Author: Team Kudla City

ಮಂಗಳೂರು ಟೈಲ್ಸ್ ಎಂದರೆ ಅದು ವರ್ಲ್ಡ್ ಫೇಮಸ್

ಕರ್ನಾಟಕದಲ್ಲಿ ಹೊಸ ಮಾದರಿಯ “ಮಂಗಳೂರು ಹಂಚು”ಗಳೆಂದು ವಿಶ್ವದಾದ್ಯಂತ ಪ್ರಖ್ಯಾತಗೊಂಡಿರುವ ಹಂಚುಗಳನ್ನು ಪ್ರಥಮವಾಗಿ ತಯಾರಿಸಿದ ಕೀರ್ತಿ “ಬಾಸೆಲ್ ಮಿಷನ್” ಸಂಸ್ಥೆಗೆ ಸಲ್ಲುತ್ತದೆ.
ಬಾಸೆಲ್ ಮಿಷನ್ ಎಂಬುದು ಕ್ರಿ.ಶ. 1815 ರಲ್ಲಿ ಸ್ವಿಝರ್ಲೆಂಡ್ ದೇಶದ ಬಾಸೆಲ್ ಎಂಬ ಪಟ್ಟಣದಲ್ಲಿ ಪ್ರಾರಂಭವಾಗಿ ಕ್ರಿ ಶ. 1834 ರಲ್ಲಿ ದಕ್ಷಿಣಕನ್ನಡದಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸಿದ ಒಂದು ಸೇವಾ ಸಂಸ್ಥೆ. ಅದು ಹಿಂದಿನ ದಕ್ಷಿಣಕನ್ನಡ ಜಿಲ್ಲೆಯ (ಉಡುಪಿ ಜಿಲ್ಲೆ ಸಹಿತ) ಮಂಗಳೂರಿನ ಜಪ್ಪು ಎಂಬಲ್ಲಿ ಕ್ರಿ.ಶ. 1865 ರಲ್ಲಿ ಪ್ರಥಮ ಹಂಚಿನ ಕಾರ್ಖಾನೆಯನ್ನು ಸ್ಥಾಪಿಸುವ ಮೂಲಕ 135 ವರ್ಷಗಳಷ್ಟು ದೀರ್ಘಕಾಲದ ಇತಿಹಾಸವುಳ್ಳ ಒಂದು ಹಿರಿಯ ಕೈಗಾರಿಕೆಯು ಕರ್ನಾಟಕದಲ್ಲಿ ಪ್ರಾರಂಭವಾಗಲು ಕಾರಣವಾಗಿದೆ.
ಜೆಪ್ಪುವಿನಲ್ಲಿ ಪ್ರಾರಂಭಿಸಿದ ಹಂಚಿನ ಕಾರ್ಖಾನೆಗೆ ಸಾರ್ವಜನಿಕರಿಂದ ಭಾರಿ ಬೆಂಬಲ ವ್ಯಕ್ತವಾಗಿ ಜನರ ಬೇಡಿಕೆಯನ್ನು ಪೂರೈಸಲು ಬಾಸೆಲ್ ಮಿಷನ್‍ಗೆ ಅಸಾಧ್ಯವಾದಾಗ ಕ್ರಿ.ಶ. 1882ರಲ್ಲಿ ಆರ್ ಹೌರೀ ಮತ್ತು ಜಿ. ಫ್ರಾಂಕೇ ಎಂಬವರ ಹಿರಿತನದಲ್ಲಿ ಮಂಗಳೂರಿನ ಕುದ್ರೋಳಿ ಎಂಬಲ್ಲಿ ಬಾಸೆಲ್ ಮಿಷನ್ ತನ್ನ ಎರಡನೆ ಹಂಚಿನ ಕಾರ್ಖಾನೆಯನ್ನು ಸ್ಥಾಪಿಸಿತು.
ಮುಂದೇ ದಕ್ಷಿಣ ಕನ್ನಡ ಜಿಲ್ಲೆಯ (ಉಡುಪಿದಾಗ ಸಹಿತ) ಉತ್ತರಭಾಗದಲ್ಲಿ ಬಾಸೆಲ್ ಮಿಷನ್ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದಾಗ ಉಡಿಪಿಯ ಮಲ್ಪೆ ಎಂಬಲ್ಲಿ ಬೌಮನ್ ಮತ್ತು ಗ್ಲೇಟ್ ಫೀಲ್ಡರ್ ರ ಮುಂದಾಳುತನದಲ್ಲಿ ಕ್ರಿ.ಶ. 1886 ರಲ್ಲಿ ಬಾಸೆಲ್ ಮಿಷನ್ ತನ್ನ 3ನೇ ಕಾರ್ಖಾನೆಯನ್ನು ಪ್ರಾರಂಭಿಸಿತು. ಆದರೆ ಇದು ಕ್ರಿ.ಶ. 1888 ರಲ್ಲಿ ತನ್ನ ಉತ್ಪಾದನೆ ಪ್ರಾರಂಭಿಸಿತು.

