ಇವರು ಬೇರೆ ಯಾರು ಅಲ್ಲ. ಬೆಳ್ತಂಗಡಿಯ ತಹಸೀಲ್ದಾರ್ ಗಣಪತಿ ಶಾಸ್ತ್ರಿ. ಇತ್ತೀಚಿಗೆ ಬಂದ ನೆರೆಯಿಂದಾಗಿ ಹಾನಿಗೊಳಗಾದದಂತಹ ಪ್ರದೇಶದಲ್ಲಿ ನೆರೆ ಪರಿಹಾರದ ಕಾರ್ಯದಲ್ಲಿ ನಿರತರಾಗಿರುವ ಬೆಳ್ತಂಗಡಿಯ ತಹಶೀಲ್ದಾರರು ಜನಸಾಮಾನ್ಯರಂತೆ ದಿನನಿತ್ಯದ ವಸ್ತುಗಳನ್ನು ನೆರೆ ಪೀಡಿತ ಪ್ರದೇಶಕ್ಕೆ ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಇಂದು ಸೋಮಾರಿತನ ತೋರಿಸುವ ಅಧಿಕಾರಿಗಳಿಗೊಂದು ಪಾಠ.
Tagged: Kudla
ಕುಡ್ಲದ ವಿದ್ಯಾರ್ಥಿಗಳ ಮನಸ್ಸು ಗೆದ್ದ ಡಿಸಿ ಸೆಂಥಿಲ್ !
ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಈ ಬಾರಿ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ಮಾಡುವ ಜತೆಯಲ್ಲಿ ಸಂದೇಶ ನೀಡುವ ವಿಶೇಷ ಅವಕಾಶ ಒದಗಿ ಬಂದಿತ್ತು.
ವಿಶೇಷವಾಗಿ ಸಂದೇಶದ ತುಂಬಾ ಕರಾವಳಿಯಲ್ಲಿ ಕಾಣಿಸಿಕೊಂಡ ನೆರೆಗೆ ಜನರು ಸ್ಪಂಧಿಸಿದ ರೀತಿ ಎಲ್ಲವನ್ನು ಮುಕ್ತವಾಗಿ ಹಂಚಿಕೊಳ್ಳುವ ಜತೆಯಲ್ಲಿ ಕರಾವಳಿಯ ಜನರು ಭಯಬೀಳುವ ಅಗತ್ಯವಿಲ್ಲ ಜಿಲ್ಲಾಡಳಿತ ನಿಮ್ಮ ಜತೆಯಲ್ಲಿ ಇದೆ ಎನ್ನುವ ಭರವಸೆ ತುಂಬುವ ಮಾತುಗಳು ಇಡೀ ಜಿಲ್ಲೆಯ ಜನರಿಗೆ ಹೊಸ ವಿಶ್ವಾಸವನ್ನು ತಂದುಕೊಟ್ಟಿದೆ.
ಅವರ ಮಾತಿನಲ್ಲಿ ಹೇಳುವುದಾದರೆ ಒಂದು ಪೀಳಿಗೆ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ಇತಿಹಾಸ ಸೃಷ್ಟಿಸಿತು. ಈಗ ನಾವೆಲ್ಲ ಭಾರತವನ್ನು ವಿಶ್ವತ ಅತ್ಯುನ್ನತ ಸ್ಥಾನಕ್ಕೆ ಏರಿಸಲು ನಮ್ಮ ಜೀವನವನ್ನು ತೊಡಗಿಸಿಕೊಂಡು ಇತಿಹಾಸ ಸೃಷ್ಟಿಸೋಣ. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಶಾಂತಿಯಿಂದ ಬಾಳು ಕಟ್ಟಿಕೊಳ್ಳಲು ಶ್ರಮಿಸೋಣ ಎನ್ನುವುದು ಇಡೀ ಸಂದೇಶದ ಸಾರ.
