾಯಕ್ಸ್ ಟೈಮ್ ಸಂಸ್ಥೆಯ ಸತೀಶ್ ಚಂದ್ರ ನಾಯಕ್ ಹಾಗೂ ಅವರ ಪುತ್ರ ಸಿದ್ದಾಂತ್ ನಾಯಕ್ ಅವರು ಈ ಕ್ಲಾಕ್ ಟವರ್‌ಗೆ ಅಳವಡಿಸಲಾಗುವ ಕ್ಲಾಕ್‌ನ ಹಿಂದಿನ ಶಕ್ತಿಗಳು. ಮಂಗಳೂರು ಈಗಾಗಲೇ ಸ್ಮಾರ್ಟ್ ಸಿಟಿಯ 100 ನಗರಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಇದರ ಅಂಗವಾಗಿ ಮೊದಲ ಕ್ಲಾಕ್ ಟವರ್ ಯೋಜನೆ ಪೂರ್ಣವಾಗಿರುವುದು ಕುಡ್ಲದ ಜನಕ್ಕೆ ಖುಷಿ ನೀಡಲಿದೆ.
88 ಅಡಿ ಸುತ್ತಳತೆ ಹೊಂದಿರುವ ಈ ಕ್ಲಾಕ್‌ನಲ್ಲಿ ಬಳಕೆಯಾಗುವ ಯಂತ್ರೋಪಕರಣಗಳು ಎಲ್ಲವೂ ಇಟಲಿ ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ವಿಶೇಷವಾಗಿ 8 ನಾನಾ ಬಗೆಯ ಬೆಲ್ ಮಾಡುವ ಸಾಮರ್ಥ್ಯ ಇರುವ ಮೈಕ್ರೋ ಪ್ರೊಸೆಸರ್ ಕೂಡ ಇದ್ದರೂ ಭಾರತೀಯ ಜನತೆಗೆ ಇಷ್ಟವಾಗುವಂತಹ ಒಂದೇ ವಿಧದ ಬೆಲ್ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕ್ಲಾಕ್‌ಗೆ ಅಕ್ರೇಲಿಕ್ ಶೀಟ್, ಸ್ಟೈನ್‌ಲೆಸ್ ಸ್ಟೀಲ್ ಹಾಗೂ ಎಸಿಪಿ ಶೀಟ್‌ಗಳನ್ನು ಬಳಸಿಕೊಂಡು ಸಿದ್ಧಪಡಿಸಿಕೊಂಡಿದ್ದು, ಈಗಾಗಲೇ ಗೋಪುರದ ನಾಲ್ಕು ಮೂಲೆಗಳಲ್ಲಿ ನಾಲ್ಕು ಕ್ಲಾಕ್‌ನ ಮಾದರಿಗಳಿಗೆ ನಾಲ್ಕು ಯಂತ್ರಗಳನ್ನು ಆಳವಡಿಸುವ ಕೆಲಸ ಮುಂದಿನ ವಾರದಿಂದ ಸಾಗಲಿದೆ.
