Tagged: kuldacity

ತುಳುನಾಡಿನ ಯುವಕರ ತುಳು ಅಪ್ಪೆಯ ಸೇವೆ

ತುಳುನಾಡಿನ ಜೈ ತುಳುನಾಡ್ (ರಿ.) ಸಂಘಟನೆಯ ಸದಸ್ಯರು ತುಳು ಲಿಪಿಯ ಜಾಗೃತಿಯನ್ನು ವಿಶಿಷ್ಟ ರೀತಿಯಲ್ಲಿ ಆಂದೋಲನದಂತೆ ಮುಂದುವರಿಸುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿರುವ ತುಳುನಾಡಿನ ಊರಿನ ಹೆಸರಿನ ಜತೆಯಲ್ಲಿ ತುಳು ಲಿಪಿಯಲ್ಲೂ ಇದರ ಮಾಹಿತಿಯ ಕಾರ‍್ಯವಂತೂ ನಡೆಯುತ್ತಿದೆ. ಅಂದಹಾಗೆ ಯುವ ಕೇಸರಿ ಕೊಯ್ಕುಡೆ ಎಂಬ ಸಂಘದ ನೇತೃತ್ವದಲ್ಲಿ ಪ್ರಪ್ರಥಮ ತುಳು ಲಿಪಿ ನಾಮಫಲಕವನ್ನು ಮುಲ್ಕಿಯ ಕೊಯ್ಕುಡೆ ಎಂಬ ಊರಿನಲ್ಲಿ ಹಾಕುವ ಮೂಲಕ ತುಳು ಲಿಪಿಯ ಜಾಗೃತಿಯಲ್ಲಿ ಕೆಲಸ ಮಾಡಿದ್ದಾರೆ.

ಇದರ ಜತೆಯಲ್ಲಿ ಮುಂದೆಯೂ ಊರಿನ ಹೆಸರುಗಳು ಸೇರಿದಂತೆ ಹಂತ ಹಂತವಾಗಿ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ, ಅಂಗಡಿ-ಕಂಪೆನಿ, ವಾಹನ ಸೇರಿದಂತೆ ಎಲ್ಲ ಕಡೆ ತುಳು ಲಿಪಿಯ ಬಳಕೆಯನ್ನು ಹೆಚ್ಚಾಗಿ ಬಳಸುವಂತೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುವ ಮೂಲಕ ತುಳುನಾಡಿನ ಜೈ ತುಳುನಾಡಿನ ಸಂಘಟನೆಯ ಯುವಕರು ಪೂರ್ಣ ಪ್ರಮಾಣದಲ್ಲಿ ತುಳು ಅಪ್ಪೆಯ ಸೇವೆಯಲ್ಲಿ ಸಂತೃಪ್ತಿಯ ಭಾವವನ್ನು ಕಾಣುತ್ತಿದ್ದಾರೆ.

ಕುಡ್ಲದಲ್ಲಿ ಪರಿಚಯವಾದ ಚಾಂದಿನಿ ಮೀನು !

ಮಳೆಗಾಲದಲ್ಲಿ ಮೀನು ಮಾರುಕಟ್ಟೆಯಲ್ಲಿ ಸಮುದ್ರದ ತಾಜಾ ಮೀನು ವಿರಳವಾಗುತ್ತಿದ್ದಂತೆ ಹೊಳೆ ಮೀನುಗಳು ಬರಲಾರಂಭಿಸುತ್ತವೆ. ಈಗ ಉತ್ತರ ಕನ್ನಡ ಕಡೆಯ ಡ್ಯಾಮ್‌ಗಳಲ್ಲಿ ಗಾಳ ಹಾಕಿ ಹಿಡಿಯಲಾಗುವ ಅಪರೂಪದ ಚಾಂದಿನಿ ಮೀನು ಮಾರುಕಟ್ಟೆಗೆ ಬರಲಾರಂಭವಾಗಿದೆ.
ಇದು ನೋಡಲು ಸಮುದ್ರದ ಕೆಂಬೇರಿ ಮೀನಿನ ಮಾದರಿಯದ್ದು. ರುಚಿಯಲ್ಲೂ ಅದೇ ಹೋಲಿಕೆ. ಹಾಗಾಗಿ ತಾಜಾ ಚಾಂದಿನಿ ಮೀನನ್ನು ಗ್ರಾಹಕರು ಇಷ್ಟಪಡುವಂತಾಗಿದೆ. ಹೊಟೇಲುಗಳಲ್ಲಿಯೂ ಈ ಮೀನು ಬೇಡಿಕೆ ಗಳಿಸಿದೆ.
ಕೆಜಿಯೊಂದಕ್ಕೆ 300 ರೂ. ಬೆಲೆ ಇದೆ. ಸುಮಾರು 3 ಕೆಜಿಯಷ್ಟು ತೂಕದ ಮೀನು ಕೂಡ ಮೀನು ಮಾರಾಟ ಮಹಿಳೆಯ ಬಳಿ ಕಾಣಸಿಕ್ಕಿದೆ. ಸಿಹಿ ನೀರಿನ ಬಲು ಅಪರೂಪದ ಈ ಮೀನನ್ನು ಒಳನಾಡಿನ ಕೆಲವೆಡೆ ಕೃಷಿ ಮಾಡುತ್ತಾರೆ. ವ್ಯಾಪಾರಿಗಳು ತರಿಸಿ ವ್ಯಾಪಾರ ಮಾಡುತ್ತಿದ್ದಾರೆ. ಒಮ್ಮೆ ಖರೀದಿಸಿದ ಮಂದಿ ಮತ್ತೆ ಕೇಳುತ್ತಿದ್ದಾರೆ ಎನ್ನುವುದು ಫಿಶ್ ಮಾರ್ಕೆಟ್‌ನವರ ಮಾತು.

ಕುಡ್ಲದ ಬ್ಯೂಟೆಸ್ಟ್ ಬೀಚ್ ತಣ್ಣೀರು ಬಾವಿ ಯಾಕೆ ?

ಮಂಗಳೂರಿನ ಎಲ್ಲ ಬೀಚ್‌ಗಳು ಸುಂದರ ಎನ್ನುವ ಮಾತಿನಿಂದ ಆರಂಭಿಸುವುದಾದರೆ ತಣ್ಣೀರು ಬಾವಿ ಬೀಚ್ ಎಲ್ಲಕ್ಕಿಂತ ಹೆಚ್ಚು ಸುಂದರ ಎನ್ನುವುದು ಲೋಕಲ್ ಜತೆಗೆ ವಿದೇಶಿ ಪ್ರವಾಸಿಗರ ಮಾತು.
ಇಲ್ಲಿನ ಸೌಂದರ್ಯತೆಗೆ ಬಹುಮುಖ್ಯವಾದ ಕಾರಣಕ್ಕೆ ನಿರ್ದಿಷ್ಟವಾದ ಉತ್ತರ ಇಲ್ಲದೇ ಹೋದರೂ ಪ್ರೇಮಿಗಳಿಂದ ಹಿಡಿದು ಕುಟುಂಬ ವರ್ಗಕ್ಕೂ ಈ ಬೀಚ್ ಇಷ್ಟವಾಗುವಂತಿದೆ.
ತಣ್ಣನೆಯ ಗಾಳಿ ಅಲೆಗಳ ಅಬ್ಬರದೊಳಗೆ ಮುಳುಗುವ ಸೂರ್ಯನ ಬಿಂಬವನ್ನು ಕಾಣಬೇಕಾದರೆ ತಣ್ಣೀರು ಬಾವಿ ಬೀಚ್‌ಗೆ ಭೇಟಿ ನೀಡಿ. ವಿಶೇಷವಾಗಿ ಬಸ್‌ಗಳ ಸೌಕರ್ಯ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದೇ ಹೋದರೂ ಕೂಡ ಸುಲ್ತಾನ್ ಬತ್ತೇರಿಯ ಮೂಲಕ ಪ್ರಯಾಣಿಕರ ಹಡಗಿನ ಮೂಲಕ ಹೋಗಬಹುದು. ಸ್ವಂತ ವಾಹನ ಇದ್ದರೆ ಕೂಳೂರು ಕಡೆಯಿಂದ ತಣ್ಣೀರು ಬಾವಿ ಬೀಚ್‌ಗೆ ಪ್ರಯಾಣ ಬೆಳೆಸಬಹುದು.

ರಾಜ್ಯದಲ್ಲಿರುವ ಏಕೈಕ ಹಡಗು ಚರ್ಚ್ ಗೊತ್ತಾ..?

ರಾಜ್ಯದ ಚರ್ಚ್‌ಗಳಲ್ಲಿ ಅತೀ ವಿಶಿಷ್ಟ ಚರ್ಚ್ ಎಂದರೆ ಅದು ಉಡುಪಿ ಕಲ್ಮಾಡಿ ಸ್ಟೆಲ್ಲಾ ಮಾರೀಸ್ ಚರ್ಚ್ ಎನ್ನಲಾಗುತ್ತಿದೆ. ಕಾರಣ ಈ ಚರ್ಚ್‌ನ ಕಟ್ಟಡವೇ ಹಡಗಿನ ರೂಪದಲ್ಲಿದೆ. ಇದನ್ನು ಸಮುದ್ರ ತಾರೆ ಎಂದೇ ಕರೆಯಲಾಗುತ್ತದೆ. ಮಲ್ಪೆ ಬಂದರಿನ ಸಮೀಪದಲ್ಲಿರುವುದರಿಂದ ಇದು ಹಡಗಿನ ರೂಪದ ಚರ್ಚ್ ಆಗಿ ನಿರ್ಮಾಣ ಮಾಡಲಾಗಿದೆ.
ಉಡುಪಿ- ಮಲ್ಪೆ ಕಡೆಗೆ ಹೋಗುವ ಬಸ್‌ಗಳು ಕಲ್ಮಾಡಿ ಮೂಲಕವೇ ಹಾದು ಹೋಗಬೇಕಾಗುತ್ತದೆ. ವೆಲಂಕಣಿ ಮಾತೆಯನ್ನು ಇಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ.

