Author: Team Kudla City

ಏಕಾಗ್ರತೆ ಸಾಧಿಸಲು ಯೋಗ ಅಗತ್ಯ

ಪ್ರಾಚೀನ ಕಾಲದಿಂದಲ್ಲೂ ಋಷಿಮುನಿಗಳು ಯೋಗದಿಂದ ಸತ್ಯದರ್ಶನವನ್ನು ಕಂಡುಕೊಂಡು ಬಂದಿದ್ದಾರೆ. ಆರೋಗ್ಯಕ್ಕೂ, ಯೋಗಕ್ಕೂ ಅವಿನಾಭಾವ ಸಂಬಂಧವಿದೆ. ಓಂಕಾರಕ್ಕೆ ಅಗಾಧವಾದ ಶಕ್ತಿಯಿದೆ. ಓಂಕಾರವನ್ನು ನಮ್ಮದಾಗಿಸಿಕೊಂಡರೆ ಏಕಾಗ್ರತೆ ಸಾಧಿಸಲು ಸಾಧ್ಯ. ಯೋಗ ನಿಜವಾದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ ಇದರಿಂದ ಬದುಕನ್ನು ಸುಂದರಗೊಳಿಸಲು ಸಾಧ್ಯ ಎಂದು ಮಂಗಳೂರು ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಬಿಜಿಎಸ್ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿ, ಯೋಗದ ಅಸ್ಮಿತೆಯನ್ನು ತಾಯಿಯ ಗರ್ಭದಿಂದಲೇ ಗುರುತಿಸಬಹುದು. ಯೋಗ ಎಂದರೆ ದೈಹಿಕ ಮಾನಸಿಕ ಆಚರಣೆಗಳ ಬೋಧನಾ ಶಾಲೆ ಎಂದು ಕರೆಯಬಹುದು. ವ್ಯಕ್ತಿಯು ತನ್ನನ್ನು ತಾನು ಅರ್ಥಮಾಡಿಕೊಂಡು ಅನುಭೂತಿಯನ್ನು ಪಡೆಯಲು ಯೋಗ ಅಗತ್ಯವಾಗಿದೆ. ಜೀವನದೊಂದಿಗೆ ಪರಮಾತ್ಮನನ್ನು ಲೀನವಾಗಿಸುವುದೇ ಯೋಗ, ಮಾನವ ಪ್ರತಿ ದಿನ ಮನೋಗ್ಲಾನಿಯಾಗಿ ಬದುಕುತ್ತಿದ್ದಾನೆ. ಅವನು ತಿನ್ನುವ ಆಹಾರ, ಬದುಕುವ ಪರಿಸರ ಶರೀರವನ್ನು ಜಾಡ್ಯವಾಗಿಸಿದೆ. ಈ ಶಾರೀರಿಕ ಬಾಧೆಯನ್ನು ಮೀರಲು ಯೋಗಸಾಧನಗಳು ಸಹಕಾರಿಯಾಗಿದೆ ಎಂದರು.

ಹೊಸ್ಮಾರು ಬಲ್ಯೊಟ್ಟು ಗುರುಕುಲ ಆಶ್ರಮದ ಶ್ರೀ ವಿಖ್ಯಾತನಂದ ಸ್ವಾಮೀಜಿ ಅವರು ಯೋಗವು ಭಾರತವನ್ನು ವಿಶ್ವಗುರುವನ್ನಾಗಿ ಮಾಡಿದೆ. ಭಗವದ್ಗೀತೆಯ ೧೮ನೇ ಅಧ್ಯಾಯವು ಯೋಗದ ಬಗ್ಗೆ ಮಾತನಾಡುತ್ತದೆ ಎಂದರಲ್ಲದೇ ತಪಸ್ವಿಯಾಗಲು ಯೋಗ ಪ್ರಧಾನವಾದ ಅಸ್ತ್ರ ಎಂದರು. ಕಾರ್ಯಕ್ರಮದಲ್ಲಿ ಬಿಜಿಎಸ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಸುಬ್ಬಕಾರಡ್ಕ, ಬಿಜಿಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಲತಾ ರಾಜಾರಾಮ್, ಬಿಜಿಎಸ್ ಎಜುಕೇಷನ್ ಸೆಂಟರ್‌ನ ಪ್ರಾಂಶುಪಾಲರಾದ ರೇಷ್ಮಾ ಸಿ ನಾಯರ್, ಬಿಜಿಎಸ್ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ರಶ್ಮಿ ಉಪಸ್ಥಿತರಿದ್ದರು. ನರಸಿಂಹ ಕುಲಕರ್ಣಿ ಹಾಗೂ ಜಗದೀಶ ಮುರ ಅವರು ವಿದ್ಯಾರ್ಥಿಗಳಿಗೆ ಯೋಗಾಸನಗಳನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರು , ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮಾರಂಭವನ್ನು ವಿದ್ಯಾರ್ಥಿಗಳಾದ ಸ್ನೇಹ ನಿರೂಪಿಸಿ, ಕಾವ್ಯ ಭಟ್ ಸ್ವಾಗತಿಸಿ ಪ್ರತೀಕ್ಷಾ ಕೆ ವಂದಿಸಿದರು.

ಹಲಸಿನ ಹಣ್ಣಿನಲ್ಲಿ ಸೋಪ್ ರೆಡಿ

ಕಳೆದ ಕೆಲವು ವರ್ಷಗಳಿಂದೀಚೆಗೆ ಹಲಸು ಪ್ರಿಯರು ದೇಶಾದ್ಯಂತ ಹಲಸಿನ ಮೌಲ್ಯವರ್ಧನೆ ಹಾಗೂ ಸಂರಕ್ಷಣೆಗಾಗಿ ಹೊಸ ಹೊಸ ಆವಿಷ್ಕಾರ ಮಾಡುತ್ತಿದ್ದಾರೆ. ಅದರಲ್ಲಿ ಬಂಟ್ವಾಳ ತಾಲೂಕಿನ ವಿಟ್ಲದವರಾದ ಪ್ರಸ್ತುತ ಚೆನ್ನೈಯಲ್ಲಿ ನೆಲೆಸಿರುವ ಅಪರ್ಣಾ ಹರೀಶ್, ತಾವೇ ಸ್ವತಃ ಹಲಸಿನ ಹಣ್ಣಿನಿಂದ ಸೋಪ್ ತಯಾರಿಸಿ ಎಲ್ಲೆಡೆಯಿಂದ ಭೇಷ್ ಎನ್ನಿಸಿಕೊಂಡಿದ್ದಾರೆ.

ಒಂದು ವರ್ಷದಿಂದ ಪ್ರಯೋಗ ಮಾಡಿಕೊಂಡು ಸೋಪ್ ತಯಾರಿಸಿದ್ದಾರೆ. ಸೋಪ್ ತಯಾರಿಸುವಾಗ ಹಲಸಿನ ಹಣ್ಣು, ಕ್ಯಾಲಮಿನ್ ಪೌಡರ್, ತೆಂಗಿನೆಣ್ಣೆ, ಹರಳೆಣ್ಣೆ ಬಳಸಿದ್ದಾರೆ. ಹಲಸಿನ ಬೀಜ ಬಳಸಿಲ್ಲ. ಈ ಸೋಪ್‌ನಲ್ಲಿ ವಿಟಮಿನ್ ಸಿ ಮತ್ತು ಡಿ ಇದ್ದು, ಸೋರಿಯಾಸಿಸ್ ಅಥವಾ ಚರ್ಮದ ಕಾಯಿಲೆ ವಾಸಿಗೆ ಅತ್ಯುತ್ತಮ ಮದ್ದು ಎನ್ನುವುದು ಅವರ ಮಾತು.

ಹಲಸಿನ ಹಣ್ಣಿನ ಶ್ಯಾಂಪೂ, ಪೌಡರ್ ಮಾಡಬೇಕು ಎಂಬ ಪ್ಲ್ಯಾನ್ ಇಟ್ಟುಕೊಂಡಿರುವ ಅಪರ್ಣಾ, ಚರ್ಮದ ಸೌಂದರ್ಯಕ್ಕಾಗಿ ಕೆಲವೊಂದು ಸೌಂದರ್ಯವರ್ಧಕ ಉತ್ಪನ್ನ ತಯಾರಿಸುವಲ್ಲಿ ನಿರತರಾಗಿದ್ದಾರೆ. ತಾನು ತಯಾರಿಸಿದ ಸೋಪ್‌ಗೆ ‘ಝ್ಯ’ ಎಂದು ಹೆಸರಿಟ್ಟಿದ್ದಾರೆ. ಹಲಸಿನ ಹಣ್ಣಿನ ಶ್ಯಾಂಪೂ ಯಾವ ರೀತಿ ಕೂದಲಿನ ಸೌಂದರ‍್ಯ ಇಮ್ಮಡಿಗೊಳಿಸಲು ನೆರವಾಗುತ್ತದೆ ಎಂಬ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಅದಾದ ಬಳಿಕ ಟಾಲ್ಕಂ ಪೌಡರ್ ಆವಿಷ್ಕಾರ ಮಾಡುವತ್ತ ಮುನ್ನಡೆಯಲಿದ್ದಾರೆ.

ಕುಡ್ಲದಲ್ಲಿ ಆರೋಗ್ಯ ಪೂರ್ಣ ಯೋಗ

ಕುಡ್ಲದಲ್ಲಿ ಯೋಗದ ಆಚರಣೆಯ ಸಂಭ್ರಮವೇ ಬೇರೆ. ಮುಂಜಾನೆಯಲ್ಲಿ ಮಳೆರಾಯನ ದಿಢೀರ್ ಎಂಟ್ರಿಯ ಜತೆಯಲ್ಲಿಯೇ ನಾನಾ ಸಂಘಟನೆಗಳು ಯೋಗದಲ್ಲಿ ಆರೋಗ್ಯವನ್ನು ಹುಡುಕಲು ಪ್ರಯತ್ನ ಪಟ್ಟಿದ್ದು ಈಗಾಗಲೇ ಎಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ.
ಮಂಗಳೂರಿನ ಲೇಡಿಹಿಲ್ ವೃತ್ತದಿಂದ ಕೆನರಾ ಶಾಲೆಯ ವರೆಗಿನ ಎರಡು ರಸ್ತೆಯಲ್ಲೇ ಸಾವಿರಕ್ಕೂ ಅಧಿಕ ಯೋಗಪಟುಗಳು ಮುಂಜಾನೆ ಹೊತ್ತು ಯೋಗದಲ್ಲಿ ನಿರತರಾಗುವ ಮೂಲಕ ಕುಡ್ಲದ ಜನರಿಗೆ ಯೋಗದ ಬಗ್ಗೆ ಮಾಹಿತಿ, ಜಾಗೃತಿಯನ್ನು ಹುಟ್ಟುಹಾಕುವ ಕಾರ‍್ಯವನ್ನು ಮಾಡಿದರು.

ಶಾಸಕರ ಐಡಿಯಾಕ್ಕೆ ಭೇಶ್ ಎಂದ ಸ್ವಿಗ್ಗಿ

ನಮ್ಮ ಕುಡ್ಲ ಸಿಟಿ ಬೆಳೆಯುತ್ತಿದೆ. ಅದರಲ್ಲೂ ಈ ಬೆಳವಣಿಗೆಯ ಜತೆಗೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ದಿನನಿತ್ಯ ಏರಿಕೆಯಾಗುತ್ತಿದೆ. ಆಹಾರದಲ್ಲೂ ಪ್ಲಾಸ್ಟಿಕ್ ಲಕೋಟೆ(ಬ್ಯಾಗ್)ಗಳ ಪ್ರಮಾಣ ಏರಿಕೆಯಾಗುತ್ತಿದೆ.
ಮಂಗಳೂರಿನ ಫುಡ್ ಡೆಲಿವರಿ ಸಿಸ್ಟಂ ಕೂಡ ಅಷ್ಟೇ ವೇಗವಾಗಿ ಓಡುತ್ತಿದೆ. ಇಂತಹ ಸಮಯದಲ್ಲಿ ಫುಡ್ ಡೆಲಿವರಿಯಲ್ಲಿ ಕರಾವಳಿಯಲ್ಲಿ ಹೇರಳವಾಗಿ ಸಿಗುವ ಬಾಳೆ ಎಳೆಯನ್ನು ಬಳಸಿಕೊಳ್ಳುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಹಂಚುವ ಕಾರ‍್ಯ ಮಾಡಿದ್ದರು.
ಇದಕ್ಕೆ ಸ್ವಿಗ್ಗಿ ಫುಡ್ ಡೆಲಿವರಿ ಕಂಪನಿ ಕೂಡ ಈ ಕುರಿತು ಪಾಸಿಟಿವ್ ಅಭಿಪ್ರಾಯವನ್ನು ನೀಡುವ ಜತೆಗೆ ಮುಂದಿನ ದಿನಗಳಲ್ಲಿ ತಮ್ಮ ಪಾಲುದಾರ ಹೋಟೆಲ್‌ಗಳ ಜತೆಗೆ ಕಂಪನಿ ಕೂಡ ಈ ಕುರಿತು ಚಿಂತನೆ ನಡೆಸುತ್ತದೆ ಎನ್ನುವ ಅಭಿಪ್ರಾಯ ತಾಳಿದೆ.

ಮಂಗಳೂರು ವಿವಿ ಪದವಿ ಕಾಲೇಜುಗಳ ಆರಂಭ

ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಕಾಲೇಜುಗಳು ಜೂ.20 ರಿಂದ ಆರಂಭ ವಾಗಲಿದೆ. ವಿಶೇಷವಾಗಿ ಈ ಬಾರಿ ಸರಕಾರಿ ಪದವಿ ಕಾಲೇಜು ಗಳಲ್ಲಿ ಇನ್ನೂ ಕೂಡ ಅತಿಥಿ ಉಪನ್ಯಾಸ ಕರ ನೇಮಕ ನಡೆಯದ ಕಾರಣ ಸರಕಾರಿ ಕಾಲೇಜಿನಲ್ಲಿ ಪದವಿ ಕಲಿಯುವ ವಿದ್ಯಾರ್ಥಿಗಳಿಗೆ ಕೊಂಚ ತರಗತಿಗಳು ನಡೆಯದ ಸ್ಥಿತಿಯಲ್ಲಿ ಮುಂದೆ ಸಾಗಲಿದೆ ಉಳಿದಂತೆ ಹೊಸ ವಿದ್ಯಾರ್ಥಿಗಳು ಪದವಿ ತರಗತಿಯನ್ನು ಖುಷಿಯಿಂದ ಸ್ವಾಗತಿಸುತ್ತಾರೆ.