Kudla City

ಹಂಪನಕಟ್ಟೆಯ ಇತಿಹಾಸ ನೆನಪಿಸಿದ ಕದ್ರಿ ರಾಕ್ಸ್

ಮಂಗಳೂರಿನ ಹಂಪನಕಟ್ಟೆ ಎನ್ನುವ ಹೆಸರು ಬಹಳಷ್ಟು ಮಂದಿಗೆ ಗೊತ್ತಿರಬಹುದು. ಆದರೆ ಇದರ ಹಿಂದಿರುವ ಇತಿಹಾಸ ಕೂಡ ಬಹಳಷ್ಟು ಸೊಗಸು.
ಅಲ್ಲಿ ಅಪ್ಪಣ್ಣ ಎನ್ನುವ ಪರೋಪರಿ ವ್ಯಕ್ತಿಯೊಬ್ಬರು ಯಾರಾದರೂ ಬಿಸಿಲಿನಲ್ಲಿ ದಣಿದು ಬಂದವರಿಗೆ ಬೀದಿಯಲ್ಲಿ ನಿಂತು ನೀರು ಹಾಗೂ ಬೆಲ್ಲವನ್ನು ನೀಡಿ ಕಳುಹಿಸುತ್ತಿದ್ದರು. ಇದು ಪರಿಪಾಟ ಮತ್ತೆ ಮಂಗಳೂರಿನಲ್ಲಿ ಮುಂದುವರಿದಿದೆ.
ಕದ್ರಿಯಲ್ಲಿರುವ ಕದ್ರಿ ರಾಕ್ಸ್ ಆರ್ಟ್ ಗ್ಯಾಲರಿಗೆ ಭೇಟಿ ನೀಡಿದಾಗ ಅಲ್ಲಿ ಮೊದಲು ಇದೇ ಮಣ್ಣಿನ ಮಡಕೆಯಲ್ಲಿರುವ ತಂಪು ನೀರು ಹಾಗೂ ಬೆಲ್ಲವನ್ನು ನೀಡಿ ಸ್ವಾಗತಿಸುವ ಪರಿಪಾಟವನ್ನು ಬೆಳೆಸಿಕೊಂಡಿದ್ದಾರೆ.
ತೀರಾ ಇತ್ತೀಚೆಗೆ ಉದ್ಘಾಟನೆಯಾದ ಕದ್ರಿ ರಾಕ್ಸ್ ಆರ್ಟ್ ಗ್ಯಾಲರಿ ಮಾಲೀಕ ಹರ್ಷ ಡಿಸೋಜ ಅವರು ಈ ಹೊಸ ಕಲ್ಪನೆಯನ್ನು ಹುಟ್ಟು ಹಾಕಿ ಗಮನಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಬೊಕ್ಕಪಟ್ಣದಲ್ಲಿ ಬಾಟಲ್‌ಗೊಂದು ಆರ್ಟ್ ಕ್ಯಾಂಪ್

ಮನೆ, ಹೋಟೆಲ್, ಬಾರ್, ಅಂಗಡಿ ಮಳಿಗೆ ಗಳಲ್ಲಿ ದ್ರವ್ಯ ಪದಾರ್ಥಗಳನ್ನು ಖರೀದಿಸಿ ಉಪಯೋಗ ಆದ ನಂತರ ಅದೇ ಬಾಟಲ್‌ಗಳನ್ನು ತ್ಯಾಜ್ಯ ಎಂದು ಬೀದಿ, ನದಿ, ಸಮುದ್ರಕ್ಕೆ ಎಸೆದು ಮಾಲಿನ್ಯ ಗೊಳಿಸುವ ಪ್ರವೃತ್ತಿ ಈಗ ಹೆಚ್ಚಾಗುತ್ತಿದೆ. ಈ ಬಾಟಲ್ ಗಳು ಅಂತರ್ಜಲ ಮತ್ತು ಜಲಚರ ಜೀವಿಗಳ ನೆಮ್ಮದಿಗೆ ಸಮಸ್ಯೆ ಆಗುತ್ತಿವೆ.