ಅಂದಹಾಗೆ ಡಿಸಿ ಸೆಂಥಿಲ್ ಬರೀ ಕರಾವಳಿಯ ಜನರಿಗೆ ಮಾತ್ರವಲ್ಲ ಇಲ್ಲಿ ಶೈಕ್ಷಣಿಕ ಬದುಕು ಕಟ್ಟಲು ಬಂದವರಿಗೂ ಅವರೆಂದರೆ ಬಹಳ ಇಷ್ಟ. ಮಳೆ ಬಂದಾಗ ಅವರು ಮಕ್ಕಳು ಕುರಿತು ವಹಿಸುವ ಕಾಳಜಿಯಿಂದ ಮಕ್ಕಳ ಪ್ರೀತಿಯ ಡಿಸಿ ಆಗಿದ್ದಾರೆ ಎನ್ನುವುದಕ್ಕೆ ಇಂದಿನ ಕಾರ‍್ಯಕ್ರಮದಲ್ಲಿ ಸೆಲ್ಫಿ ತೆಗೆದ ವಿದ್ಯಾರ್ಥಿಗಳೇ ಸಾಕ್ಷಿ.
ಕುಡ್ಲದ ಕಾರ್ನಾಡ್ ಸದಾಶಿವ ರಾವ್ ರಸ್ತೆ ಕತೆ…
ಕಾರ್ನಾಡ್ ಸದಾಶಿವ ರಾವ್ ದಕ್ಷಿಣ ಭಾರತದ ಗಾಂಧಿ ಎಂದು ಪ್ರಸಿದ್ಧಿ ಪಡೆದವರಿವರು. ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ ಚಾಲನೆ ಕೊಟ್ಟ ದೇಶಪ್ರೇಮಿ. ಮಂಗಳೂರಿನ ಕಾರ್ನಾಡ್ ಎಂಬಲ್ಲಿ 1881ರಲ್ಲಿ ಜನಿಸಿದ ಸದಾಶಿವರಾವ್ ಕಾರ್ನಾಡ್ ಎಂದೇ ಚಿರಪರಿಚಿತರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಕಾರ್ನಾಡರು ಸುಖದ ಸುಪ್ಪತ್ತಿಗೆಯಲ್ಲಿ ಹಾಯಾಗಿ ಕಾಲ ಕಳೆಯಬಹುದಾಗಿತ್ತು.
ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮದ ಕರೆಗೆ ಓಗೊಟ್ಟು ಚಳವಳಿಗೆ ಧುಮುಕಿದ ಅವರು, ತಮ್ಮ ಜೀವನದ ಕೊನೆಯವರೆಗೂ ಹೋರಾಟಕ್ಕಾಗಿಯೇ ಬದುಕನ್ನು ಮುಡಿಪಾಗಿಟ್ಟಂತಹ ಮಹಾನುಭಾವ. ಕಾರ್ನಾಡರು ಕೇವಲ ಸ್ವಾತಂತ್ರ್ಯ ಹೋರಾಟಕಷ್ಟೇ ತಮ್ಮ ಬದುಕನ್ನು ಮೀಸಲಾಗಿಟ್ಟಿರಲಿಲ್ಲ. ಹಿಂದುಳಿದ ಜಾತಿಗಳ ಬಗ್ಗೆ, ಮೂಢನಂಬಿಕೆ ವಿರುದ್ಧ, ಸಾಮಾಜಿಕ ಕ್ಷೇತ್ರದಲ್ಲಿನ ಅನಿಷ್ಟ ಪದ್ಧತಿಗಳ ವಿರುದ್ಧ ಸತತವಾಗಿ ಹೋರಾಟ ನಡೆಸಿದ್ದರು. ಪತ್ನಿ ಶಾಂತಾಭಾಯಿ ಕೂಡ ಅವರಿಗೆ ಬೆಂಬಲವಾಗಿ ನಿಂತಿದ್ದರು. ಆಕೆ ಕೂಡ ಮಹಿಳಾ ಸಭಾವನ್ನು ಹುಟ್ಟು ಹಾಕಿ ಬಾಲ ವಿಧವೆಯರಿಗೆ ನೆರವು ನೀಡಿ ಅವರನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಪಣತೊಟ್ಟಿದ್ದರು.
