Tagged: mangalorecity

ಪ್ರಧಾನಿ ಮೋದಿಗಾಗಿ ಸಾವಿರ ಮಂದಿಗೆ ಊಟ ಬಡಿಸಿದರು

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವ ಸಂದರ್ಭ ಮಂಗಳೂರಿನ ಸರ್ವಿಸ್ ಬಸ್ ನಿಲ್ದಾಣ ಗುರುವಾರ ಮಧ್ಯಾಹ್ನ ಬಸ್‌ಗಳ ತಾಣದ ಬದಲಾಗಿ ಊಟೋಪಚಾರದ ತಾಣವಾಗಿ ಬದಲಾಗಿತ್ತು.

ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಮೀನು ಮಾರಾಟದ ಮಹಿಳೆಯರು, ಬಸ್ ಸಿಬ್ಬಂದಿಗಳು ಹೀಗೆ ಸ್ಟೇಟ್ ಬ್ಯಾಂಕ್ ಸುತ್ತಮುತ್ತ ಇರುವ 1250 ಕ್ಕೂ ಅಧಿಕ ಮಂದಿ ಊಟಕ್ಕೆ ಹಾಜರಾಗಿದ್ದರು. ಅನ್ನ, ಸಾರು, ಸಾಂಬಾರು, ಪಲ್ಯ,ಉಪ್ಪಿನ ಕಾಯಿ, ಪಾಯಸದಂತಹ ವಸ್ತುಗಳು ಊಟದಲ್ಲಿ ಕಾಣಿಸಿಕೊಂಡಿತು.

ಮಧ್ಯಾಹ್ನ 12.30ರಿಂದ 2.30 ರ ವರೆಗೆ ನಡೆದ ಉಚಿತ ಊಟೋಪಾಚಾರ ಸೇವೆ ನಡೆಯಿತು. ಸರ್ವಿಸ್ ಬಸ್ ನಿಲ್ದಾಣದಲ್ಲಿರುವ ಕಿಶೋರ್ ಕುಮಾರ್ ಶಕ್ತಿನಗರ, ಗುಣಕರ ಪೂಜಾರಿ ಪೆರ್ಮಂಕಿ ಸೇರಿದಂತೆ ಹತ್ತಾರು ಬಸ್ ಏಜೆಂಟ್‌ಗಳು ಈ ಕಾರ‍್ಯದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರು.

ಕುಡ್ಲದಲ್ಲಿ ಯಕ್ಷಗಾನ ಕಲಾವಿದರು ಓಡಿದರು !

ಮಂಗಳೂರಿನ ಮಂಗಳಾ ಕ್ರೀಡಾಂಗಣ ಯಕ್ಷಗಾನ ಕಲಾವಿದರಿಂದ ತುಂಬಿ ಹೋಗಿತ್ತು. ದ.ಕ, ಉಡುಪಿ, ಉ.ಕ. ಕಾಸರಗೋಡಿನ ಹೆಚ್ಚಿನ ಎಲ್ಲ ಮೇಳಗಳ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರಿದ್ದರು.

ಅಲ್ಲಿ ಯಕ್ಷಗಾನವಿರಲಿಲ್ಲ ಬದಲಾಗಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಮೇಳಗಳ ಯಕ್ಷಗಾನ ಕಲಾವಿದರಿಗೆ ಇದೇ ಮೊದಲ ಬಾರಿಗೆ ಕ್ರೀಡಾಕೂಟ ಆಯೋಜನೆಗೊಂಡಿದೆ.

24 ಮೇಳಗಳ ಸದಸ್ಯರು ಕಾಣಿಸಿಕೊಂಡಿದ್ದಾರೆ. ಮಂದಾರ್ತಿ ಮೇಳ (ಎ)(ಬಿ), ಸಾಲಿಗ್ರಾಮ, ಕಟೀಲಿನ 6 ಮೇಳ, ಬಪ್ಪನಾಡು, ಸಸಿಹಿತ್ಲು , ಎಡನೀರು, ಕೂಡ್ಲು, ಮಲ್ಲ, ಕುತ್ಯಾಳ, ಬೆಂಕಿನಾಥೇಶ್ವರ ಮೇಳ, ಸುಂಕದಕಟ್ಟೆ ಮೇಳ, ಸೌಕೂರು, ಅಮೃತೇಶ್ವರಿ ಕೋಟ, ಮಾರಣಕಟ್ಟೆ ಮೇಳ, ಗೋಳಿಗರಡಿ,ಹಿರಿಯಡ್ಕ, ಮಡಾಮಕ್ಕಿ, ಧರ್ಮಸ್ಥಳ ಮೇಳಗಳ ಕಲಾವಿದರು ಭಾಗವಹಿಸಿದ್ದರು.