ಮಂಗಳೂರಿನ ಬೊಕ್ಕ ಪಟ್ಣದ ಕಲಾವಿದೆ ಮೇಘ ಮೆಂಡನ್ ಈ ತರದ ತ್ಯಾಜ್ಯ ಬಾಟಲಿಗಳಲ್ಲಿ ಚಿತ್ರ ಬರೆದು ಅದಕ್ಕೆ ವಿದ್ಯುತ್ ಸಂಪರ್ಕ ನೀಡಿ ಅದರ ಮೇಲೆ ಹೂ ಇಟ್ಟು ಅದು ಮನೆಯ ಅಂದ ಹೆಚ್ಚಾಗುವ ರೀತಿಯಲ್ಲಿ ಹೊಸ ಒಂದು ಕಲಾ ಆವಿಷ್ಕಾರ ಮಾಡುತ್ತಾರೆ.
ಸ್ವಚ್ಛ ಭಾರತದ ಒಂದು ಪಾತ್ರವಾಗಿ ಮನೆ, ಮನೆಯ ಬಾಟಲ್ ತ್ಯಾಜ್ಯಗಳು ಮನೆ, ಮನೆಯಲ್ಲೇ ಉಪಯೋಗ ಆದರೆ ಬೀದಿ, ನದಿ, ಸಾಗರಕ್ಕೆ ಸೇರುವ ತ್ಯಾಜ್ಯ ಕಡಿಮೆ ಆಗಿ ಪರಿಸರಕ್ಕೆ ನೀಡುವ ಅಮೂಲ್ಯ ಕೊಡುಗೆ ನೀಡಿದಂತಾಗುತ್ತದೆ ಎಂಬ ಹಿತ ದೃಷ್ಟಿಯಲ್ಲಿ ಇದೀಗ ಈ ಬಾಟಲ್ ಚಿತ್ರ ಕಲೆಯ ಶಿಬಿರವನ್ನು ಬೊಕ್ಕ ಪಟ್ಣದ ಫಲ್ಗುಣಿ ನದೀ ಕಿನಾರೆಯಲ್ಲಿ ಆರಂಭಿಸಿದ್ದಾರೆ. ಮೇ 5, 12, 19, 20 ರಂದು ಬೆಳಗ್ಗೆಯಿಂದ ಮಧ್ಯಾನ ತನಕ ಈ ಶಿಬಿರ ಜರುಗಲಿದೆ.

ನೂರು ದಾಟಿದರೂ ಇವರು ಕುಡ್ಲದ ಟ್ರಾಫಿಕ್ ವಾರ್ಡನ್

ಮಂಗಳೂರು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಜತೆಗೆ ಅವರ ಸಿಬ್ಬಂದಿಗಳು ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ.
ಆದರೆ ಮಂಗಳೂರಿನಲ್ಲಿ ಹಿರಿಯ ಜೀವವೊಂದು ಟ್ರಾಫಿಕ್ ನಿಯಂತ್ರಣ ವ್ಯವಸ್ಥೆಯಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಹೌದು. 100 ವರ್ಷದಲ್ಲಿರುವ ಜೋಯ್ ಗೊನ್ಸಾಲ್ವೀಸ್ ಅವರು ನಗರದ ಪ್ರಮುಖ ಸರ್ಕಲ್‌ಗಳಾದ ನಂತೂರು, ಕೆಪಿಟಿ ಸರ್ಕಲ್ ಬಳಿಯಲ್ಲಿ ಟ್ರಾಣ ಮಾಡುವ ಕೆಲಸ ಮಾಡುತ್ತಾರೆ.
ಅವರೇ ಟ್ರಾಫಿಕ್ ವಾರ್ಡನ್ ಸ್ಕ್ವಾಡ್ ಹುಟ್ಟುಹಾಕುವಲ್ಲಿ ಕೆಲಸ ಮಾಡಿದವರು. ಅಂದಹಾಗೆ ಜೋಯ್ ಅವರು ಇದು ಸಂಬಳಕ್ಕೆ ಮಾಡುತ್ತಿರುವ ಕೆಲಸವಲ್ಲ ಬದಲಾಗಿ ತಮ್ಮ ಆತ್ಮತೃಪ್ತಿಗಾಗಿ ಕೆಲಸ ಮಾಡುತ್ತಿದ್ದಾರೆ.
ಟ್ರಾಫಿಕ್ ಪೊಲೀಸರಿಗೆ ದಣಿವಾದಾಗ ಜ್ಯೂಸ್ ಸೇರಿದಂತೆ ಇತರ ಉಪಚಾರದಲ್ಲೂ ಜೋಯ್ ಅವರು ಎತ್ತಿದ ಕೈ. ಇವರ ಸೇವೆಯನ್ನು ಇಲಾಖೆ ಕೂಡ ಗಮನಿಸಿಕೊಂಡು ಸನ್ಮಾನಿಸಿದೆ.

ಮಂಗಳೂರಿಗೆ ಇರುವಷ್ಟು ಹೆಸರು ಬೇರೆ ಎಲ್ಲೂ ಇಲ್ಲ!

