Tagged: congress

ಕರಾವಳಿಯ ರಾಜಕಾರಣಿಗಳ ಮಾನ ಹರಾಜು ಹಾಕಿದ ಜನತೆ !

ಜನರಿಗೆ ಕುಡಿಯುವ ನೀರಿಗಾಗಿ ರೂಪಿಸಲಾದ ಎತ್ತಿನಹೊಳೆ ಯೋಜನೆ ಬೆಂಬಲಿಸಿ ಕರಾವಳಿಗೆ ಕುಡಿಯುವ ನೀರಿಗೆ ತತ್ವಾರ ಮಾಡಿದ ಜನಪ್ರತಿನಿಧಿಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ಆಕ್ರೋಶವ್ಯಕ್ತಪಡಿಸಿ, ನಗರದ ಹಲವೆಡೆ ಬ್ಯಾನರ್‌ಗಳನ್ನು ಪ್ರದರ್ಶನ ಮಾಡಿದ್ದಾರೆ.

ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಹೆಚ್ಚಾಗುತ್ತಿರುವಂತೆಯೇ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಖಂಡಿಸಿ ನಗರದ ಹಲವೆಡೆ ಕೊಟ್ಟಾರ, ಪಂಪ್‌ವೆಲ್, ಹಂಪನಕಟ್ಟೆ ಮುಂತಾದೆಡೆ ಬ್ಯಾನರ್ ಹಾಕಲಾಗಿದೆ.
ಈ ಬ್ಯಾನರ್‌ಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಾದ ಯು.ಟಿ. ಖಾದರ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ, ಸಂಜೀವ ಮಠಂದೂರು, ಹರೀಶ್ ಪೂಂಜ, ಎಸ್. ಅಂಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲ ಶಾಸಕರ ಹೆಸರು, ಭಾವಚಿತ್ರ ಹಾಕಿ, ‘ನಿಮ್ಮನ್ನು ಜನ ಚುನಾಯಿಸಿದ್ದು 40 ಲಕ್ಷ ರೂ. ಕಾರಿನಲ್ಲಿ ತಿರುಗಾಡಲು ಅಲ್ಲ, ಜಿಲ್ಲೆಯ ಜನರಿಗೆ ಈಗ ಕುಡಿಯುವ ನೀರಿಲ್ಲ, ಮೊದಲು ಎತ್ತಿನಹೊಳೆ ವಿರೋಧಿಸಿ ವಿಧಾನಸಭೆಯಲ್ಲಿ ಧರಣಿ ಮಾಡಿ, ಇಲ್ಲವಾದರೆ ರಾಜಿನಾಮೆ ಕೊಟ್ಟು ಅಮರನಾಂತ ಉಪವಾಸ ಕುಳಿತುಕೊಳ್ಳಿ’ ಆಗ ನೀವು ನಿಜವಾದ ಜನಸೇವಕರು ಎಂಬುದನ್ನು ಸಾಬೀತುಪಡಿಸಿ ಎಂದು ಸಂದೇಶ ಹಾಕಿದ್ದಾರೆ.

ಆ ಬ್ಯಾನರ್‌ಗಳ ಪಕ್ಕದಲ್ಲಿ ಇನ್ನೊಂದು ಬ್ಯಾನರ್‌ನಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಎತ್ತಿನಹೊಳೆ ಯೋಜನೆ ಬೆಂಬಲಿಸಿದ ದ.ಕ. ಜಿಲ್ಲೆಯವರಾದ ಡಾ. ಎಂ. ವೀರಪ್ಪ ಮೊಯ್ಲಿ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಫೊಟೊ ಹಾಕಿ ‘13 ಸಾವಿರ ಕೋಟಿ ರೂ. ಯೋಜನೆಯ ಕಮಿಷನ್ ಆಸೆಗೆ ಜಿಲ್ಲೆಯ ಜೀವನದಿಯನ್ನು ಸರ್ವನಾಶ ಮಾಡಿ, ಜನರೀಗ ಟಾಯ್ಲೆಟ್, ಚರಂಡಿ ನೀರು ಶುದ್ಧೀಕರಿಸಿ ಕುಡಿಯುವಂತೆ ಮಾಡಿದ ಮೊಯ್ಲಿ ಹಾಗೂ ಡಿ.ವಿ ಸದಾನಂದ ಗೌಡರಿಗೆ ನಿದ್ದೆಯಲ್ಲಿರುವ ಜಿಲ್ಲೆಯ ಪ್ರಜೆಗಳಿಂದ ಹಾರ್ದಿಕ ಸ್ವಾಗತ ಎಂದು ವ್ಯಂಗ್ಯ ಮಾಡಿ ಬರಹ ಹಾಕಲಾಗಿದೆ.

ಕರಾವಳಿಯ ನೀರಿನ ಸಮಸ್ಯೆಗೆ ಕಾರಣಕರ್ತರಾದ ಜನಪ್ರತಿನಿಧಿಗಳಿಗೆ ಸಂದೇಶ ನೀಡುವ ಈ ಬ್ಯಾನರ್‌ನ್ನು ತೆಗೆಯುವಂತಿಲ್ಲ. ಒಂದು ವೇಳೆ ತೆಗೆಯುವುದಾದರೆ ‘ನಗರದಲ್ಲಿರುವ ಅನಧಿಕೃತ ಫ್ಲೆಕ್ಸ್ ಮೊದಲು ತೆರವು ಮಾಡಿ. ಆ ಬ್ಯಾನರ್‌ಗಳನ್ನು ತೆರವು ಮಾಡದೆ ಎತ್ತಿನಹೊಳೆ ಕುರಿತು ಅಳವಡಿಸಿರುವ ಭಿತ್ತಿಪತ್ರಗಳನ್ನು ತೆರವುಗೊಳಿಸಿದರೆ ಎಚ್ಚರಿಕೆ…. ಎಂದು ಮಂಗಳೂರು ಮಹಾನಗರಪಾಲಿಗೆ ಅಧಿಕಾರಿಗಳಿಗೂ ಎಚ್ಚರಿಕೆ ನೀಡಿದ್ದಾರೆ.