Tagged: Yakshadhruva Patla Foundation

ಕುಡ್ಲದಲ್ಲಿ ಯಕ್ಷಗಾನ ಕಲಾವಿದರು ಓಡಿದರು !

ಮಂಗಳೂರಿನ ಮಂಗಳಾ ಕ್ರೀಡಾಂಗಣ ಯಕ್ಷಗಾನ ಕಲಾವಿದರಿಂದ ತುಂಬಿ ಹೋಗಿತ್ತು. ದ.ಕ, ಉಡುಪಿ, ಉ.ಕ. ಕಾಸರಗೋಡಿನ ಹೆಚ್ಚಿನ ಎಲ್ಲ ಮೇಳಗಳ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರಿದ್ದರು.

ಅಲ್ಲಿ ಯಕ್ಷಗಾನವಿರಲಿಲ್ಲ ಬದಲಾಗಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಮೇಳಗಳ ಯಕ್ಷಗಾನ ಕಲಾವಿದರಿಗೆ ಇದೇ ಮೊದಲ ಬಾರಿಗೆ ಕ್ರೀಡಾಕೂಟ ಆಯೋಜನೆಗೊಂಡಿದೆ.

24 ಮೇಳಗಳ ಸದಸ್ಯರು ಕಾಣಿಸಿಕೊಂಡಿದ್ದಾರೆ. ಮಂದಾರ್ತಿ ಮೇಳ (ಎ)(ಬಿ), ಸಾಲಿಗ್ರಾಮ, ಕಟೀಲಿನ 6 ಮೇಳ, ಬಪ್ಪನಾಡು, ಸಸಿಹಿತ್ಲು , ಎಡನೀರು, ಕೂಡ್ಲು, ಮಲ್ಲ, ಕುತ್ಯಾಳ, ಬೆಂಕಿನಾಥೇಶ್ವರ ಮೇಳ, ಸುಂಕದಕಟ್ಟೆ ಮೇಳ, ಸೌಕೂರು, ಅಮೃತೇಶ್ವರಿ ಕೋಟ, ಮಾರಣಕಟ್ಟೆ ಮೇಳ, ಗೋಳಿಗರಡಿ,ಹಿರಿಯಡ್ಕ, ಮಡಾಮಕ್ಕಿ, ಧರ್ಮಸ್ಥಳ ಮೇಳಗಳ ಕಲಾವಿದರು ಭಾಗವಹಿಸಿದ್ದರು.

ಓಟ, ಉದ್ದಜಿಗಿತ, ಗುಂಡು ಎಸೆತ, ಬಾಂಬ್ ಇನ್‌ದ ಸಿಟಿ, ಸಂಗೀತ ಕುರ್ಚಿ, ರಿಲೇ, ಕ್ರಿಕೆಟ್, ಹಗ್ಗಜಗ್ಗಾಟ ಮೊದಲಾದ ಆಟಗಳಿದ್ದವು. ಸುಮಾರು 400 ಮಂದಿ ಕಲಾವಿದರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಹಿರಿಯ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಭಾಗವತರಾದ ಪ್ರಸಾದ್ ಬಲಿಪ, ರವಿಚಂದ್ರ ಕನ್ನಡಿಕಟ್ಟೆ ಸೇರಿದಂತೆ ಯಕ್ಷಗಾನ ಕಲಾವಿದರು ಪಾಲ್ಗೊಂಡಿದ್ದರು.