90 ದಾಟಿದರೂ ರುಕ್ಮಯ್ಯ ಕೃಷಿ ಪ್ರೀತಿ ಬಿಟ್ಟಿಲ್ಲ

ರುಕ್ಮಯ್ಯ ಮೂಲ್ಯ ಅವರು ಮಂಗಳೂರು ಸುರತ್ಕಲ್ ನ ಪಾವಂಜೆ ಅವರು ಈಗ ಅವರಿಗೆ 9೦ರ ಹರೆಯ ಇನ್ನು ಅವರ ಕೃಷಿ ಪ್ರೀತಿ ಕುಗ್ಗಿಲ್ಲ. ಈಗಲೂ ಮುಂಜಾನೆ 4ಕ್ಕೆ ಎದ್ದು ಗದ್ದೆಯ ಕೆಲಸದಲ್ಲಿ ತಲ್ಲೀನರಾಗುತ್ತಾರೆ. ಇವರ ಕೃಷಿ ಪ್ರೀತಿಗೊಂದು ಸಲಾಂ

ಕರಾವಳಿಯಲ್ಲಿ ಮಳೆರಾಯ ಯಾಕೆ ಬರ‍್ತಾ ಇಲ್ಲ ?

ರಾಜ್ಯದ ಹೆಚ್ಚು ಮಳೆ ಬೀಳುವ, ಕಡಲತಡಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಕುಡಿವ ನೀರಿಗೆ ತತ್ವಾರ ಆರಂಭವಾಗಿದೆ. ಈ ನೀರಿನ ಬರ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 2018ರಲ್ಲಿ 4616.7ಮಿಮೀ ಮಳೆಯಾಗುವ ಮೂಲಕ ಒಂದು ಹೊಸ ದಾಖಲೆ ನಿರ್ಮಾಣವಾಗಿತ್ತು. ಆದರೆ ಪ್ರಾಕೃತಿಕ ವೈಪರೀತ್ಯವೋ ಎಂಬಂತೆ ಡಿಸೆಂಬರ್ ತಿಂಗಳಾಂತ್ಯಕ್ಕೆ ಜಿಲ್ಲೆಯಾದ್ಯಂತ ಭೂಮಿಯ ಒರತೆ ಕಡಿಮೆಯಾಗಿ, ಕುಡಿಯುವ ನೀರಿಗೂ ತತ್ವಾರ ಬಂದಿದೆ.

