Tagged: citykudla

ನೂರು ದಾಟಿದರೂ ಇವರು ಕುಡ್ಲದ ಟ್ರಾಫಿಕ್ ವಾರ್ಡನ್

ಮಂಗಳೂರು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಜತೆಗೆ ಅವರ ಸಿಬ್ಬಂದಿಗಳು ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ.
ಆದರೆ ಮಂಗಳೂರಿನಲ್ಲಿ ಹಿರಿಯ ಜೀವವೊಂದು ಟ್ರಾಫಿಕ್ ನಿಯಂತ್ರಣ ವ್ಯವಸ್ಥೆಯಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಹೌದು. 100 ವರ್ಷದಲ್ಲಿರುವ ಜೋಯ್ ಗೊನ್ಸಾಲ್ವೀಸ್ ಅವರು ನಗರದ ಪ್ರಮುಖ ಸರ್ಕಲ್‌ಗಳಾದ ನಂತೂರು, ಕೆಪಿಟಿ ಸರ್ಕಲ್ ಬಳಿಯಲ್ಲಿ ಟ್ರಾಣ ಮಾಡುವ ಕೆಲಸ ಮಾಡುತ್ತಾರೆ.
ಅವರೇ ಟ್ರಾಫಿಕ್ ವಾರ್ಡನ್ ಸ್ಕ್ವಾಡ್ ಹುಟ್ಟುಹಾಕುವಲ್ಲಿ ಕೆಲಸ ಮಾಡಿದವರು. ಅಂದಹಾಗೆ ಜೋಯ್ ಅವರು ಇದು ಸಂಬಳಕ್ಕೆ ಮಾಡುತ್ತಿರುವ ಕೆಲಸವಲ್ಲ ಬದಲಾಗಿ ತಮ್ಮ ಆತ್ಮತೃಪ್ತಿಗಾಗಿ ಕೆಲಸ ಮಾಡುತ್ತಿದ್ದಾರೆ.
ಟ್ರಾಫಿಕ್ ಪೊಲೀಸರಿಗೆ ದಣಿವಾದಾಗ ಜ್ಯೂಸ್ ಸೇರಿದಂತೆ ಇತರ ಉಪಚಾರದಲ್ಲೂ ಜೋಯ್ ಅವರು ಎತ್ತಿದ ಕೈ. ಇವರ ಸೇವೆಯನ್ನು ಇಲಾಖೆ ಕೂಡ ಗಮನಿಸಿಕೊಂಡು ಸನ್ಮಾನಿಸಿದೆ.

ಮಂಗಳೂರು ಮಲ್ಲಿಗೆಗೆ ಮನಸೋಲದವರಿಲ್ಲ

ಮಲ್ಲಿಗೆ ತುಳುನಾಡಿನ ಮಣ್ಣಿಂದ ಮಿಂದೆದ್ದ ಸುಗಂಧವತಿ. ಇಲ್ಲಿ ಮಲ್ಲಿಗೆ ಇಲ್ಲದೆ ಯಾವುದೇ ಮಂಗಳ ಕಾರ್ಯ ನಡೆಯುವುದಿಲ್ಲ.
ಭೌಗೋಳಿಕ ಚಿಹ್ನೆಯ ಮಾನ್ಯತೆ ಪಡೆದ ಉಡುಪಿ ಮಲ್ಲಿಗೆ ವಹಿವಾಟಿನಲ್ಲಿ ಮುಂಚೂಣಿಯಲ್ಲಿದ್ದರೆ, ಸಾಂಪ್ರದಾಯಿಕ ಹಿನ್ನೆಲೆ ಹಾಗೂ ಘಮಘಮಿಸುವ ಪರಿಮಳದಿಂದ ಮಂಗಳೂರು ಮಲ್ಲಿಗೆ ಇಂದಿಗೂ ತನ್ನದೇ ಆದ ವಿಶೇಷತೆ ಉಳಿಸಿಕೊಂಡಿದೆ.
ಮಂಗಳೂರು ಮಲ್ಲಿಗೆ ಉಡುಪಿ ಮಲ್ಲಿಗೆಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದು. ಮೊಗ್ಗಿನ ತುದಿ ಮೊನಚಾಗಿರುತ್ತದೆ. ಉಡುಪಿ ಮಲ್ಲಿಗೆ ಮೊಗ್ಗು ತುದಿ ಸ್ವಲ್ಪ ಮೊಂಡು.
ಮಧುಮಗಳ ಸಿಂಗಾರಕ್ಕೆ ಎರಡು ಚೆಂಡಾದರೂ ಮಂಗಳೂರು ಮಲ್ಲಿಗೆ ಬೇಕು ಎನ್ನುವ ನಂಬಿಕೆಯನ್ನು ಈ ಭಾಗದ ಹೆಚ್ಚಿನ ಜನರು ಬೆಳೆಸಿಕೊಂಡಿದ್ದಾರೆ. ಹಿಂದುಗಳ ಎಲ್ಲ ಮಂಗಳ ಕಾರ್ಯಕ್ರಮಗಳಿಗೆ ಈ ಹೂವು ಬೇಕೇಬೇಕು.
ಬ್ರಾಹ್ಮಣರು, ಬಂಟರು, ಜಿಎಸ್ಬಿ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ.ಉಡುಪಿ ಮಲ್ಲಿಗೆ, ಶಂಕರಪುರ ಮಲ್ಲಿಗೆ, ಭಟ್ಕಳ ಮಲ್ಲಿಗೆ, ಮಂಗಳೂರು ಮಲ್ಲಿಗೆ ಹೀಗೆ ವಿವಿಧ ಹೆಸರುಗಳ ಮಲ್ಲಿಗೆ ಕರಾವಳಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ.