ನಗರ ಬೆಳೆಯುತ್ತಾ ಸಾಗುತ್ತಿದ್ದಂತೆ ಪಕ್ಷಿ,ಪ್ರಾಣಿಗಳ ಸಂತತಿ ಇಳಿಮುಖವಾಗುತ್ತಿರುವ ದೃಶ್ಯಗಳು ದಿನನಿತ್ಯನೂ ನಗರವಾಸಿಗಳು ಗಮನಕ್ಕೆ ಬಂದಿರಬಹುದು. ಬೆಳಗ್ಗೆ ಎದ್ದಾಗ ಹಕ್ಕಿಗಳ ಕಲರವ ಕೂಡ ಕಡಿಮೆಯಾಗುತ್ತಿದೆ. ಇಂತಹ ಹತ್ತಾರು ದೃಶ್ಯಗಳನ್ನು ನೋಡಿದ ಕುಡ್ಲ ಸಿಟಿಯ ಹುಡುಗ ತೌಸಿಫ್ ಅಹಮ್ಮದ್ ಅವರು ಪೈಪ್‌ಗಳ ಮೂಲಕ ಗೂಡು ಕಟ್ಟಿ ಪಕ್ಷಿಗಳ ಸಂತತಿ ಉಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಮಂಗಳೂರು ಅನಿಮಲ್ ಕೇರ್ ಟ್ರಸ್ಟ್‌ನ ಸಕ್ರೀಯ ಸದಸ್ಯ ತೌಸಿಫ್ ಅಹಮ್ಮದ್ ಕುಡ್ಲ ಸಿಟಿಯ ಪಕ್ಷಿಗಳ ಮೇಲೆ ವಿಶೇಷವಾದ ಕಾಳಜಿ ಬೆಳೆಸಿಕೊಂಡಿದ್ದಾರೆ. ತೌಸಿಫ್ ಹೇಳುವಂತೆ ನಗರ ಪ್ರದೇಶದಲ್ಲಿ ಪಕ್ಷಿಗಳಿಗೆ ನೆಮ್ಮದಿಯಿಂದ ಗೂಡು ಕಟ್ಟಲು ಕೂಡ ಸಾಧ್ಯವಾಗುತ್ತಿಲ್ಲ.
ನಗರದ ಕಾಂಕ್ರೀಟ್ ಬದುಕಿನಿಂದಾಗಿ ಹಕ್ಕಿಗಳು ಎಸಿ ಬಾಕ್ಸ್ ಅಥವಾ ಎಲೆಕ್ಟ್ರಾನಿಕ್ ಬಾಕ್ಸ್‌ಗಳ ನಡುವೆ ಗೂಡು ಕಟ್ಟಿಕೊಂಡು ಬಿಡುತ್ತದೆ. ಈ ಕಾರಣದಿಂದ ಹಕ್ಕಿಗಳು ಸಾಯುವ ಘಟನೆಗಳು ಜಾಸ್ತಿಯಾಗುತ್ತಿದೆ. ಎಲೆಕ್ಟ್ರಾನಿಕ್ ಶಾಕ್‌ನಿಂದಾಗಿ ತಾಯಿ ಹಕ್ಕಿ ಮೃತಪಟ್ಟಿದೆ ಮರಿಗಳು ತಾವು ದಯವಿಟ್ಟು ಕೊಂಡೋಗಿ ಬದುಕು ಕೊಡಿ ಎನ್ನುವ ಮನವಿಗಳೇ ಜಾಸ್ತಿಯಾಗಿ ಬರುತ್ತಿದೆಯಂತೆ.
ಇದಕ್ಕಾಗಿ 20 ಅಡಿ ಉದ್ದದ ಪಿವಿಸಿ ಪೈಪ್‌ವನ್ನು 2.5ಅಡಿ ಉದ್ದಕ್ಕೆ ಕತ್ತರಿಸಿಕೊಂಡು ಎರಡು ಬದಿಗೂ ಕ್ಯಾಪ್ ಹಾಕಿಕೊಂಡು ಮುಚ್ಚಲಾಗುತ್ತದೆ. ಈ ಬಳಿಕ 2.5 ಅಡಿ ಉದ್ದದ ಪೈಪ್‌ಗೆ ಮೂರು ರಂಧ್ರಗಳನ್ನು ಕೊರೆದು ನಂತರ ಅದನ್ನು ಮನೆಯ ಯಾವುದೇ ಭಾಗದಲ್ಲಿ ಇಟ್ಟರೆ ಸಾಕು. ಹಕ್ಕಿಗಳು ಬಂದು ಅಲ್ಲಿ ಗೂಡು ಕಟ್ಟುತ್ತದೆ ಎನ್ನುತ್ತಾರೆ ತೌಸಿಫ್.