ಮಳೆಗಾಲದಲ್ಲಿ ಕರಾವಳಿ ಜಿಲ್ಲೆಗಳು ನೆರೆಯಲ್ಲಿ ಮುಳುಗಿದರೆ, ಬೇಸಗೆಯಲ್ಲಿ ಬಿಸಿಲ ಬೇಗೆಗೆ ಹೈರಾಣಾಗುತ್ತಿವೆ. ಕರಾವಳಿ ಭಾಗದಲ್ಲಿ ಗುರುವಾರ ಬಿಸಿಲ ತಾಪ 37 ಡಿಗ್ರಿಗೆ ತಲುಪಿದ್ದು, ಜನ ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಬೀದಿ ನಾಯಿ ಉಳಿಸಲು ಯುವಕನ ರಿಫ್ಲೆಕ್ಟಿಂಗ್ ಬೆಲ್ಟ್ ಸಾಹಸ

ಕುಡ್ಲ ಸಿಟಿಯೊಳಗೆ ರಾತ್ರಿ ವೇಳೆ ಬೀದಿ ನಾಯಿಗಳಿಂದ ನಡೆಯುವ ಅಪಘಾತಗಳ ಸಂಖ್ಯೆ ಹೆಚ್ಚು. ಕತ್ತಲಲ್ಲಿ ಏಕಾಏಕಿ ನಾಯಿಗಳು ವಾಹನಕ್ಕೆ ಅಡ್ಡಬರುವುದು ಗೋಚರಿಸುವುದಿಲ್ಲ.
ಇದರಿಂದ ವಾಹನ ಸವಾರ ತಬ್ಬಿಬ್ಬಾಗಿ ಅಪಘಾತಕ್ಕೀಡಾಗುತ್ತಾನೆ. ಅಂದಹಾಗೆ ರಿಫ್ಲೆಕ್ಟರ್ ಬೆಲ್ಟ್ ಎಂದರೆ ರಸ್ತೆ ಬದಿಯ ಕಂಬಗಳಿಗೆ ಅಂಟಿಸಿರುವ, ರಾತ್ರಿ ವೇಳೆ ಮಿನುಗುವ ಬಣ್ಣದ ಪಟ್ಟಿ ಮಾದರಿಯ ಬೆಲ್ಟ್ ಇದು. ರಾತ್ರಿ ಈ ಬಣ್ಣದ ಪಟ್ಟಿಯ ಮೇಲೆ ಬೆಳಕು ಬಿದ್ದಾಗ ಮಿನುತ್ತದೆ. ದೂರದಿಂದಲೇ ಇದು ಗೋಚರವಾಗುತ್ತದೆ.
ನಾಯಿಗಳ ಕೊರಳಲ್ಲಿನ ಬೆಲ್ಟ್‌ನಲ್ಲಿಯೂ ಇದೇ ರೀತಿಯ ಗುಣಮಟ್ಟದ ಪಟ್ಟಿ ಹಾಕಲಾಗಿದೆ. ನಾಯಿಯ ಚಲನವಲನ ಬೈಕ್ ಸವಾರನಿಗೆ ದೂರದಿಂದಲೇ ತಿಳಿದು ಮುನ್ನೆಚ್ಚರಿಕೆ ವಹಿಸಬಹುದು. ತೌಸಿಫ್ ಅವರು ಎನಿಮಲ್ ಕೇರ್ ಟ್ರಸ್ಟ್‌ನ ಸಕ್ರಿಯ ಸದಸ್ಯ. ನಗರದಲ್ಲಿ ಹಾವು, ನಾಯಿ, ಪಕ್ಷಿ, ದನಗಳು ಗಾಯಗೊಂಡಿದ್ದರೆ ತಕ್ಷಣ ತಂಡದೊಂದಿಗೆ ಆಗಮಿಸಿ ಚಿಕಿತ್ಸೆ ನೀಡುತ್ತಾರೆ.
ಬೀದಿ ನಾಯಿಗಳ ರಕ್ಷಣೆ ಮಾಡಿ ಶೆಲ್ಟರ್‌ನಲ್ಲಿ ಆರೈಕೆ ಮಾಡುತ್ತಾರೆ. ಕಳೆದ ಮಳೆಗಾಲದಲ್ಲಿ ಮಡಿಕೇರಿಯಲ್ಲಿ ಪ್ರವಾಹ ಬಂದು ದನ, ನಾಯಿಗಳಿಗೆ ಆಹಾರವಿಲ್ಲದೇ ಇದ್ದಾಗ ಸ್ಥಳಕ್ಕೆ ತಂಡದೊಂದಿಗೆ ಧಾವಿಸಿ ಹಲವು ಶ್ವಾನ, ದನಗಳನ್ನು ರಕ್ಷಿಸಿದ್ದರು.