1936 ರಲ್ಲಿ ಫೈಜಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಅದಾಗಲೇ ಅವರಿಗೆ ಜ್ವರ ವಿಪರೀತವಾಗಿ ಕಂಗೆಡಿಸಿತ್ತು. ಅಲ್ಲಿಂದ ಮುಂಬಯಿಗೆ ವಾಪಸ್ಸಾದ ಕಾರ್ನಾಡರು 1937 ಜನವರಿ 9 ರಂದು ಸಾವನ್ನಪ್ಪಿದ್ದರು. ತನ್ನ ಇಡೀ ಜೀವನವನ್ನೇ ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟ ಕಾರ್ನಾಡರು, ತನ್ನೆಲ್ಲಾ ಸಂಪತ್ತನ್ನು ಬಡವರ, ದೀನ, ದಲಿತರ ಏಳಿಗೆಗಾಗಿ ವಿನಿಯೋಗಿಸಿದ್ದರು. ಅವರು ಸಾವನ್ನಪ್ಪಿದಾಗ ಶವಸಂಸ್ಕಾರಕ್ಕೂ ಹಣವಿರಲಿಲ್ಲವಾಗಿತ್ತು.
ಆ ಕಾರಣಕ್ಕಾಗಿಯೇ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಕಾದಂಬರಿಕಾರ ದಿ.ಡಾ.ಶಿವರಾಮ ಕಾರಂತರು ಕಾರ್ನಾಡರನ್ನು ಧರ್ಮರಾಜ ಅಂತ ಕರೆದಿದ್ದರು. ಅಂದಹಾಗೆ ಅವರ ನೆನಪಿಗಾಗಿ ಕುಡ್ಲದ ಕೆ.ಎಸ್.ರಾವ್ ರಸ್ತೆ ಅವರ ನೆನಪಿಗಾಗಿ ನಾಮಕರಣ ಮಾಡಲಾಗಿದೆ. ಈ ರಸ್ತೆಯಲ್ಲಿ ಬಹಳಷ್ಟು ವ್ಯಾಪಾರ ಕೇಂದ್ರಗಳು, ಬ್ಯಾಂಕ್‌ಗಳು ಕಾರ‍್ಯಾಚರಿಸುತ್ತಿದೆ.
pics: Nandan Bhat
ಡಿಸಿಗಳಿಗೆ ಒಳಿಯಿತು ಧ್ವಜಾರೋಹಣದ ಚಾನ್ಸ್
ರಾಜ್ಯದಲ್ಲಿ ಸರಕಾರ ಅಸ್ತಿತ್ವದ ಲ್ಲಿದ್ದರೂ ಇದೇ ಮೊದಲ ಬಾರಿಗೆ ಸ್ವಾತಂತ್ರ್ಯೋ ತ್ಸವದಂದು ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೇ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಈ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು ನಿಭಾಯಿಸಲಿದ್ದಾರೆ.
ಈ ಹಿಂದೆ ರಾಜ್ಯ ಪಾಲರ ಆಡಳಿತವಿದ್ದ ಸಂದರ್ಭದಲ್ಲಿ ಮಾತ್ರ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನಡೆಸಿದ್ದಾರೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಸಿಎಂ ಯಡಿಯೂರಪ್ಪ ಧ್ವಜ ವಂದನೆ ಸಲ್ಲಿಸಲಿದ್ದಾರೆ.
ಉಳಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳು, ಉಪವಿಭಾಗಗಳಲ್ಲಿ ಉಪ ವಿಭಾಗಾಧಿಕಾರಿಗಳು, ತಾಲೂಕು ಕೇಂದ್ರಗಳಲ್ಲಿತಹಶೀಲ್ದಾರರು ಈ ಪ್ರಕ್ರಿಯೆ ನಡೆಸಲಿದ್ದು, ನೆರೆಯ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಕಾರ್ಯಕ್ರಮ ನಡೆಸಲು ಸೂಚನೆ ನೀಡಲಾಗಿದೆ.
ಈ ಹಿಂದೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವಿತ್ತು. ಈ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ಮಾತ್ರ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನಡೆಸಿದ್ದಾರೆ.