ಮಂಗಳೂರು ಟೈಲ್ಸ್ ಎಂದರೆ ಅದು ವರ್ಲ್ಡ್ ಫೇಮಸ್

ಕರ್ನಾಟಕದಲ್ಲಿ ಹೊಸ ಮಾದರಿಯ “ಮಂಗಳೂರು ಹಂಚು”ಗಳೆಂದು ವಿಶ್ವದಾದ್ಯಂತ ಪ್ರಖ್ಯಾತಗೊಂಡಿರುವ ಹಂಚುಗಳನ್ನು ಪ್ರಥಮವಾಗಿ ತಯಾರಿಸಿದ ಕೀರ್ತಿ “ಬಾಸೆಲ್ ಮಿಷನ್” ಸಂಸ್ಥೆಗೆ ಸಲ್ಲುತ್ತದೆ.
ಬಾಸೆಲ್ ಮಿಷನ್ ಎಂಬುದು ಕ್ರಿ.ಶ. 1815 ರಲ್ಲಿ ಸ್ವಿಝರ್ಲೆಂಡ್ ದೇಶದ ಬಾಸೆಲ್ ಎಂಬ ಪಟ್ಟಣದಲ್ಲಿ ಪ್ರಾರಂಭವಾಗಿ ಕ್ರಿ ಶ. 1834 ರಲ್ಲಿ ದಕ್ಷಿಣಕನ್ನಡದಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸಿದ ಒಂದು ಸೇವಾ ಸಂಸ್ಥೆ. ಅದು ಹಿಂದಿನ ದಕ್ಷಿಣಕನ್ನಡ ಜಿಲ್ಲೆಯ (ಉಡುಪಿ ಜಿಲ್ಲೆ ಸಹಿತ) ಮಂಗಳೂರಿನ ಜಪ್ಪು ಎಂಬಲ್ಲಿ ಕ್ರಿ.ಶ. 1865 ರಲ್ಲಿ ಪ್ರಥಮ ಹಂಚಿನ ಕಾರ್ಖಾನೆಯನ್ನು ಸ್ಥಾಪಿಸುವ ಮೂಲಕ 135 ವರ್ಷಗಳಷ್ಟು ದೀರ್ಘಕಾಲದ ಇತಿಹಾಸವುಳ್ಳ ಒಂದು ಹಿರಿಯ ಕೈಗಾರಿಕೆಯು ಕರ್ನಾಟಕದಲ್ಲಿ ಪ್ರಾರಂಭವಾಗಲು ಕಾರಣವಾಗಿದೆ.
ಜೆಪ್ಪುವಿನಲ್ಲಿ ಪ್ರಾರಂಭಿಸಿದ ಹಂಚಿನ ಕಾರ್ಖಾನೆಗೆ ಸಾರ್ವಜನಿಕರಿಂದ ಭಾರಿ ಬೆಂಬಲ ವ್ಯಕ್ತವಾಗಿ ಜನರ ಬೇಡಿಕೆಯನ್ನು ಪೂರೈಸಲು ಬಾಸೆಲ್ ಮಿಷನ್‍ಗೆ ಅಸಾಧ್ಯವಾದಾಗ ಕ್ರಿ.ಶ. 1882ರಲ್ಲಿ ಆರ್ ಹೌರೀ ಮತ್ತು ಜಿ. ಫ್ರಾಂಕೇ ಎಂಬವರ ಹಿರಿತನದಲ್ಲಿ ಮಂಗಳೂರಿನ ಕುದ್ರೋಳಿ ಎಂಬಲ್ಲಿ ಬಾಸೆಲ್ ಮಿಷನ್ ತನ್ನ ಎರಡನೆ ಹಂಚಿನ ಕಾರ್ಖಾನೆಯನ್ನು ಸ್ಥಾಪಿಸಿತು.
ಮುಂದೇ ದಕ್ಷಿಣ ಕನ್ನಡ ಜಿಲ್ಲೆಯ (ಉಡುಪಿದಾಗ ಸಹಿತ) ಉತ್ತರಭಾಗದಲ್ಲಿ ಬಾಸೆಲ್ ಮಿಷನ್ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದಾಗ ಉಡಿಪಿಯ ಮಲ್ಪೆ ಎಂಬಲ್ಲಿ ಬೌಮನ್ ಮತ್ತು ಗ್ಲೇಟ್ ಫೀಲ್ಡರ್ ರ ಮುಂದಾಳುತನದಲ್ಲಿ ಕ್ರಿ.ಶ. 1886 ರಲ್ಲಿ ಬಾಸೆಲ್ ಮಿಷನ್ ತನ್ನ 3ನೇ ಕಾರ್ಖಾನೆಯನ್ನು ಪ್ರಾರಂಭಿಸಿತು. ಆದರೆ ಇದು ಕ್ರಿ.ಶ. 1888 ರಲ್ಲಿ ತನ್ನ ಉತ್ಪಾದನೆ ಪ್ರಾರಂಭಿಸಿತು.