Tagged: Kudla

ಆನ್‌ಲೈನ್‌ನ ಸೆಕೆಂಡ್ ಸೇಲ್‌ನಲ್ಲಿ ಹಣ ಮಂಗಮಾಯ

ಆನ್‌ಲೈನ್‌ನಲ್ಲಿ ಸೆಕೆಂಡ್ ಸೇಲ್ ಪೀಠೋಪಕರಣಗಳನ್ನು ಮಾರಾಟ ಮಾಡುವುದಾಗಿ ಕುಡ್ಲದ ವ್ಯಕ್ತಿಯೊಬ್ಬರು ಬ್ರೋಕರ್ ಮುಖೇನ ಜಾಹೀರಾತು ಹಾಕಿದ್ದರು. ಇದಕ್ಕೆ ತಮಗೆ ಬೇಕು ಎಂದು ವ್ಯಕ್ತಿಯೊಬ್ಬರು ಕರೆ ಮಾಡಿ ಸಾಮಗ್ರಿಯನ್ನು ಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದರು.

ಪೀಠೋಪಕರಣ ಖರೀದಿ ಮೊತ್ತವನ್ನು ಆನ್‌ಲೈನ್ ಮೂಲಕ ಕಳುಹಿಸುವುದಾಗಿ ಹೇಳಿ ಲಿಂಕ್ ಕಳುಹಿಸಿದ್ದ. ಅದರಂತೆ ಪಿರ್ಯಾದಿದಾರರು ಲಿಂಕ್ ಒತ್ತಿದ್ದು, ತಕ್ಷಣ ಕ್ರಮವಾಗಿ ಅವರ ಖಾತೆಯಿಂದ 80 ಸಾವಿರಕ್ಕೂ ಅಧಿಕ ಮೊತ್ತವನ್ನು ಪೀಠೋಪಕರಣ ಸೇಲ್ ಮಾಡುವ ವ್ಯಕ್ತಿ ಕಳೆದುಕೊಂಡು ಮೂರು ನಾಮಹಾಕಿದ ಘಟನೆಯೊಂದು ವರದಿಯಾಗಿದೆ.

ಕುಡ್ಲದ ರಿಕ್ಷಾವನ್ನು ಇಷ್ಟಪಟ್ಟ ಜರ್ಮನಿಗರು !

ಎಲ್ಲಿಯ ಕುಡ್ಲ ಎಲ್ಲಿಯ ಜರ್ಮನಿ ಮಾರಾಯ್ರೆ. ವಿಶ್ವ ಪರ್ಯಟನೆ ಅಂಗವಾಗಿ ಜರ್ಮನಿಯಿಂದ ಮಂಗಳೂರಿಗೆ ಆಗಮಿಸಿದ ವಿದೇಶಿ ಪ್ರವಾಸಿಗರ ಐಷಾರಾಮಿ ಹಡಗು ಐಡಾ ವೀಟಾದಲ್ಲಿ ಬಂದ ಬಹುತೇಕ ಪ್ರವಾಸಿಗರು ಕುಡ್ಲದ ರಿಕ್ಷಾದಲ್ಲಿಯೇ ಊರೂರು ಸುತ್ತುವ ಕೆಲಸಕ್ಕೆ ಮುಂದಾಗಿದ್ದಾರೆ.

ನಗರದ ದರ್ಶನ ಮಾಡಿಸಲು ಇದಕ್ಕಾಗಿ 63 ಆಟೋ ರಿಕ್ಷಾಗಳ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಲೋಟಸ್ ಟೂರಿಸ್ಟ್ ಸಂಸ್ಥೆ ಮೂಲಕ ಆಟೊಗಳನ್ನು ಬಂದರಿನ ಒಳಗೆ ಆಗಮಿಸಲು ಅವಕಾಶ ಕಲ್ಪಿಸಲಾಗಿತ್ತು. ಆಟೊಗಳನ್ನು ಸಾಲಾಗಿ ನಂಬರ್ ಹಾಕಿ ನಿಲ್ಲಿಸಲಾಗಿತ್ತು. ಒಟ್ಟು 1,154 ಪ್ರವಾಸಿಗರಲ್ಲಿ 1೦೦ಕ್ಕೂ ಹೆಚ್ಚು ಪ್ರವಾಸಿಗರು ಆಟೊಗಳನ್ನೇ ಆಯ್ಕೆ ಮಾಡಿಕೊಂಡು, ನಗರದ ಪ್ರವಾಸಿ ತಾಣಗಳ ದರ್ಶನ ಮಾಡಿದರು.

ಉರ್ವಾದ ರೈಸ್ ಮಿಲ್, ಬೈಕಂಪಾಡಿಯ ಗೇರುಬೀಜ ಕಾರ್ಖಾನೆ, ಸೆಂಟ್ರಲ್ ಮಾರುಕಟ್ಟೆ, ಮೀನು ಮಾರುಕಟ್ಟೆ, ಹೋಟೆಲ್ ತಾಜ್ ಗೇಟ್‌ವೇಯಲ್ಲಿ ಊಟ ಮತ್ತು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಹೀಗೆ ಮಂಗಳೂರಿನ ನಾನಾ ಕಡೆಯಲ್ಲಿ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಿಂದ ಕುಡ್ಲದ ರಿಕ್ಷಾ ಡ್ರೈವರ್‌ಗಳಿಗೆ ಈ ಬಾರಿ ಡಾಲರ್ ಕರೆನ್ಸಿಯ ನೋಟುಗಳು ಟಿಪ್ಸ್‌ಗಳಾಗಿ ಸಿಗುವ ಸಾಧ್ಯತೆಯಿದೆ.

ರಸ್ತೆಯ ಹೊಂಡ ಮುಚ್ಚಿದ ಟ್ರಾಫಿಕ್ ಪೊಲೀಸ್ ಪುಟ್ಟರಾಮ

ಕರಾವಳಿಯ ಯಾವ ರಸ್ತೆಯನ್ನು ನೋಡಿದರೂ ಕೂಡ ಅಲ್ಲಿ ಹೊಂಡಗಳೇ ಕಾಣಿಸಿಕೊಳ್ಳುತ್ತಿದೆ. ಸವಾರರಂತೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕಾದ ಸ್ಥಿತಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ವಿಶೇಷ ಎಂದರೆ ಈ ರಸ್ತೆಯಲ್ಲಿ ಹೊಂಡಗಳು ಸ್ಮಾರ್ಟ್ ಸಿಟಿ ಕುಡ್ಲದಲ್ಲೂ ಭರ್ಜರಿಯಾಗಿದೆ.

ಮಂಗಳೂರಿನ ಬಂಟ್ಸ್‌ಹಾಸ್ಟೆಲ್ ಸರ್ಕಲ್ ಸಮೀಪ ರಸ್ತೆಯಂಚಿನಲ್ಲಿದ್ದ ಗುಂಡಿಯೊಂದು ದ್ವಿಚಕ್ರ ಸವಾರರಾಗಿ ಕಂಟಕವಾಗಿದ್ದು ಈ ಬಗ್ಗೆ ಮನಪಾ ಅಧಿಕಾರಿಗಳ ಗಮನಕ್ಕೆ ತಂದರೂ ಸುಧಾರಣೆಯಾಗದಿರುವುದರಿಂದ ಬೇಸತ್ತ ಪೂರ್ವ ಸಂಚಾರಿ ಠಾಣೆ (ಕದ್ರಿ) ಯ ಸಿಬ್ಬಂದಿ ಪುಟ್ಟರಾಮ ತಾನೇ ಕಲ್ಲು, ಮಣ್ಣು ಹಾಕಿಕೊಂಡು ಮುಚ್ಚುವ ಮೂಲಕ ವಿಶೇಷವಾದ ಕೆಲಸವನ್ನು ಮಾಡಿ ವಾಹನ ಸವಾರರ ಮನಸ್ಸು ಗೆದ್ದುಬಿಟ್ಟಿದ್ದಾರೆ.

