ಮದರ್ ತೆರೇಸಾ ಶಾಲೆ ಕಟ್ಟಿದ ಶಿಕ್ಷಕಿಯರು !

ಕುಂದಾಪುರದ ಶಂಕರನಾರಾಯಣದಲ್ಲಿ ಮದರ್ ತೆರೇಸಾ ಎನ್ನುವ ಶಾಲೆಯ ನಿರ್ಮಾಣದಲ್ಲಿ ದುಡಿದವರು ಇಬ್ಬರು ಶಿಕ್ಷಕಿಯರು ರೆನಿಟಾ ಹಾಗೂ ಶಮಿತಾ. ಶಿಕ್ಷಕರ ದಿನಾಚರಣೆಯಲ್ಲಿ ಇಬ್ಬರ ಸಾಹಸ ಕತೆ ನಿಮ್ಮ ಮುಂದೆ ಇಡಲಾಗುತ್ತಿದೆ. ರೆನಿಟಾ ಮತ್ತು ಶಮಿತಾ 1995 ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನಿಂದ ಪದವಿ ಪಡೆದರು.
ಈ ಇಬ್ಬರು ಯುವತಿಯರು 1996ರಲ್ಲಿ ಬೆಂಗಳೂರಿನ ರಾಮನಗರದಲ್ಲಿರುವ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು. ಆದರೆ ಈ ಶಾಲೆಯನ್ನು ಕಾಲಕ್ರಮೇಣ ಮುಚ್ಚಲಾಯಿತು. ಅಲ್ಲಿಂದ ಅವರು ಕುಂದಾಪುರಕ್ಕೆ ಬಂದರು.
ಅಲ್ಲಿನ ಶಂಕರನಾರಾಯಣ ಎಂಬ ಹಳ್ಳಿಯಲ್ಲಿ ಎಲ್.ಕೆ.ಜಿ ಮತ್ತು ಒಂದನೇ ತರಗತಿಯನ್ನು ಪ್ರಾರಂಭಿಸಲು ಅವರು ನಿರ್ಧರಿಸಿದರು. ಹಳ್ಳಿಯಲ್ಲಿ ಸ್ಥಳಾವಕಾಶದ ತೊಂದರೆ ಇದ್ದುದರಿಂದ, ಅವರು ಶಂಕರನಾರಾಯಣ ಗ್ರಾಮ ಪಂಚಾಯಿತಿಯ ಅಧ್ಯಕ್ಷರನ್ನು ಭೇಟಿಯಾದರು. ನಂತರ ಅವರು ತಮ್ಮ ಶಾಲೆಯನ್ನು ಜಿಎಸ್ ಆಚಾರ್ಯ ರಂಗಮಂದಿರದಲ್ಲಿ ಮಾಸಿಕ 300 ರೂ. ಬಾಡಿಗೆಗೆ ಪ್ರಾರಂಭಿಸಲು ಅನುವು ಮಾಡಿಕೊಟ್ಟರು.

ಮದರ್ ಥೆರೆಸಾ ಅವರ ಹೆಸರಿನ ಈ ಶಾಲೆ ಪ್ರಾರಂಭವಾಯಿತು. 1998 ರಲ್ಲಿ 12 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶಾಲೆ ಈಗ ಎಲ್‌ಕೆಜಿಯಿಂದ ಪಿಯು ತರಗತಿಯವರೆಗೆ 1050ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ಸಂಸ್ಥೆಯಾಗಿ ಬೆಳೆದಿದೆ. ಶಂಕರನಾರಾಯಣ ಸುತ್ತಮುತ್ತಲಿನ 42 ಹಳ್ಳಿಗಳ ವಿದ್ಯಾರ್ಥಿಗಳು ಮತ್ತು ನಾನಾ ಸ್ಥಳಗಳಿಂದ ಇಲ್ಲಿ ಕೆಲಸಕ್ಕೆ ಬಂದ ಕೂಲಿಗಳ ಮಕ್ಕಳು ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ವಿಶೇಷ ಎಂದರೆ ಈ ಶಿಕ್ಷಣ ಸಂಸ್ಥೆಯಲ್ಲಿ ದುಡಿಯುವ ಎಲ್ಲರೂ ಮಹಿಳಾ ಮಣಿಗಳೇ ಆಗಿದ್ದಾರೆ.

Share