ಇಡೀ ದೇಶದ ಲೆಕ್ಕಚಾರ ತೆಗೆದು ನೋಡಿದರೆ ಮಂಗಳೂರಿಗೆ ಇರುವಷ್ಟು ಹೆಸರು ಬೇರೆ ಯಾರಿಗೂ ಇಲ್ಲ.
ಒಂದು ಊರಿಗೆ ಅತೀ ಹೆಚ್ಚು ಹೆಸರು ಇರೋದು ಮಂಗಳೂರಿಗೆ ಮಾತ್ರವಂತೆ. ತುಳು ಭಾಷೆಯಲ್ಲಿ ‘ಕುಡ್ಲ’, ಕನ್ನಡದಲ್ಲಿ ‘ಮಂಗಳೂರು‘, ಇಂಗ್ಲೀಷ್‌ನಲ್ಲಿ ‘ಮ್ಯಂಗಳೂರು’, ಮಲಯಾಳಂನಲ್ಲಿ ‘ಮಂಗಳಾಪುರಂ’, ಹವ್ಯಕ ಭಾಷೆಯಲ್ಲಿ ‘ಕೊಡಿಯಾಲ’,ಕೊಂಕಣಿ ಭಾಷೆಯಲ್ಲಿ ‘ಕೊಡಿಯಲ್’, ಬ್ಯಾರಿ ಭಾಷೆಯಲ್ಲಿ ‘ಮೈಕಾಲ’, ಸಂಸ್ಕೃತದಲ್ಲಿ ‘ಮಂಜುರನ್’ ಹಾಗೂ ಉರ್ದು ಭಾಷೆಯಲ್ಲಿ ಕುಡಲ್. ಇದರ ಜತೆಗೆ ಜಲಾಲಾಬಾದ್ ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ ಎನ್ನುವ ಇತಿಹಾಸ ಪುಟಗಳು ವಿವರಣೆ ನೀಡುತ್ತದೆ.

47 ವರ್ಷದಲ್ಲಿ 12,260 ಜೋಡಿಗಳಿಗೆ ಮದುವೆ !

ಇದು ಎಲ್ಲರಿಂದ ಸಾಧ್ಯವಿಲ್ಲದ ಮಾತು. ಆದರೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಮಾತ್ರ ಸಾಧ್ಯ. ಕಳೆದ 47 ವರ್ಷದ ಧರ್ಮಸ್ಥಳದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭರ್ತಿ 12,260 ಮಂದಿ ಜೋಡಿಗಳು ಮದುವೆಯಾಗುವ ಮೂಲಕ ಸತಿ ಪತಿಗಳಾಗಿದ್ದಾರೆ.

ಈ ಬಾರಿ 48 ನೇ ವರ್ಷದ ಸಾಮೂಹಿಕ ವಿವಾಹ ನಡೆಯುತ್ತಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಮೇ 1ರಂದು ಸಂಜೆ 6.48ರ ಗೋಧೂಳಿ ಲಗ್ನ ಸುಮುಹೂರ್ತ ದಲ್ಲಿ 48ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು, 102 ಜೋಡಿ ಹಸೆಮಣೆ ಏರಲಿದ್ದಾರೆ.

ವಿವಾಹ ಸರಳವಾಗಿ, ವರದಕ್ಷಿಣೆ ಇಲ್ಲದೆ ನಡೆದು ಕುಟುಂಬದಲ್ಲಿ ಸುಖ- ಶಾಂತಿ ಕಾಣಬೇಕು ಎಂಬ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 1972 ರಲ್ಲಿ ಸಾಮೂಹಿಕ ಉಚಿತ ವಿವಾಹವನ್ನು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಾರಂಭಿಸಿ ದರು. ಸಮಾಜದ ಹಿತಕ್ಕಾಗಿ ಶ್ರೀಕ್ಷೇತ್ರದ ಮೂಲಕ ಹತ್ತು ಹಲವಾರು ಕಾರ‍್ಯಕ್ರಮಗಳು ಅನುಷ್ಠಾನಗೊಂಡು ಯಶಸ್ಸು ಕಂಡು ರಾಜ್ಯ, ರಾಷ್ಟ್ರದಲ್ಲಿ ಮಾದರಿ ಎನಿಸಿವೆ.

1972 ರ ಮಾ.29ರಂದು ನಡೆದ ಮೊದಲ ವಿವಾಹ ಕಾರ್ಯಕ್ರಮದಲ್ಲಿ 88 ಜೋಡಿ ವಿವಾಹವಾದರು. ಮೇ 1ರಂದು ನಡೆಯುವ 48ನೇ ವರ್ಷದ ಸಾಮೂಹಿಕ ಉಚಿತ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 102 ಕ್ಕೂ ಹೆಚ್ಚು ಜೋಡಿಗಳು ಹಸೆಮಣೆ ಏರಲಿದ್ದಾರೆ. ಕಳೆದ 47 ವರ್ಷ ಗಳಲ್ಲಿ ಕ್ಷೇತ್ರದಲ್ಲಿ ನಡೆದ ವಿವಾಹಗಳಲ್ಲಿ 12,260 ಜೋಡಿಗಳು ಸತಿಪತಿಗಳಾಗಿ ಸುಖೀ ದಾಂಪತ್ಯ ಜೀವನ ಹೊಂದಿದ್ದಾರೆ.