ಜಗತ್ತಿನ ಒಂದೇ ಚರ್ಚ್ ನಲ್ಲಿ ತುಳುವಿನಲ್ಲಿ ಪ್ರಾರ್ಥನೆ

ಕರಾವಳಿಯಲ್ಲಿ ಅದರಲ್ಲೂ ಕ್ರೈಸ್ತ ಸಮುದಾಯದವರು ಹೆಚ್ಚಾಗಿ ಪೂಜಾ ವಿಧಿಗಳು ಸಾಮಾನ್ಯವಾಗಿ ಕೊಂಕಣಿ ಭಾಷೆಯಲ್ಲೇ ನಡೆಯುವುದು ಹೆಚ್ಚು. ಕೆಲವೊಂದು ಸಲ ಕನ್ನಡ, ಇಂಗ್ಲೀಷ್ ಭಾಷೆಯಲ್ಲೂ ಪೂಜಾವಿಧಿ ನಡೆಯುವುದಿದೆ.
ಆದರೆ ತುಳು ಭಾಷೆಯಲ್ಲಿ ಮಾತ್ರ ಪೂಜಾ ವಿಧಿ ನಡೆಸುವುದು ಜಗತ್ತಿನ ಯಾವುದೇ ಮೂಲೆಯಲ್ಲೂ ಇಲ್ಲ. ಆದರೆ ಪಾವೂರು ಹೋಲಿ ಕ್ರಾಸ್ ಚರ್ಚ್ ತುಳು ಭಾಷೆಯಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದು, ಇದು ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಪರಿಗಣಿಸಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕೆಂಬ ತುಳುವರ ಒತ್ತಾಯಕ್ಕೊಂದು ಬೆಂಬಲದಂತಿದೆ.
ಕೆಲವೊಂದು ಸಂದರ್ಭಗಳಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಹಾಗೂ ತುಳುವೇತರರಿಗೆ ಅರ್ಥವಾಗುವ ನಿಟ್ಟಿನಲ್ಲಿ ಕನ್ನಡದಲ್ಲಿ ಪೂಜೆಯ ಹೊರತಾಗಿ ಉಳಿದಂತೆ ವರ್ಷವಿಡೀ, ವಾರದ ಪೂಜೆ, ಸಭೆ, ಸಮಾರಂಭ, ಮದುವೆ, ಸಾವು, ತಿಂಗಳ ಪೂಜೆ, ವರ್ಷದ ಪೂಜೆ, ಬಲಿ ಪೂಜೆ ಎಲ್ಲವೂ ಪಾವೂರು ಚರ್ಚ್‌ನಲ್ಲಿ ತುಳುವಿನಲ್ಲೇ ನಡೆಯುತ್ತಿದೆ.
ಹೀಗೆ ಸ್ಥಳೀಯ ಭಾಷೆಯೊಂದರಲ್ಲಿ ಪೂಜಾ ವಿಧಿ ವಿಧಾನ ನಿರ್ವಹಿಸುವ ಈ ಪದ್ಧತಿ ನಿನ್ನೆ ಮೊನ್ನೆ ಅಥವಾ ಕೆಲ ವರ್ಷಗಳ ಹಿಂದಿನಿಂದ ನಡೆದು ಬಂದ ಸಂಪ್ರದಾಯವಲ್ಲ. ಈ ಪರಿಪಾಠ ಬರೋಬರಿ 100 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ .