ಕರಾವಳಿಯಲ್ಲಿ ಸುರಿದ ಮಳೆ ಇಡೀ ಜಿಲ್ಲೆಯ ಜನತೆಗೆ ಭಯ ಹುಟ್ಟಿಸಿದ್ದು ನಿಜ. ಆದರೆ ಇಷ್ಟೆಲ್ಲ ಮಳೆ ಬರುತ್ತದೆ ಅದಕ್ಕೆ ಮೊದಲೇ ಎಚ್ಚರಗೊಳ್ಳಬೇಕು ಎನ್ನುವ ಕುರಿತು ಯೋಜನೆ ರೂಪಿಸಿದ ಕೀರ್ತಿ ಪೂರ್ತಿಯಾಗಿ ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಾಹೇಬ್ರಿಗೆ ಸಲ್ಲಬೇಕು.
ಕಾರಣ ಕಳೆದ ವರ್ಷದ ಮಳೆಯಿಂದ ಯಾರು ಪಾಠ ಕಲಿಯದೇ ಇದ್ದರೂ ಕೂಡ ಡಿಸಿ ಸೆಂಥಿಲ್ ಪೂರ್ಣ ಪಾಠ ಕಲಿಯುವ ಜತೆಗೆ ಅದಕ್ಕೆ ಬೇಕಾದ ಯೋಜನೆಯನ್ನು ಮಾಡುವ ಮೂಲಕ ಇಂಥ ಸಂಭಾವ್ಯ ದುರ್ಘಟನೆ ಎದುರಿಸಲು ದಕ್ಷಿಣ ಕನ್ನಡ ಜಿಲ್ಲೆ ಎಲ್ಲ ಸಿದ್ಧತೆ ಮಾಡಿತ್ತು ಎನ್ನುವುದು ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಪ್ರಕೃತಿ ವಿಕೋಪ, ಆಸ್ತಿಪಾಸ್ತಿಗೆ ಹಾನಿಯಾಗುವ ಸಾಧ್ಯತೆಗಳ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲೇ ಆಧುನಿಕ ಉಪಕರಣಗಳನ್ನು ಖರೀದಿಸಿ, ಅಗ್ನಿಶಾಮಕ ದಳಕ್ಕೆ ಒಪ್ಪಿಸಲಾಗಿತ್ತು.
ಮೇ ತಿಂಗಳಲ್ಲೇ ಅಧಿಕಾರಿಗಳ ಸಭೆ ಕರೆದು, ಭಾರಿ ಮಳೆಯಿಂದ ನದಿಗಳು ಉಕ್ಕುವ, ಕಡಲ್ಕೊರೆತ, ಕೈಗಾರಿಕೆಗಳಿಂದ ದುರಂತ, ಗ್ಯಾಸ್ ಟ್ಯಾಂಕರ್‌ಗಳ ಅವಘಡ, ಘಾಟಿ ರಸ್ತೆಗಳು ಕುಸಿಯುವ ಭೀತಿ ಮೊದಲಾದ ಅಪಾಯದ ಬಗ್ಗೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿ, ಪೂರಕ ಉಪಕರಣಗಳಿಂದ ಸಜ್ಜುಗೊಳಿಸಿದ್ದರು. ಎಲ್ಲರ ಫೋನ್ ನಂಬರ್‌ಗಳ ಪಟ್ಟಿ ಮಾಡಲಾಗಿತ್ತು.
ಜಿಲ್ಲಾಧಿಕಾರಿ ನಿಧಿಯಿಂದ ಆರು ಬೋಟ್, ನಾಲ್ಕು ಔಟ್ ಬೋರ್ಡ್ ಬೋಟ್‌ಗಳನ್ನು ಖರೀದಿಸಿದ್ದು, ಮುಳುಗಿದವರ ರಕ್ಷಣೆಗೆ ಮೂರು ಅಂಡರ್ ವಾಟರ್ ಡೈವಿಂಗ್ ಸೆಟ್, ಸೆಫ್ಟಿ ಬೆಲ್ಟ್, ನೈಲಾನ್ ಹಗ್ಗ, ಪೆಟ್ರೋಲ್ ಚಾಲಿತ ಮರ ಕಡಿಯುವ ಯಂತ್ರಗಳ ಸಹಿತ ಸಾಕಷ್ಟು ಸಲಕರಣೆಗಳ ಖರೀದಿಸಲಾಗಿತ್ತು.