Tagged: citykudla

ಕರಾವಳಿಯ 65 ಸರಕಾರಿ ಶಾಲೆಯಲ್ಲಿ ಇನ್ನು ಫುಲ್ ಇಂಗ್ಲಿಷ್

ಒಂದಲ್ಲ ಎರಡಲ್ಲ ದ.ಕ ಹಾಗೂ ಉಡುಪಿಯ 65 ಶಾಲೆಗಳಲ್ಲಿ ಇನ್ನು ಫುಲ್ ಇಂಗ್ಲೀಷ್ ಕಾಣಿಸಿಕೊಳ್ಳಲಿದೆ. ಮುಖ್ಯವಾಗಿ ದ.ಕದ 43 ಹಾಗೂ ಉಡುಪಿ ಯ 22 ಶಾಲೆಗಳು ಈ ಸರ್ತಿ ಎಲ್ ಕೆಜಿಯಿಂದ ಹತ್ತನೇಯ ತರಗತಿಯ ವರೆಗೆ ಇಂಗ್ಲೀಷ್ ಮಾಧ್ಯಮ ವಾಗಿ ಬದಲಾಗಲಿದೆ. ಈಗಾಗಲೇ 63 ದ.ಕದ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.

ಕುಡ್ಲದ ಪ್ರತಿಯೊಬ್ಬರು ಕೇಳುವ‌ ಮಾತು ಇಲ್ಲಡ್ ನೀರ್ ಉಂಡಾ?

ಕುಡ್ಲದ ಯಾವುದೇ ಮನೆ,ಕಚೇರಿ, ಹೋಟೆಲ್, ಬಸ್ ನಿಲ್ದಾಣ, ಮಾರುಕಟ್ಟೆ, ಮಾಲ್ ಎಲ್ಲಿ ಬೇಕಾದರೂ ಹೋಗಿ ಕೇಳುವ‌ ಮಾತು ಒಂದೇ ಇಲ್ಲಡ್ ನೀರ್ ಉಂಡಾ? ( ಮನೆಯಲ್ಲಿ ನೀರು ಉಂಟಾ), ಮನೆಗೆ ಸರಿಯಾಗಿ ನೀರು ಬರುತ್ತಾ, ಟ್ಯಾಂಕರ್ ನೀರು ತರಿಸುತ್ತಿರಾ? ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳುವ ಮಂದಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಾ ಇದ್ದಾರೆ.

ಸಿಇಟಿಯಲ್ಲಿ ಕುಡ್ಲದ ವಿದ್ಯಾರ್ಥಿಗಳು ಹೇಗೆ ರ‍್ಯಾಂಕ್ ಪಡೆಯುತ್ತಾರೆ?

ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಟಾಪ್ 10 ನಲ್ಲಿ ಒಟ್ಟು 9 ರ‍್ಯಾಂಕ್‌ಗಳು ಬಂದಿವೆ. ಇದರಲ್ಲಿ ಮಂಗಳೂರಿನ ಎಕ್ಸ್‌ಫರ್ಟ್ ಕಾಲೇಜಿಗೆ 8 ರ‍್ಯಾಂಕ್ ಮತ್ತು ಮೂಡುಬಿದರೆ ಆಳ್ವಾಸ್ ಕಾಲೇಜಿಗೆ ಒಂದು ರ‍್ಯಾಂಕ್ ಬಂದಿದೆ.

ಎಕ್ಸ್‌ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿಗಳಾದ ಆರ್.ಚಿನ್ಮಯ್ ಎಂಜಿನಿಯರಿಂಗ್ 2ನೇ ಮತ್ತು ಫಾರ್ಮಸಿಯಲ್ಲಿ 3ನೇ ರ‍್ಯಾಂಕ್ ಗಳಿಸಿದ್ದಾರೆ. ಭುವನ್ ವಿ.ಬಿ. ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 3ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನಲ್ಲಿ 6ನೇ ರ‍್ಯಾಂಕ್ ಪಡೆದಿದ್ದಾರೆ.