ಓಟ, ಉದ್ದಜಿಗಿತ, ಗುಂಡು ಎಸೆತ, ಬಾಂಬ್ ಇನ್‌ದ ಸಿಟಿ, ಸಂಗೀತ ಕುರ್ಚಿ, ರಿಲೇ, ಕ್ರಿಕೆಟ್, ಹಗ್ಗಜಗ್ಗಾಟ ಮೊದಲಾದ ಆಟಗಳಿದ್ದವು. ಸುಮಾರು 400 ಮಂದಿ ಕಲಾವಿದರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಹಿರಿಯ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಭಾಗವತರಾದ ಪ್ರಸಾದ್ ಬಲಿಪ, ರವಿಚಂದ್ರ ಕನ್ನಡಿಕಟ್ಟೆ ಸೇರಿದಂತೆ ಯಕ್ಷಗಾನ ಕಲಾವಿದರು ಪಾಲ್ಗೊಂಡಿದ್ದರು.

ಸಿಇಟಿಯಲ್ಲಿ ಕುಡ್ಲದ ವಿದ್ಯಾರ್ಥಿಗಳು ಹೇಗೆ ರ‍್ಯಾಂಕ್ ಪಡೆಯುತ್ತಾರೆ?

ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಟಾಪ್ 10 ನಲ್ಲಿ ಒಟ್ಟು 9 ರ‍್ಯಾಂಕ್‌ಗಳು ಬಂದಿವೆ. ಇದರಲ್ಲಿ ಮಂಗಳೂರಿನ ಎಕ್ಸ್‌ಫರ್ಟ್ ಕಾಲೇಜಿಗೆ 8 ರ‍್ಯಾಂಕ್ ಮತ್ತು ಮೂಡುಬಿದರೆ ಆಳ್ವಾಸ್ ಕಾಲೇಜಿಗೆ ಒಂದು ರ‍್ಯಾಂಕ್ ಬಂದಿದೆ.

ಎಕ್ಸ್‌ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿಗಳಾದ ಆರ್.ಚಿನ್ಮಯ್ ಎಂಜಿನಿಯರಿಂಗ್ 2ನೇ ಮತ್ತು ಫಾರ್ಮಸಿಯಲ್ಲಿ 3ನೇ ರ‍್ಯಾಂಕ್ ಗಳಿಸಿದ್ದಾರೆ. ಭುವನ್ ವಿ.ಬಿ. ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 3ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನಲ್ಲಿ 6ನೇ ರ‍್ಯಾಂಕ್ ಪಡೆದಿದ್ದಾರೆ.

ಸಮರ್ಥ್ ಮಯ್ಯ ಎಂಜಿನಿಯರಿಂಗ್‌ನಲ್ಲಿ 5ನೇ ರ‍್ಯಾಂಕ್, ಆಶಯ್ ಜೈನ್ ಸಿ.ಎ. ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನಲ್ಲಿ 7ನೇ ರ‍್ಯಾಂಕ್, ಸುದೇಶ್ ಗೌಡ ಜೆ. ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 7ನೇ ರ‍್ಯಾಂಕ್, ಯಶ್ ಬನ್ನೂರು ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 9ನೇ ರ‍್ಯಾಂಕ್ ಪಡೆದಿದ್ದಾರೆ. ಆಳ್ವಾಸ್ ಪಿಯು ಕಾಲೇಜಿನ ಎಸ್.ದರ್ಶನ್ ಸಮರ್ಥ ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 10ನೇ ರ‍್ಯಾಂಕ್ ಗಳಿಸಿದ್ದಾರೆ.