ನಾಯಕ್ಸ್ ಟೈಮ್ಸ್‌ನ ಮಾಲೀಕ ಸತೀಶ್ ಚಂದ್ರ ನಾಯಕ್ ಹೇಳುವಂತೆ ಇದೊಂದು ವಿಶಿಷ್ಟವಾದ ಗಡಿಯಾರ. ಕಳೆದ ಮೂರು ತಿಂಗಳುಗಳಿಂದ ಇದರ ಕೆಲಸಗಳು ಆರಂಭವಾಗಿದ್ದು, ಮುಖ್ಯವಾದ ಕೆಲಸಗಳೆಲ್ಲವೂ ಪೂರ್ಣಗೊಂಡಿದ್ದು, ಮುಂದಿನ ಒಂದು ವಾರದಲ್ಲಿ ಕುಡ್ಲದ ಜನರಿಗೆ ಸಮಯ ನೋಡುವ ಅವಕಾಶ ಸಿಗಲಿದೆ. ಇಟಲಿಯಿಂದ ಮೈಕ್ರೋ ಪ್ರೋಸೆಸರ್‌ವನ್ನು ತಂದಿರುವುದರಿಂದ ಸಮಯದ ಸದ್ದು ಕೂಡ ವಿಶಿಷ್ಟವಾಗಿ ಕೇಳಿಸಲಿದೆ. ಪ್ರತಿ ಗಂಟೆಯ ಪ್ರಕಾರ ಬೆಲ್ ಹಾಗೂ ಅರ್ಧ ಗಂಟೆಗೆ ಸಿಂಗಲ್ ಬೆಲ್ ಕೇಳಿಸಲಿದೆ. 75 ಅಡಿ ಎತ್ತರ 14 ಅಡಿ ಅಗಲದಲ್ಲಿ ಈ ಗಡಿಯಾರ ಕೂರಲಿದೆ. ಈ ಹಿಂದೆ 45 ಅಡಿ ಎತ್ತರದಲ್ಲಿ ಈ ಗಡಿಯಾರ ಕಾಣಿಸಿಕೊಂಡಿತ್ತು. ಹೊಸ ಗಡಿಯಾರಕ್ಕೆ ವಿದ್ಯುತ್ ಬೇಕಾಗುತ್ತದೆ. ಮೂರು ಬ್ಯಾಟರಿಗಳನ್ನು ಇಡಲಾಗುತ್ತದೆ. 400 ವ್ಯಾಟ್ ಸಾಮರ್ಥ್ಯ ಇರುವ ಎಲ್‌ಇಡಿ ಬಲ್ಬ್‌ಗಳನ್ನು ಗಡಿಯಾರದ ಒಳಭಾಗದಲ್ಲಿ ಅಳವಡಿಸುವ ಕೆಲಸ ಸಾಗಲಿದೆ .
ಭೂಮಿ ಉಳಿಸಲು ವಿಶಿಷ್ಟ ಪ್ರತಿಭಟನೆ
ಇಡೀ ವಿಶ್ವವೇ ಗ್ಲೋಬಲ್ ವಾರ್ಮಿಂಗ್ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುತ್ತಿದೆ. ಭೂಮಿಯ ಮೇಲೆ ಮನುಷ್ಯ ನ ಉಪಟಳ ಜಾಸ್ತಿಯಾಗುತ್ತಿದೆ. ನೀರು,ವಾಯು, ಪರಿಸರದ ಎಲ್ಲ ಮೂಲ ಗಳು ಹಾಳಾಗುತ್ತಿದೆ. ಈ ವಿಚಾರದಲ್ಲಿ ಮಂಗಳೂರಿನ ಪ್ರಜ್ಣಾವಂತ ನಾಗರಿಕರು ಮಂಗಳೂರು ಮಹಾ ನಗರ ಪಾಲಿಕೆಯ ಮುಂದೆ ನಿಂತು ತಮ್ಮ ಪ್ರತಿಭಟನೆ ಯನ್ನು ವ್ಯಕ್ತಪಡಿಸಿದರು. ವಿಶೇಷ ಎಂದರೆ ಬರೀ ದೊಡ್ಡವರು ಮಾತ್ರವಲ್ಲ ಪುಟಾಣಿ ಮಕ್ಕಳು ಕೂಡ ಅವರಿಗೆ ಜತೆ ನೀಡಿದರು.
