Tagged: church

ಮಂಗಳೂರಿನ ಚರ್ಚ್ ಗಳಲ್ಲೂ ಅನ್ನದಾನ !

ಮಂಗಳೂರಿಗೆ ಬಂದು ಊಟಕ್ಕೆ ಹಣ ಇಲ್ಲಹೊಟ್ಟೆಯಲ್ಲಿ ಕೂರಬೇಕಿಲ್ಲ. ಮಂಗಳೂರಿನ ಕದ್ರಿ, ಕುದ್ರೋಳಿ, ಕಟೀಲು, ಸುಂಕದಕಟ್ಟೆ ದೇವಳದಲ್ಲಿ ಭಕ್ತಾದಿಗಳಿಗೆ ಮಧ್ಯಾಹ್ನ ಉಚಿತ ಊಟ(ದೇವರ ಪ್ರಸಾದ)ದ ವ್ಯವಸ್ಥೆ ಇರುತ್ತದೆ. ಅದರಲ್ಲೂ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಚರ್ಚ್‌ಗಳಲ್ಲೂ ಇಂತಹ ಅನ್ನದಾನದ ಕಲ್ಪನೆಯನ್ನು ಆಳವಡಿಸಿಕೊಂಡಿದ್ದಾರೆ.

ದಿನನಿತ್ಯದ ಊಟದ ವ್ಯವಸ್ಥೆ ಇಲ್ಲದೇ ಇದ್ದರೂ ಕೂಡ ಕೆಲವೊಂದು ವಿಶೇಷ ದಿನಗಳಲ್ಲಿ ಅನ್ನದಾನದ ವ್ಯವಸ್ಥೆಯಿದೆ. ಮಂಗಳೂರಿನ ಕೆಲವೊಂದು ಕ್ರೈಸ್ತ ಧರ್ಮದ ಪುಣ್ಯಕ್ಷೇತ್ರಗಳಾದ ಮುಡಿಪು ಸಂತ ಜೋಸೆಫ್( ಶುಕ್ರವಾರ), ಪಕ್ಷಿಕೆರೆ ಸಂತ ಜೂದ್(ಮಂಗಳವಾರ) ಬೋಂದೆಲ್ ಸಂತ ಲಾರೆನ್ಸ್ (ಮಂಗಳವಾರ), ಅಲಂಗಾರು ಬಾಲಯೇಸು ಮಂದಿರ( ಶುಕ್ರವಾರ), ಬಿಕರ್ನಕಟ್ಟೆ ಬಾಲಯೇಸು ಮಂದಿರ (ಗುರುವಾರ) ದೇವರ ಪ್ರಸಾದ(ಅನ್ನದಾನ)ದ ವ್ಯವಸ್ಥೆ ಇರುತ್ತದೆ.

20 ದಿನದಲ್ಲಿ 77,475 ಗಿಡ ನೆಟ್ಟವರ ಕತೆಯಿದು !

ಒಂದಲ್ಲ ಎರಡಲ್ಲ ಬರೋಬರಿ 20 ದಿನಗಳಲ್ಲಿ 77,475 ಗಿಡಗಳನ್ನು ನೆಟ್ಟು ಹಸಿರು ಇಳೆಗೆ ಸಾಕ್ಷಿಯಾದರು. ಹೌದು. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ 124 ಚರ್ಚ್ ಗಳಲ್ಲಿ ನಡೆದ ಕಾರ್ಯಕ್ರಮ ವಿದು.
ಲಾವ್ದಾತೋ ಸಿ ಭಾನುವಾರ ಜೂ.30 ರಂದು ನಡೆಯಿತು. ಅದಕ್ಕೂ ಮೊದಲು ಅಂದರೆ ಜೂ.10 ರಿಂದ ಭಾನುವಾರದ ವರೆಗೆ ಈ ಹಸಿರಿನ ಅಭಿಯಾನ ನಡೆದಿದೆ.

ರಾಜ್ಯದಲ್ಲಿರುವ ಏಕೈಕ ಹಡಗು ಚರ್ಚ್ ಗೊತ್ತಾ..?