ಸಮರ್ಥ್ ಮಯ್ಯ ಎಂಜಿನಿಯರಿಂಗ್‌ನಲ್ಲಿ 5ನೇ ರ‍್ಯಾಂಕ್, ಆಶಯ್ ಜೈನ್ ಸಿ.ಎ. ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನಲ್ಲಿ 7ನೇ ರ‍್ಯಾಂಕ್, ಸುದೇಶ್ ಗೌಡ ಜೆ. ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 7ನೇ ರ‍್ಯಾಂಕ್, ಯಶ್ ಬನ್ನೂರು ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 9ನೇ ರ‍್ಯಾಂಕ್ ಪಡೆದಿದ್ದಾರೆ. ಆಳ್ವಾಸ್ ಪಿಯು ಕಾಲೇಜಿನ ಎಸ್.ದರ್ಶನ್ ಸಮರ್ಥ ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 10ನೇ ರ‍್ಯಾಂಕ್ ಗಳಿಸಿದ್ದಾರೆ.

ಮಾವು ತಿನ್ನಲು ಕದ್ರಿ ಪಾರ್ಕ್‌ಗೆ ಬನ್ನಿ

ಈಗ ಎಲ್ಲೆಡೆ ಮಾವಿನ ಸೀಸನ್. ಮಾರುಕಟ್ಟೆಯೊಳಗಂತೂ ತರೇವಾರಿ ಮಾವಿನ ಹಣ್ಣುಗಳು ಈಗಾಗಲೇ ಬಂದು ಬಿದ್ದಿದೆ. ಆದರೆ ಅಲ್ಲಿ ಎಲ್ಲವೂ ಉತ್ತಮವಾದ ಮಾವಿನ ಹಣ್ಣುಗಳು ಸಿಗೋದಿಲ್ಲ. ಕೆಮಿಕಲ್, ಕಾರ್ಬೈಡ್ ಹಾಕಿ ಮಾಗಿಸಿದ ಮಾವಿನ ಹಣ್ಣುಗಳೇ ಈಗ ಸಿಗುವಂತದ್ದು ಎನ್ನುವುದು ಕುಡ್ಲ ಸಿಟಿಯ ಮಂದಿಗೆ ಗೊತ್ತು.

ಆದರೆ ಒಂದಲ್ಲ ಎರಡಲ್ಲ ಬರೋಬರಿ ಹತ್ತರಿಂದ ಹದಿನೈದರಷ್ಟು ಹೆಚ್ಚಿನ ನಾನಾ ತಳಿಗಳ ಮಾವು ಕದ್ರಿ ಪಾರ್ಕ್‌ನ ಉದ್ಯಾನವನದ ಮಾವು ಪ್ರದರ್ಶನದಲ್ಲಿ ಕಾಣಿಸಿಕೊಂಡಿದೆ. ಮೂರು ದಿನಗಳ ಕಾಲ ನಡೆಯುವ ಈ ಮಾವು ಪ್ರದರ್ಶನ ಮಾರಾಟದಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ಕಾರ್ಬೈಡ್ ಮುಕ್ತ, ನೈಸರ್ಗಿಕವಾಗಿ ಮಾಗಿಸಿದ ಮಾವು ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಮಾವು ಪ್ರಿಯರಿಗೆ ನಾನಾ ಮಾವು ತಳಿಗಳನ್ನು ಬೆಳೆಯುವ ಜಿಲ್ಲೆಗಳಾದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಿಂದ ರೈತರು ನೇರವಾಗಿ ಮಾರಾಟ ಮಾಡಲು ಮಾವು ಮೇಳದಲ್ಲಿ ಮಾರಾಟ ಕಲ್ಪಿಸಲಾಗಿದೆ. ವಿಶೇಷವಾಗಿ ಅಲ್ಪೋನ್ಸಾ, ಮಲ್ಲಿಕಾ, ರಸಪೂರಿ, ಮಲಗೋವಾ, ದಸೇರಿ, ಸೆಂದೂರು, ತೋತಾಪುರಿ, ಬೆಗನ್ ಪಲ್ಲಿ, ಶುಗರ್ ಬೇಬಿ ಸೇರಿದಂತೆ ಹಿಮಾಯತ್ ಮಾವುಗಳ ಮಾರಾಟ ನಡೆಯಲಿದೆ.