ಮಾವು ತಿನ್ನಲು ಕದ್ರಿ ಪಾರ್ಕ್‌ಗೆ ಬನ್ನಿ

ಈಗ ಎಲ್ಲೆಡೆ ಮಾವಿನ ಸೀಸನ್. ಮಾರುಕಟ್ಟೆಯೊಳಗಂತೂ ತರೇವಾರಿ ಮಾವಿನ ಹಣ್ಣುಗಳು ಈಗಾಗಲೇ ಬಂದು ಬಿದ್ದಿದೆ. ಆದರೆ ಅಲ್ಲಿ ಎಲ್ಲವೂ ಉತ್ತಮವಾದ ಮಾವಿನ ಹಣ್ಣುಗಳು ಸಿಗೋದಿಲ್ಲ. ಕೆಮಿಕಲ್, ಕಾರ್ಬೈಡ್ ಹಾಕಿ ಮಾಗಿಸಿದ ಮಾವಿನ ಹಣ್ಣುಗಳೇ ಈಗ ಸಿಗುವಂತದ್ದು ಎನ್ನುವುದು ಕುಡ್ಲ ಸಿಟಿಯ ಮಂದಿಗೆ ಗೊತ್ತು.

ಆದರೆ ಒಂದಲ್ಲ ಎರಡಲ್ಲ ಬರೋಬರಿ ಹತ್ತರಿಂದ ಹದಿನೈದರಷ್ಟು ಹೆಚ್ಚಿನ ನಾನಾ ತಳಿಗಳ ಮಾವು ಕದ್ರಿ ಪಾರ್ಕ್‌ನ ಉದ್ಯಾನವನದ ಮಾವು ಪ್ರದರ್ಶನದಲ್ಲಿ ಕಾಣಿಸಿಕೊಂಡಿದೆ. ಮೂರು ದಿನಗಳ ಕಾಲ ನಡೆಯುವ ಈ ಮಾವು ಪ್ರದರ್ಶನ ಮಾರಾಟದಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ಕಾರ್ಬೈಡ್ ಮುಕ್ತ, ನೈಸರ್ಗಿಕವಾಗಿ ಮಾಗಿಸಿದ ಮಾವು ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಮಾವು ಪ್ರಿಯರಿಗೆ ನಾನಾ ಮಾವು ತಳಿಗಳನ್ನು ಬೆಳೆಯುವ ಜಿಲ್ಲೆಗಳಾದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಿಂದ ರೈತರು ನೇರವಾಗಿ ಮಾರಾಟ ಮಾಡಲು ಮಾವು ಮೇಳದಲ್ಲಿ ಮಾರಾಟ ಕಲ್ಪಿಸಲಾಗಿದೆ. ವಿಶೇಷವಾಗಿ ಅಲ್ಪೋನ್ಸಾ, ಮಲ್ಲಿಕಾ, ರಸಪೂರಿ, ಮಲಗೋವಾ, ದಸೇರಿ, ಸೆಂದೂರು, ತೋತಾಪುರಿ, ಬೆಗನ್ ಪಲ್ಲಿ, ಶುಗರ್ ಬೇಬಿ ಸೇರಿದಂತೆ ಹಿಮಾಯತ್ ಮಾವುಗಳ ಮಾರಾಟ ನಡೆಯಲಿದೆ.

ಕುಡ್ಲ ಸಿಟಿ ಕೂಲ್ ಜತೆಗೆ ಮತ ಎಣಿಕೆಯ ಬಿಸಿ !

ಕುಡ್ಲ ಸಿಟಿ ಮತ್ತೆ ಕೂಲ್ ಆಗಿದೆ. ಒಂದೆಡೆ ರಾತ್ರಿ ಸುರಿದ ಮಳೆಗೆ ಇಳೆ ತುಂಬಾನೇ ತಣ್ಣಗಾಗಿ ತಂಪು ಬೀರುತ್ತಿದೆ.
ಇನ್ನೊಂದೆಡೆ ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ‍್ಯ ಕೂಡ ಚುರುಕಿನಿಂದ ನಡೆಯುತ್ತಿರುವ ಜತೆಯಲ್ಲಿ ಎರಡು ಸಲ ಸಂಸದರಾಗಿ ಆಯ್ಕೆಯಾಗಿದ್ದ ನಳಿನ್ ಕುಮಾರ್ ಕಟೀಲ್ ಈ ಬಾರಿನೂ ಗೆಲುವ ಎಲ್ಲ ಸೂಚನೆಗಳು ರವಾನೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸುವುದು ಖಾತ್ರಿಯಾಗಿದೆ.