ರಾಜ್ಯದ ಚರ್ಚ್‌ಗಳಲ್ಲಿ ಅತೀ ವಿಶಿಷ್ಟ ಚರ್ಚ್ ಎಂದರೆ ಅದು ಉಡುಪಿ ಕಲ್ಮಾಡಿ ಸ್ಟೆಲ್ಲಾ ಮಾರೀಸ್ ಚರ್ಚ್ ಎನ್ನಲಾಗುತ್ತಿದೆ. ಕಾರಣ ಈ ಚರ್ಚ್‌ನ ಕಟ್ಟಡವೇ ಹಡಗಿನ ರೂಪದಲ್ಲಿದೆ. ಇದನ್ನು ಸಮುದ್ರ ತಾರೆ ಎಂದೇ ಕರೆಯಲಾಗುತ್ತದೆ. ಮಲ್ಪೆ ಬಂದರಿನ ಸಮೀಪದಲ್ಲಿರುವುದರಿಂದ ಇದು ಹಡಗಿನ ರೂಪದ ಚರ್ಚ್ ಆಗಿ ನಿರ್ಮಾಣ ಮಾಡಲಾಗಿದೆ.
ಉಡುಪಿ- ಮಲ್ಪೆ ಕಡೆಗೆ ಹೋಗುವ ಬಸ್‌ಗಳು ಕಲ್ಮಾಡಿ ಮೂಲಕವೇ ಹಾದು ಹೋಗಬೇಕಾಗುತ್ತದೆ. ವೆಲಂಕಣಿ ಮಾತೆಯನ್ನು ಇಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ.

ಜಗತ್ತಿನ ಒಂದೇ ಚರ್ಚ್ ನಲ್ಲಿ ತುಳುವಿನಲ್ಲಿ ಪ್ರಾರ್ಥನೆ

ಕರಾವಳಿಯಲ್ಲಿ ಅದರಲ್ಲೂ ಕ್ರೈಸ್ತ ಸಮುದಾಯದವರು ಹೆಚ್ಚಾಗಿ ಪೂಜಾ ವಿಧಿಗಳು ಸಾಮಾನ್ಯವಾಗಿ ಕೊಂಕಣಿ ಭಾಷೆಯಲ್ಲೇ ನಡೆಯುವುದು ಹೆಚ್ಚು. ಕೆಲವೊಂದು ಸಲ ಕನ್ನಡ, ಇಂಗ್ಲೀಷ್ ಭಾಷೆಯಲ್ಲೂ ಪೂಜಾವಿಧಿ ನಡೆಯುವುದಿದೆ.
ಆದರೆ ತುಳು ಭಾಷೆಯಲ್ಲಿ ಮಾತ್ರ ಪೂಜಾ ವಿಧಿ ನಡೆಸುವುದು ಜಗತ್ತಿನ ಯಾವುದೇ ಮೂಲೆಯಲ್ಲೂ ಇಲ್ಲ. ಆದರೆ ಪಾವೂರು ಹೋಲಿ ಕ್ರಾಸ್ ಚರ್ಚ್ ತುಳು ಭಾಷೆಯಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದು, ಇದು ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಪರಿಗಣಿಸಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕೆಂಬ ತುಳುವರ ಒತ್ತಾಯಕ್ಕೊಂದು ಬೆಂಬಲದಂತಿದೆ.
ಕೆಲವೊಂದು ಸಂದರ್ಭಗಳಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಹಾಗೂ ತುಳುವೇತರರಿಗೆ ಅರ್ಥವಾಗುವ ನಿಟ್ಟಿನಲ್ಲಿ ಕನ್ನಡದಲ್ಲಿ ಪೂಜೆಯ ಹೊರತಾಗಿ ಉಳಿದಂತೆ ವರ್ಷವಿಡೀ, ವಾರದ ಪೂಜೆ, ಸಭೆ, ಸಮಾರಂಭ, ಮದುವೆ, ಸಾವು, ತಿಂಗಳ ಪೂಜೆ, ವರ್ಷದ ಪೂಜೆ, ಬಲಿ ಪೂಜೆ ಎಲ್ಲವೂ ಪಾವೂರು ಚರ್ಚ್‌ನಲ್ಲಿ ತುಳುವಿನಲ್ಲೇ ನಡೆಯುತ್ತಿದೆ.
ಹೀಗೆ ಸ್ಥಳೀಯ ಭಾಷೆಯೊಂದರಲ್ಲಿ ಪೂಜಾ ವಿಧಿ ವಿಧಾನ ನಿರ್ವಹಿಸುವ ಈ ಪದ್ಧತಿ ನಿನ್ನೆ ಮೊನ್ನೆ ಅಥವಾ ಕೆಲ ವರ್ಷಗಳ ಹಿಂದಿನಿಂದ ನಡೆದು ಬಂದ ಸಂಪ್ರದಾಯವಲ್ಲ. ಈ ಪರಿಪಾಠ ಬರೋಬರಿ 100 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ .