ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗೆ ಜ್ವರ ಪ್ರತಿವರ್ಷನೂ ತೀವ್ರಗೊಂಡು ಹಲವು ಮಂದಿ ಮೃತಪಟ್ಟಿದ್ದಾರೆ. ಇದೇ ಒಂದು ವಿಚಾರದಿಂದ ತುಳುನಾಡಿನ ಬೆಳ್ತಂಗಡಿಯ ವಿದ್ಯಾರ್ಥಿನಿ ಸುನಿತಾ ಪ್ರಭು ಮೂರ್ಜೆ ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಿದರು.
ಪುಣೆಯ ಸಂಜೀವ ಹೋತ ಎನ್ನುವವರು ಜತೆಯಾಗಿಕೊಂಡು ಇಬ್ಬರು ಸೇರಿ ಸೊಳ್ಳೆ ನಿರೋಧಕ ಬಟ್ಟೆ ತಯಾರಿಸುವ ಪರಿಕಲ್ಪನೆಗೆ ಚಾಲನೆ ನೀಡಿದ್ದರು. ಅದರ ಫಲವೇ ಈ ಸಂಶೋಧನೆ. ಈ ಹೊಸ ವಿಧಾನವನ್ನು ಪುಣೆಯ ಐಐಎಸ್‍ಇಆರ್ ಸಹಕಾರದೊಂದಿಗೆ ಅನ್ವೇಷಣೆ ಮಾಡಿದ್ದು, ಅಲ್ಲೇ ಅಭಿವೃದ್ಧಿ ಪಡಿಸಿಕೊಂಡು ಅಲ್ಲೇ ಪರೀಕ್ಷೆಗೆ ಒಳಪಡಿಸಿದ್ದು, ಬಟ್ಟೆಯನ್ನು 36 ಬಾರಿ ತೊಳೆದರೂ ಶೇ.90ರಷ್ಟು ನಿರೋಧಕ ಸಾಮಥ್ರ್ಯ ಉಳಿದುಕೊಳ್ಳುವುದು ಸಂಶೋಧನೆಯಲ್ಲಿ ಸಾಬೀತಾಗಿದೆ. ಇದಕ್ಕೆ ತಗಲುವ ವೆಚ್ಚ 14 ರೂಪಾಯಿ ಮಾತ್ರ ಎನ್ನುವುದು ವಿಶೇಷ.
ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ನಡೆಸಿದ ಅಮೋಘ ಸಾಧನೆಗಾಗಿ ಸುನೀತಾ ಪ್ರಭು ಅವರು ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದಿಂದ ಕೊಡ ಮಾಡುವ ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಬುಧವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳಾದ ರಮಾನಾಥ್ ಕೊವಿಂದ್ ಅವರಿಂದ ಸ್ವೀಕರಿಸಿದರು.