ತುಳುನಾಡಿನ ಯುವಕರ ತುಳು ಅಪ್ಪೆಯ ಸೇವೆ

ತುಳುನಾಡಿನ ಜೈ ತುಳುನಾಡ್ (ರಿ.) ಸಂಘಟನೆಯ ಸದಸ್ಯರು ತುಳು ಲಿಪಿಯ ಜಾಗೃತಿಯನ್ನು ವಿಶಿಷ್ಟ ರೀತಿಯಲ್ಲಿ ಆಂದೋಲನದಂತೆ ಮುಂದುವರಿಸುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿರುವ ತುಳುನಾಡಿನ ಊರಿನ ಹೆಸರಿನ ಜತೆಯಲ್ಲಿ ತುಳು ಲಿಪಿಯಲ್ಲೂ ಇದರ ಮಾಹಿತಿಯ ಕಾರ‍್ಯವಂತೂ ನಡೆಯುತ್ತಿದೆ. ಅಂದಹಾಗೆ ಯುವ ಕೇಸರಿ ಕೊಯ್ಕುಡೆ ಎಂಬ ಸಂಘದ ನೇತೃತ್ವದಲ್ಲಿ ಪ್ರಪ್ರಥಮ ತುಳು ಲಿಪಿ ನಾಮಫಲಕವನ್ನು ಮುಲ್ಕಿಯ ಕೊಯ್ಕುಡೆ ಎಂಬ ಊರಿನಲ್ಲಿ ಹಾಕುವ ಮೂಲಕ ತುಳು ಲಿಪಿಯ ಜಾಗೃತಿಯಲ್ಲಿ ಕೆಲಸ ಮಾಡಿದ್ದಾರೆ.

ಇದರ ಜತೆಯಲ್ಲಿ ಮುಂದೆಯೂ ಊರಿನ ಹೆಸರುಗಳು ಸೇರಿದಂತೆ ಹಂತ ಹಂತವಾಗಿ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ, ಅಂಗಡಿ-ಕಂಪೆನಿ, ವಾಹನ ಸೇರಿದಂತೆ ಎಲ್ಲ ಕಡೆ ತುಳು ಲಿಪಿಯ ಬಳಕೆಯನ್ನು ಹೆಚ್ಚಾಗಿ ಬಳಸುವಂತೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುವ ಮೂಲಕ ತುಳುನಾಡಿನ ಜೈ ತುಳುನಾಡಿನ ಸಂಘಟನೆಯ ಯುವಕರು ಪೂರ್ಣ ಪ್ರಮಾಣದಲ್ಲಿ ತುಳು ಅಪ್ಪೆಯ ಸೇವೆಯಲ್ಲಿ ಸಂತೃಪ್ತಿಯ ಭಾವವನ್ನು ಕಾಣುತ್ತಿದ್ದಾರೆ.

ದೀಪಾವಳಿ ಹಬ್ಬದ ಇಮ್ಮಡಿ ಮಾಡುವ ಗೂಡುದೀಪ

ತುಳುನಾಡಿನಲ್ಲಿ ಗೂಡುದೀಪಗಳಿಗೆ ವಿಶಿಷ್ಟವಾದ ಪರಂಪರೆ ಇದೆ. ದೀಪಾವಳಿ ಸಂದರ್ಭದಲ್ಲಿ ತುಳುನಾಡಿನ ಜನತೆ ಗೂಡುದೀಪಗಳನ್ನು ಮನೆ ಮನೆಗಳಲ್ಲಿ ರಚಿಸಿ ಬೆಳಗಿಸುವ ಮೂಲಕ ಸಂಭ್ರಮವನ್ನು ಇಮ್ಮಡಿ ಮಾಡಿಕೊಳ್ಳುತ್ತಿದ್ದ ಕಾಲ ಈಗ ನಿಧಾನವಾಗಿ ಕಣ್ಮರೆಯಾಗುತ್ತಿದೆ.
ಆದರೂ ಸಂಸ್ಕೃತಿಯ ಉಳಿಸುವ ಕೆಲಸವನ್ನು ಮಂಗಳೂರಿನ ನಮ್ಮ ಕುಡ್ಲ ವಾಹಿನಿ ಕಳೆದ 2೦ ವರ್ಷಗಳಿಂದ ಗೂಡುದೀಪಗಳ ಪಂಥವನ್ನು ಮಾಡುವ ಮೂಲಕ ಸಂಸ್ಕೃತಿಯ ಉಳಿವಿಗೆ ಕೆಲಸ ಮಾಡುತ್ತಿದೆ.