ನೇರಳೆ ಹಣ್ಣು ಮಾರುವ ಷಣ್ಮುಗ ಬಿಸಿನೆಸ್ ಟೆಕ್ನಿಕ್

ಕುಡ್ಲ ಸಿಟಿಯೊಳಗೆ ನೇರಳೆ ಹಣ್ಣು ಎಂಟ್ರಿಯಾಗಿದೆ. ಸೆಂಟ್ರಲ್ ಮಾರ್ಕೆಟ್ ಹೊರಭಾಗದಲ್ಲಿ ನೇರಳೆಹಣ್ಣು ಮಾರುವ ಮೂರು ನಾಲ್ಕು ಮಂದಿಗಳಲ್ಲಿ ವಿಶೇಷವಾಗಿ ಗಮನ ಸೆಳೆಯುವ ವ್ಯಕ್ತಿ ಷಣ್ಮುಗ.

ವರ್ಷ 70 ದಾಟಿದರೂ ಕೂಡ ಬಿಸಿಲಿಗೆ ಕೂತು ನೇರಳೆಹಣ್ಣು ಮಾರುವ ಇವರು ಮಂಗಳೂರಿನ ಕಾರ್‌ಸ್ಟ್ರೀಟ್ ಕಡೆಯವರು ಅವರು 40 ವರ್ಷಗಳಿಂದ ಇಂತಹ ಹಣ್ಣುಗಳನ್ನು ಮಾರಾಟ ಮಾಡುವುದೇ ವ್ಯಾಪಾರ.

ಬರೀ ಒಂದು ತಿಂಗಳ ಕಾಲ ಮಾತ್ರ ಅವರು ನೇರಳೆ ಹಣ್ಣು ಮಾರುತ್ತಾರೆ. ಉಳಿದ ತಿಂಗಳುಗಳ ಕಾಲ ಉಳಿದ ಚಾಕಲೇಟ್ ಸೇರಿದಂತೆ ನಾನಾ ವ್ಯಾಪಾರ ಮಾಡುತ್ತಾರೆ. ತಿಂಗಳಿಗೊಂದು ವ್ಯಾಪಾರ ಷಣ್ಮುಗ ಅವರ ಬಿಸಿನೆಸ್ ಟೆಕ್ನಿಕ್.

ಈಗ ನೇರಳ ಹಣ್ಣಿನ ಸೀಸನ್ ಕಾಲು ಕೆಜಿಗೆ 7೦ ರೂನಂತೆ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವರಿಗೆ ಹುಬ್ಬಳ್ಳಿ, ತಿರುಪತಿಯಿಂದ ಈ ಹಣ್ಣುಗಳು ಬರುತ್ತದೆ. ಕರಾವಳಿಯಲ್ಲಿ ನೇರಳೆ ಹಣ್ಣು ದೊಡ್ಡ ಪ್ರಮಾಣದ್ಲಿ ಸಿಗುವುದಿಲ್ಲವಂತೆ ಕಳೆದ ಆರು ವರ್ಷಗಳಿಂದ ಕರಾವಳಿ ನೇರಳೆಹಣ್ಣು ಮಾರುಕಟ್ಟೆಗೆ ಬಂದಿಲ್ಲ ಎನ್ನುವುದು ಅವರ ಮಾತು.

ಅಂದಹಾಗೆ ನೇರಳೆಹಣ್ಣಿನ ಮಾರಾಟ ಸಮಯದಲ್ಲಿ ಷಣ್ಮುಗ ಅವರು ಹೇಳುವ ಒಂದೇ ಮಾತು ನೇರಳೆಹಣ್ಣು ಔಷಧೀಯ ಗುಣವನ್ನು ಹೊಂದಿದೆ ಎಂದು ಟಿವಿಯಲ್ಲಿ ಬರ‍್ತಾ ಇರುತ್ತದೆ ಎನ್ನುವುದು ಅವರ ಮಾತು.

ಅವರು ಹೇಳುವಂತೆ ನೇರಳೆಹಣ್ಣು ಸಕ್ಕರೆ ಕಾಯಿಲೆಗೆ, ರಕ್ತ ಹೀನತೆ, ರಕ್ತದ ಶುದ್ಧಿಕರಣ, ರಕ್ತದ ಒತ್ತಡ ತಗ್ಗಿಸುವುದು, ಹೊಟ್ಟೆ ಸಂಬಂಧಿಸಿದ ಕಾಯಿಲೆ ಸೇರಿದಂತೆ ಹತ್ತಾರು ರೋಗಗಳಿಗೆ ಇದು ದಿವ್ಯ ಔಷಧವಾಗಿದೆ.