Tagged: kudlacity

47 ವರ್ಷದಲ್ಲಿ 12,260 ಜೋಡಿಗಳಿಗೆ ಮದುವೆ !

ಇದು ಎಲ್ಲರಿಂದ ಸಾಧ್ಯವಿಲ್ಲದ ಮಾತು. ಆದರೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಮಾತ್ರ ಸಾಧ್ಯ. ಕಳೆದ 47 ವರ್ಷದ ಧರ್ಮಸ್ಥಳದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭರ್ತಿ 12,260 ಮಂದಿ ಜೋಡಿಗಳು ಮದುವೆಯಾಗುವ ಮೂಲಕ ಸತಿ ಪತಿಗಳಾಗಿದ್ದಾರೆ.

ಈ ಬಾರಿ 48 ನೇ ವರ್ಷದ ಸಾಮೂಹಿಕ ವಿವಾಹ ನಡೆಯುತ್ತಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಮೇ 1ರಂದು ಸಂಜೆ 6.48ರ ಗೋಧೂಳಿ ಲಗ್ನ ಸುಮುಹೂರ್ತ ದಲ್ಲಿ 48ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು, 102 ಜೋಡಿ ಹಸೆಮಣೆ ಏರಲಿದ್ದಾರೆ.

ವಿವಾಹ ಸರಳವಾಗಿ, ವರದಕ್ಷಿಣೆ ಇಲ್ಲದೆ ನಡೆದು ಕುಟುಂಬದಲ್ಲಿ ಸುಖ- ಶಾಂತಿ ಕಾಣಬೇಕು ಎಂಬ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 1972 ರಲ್ಲಿ ಸಾಮೂಹಿಕ ಉಚಿತ ವಿವಾಹವನ್ನು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಾರಂಭಿಸಿ ದರು. ಸಮಾಜದ ಹಿತಕ್ಕಾಗಿ ಶ್ರೀಕ್ಷೇತ್ರದ ಮೂಲಕ ಹತ್ತು ಹಲವಾರು ಕಾರ‍್ಯಕ್ರಮಗಳು ಅನುಷ್ಠಾನಗೊಂಡು ಯಶಸ್ಸು ಕಂಡು ರಾಜ್ಯ, ರಾಷ್ಟ್ರದಲ್ಲಿ ಮಾದರಿ ಎನಿಸಿವೆ.

1972 ರ ಮಾ.29ರಂದು ನಡೆದ ಮೊದಲ ವಿವಾಹ ಕಾರ್ಯಕ್ರಮದಲ್ಲಿ 88 ಜೋಡಿ ವಿವಾಹವಾದರು. ಮೇ 1ರಂದು ನಡೆಯುವ 48ನೇ ವರ್ಷದ ಸಾಮೂಹಿಕ ಉಚಿತ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 102 ಕ್ಕೂ ಹೆಚ್ಚು ಜೋಡಿಗಳು ಹಸೆಮಣೆ ಏರಲಿದ್ದಾರೆ. ಕಳೆದ 47 ವರ್ಷ ಗಳಲ್ಲಿ ಕ್ಷೇತ್ರದಲ್ಲಿ ನಡೆದ ವಿವಾಹಗಳಲ್ಲಿ 12,260 ಜೋಡಿಗಳು ಸತಿಪತಿಗಳಾಗಿ ಸುಖೀ ದಾಂಪತ್ಯ ಜೀವನ ಹೊಂದಿದ್ದಾರೆ.

ಮಂಗಳೂರಿನಲ್ಲಿ ಕಾಣಸಿಗಲಿದೆ ವಾಟರ್ ಪಾಲಿಟಿಕ್ಸ್

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆಯಾಗುವ ತುಂಬೆ ಡ್ಯಾಮ್‌ನಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಇದನ್ನು ಗಮನಿಸಿ ಜಿಲ್ಲಾಡಳಿತ ರೇಶನಿಂಗ್ ಮೂಲಕ ನೀರು ಪೂರೈಕೆ ಆರಂಭಿಸಿತ್ತು.

ಇಲ್ಲಿಯ ಜನಪ್ರತಿನಿಧಿಗಳು ಡ್ಯಾಮ್ ವೀಕ್ಷಿಸಿ, ತುಂಬಾ ನೀರಿದೆ ಎಂದು ಹೇಳಿ, ರೇಶನಿಂಗ್ ನಿಲ್ಲಿಸಲು ಒತ್ತಡ ತಂದರು. ನೀರಿನ ಸೋರಿಕೆ, ಪೋಲು, ದುರ್ಬಳಕೆ ತಡೆದು, ಮಿತ ವ್ಯಯ ಮಾಡಲು ಹೇಳಿ, ಬದಲಿ ವ್ಯವಸ್ಥೆಗೆ ಸಲಹೆ ಮಾಡಬೇಕಾದ ಜನಪ್ರತಿನಿಧಿಗಳು ಪ್ರತಿಪಕ್ಷದವರ ಮಾದರಿಯಲ್ಲಿ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.

ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗುವ ಲಕ್ಷಣ ಕಾ ಣಿಸುತ್ತಿಲ್ಲ. ನಗರ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಲ್ಲೂ ನೀರಿನ ತೀವ್ರ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತೆ ರೇಶನಿಂಗ್ ಆರಂಭಿಸಿದೆ.