ಕರಾವಳಿಯ ನೆರೆಗೆ ಸಮರ್ಥ ಉತ್ತರ ನೀಡಿದ ಡಿಸಿ ಸೆಂಥಿಲ್
ಕರಾವಳಿಯಲ್ಲಿ ಸುರಿದ ಮಳೆ ಇಡೀ ಜಿಲ್ಲೆಯ ಜನತೆಗೆ ಭಯ ಹುಟ್ಟಿಸಿದ್ದು ನಿಜ. ಆದರೆ ಇಷ್ಟೆಲ್ಲ ಮಳೆ ಬರುತ್ತದೆ ಅದಕ್ಕೆ ಮೊದಲೇ ಎಚ್ಚರಗೊಳ್ಳಬೇಕು ಎನ್ನುವ ಕುರಿತು ಯೋಜನೆ ರೂಪಿಸಿದ ಕೀರ್ತಿ ಪೂರ್ತಿಯಾಗಿ ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಾಹೇಬ್ರಿಗೆ ಸಲ್ಲಬೇಕು.
ಕಾರಣ ಕಳೆದ ವರ್ಷದ ಮಳೆಯಿಂದ ಯಾರು ಪಾಠ ಕಲಿಯದೇ ಇದ್ದರೂ ಕೂಡ ಡಿಸಿ ಸೆಂಥಿಲ್ ಪೂರ್ಣ ಪಾಠ ಕಲಿಯುವ ಜತೆಗೆ ಅದಕ್ಕೆ ಬೇಕಾದ ಯೋಜನೆಯನ್ನು ಮಾಡುವ ಮೂಲಕ ಇಂಥ ಸಂಭಾವ್ಯ ದುರ್ಘಟನೆ ಎದುರಿಸಲು ದಕ್ಷಿಣ ಕನ್ನಡ ಜಿಲ್ಲೆ ಎಲ್ಲ ಸಿದ್ಧತೆ ಮಾಡಿತ್ತು ಎನ್ನುವುದು ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಪ್ರಕೃತಿ ವಿಕೋಪ, ಆಸ್ತಿಪಾಸ್ತಿಗೆ ಹಾನಿಯಾಗುವ ಸಾಧ್ಯತೆಗಳ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲೇ ಆಧುನಿಕ ಉಪಕರಣಗಳನ್ನು ಖರೀದಿಸಿ, ಅಗ್ನಿಶಾಮಕ ದಳಕ್ಕೆ ಒಪ್ಪಿಸಲಾಗಿತ್ತು.
ಮೇ ತಿಂಗಳಲ್ಲೇ ಅಧಿಕಾರಿಗಳ ಸಭೆ ಕರೆದು, ಭಾರಿ ಮಳೆಯಿಂದ ನದಿಗಳು ಉಕ್ಕುವ, ಕಡಲ್ಕೊರೆತ, ಕೈಗಾರಿಕೆಗಳಿಂದ ದುರಂತ, ಗ್ಯಾಸ್ ಟ್ಯಾಂಕರ್‌ಗಳ ಅವಘಡ, ಘಾಟಿ ರಸ್ತೆಗಳು ಕುಸಿಯುವ ಭೀತಿ ಮೊದಲಾದ ಅಪಾಯದ ಬಗ್ಗೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿ, ಪೂರಕ ಉಪಕರಣಗಳಿಂದ ಸಜ್ಜುಗೊಳಿಸಿದ್ದರು. ಎಲ್ಲರ ಫೋನ್ ನಂಬರ್‌ಗಳ ಪಟ್ಟಿ ಮಾಡಲಾಗಿತ್ತು.
ಜಿಲ್ಲಾಧಿಕಾರಿ ನಿಧಿಯಿಂದ ಆರು ಬೋಟ್, ನಾಲ್ಕು ಔಟ್ ಬೋರ್ಡ್ ಬೋಟ್‌ಗಳನ್ನು ಖರೀದಿಸಿದ್ದು, ಮುಳುಗಿದವರ ರಕ್ಷಣೆಗೆ ಮೂರು ಅಂಡರ್ ವಾಟರ್ ಡೈವಿಂಗ್ ಸೆಟ್, ಸೆಫ್ಟಿ ಬೆಲ್ಟ್, ನೈಲಾನ್ ಹಗ್ಗ, ಪೆಟ್ರೋಲ್ ಚಾಲಿತ ಮರ ಕಡಿಯುವ ಯಂತ್ರಗಳ ಸಹಿತ ಸಾಕಷ್ಟು ಸಲಕರಣೆಗಳ ಖರೀದಿಸಲಾಗಿತ್ತು.




