ಇದು ದ.ಕ.ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿಯೇ ಬಹಳ ಅಪರೂಪದ ಶಾಲೆಯಿದು. ಈ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಫೀಸ್ ಕಟ್ಟಲು ಇಲ್ಲ. ಜತೆಯಲ್ಲಿ ಇಲ್ಲಿ ಕಲಿಯುವ ವಿದ್ಯಾರ್ಥಿಗಳೆಲ್ಲರೂ ಕೆಲಸ ಮಾಡಿಕೊಂಡು ಉಳಿದ ರಾತ್ರಿ ಸಮಯದಲ್ಲಿ ವಿದ್ಯಾಭ್ಯಾಸ ಮಾಡಬಹುದು.
ಹೌದು. ಕಳೆದ 76 ವರ್ಷಗಳಿಂದ ನಿರಂತರವಾಗಿ ಮಂಗಳೂರಿನ ಬಿಇಎಂ ಸ್ಕೂಲ್‌ನ ನೇರ ಮುಂಭಾಗದಲ್ಲಿ ಸಾಗುವ ಗಾಯತ್ರಿ ದೇವಸ್ಥಾನದ ರಸ್ತೆಯಲ್ಲಿ ನವಭಾರತ ರಾತ್ರಿ ಹೈಸ್ಕೂಲ್ ನಡೆಯುತ್ತದೆ. ಮುಖ್ಯವಾಗಿ ಇಲ್ಲಿ ಒಂದನೇ ತರಗತಿಯಿಂದ ೧೦ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ.
ಸಂಜೆ 6ರಿಂದ ಆರಂಭವಾಗುವ ತರಗತಿಗಳು 9ರ ವರೆಗೆ ಸಾಗುತ್ತದೆ. ಮುಖ್ಯವಾಗಿ ಕಲಿಯಲು ಯಾವುದೇ ವಯಸ್ಸು ಬೇಕಾಗಿಲ್ಲ ಎನ್ನುವುದಕ್ಕೆ ಇಲ್ಲಿಗೆ ಬರುವ ವಿದ್ಯಾರ್ಥಿಗಳೇ ಸಾಕ್ಷಿ. ಗುಮಾಸ್ತರು, ಗೃಹಿಣಿಯರು, ರಿಕ್ಷಾ ಚಾಲಕರು, ಹೋಟೆಲ್‌ನಲ್ಲಿ ದುಡಿಯುವ ಸಿಬ್ಬಂದಿಗಳು ಹೀಗೆ ತರೇವಾರಿ ವಿದ್ಯಾರ್ಥಿಗಳಿಂದ ಈ ಶಾಲೆ ನಡೆಯುತ್ತಿದೆ.