Tagged: citykudla

ಶಾಸಕರ ತಂದೆಯ ಸರಳತೆಗೆ ಎಲ್ಲರೂ ಫಿದಾ !

ಬಿಳಿ ಶರ್ಟ್ ತೊಟ್ಟು, ಲುಂಗಿಯನ್ನು ಮಡಚಿ ಮೊಣಕಾಲಗುಂಟ ಕಟ್ಟಿಕೊಂಡು, ಹಾಲಿನ ಕ್ಯಾನ್‌ನ್ನು ಸೈಕಲ್‌ಗೆ ಸಿಕ್ಕಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ವಯೋವೃದ್ಧರೊಬ್ಬರು ಕೆಲದಿನಗಳಿಂದ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಅವರ ಫೋಟೋ ಟ್ವಿಟರ್, ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿವೆ. ಇಷ್ಟಕ್ಕೂ ಅವರು ಯಾರು?
ಬೆಳ್ತಂಗಡಿ ಶಾಸಕ , ಬಿಜೆಪಿ ನಾಯಕ ಹರೀಶ್ ಪೂಂಜಾತಂದೆ ಇವರು. ಗರ್ಡಾಡಿ ಗ್ರಾಮದ ನಿವಾಸಿಯಾಗಿರುವ ಮುತ್ತಣ್ಣಪೂಂಜಾ, 74 ಬಿಳಿ ಶರ್ಟ್, ಲುಂಗಿ ಧರಿಸಿಕೊಂಡು ಹಾಲಿನ ಕ್ಯಾನ್‌ನ್ನು ಸೈಕಲ್‌ಗೆ ಸಿಕ್ಕಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ಚಿತ್ರ ಎಲ್ಲೆಡೆ ವೈರಲ್ ಆಗುತ್ತಿದೆ. ಮಗ ಶಾಸಕನಾದರೂ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳದೆ ಹಿಂದಿನಂತೆ ಸರಳತೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಮುತ್ತಣ್ಣ ಅವರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಈ ಹಿಂದೆ ಬೀಡಿ ತಯಾರಿಕಾ ಘಟಕವನ್ನು ಹೊಂದಿದ್ದೆವು. ಆಗ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದೆ. ಡೈರಿಗೆ ಹಾಲು ಹಾಕಿ ಬರಲು ಇತ್ತೀಚಿನವರೆಗೆ ಸೈಕಲ್ ಮೇಲೆ ಹೋಗುತ್ತಿದ್ದೆ. ಕೆಲ ದಿನಗಳಿಂದ ನೆರೆಮನೆಯವರು ಸ್ಕೂಟಿಯಲ್ಲಿ ಡ್ರಾಫ್ ಕೊಡುತ್ತಾರೆ ಎನ್ನುತ್ತಾರೆ ಮುತ್ತಣ್ಣ.

ಮೀನುಗಾರನ ಬಲೆಗೆ ಬಿದ್ದ ಬಿಗ್ ತೊರಕೆ‌ ಮೀನು!

ಒಂದಲ್ಲ ಎರಡಲ್ಲ ಭರ್ತಿ 1200 ಕೆಜಿ ತೂಕದ ತೊರಕೆ‌‌ ಮೀನು ಮಲ್ಪೆ ಮೀನುಗಾರ ಮಿಥುನ್ ಕುಂದರ್ ಅವರ ಬಲೆಗೆ ಶನಿವಾರ ಬಿದ್ದಿದೆ.

ಮಿಥುನ್ ಕುಂದರ್ ಅವರ ಮಾಲೀಕತ್ವದ ವಿಘ್ನರಾಜ್ -2 ಆಳ‌ಸಮುದ್ರಗಾರಿಕೆಯ ಬೋಟಿನ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದಾಗ ಅವರಿಗೆ ಸಿಕ್ಕಿದೆ. ವಿಶೇಷವಾಗಿ ಇದನ್ನು ಮಂಗಳೂರಿನ ಒಣ ಮೀನು ವ್ಯಾಪಾರಿಯೊಬ್ಬರು ಕೆಜಿಗೆ 50 ರೂನಂತೆ ಕೊಟ್ಟು ಖರೀದಿ ಮಾಡಿದ್ದಾರೆ.