ಮತ್ತೆ ರೇಶನಿಂಗ್: ಮೇ 1ರ ಬೆಳಗ್ಗೆ 6 ಗಂಟೆಯಿಂದ ಮೇ 3ರ ಬೆಳಗ್ಗೆ 6 ಗಂಟೆಯ ವರೆಗಿನ 48 ತಾಸುಗಳ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಮೇ 3ರ ಬೆಳಗ್ಗೆ 6 ಗಂಟೆಯಿಂದ ಮೇ 7ರ ಬೆಳಗ್ಗೆ 6 ಗಂಟೆ ವರೆಗಿನ 96 ಗಂಟೆ ನೀರು ಸರಬರಾಜು ನಡೆಯಲಿದೆ. ಮೇ 7ರ ಬೆಳಗ್ಗೆ 6ರಿಂದ ಮೇ 9ರ ತನಕ ಬೆಳಗ್ಗೆ 6ರ ತನಕ 48 ಗಂಟೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಮೇ 9ರ ಬೆಳಗ್ಗೆ 6ರಿಂದ ಮೇ 13ರ ಬೆಳಗ್ಗೆ 6ರ ತನಕ 96 ಗಂಟೆ ಕಾಲ ನೀರು ಪೂರೈಕೆ ನಡೆಯಲಿದೆ. ಮೇ 13ರ ಬೆಳಗ್ಗೆ 6ರಿಂದ ಮೇ 15ರ ಬೆಳಗ್ಗೆ 6ರ ತನಕ 48 ಗಂಟೆ ಕಾಲ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಮೇ 15ರ ಬೆಳಗ್ಗೆ 6ರಿಂದ ಮೇ 19ರ ಬೆಳಗ್ಗೆ 6 ಗಂಟೆ ತನಕ 96 ಗಂಟೆ ನೀರು ಪೂರೈಕೆ ನಡೆಯಲಿದೆ. ಮೇ 19ರ ಬೆಳಗ್ಗೆ 6ರಿಂದ ಮೇ 21ರ ಬೆಳಗ್ಗೆ 6 ಗಂಟೆ ತನಕ 48 ಗಂಟೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

ಮಂಗಳೂರು ಹೆಸರಿನ ಹಿಂದಿನ ಆದಿಶಕ್ತಿ ಈ ದೇವತೆ !

ಮಂಗಳೂರು ಎನ್ನುವ ಹೆಸರಿನ ಹಿಂದೆ ಈ ಅಧಿದೇವತೆ ಯ ಶಕ್ತಿಯಿದೆ.
ಹೌದು. ಮಂಗಳಾದೇವಿ ದೇವಸ್ಥಾನ, ಮಂಗಳೂರಿನ ಬೋಳಾರಿನಲ್ಲಿ ನೆಲೆಸಿದ್ದು ಮಂಗಳೂರಿನ ಮಧ್ಯಪ್ರದೇಶದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ.
ಮಂಗಳಾದೇವಿ ದೇವಸ್ಥಾನದ ಪ್ರಧಾನ ದೇವತೆಯಾದ “ಮಂಗಳಾಂಬೆ”ಯಿಂದಲೆ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ ಎನ್ನುವುದು ಕುಡ್ಲದ ಇತಿಹಾಸ ಪುಟ ಹೇಳುತ್ತಿದೆ.

6 ಕಿಮೀ ನಡೆದು ಶಾಲೆಗೆ ಹೋಗಿ ಗೆದ್ದು ಬಂದಳು

22 ಕಿ. ಮೀ ದೂರ ಶಾಲೆ. ದಿನಾ ಆರು ಕಿ.ಮೀ ನಡಿಗೆ. ಆಗಾಗ ಕೈಕೊಡುವ ವಿದ್ಯುತ್. ಇಂತಹ ಪರಿಸ್ಥಿತಿಯಲ್ಲೂ ಛಲದಿಂದ ಓದಿ ಪರೀಕ್ಷೆಯಲ್ಲಿ 624 ಅಂಕ ಗಳಿಸಿದ ಸುಬ್ರಹ್ಮಣ್ಯ ಸಮೀಪದ ಕೇನ್ಯದ ಕೃಪಾ ಕೆ. ಆರ್. ಅವರ ಸಾಧನೆ ಸಿಟಿಯಲ್ಲಿ ಓದುವ ಮಕ್ಕಳಿಗೆ ಮಾದರಿಯಾಗಿದ್ದಾರೆ. ಸಿಟಿಯಲ್ಲಿ ಶಾಲೆಗೆ ಬಸ್, ರಿಕ್ಷಾದಲ್ಲಿ ಕರೆದುಕೊಂಡು ಹೋದರೂ ಇಂತಹ ಮಾರ್ಕ್ಸ್ ಪಡೆದುಕೊಂಡಿಲ್ಲ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರಾವಳಿ ಯಾಕೆ ಇಳಿಯಿತು

2019ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಏಳನೇ ಹಾಗೂ ಉಡುಪಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ.

ಕಳೆದ ಸಾಲಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದ ಉಡುಪಿ ನಾಲ್ಕು ಸ್ಥಾನ ಕೆಳಗಿಳಿದಿದೆ. ದಕ್ಷಿಣ ಕನ್ನಡ 2018ರಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಈ ಬಾರಿ ಏಳನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಳ್ಳುವಂತಾಗಿದೆ.

ಪಿಯುಸಿ ಉತ್ತಮ ಫಲಿತಾಂಶವನ್ನೇ ಪಡೆದುಕೊಂಡಿರುವ ಉಡುಪಿ ಹಾಗೂ ದಕ್ಷಿಣ ಕನ್ನಡ ಪ್ರಥಮ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮಾತ್ರ ಅಗ್ರಸ್ಥಾನಗಳನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಹಾಸನ ಪ್ರಥಮ ಹಾಗೂ ರಾಮನಗರ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.