ಸಿಟಿಯಲ್ಲಿ ಹಕ್ಕಿಗಳಿಗೆ ಗೂಡು ಕಟ್ಟಿದ ಹುಡುಗ
ನಗರ ಬೆಳೆಯುತ್ತಾ ಸಾಗುತ್ತಿದ್ದಂತೆ ಪಕ್ಷಿ,ಪ್ರಾಣಿಗಳ ಸಂತತಿ ಇಳಿಮುಖವಾಗುತ್ತಿರುವ ದೃಶ್ಯಗಳು ದಿನನಿತ್ಯನೂ ನಗರವಾಸಿಗಳು ಗಮನಕ್ಕೆ ಬಂದಿರಬಹುದು. ಬೆಳಗ್ಗೆ ಎದ್ದಾಗ ಹಕ್ಕಿಗಳ ಕಲರವ ಕೂಡ ಕಡಿಮೆಯಾಗುತ್ತಿದೆ. ಇಂತಹ ಹತ್ತಾರು ದೃಶ್ಯಗಳನ್ನು ನೋಡಿದ ಕುಡ್ಲ ಸಿಟಿಯ ಹುಡುಗ ತೌಸಿಫ್ ಅಹಮ್ಮದ್ ಅವರು ಪೈಪ್‌ಗಳ ಮೂಲಕ ಗೂಡು ಕಟ್ಟಿ ಪಕ್ಷಿಗಳ ಸಂತತಿ ಉಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಮಂಗಳೂರು ಅನಿಮಲ್ ಕೇರ್ ಟ್ರಸ್ಟ್‌ನ ಸಕ್ರೀಯ ಸದಸ್ಯ ತೌಸಿಫ್ ಅಹಮ್ಮದ್ ಕುಡ್ಲ ಸಿಟಿಯ ಪಕ್ಷಿಗಳ ಮೇಲೆ ವಿಶೇಷವಾದ ಕಾಳಜಿ ಬೆಳೆಸಿಕೊಂಡಿದ್ದಾರೆ. ತೌಸಿಫ್ ಹೇಳುವಂತೆ ನಗರ ಪ್ರದೇಶದಲ್ಲಿ ಪಕ್ಷಿಗಳಿಗೆ ನೆಮ್ಮದಿಯಿಂದ ಗೂಡು ಕಟ್ಟಲು ಕೂಡ ಸಾಧ್ಯವಾಗುತ್ತಿಲ್ಲ.
ನಗರದ ಕಾಂಕ್ರೀಟ್ ಬದುಕಿನಿಂದಾಗಿ ಹಕ್ಕಿಗಳು ಎಸಿ ಬಾಕ್ಸ್ ಅಥವಾ ಎಲೆಕ್ಟ್ರಾನಿಕ್ ಬಾಕ್ಸ್‌ಗಳ ನಡುವೆ ಗೂಡು ಕಟ್ಟಿಕೊಂಡು ಬಿಡುತ್ತದೆ. ಈ ಕಾರಣದಿಂದ ಹಕ್ಕಿಗಳು ಸಾಯುವ ಘಟನೆಗಳು ಜಾಸ್ತಿಯಾಗುತ್ತಿದೆ. ಎಲೆಕ್ಟ್ರಾನಿಕ್ ಶಾಕ್‌ನಿಂದಾಗಿ ತಾಯಿ ಹಕ್ಕಿ ಮೃತಪಟ್ಟಿದೆ ಮರಿಗಳು ತಾವು ದಯವಿಟ್ಟು ಕೊಂಡೋಗಿ ಬದುಕು ಕೊಡಿ ಎನ್ನುವ ಮನವಿಗಳೇ ಜಾಸ್ತಿಯಾಗಿ ಬರುತ್ತಿದೆಯಂತೆ.
ಇದಕ್ಕಾಗಿ 20 ಅಡಿ ಉದ್ದದ ಪಿವಿಸಿ ಪೈಪ್‌ವನ್ನು 2.5ಅಡಿ ಉದ್ದಕ್ಕೆ ಕತ್ತರಿಸಿಕೊಂಡು ಎರಡು ಬದಿಗೂ ಕ್ಯಾಪ್ ಹಾಕಿಕೊಂಡು ಮುಚ್ಚಲಾಗುತ್ತದೆ. ಈ ಬಳಿಕ 2.5 ಅಡಿ ಉದ್ದದ ಪೈಪ್‌ಗೆ ಮೂರು ರಂಧ್ರಗಳನ್ನು ಕೊರೆದು ನಂತರ ಅದನ್ನು ಮನೆಯ ಯಾವುದೇ ಭಾಗದಲ್ಲಿ ಇಟ್ಟರೆ ಸಾಕು. ಹಕ್ಕಿಗಳು ಬಂದು ಅಲ್ಲಿ ಗೂಡು ಕಟ್ಟುತ್ತದೆ ಎನ್ನುತ್ತಾರೆ ತೌಸಿಫ್.