ತರಕಾರಿ ಕೆಡದಂತೆ ಕೋಟಿಂಗ್ ಪ್ಲ್ಯಾನ್ !

ತರಕಾರಿಯೊಂದನ್ನು ನಾಲ್ಕೈದು ದಿನಕ್ಕಿಂತ ಹೆಚ್ಚು ಕಾಲ ಕೆಡದಂತೆ ಸಂರಕ್ಷಿಸುವುದು ಕಷ್ಟ ಆದರೆ ಪುತ್ತೂರಿನ 15 ರ ಹರೆಯದ ಅಮೋಘ ನಾರಾಯಣ ವೆಜಿಟೇಬಲ್ ಕೋಟಿಂಗ್‌ಗೆ ನೈಸರ್ಗಿಕ ವಿಧಾನದ ಯಶಸ್ವಿ ಪ್ರಯೋಗ ಮಾಡಿದ್ದು, ಅದಕ್ಕೀಗ ಪೇಟೆಂಟ್ ಪಡೆಯಲು ನಿರ್ಧರಿಸಿದ್ದಾರೆ. ಮೂಡುಬಿದಿರೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.

ಅಮೋಘ ಬದನೆ ಕಾಯಿಗೆ ಬೀಂಪುಳಿ ಎಂಬ ಮರದ ಎಲೆಯನ್ನು (ಬಿಲಿಂಬಿ ಲೀವ್ಸ್) ಬಳಸಿಕೊಂಡು ಅದರ ನಿರ್ದಿಷ್ಟ ಅಂಶವನ್ನು ಪಡೆದುಕೊಂಡು ತಯಾರಿಸಿದ ದ್ರಾವಣದಲ್ಲಿ ಬದನೆಯನ್ನು ಒಂದು ಗಂಟೆ ಮುಳುಗಿಸಿಡಲಾಯಿತು.
ಈ ಪರಿಸರ ಸ್ನೇಹಿ ಕ್ರಿಯೆಗೆ ಒಳಪಟ್ಟ ಬದನೆ 12 ದಿನಗಳ ಕಾಲ ಕೆಡದಂತೆ, ಹಣ್ಣಾಗದಂತೆ ಸ್ಥಿತಪ್ರಜ್ಞವಾಗಿತ್ತು. ಎನ್‌ಐಟಿಕೆ ಸೇರಿದಂತೆ ನಾನಾ ಕಡೆ ಈ ಪ್ರಯೋಗದ ವೈಜ್ಞಾನಿಕ ಪರೀಕ್ಷೆ ನಡೆಸಿ ಯಶಸ್ವಿ ಫಲಿತಾಂಶ ಪಡೆಯಲಾಯಿತು.

ಅಮೆರಿಕದಲ್ಲಿ ಜೂ.17ರಿಂದ 22 ರತನಕ ನಡೆಯಲಿರುವ ’ಜೀನಿಯಸ್ ಒಲಿಂಪಿಯಾಡ್’ ಅಂತಾರಾಷ್ಟ್ರೀಯ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿರುವ ಅಮೋಘ ನಾರಾಯಣ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ನೀಡುವ ಯುವ ವಿಜ್ಞಾನಿ ತರಬೇತಿ ಕಾರ್ಯಕ್ರಮ ‘ಯುವಿಕಾ: 2019’ಕ್ಕೆ ಕೂಡ ಆಯ್ಕೆಯಾಗಿದ್ದಾರೆ.

ಕುಡ್ಲದ ಬ್ಯೂಟೆಸ್ಟ್ ಬೀಚ್ ತಣ್ಣೀರು ಬಾವಿ ಯಾಕೆ ?

ಮಂಗಳೂರಿನ ಎಲ್ಲ ಬೀಚ್‌ಗಳು ಸುಂದರ ಎನ್ನುವ ಮಾತಿನಿಂದ ಆರಂಭಿಸುವುದಾದರೆ ತಣ್ಣೀರು ಬಾವಿ ಬೀಚ್ ಎಲ್ಲಕ್ಕಿಂತ ಹೆಚ್ಚು ಸುಂದರ ಎನ್ನುವುದು ಲೋಕಲ್ ಜತೆಗೆ ವಿದೇಶಿ ಪ್ರವಾಸಿಗರ ಮಾತು.
ಇಲ್ಲಿನ ಸೌಂದರ್ಯತೆಗೆ ಬಹುಮುಖ್ಯವಾದ ಕಾರಣಕ್ಕೆ ನಿರ್ದಿಷ್ಟವಾದ ಉತ್ತರ ಇಲ್ಲದೇ ಹೋದರೂ ಪ್ರೇಮಿಗಳಿಂದ ಹಿಡಿದು ಕುಟುಂಬ ವರ್ಗಕ್ಕೂ ಈ ಬೀಚ್ ಇಷ್ಟವಾಗುವಂತಿದೆ.
ತಣ್ಣನೆಯ ಗಾಳಿ ಅಲೆಗಳ ಅಬ್ಬರದೊಳಗೆ ಮುಳುಗುವ ಸೂರ್ಯನ ಬಿಂಬವನ್ನು ಕಾಣಬೇಕಾದರೆ ತಣ್ಣೀರು ಬಾವಿ ಬೀಚ್‌ಗೆ ಭೇಟಿ ನೀಡಿ. ವಿಶೇಷವಾಗಿ ಬಸ್‌ಗಳ ಸೌಕರ್ಯ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದೇ ಹೋದರೂ ಕೂಡ ಸುಲ್ತಾನ್ ಬತ್ತೇರಿಯ ಮೂಲಕ ಪ್ರಯಾಣಿಕರ ಹಡಗಿನ ಮೂಲಕ ಹೋಗಬಹುದು. ಸ್ವಂತ ವಾಹನ ಇದ್ದರೆ ಕೂಳೂರು ಕಡೆಯಿಂದ ತಣ್ಣೀರು ಬಾವಿ ಬೀಚ್‌ಗೆ ಪ್ರಯಾಣ ಬೆಳೆಸಬಹುದು.

ಉದಾಸೀನತೆಗೆ ದೂಡಿದ ಮಳೆರಾಯನ ಆಟ !

ಕರಾವಳಿಯ ನಾನಾ ಭಾಗದಲ್ಲಿ ಕಳೆದ ಒಂದೆರಡು ದಿನಗಳಲ್ಲಿ ಒಂಚೂರು ಮಳೆ ಬಂದು ಇಳೆಯನ್ನು ತಣ್ಣಗೆ ಮಾಡಿದ ಪ್ರಸಂಗಗಳು ನಡೆದರೆ ಮಂಗಳೂರಿನಲ್ಲಿ ಮಾತ್ರ ಮೋಡ ಕವಿದ ವಾತಾವರಣದ ಜತೆಗೆ ಮಳೆರಾಯನ ಆಟ ಮುಂಜಾನೆ ಎದ್ದು ಆಕಾಶ ನೋಡುವ ಜನರಿಗೆ ಉದಾಸೀನತೆಯ ಭಾವವನ್ನು ಮೂಡಿಸಿದೆ.
ಅಷ್ಟಕ್ಕೂ ಮಂಗಳೂರು ಸಿಟಿ ಲಿಮಿಟ್‌ನೊಳಗೆ ಕೆಲವು ಕಡೆಯಲ್ಲಿ ಮಳೆಯಾದರೆ ಕುಡ್ಲದ ಪ್ರಮುಖ ಭಾಗದಲ್ಲಿ ಮಳೆಯ ಹನಿಯೇ ಬಿದ್ದಿಲ್ಲ. ಸಿಟಿ ಜನ ಉರಿಬಿಸಿಲಿಗೆ ಬೆವರು ಸುರಿಸುತ್ತಾ ಮಂಗಳೂರಿನಲ್ಲಿ ಭರ್ಜರಿ ಒಂದು ಮಳೆ ಬರಲಿ ಎನ್ನುವ ನಿರೀಕ್ಷೆಯಲ್ಲಿ ಕಾದು ಕೂತಿದ್ದಾರೆ. ದೇವಸ್ಥಾನ, ಚರ್ಚ್‌ಗಳಲ್ಲಿ ಈಗಾಗಲೇ ಮಳೆಗಾಗಿ ವಿಶೇಷ ಪ್ರಾರ್ಥನೆಗಳು ಆರಂಭವಾಗಿದೆ. ಆದರೂ ಮಳೆರಾಯ ಮುನಿಸಿಕೊಂಡು ಸುಮ್ಮನಾಗಿ ಬಿಟ್ಟಿದ್ದಾನೆ.