Tagged: Mangaluru

ಕುಡ್ಲ ಸಿಟಿಯೊಳಗೆ ಮೀನು ಹಿಡಿಯುವ ಜಾತ್ರೆ

ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನ್‌ನಲ್ಲಿ ಭಾನುವಾರ ಮೀನುಗಾರಿಕೆ ಇಲಾಖೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಮತ್ತು ಪಿಲಿಕುಳ ನಿಸರ್ಗಧಾಮದ ಆಶ್ರಯದಲ್ಲಿ ಪಿಲಿಕುಳ ಮತ್ಸ್ಯೋತ್ಸವ ಮತ್ತು ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು.

ಈ ಹಬ್ಬದ ಅಂಗವಾಗಿ ಪಿಲಿಕುಳದ ಲೇಕ್ ಗಾರ್ಡನ್‌ನ ಕೆರೆಯಲ್ಲಿ ಬೆಳೆಸಿದ ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ ಹಾಗೂ ಇತರೆ ಮೀನುಗಳನ್ನು ಹಿಡಿದು, ಮುಗಿಯುವ ತನಕ ಸಾರ್ವಜನಿಕ ಹರಾಜು ಹಾಕುವ ಕಾರ‍್ಯನೂ ಜತೆಯಾಗಿ ಸಾಗಿತು. ಸಾಕಷ್ಟು ಉತ್ಸಾಹಭರಿತ ಯುವಕರ ತಂಡಗಳು ಮೀನು ಹಿಡಿಯುವ ಸ್ಪರ್ಧೆಯಲ್ಲೂ ಕಾಣಿಸಿಕೊಂಡು ಭಾನುವಾರದ ವೀಕ್ ಎಂಡ್‌ನ ಪ್ರಯೋಜನ ಪಡೆದರು.

ಹಲಸಿನ ಹಣ್ಣಿನಲ್ಲಿ ಸೋಪ್ ರೆಡಿ

ಕಳೆದ ಕೆಲವು ವರ್ಷಗಳಿಂದೀಚೆಗೆ ಹಲಸು ಪ್ರಿಯರು ದೇಶಾದ್ಯಂತ ಹಲಸಿನ ಮೌಲ್ಯವರ್ಧನೆ ಹಾಗೂ ಸಂರಕ್ಷಣೆಗಾಗಿ ಹೊಸ ಹೊಸ ಆವಿಷ್ಕಾರ ಮಾಡುತ್ತಿದ್ದಾರೆ. ಅದರಲ್ಲಿ ಬಂಟ್ವಾಳ ತಾಲೂಕಿನ ವಿಟ್ಲದವರಾದ ಪ್ರಸ್ತುತ ಚೆನ್ನೈಯಲ್ಲಿ ನೆಲೆಸಿರುವ ಅಪರ್ಣಾ ಹರೀಶ್, ತಾವೇ ಸ್ವತಃ ಹಲಸಿನ ಹಣ್ಣಿನಿಂದ ಸೋಪ್ ತಯಾರಿಸಿ ಎಲ್ಲೆಡೆಯಿಂದ ಭೇಷ್ ಎನ್ನಿಸಿಕೊಂಡಿದ್ದಾರೆ.

ಒಂದು ವರ್ಷದಿಂದ ಪ್ರಯೋಗ ಮಾಡಿಕೊಂಡು ಸೋಪ್ ತಯಾರಿಸಿದ್ದಾರೆ. ಸೋಪ್ ತಯಾರಿಸುವಾಗ ಹಲಸಿನ ಹಣ್ಣು, ಕ್ಯಾಲಮಿನ್ ಪೌಡರ್, ತೆಂಗಿನೆಣ್ಣೆ, ಹರಳೆಣ್ಣೆ ಬಳಸಿದ್ದಾರೆ. ಹಲಸಿನ ಬೀಜ ಬಳಸಿಲ್ಲ. ಈ ಸೋಪ್‌ನಲ್ಲಿ ವಿಟಮಿನ್ ಸಿ ಮತ್ತು ಡಿ ಇದ್ದು, ಸೋರಿಯಾಸಿಸ್ ಅಥವಾ ಚರ್ಮದ ಕಾಯಿಲೆ ವಾಸಿಗೆ ಅತ್ಯುತ್ತಮ ಮದ್ದು ಎನ್ನುವುದು ಅವರ ಮಾತು.

ಹಲಸಿನ ಹಣ್ಣಿನ ಶ್ಯಾಂಪೂ, ಪೌಡರ್ ಮಾಡಬೇಕು ಎಂಬ ಪ್ಲ್ಯಾನ್ ಇಟ್ಟುಕೊಂಡಿರುವ ಅಪರ್ಣಾ, ಚರ್ಮದ ಸೌಂದರ್ಯಕ್ಕಾಗಿ ಕೆಲವೊಂದು ಸೌಂದರ್ಯವರ್ಧಕ ಉತ್ಪನ್ನ ತಯಾರಿಸುವಲ್ಲಿ ನಿರತರಾಗಿದ್ದಾರೆ. ತಾನು ತಯಾರಿಸಿದ ಸೋಪ್‌ಗೆ ‘ಝ್ಯ’ ಎಂದು ಹೆಸರಿಟ್ಟಿದ್ದಾರೆ. ಹಲಸಿನ ಹಣ್ಣಿನ ಶ್ಯಾಂಪೂ ಯಾವ ರೀತಿ ಕೂದಲಿನ ಸೌಂದರ‍್ಯ ಇಮ್ಮಡಿಗೊಳಿಸಲು ನೆರವಾಗುತ್ತದೆ ಎಂಬ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಅದಾದ ಬಳಿಕ ಟಾಲ್ಕಂ ಪೌಡರ್ ಆವಿಷ್ಕಾರ ಮಾಡುವತ್ತ ಮುನ್ನಡೆಯಲಿದ್ದಾರೆ.

ಬಿಜಿಎಸ್ ಶಿಕ್ಷಣ ಸಂಸ್ಥೆ ಪರಿಸರ ಸ್ನೇಹಿ

ಕಾವೂರಿನಲ್ಲಿರುವ ಬಿಜಿಎಸ್ ಶಿಕ್ಷಣ ಸಂಸ್ಥೆಯ ವಿಶೇಷ ಎಂದರೆ ಅಲ್ಲಿ ಶಿಕ್ಷಣ, ಮಾನವೀಯ ಮೌಲ್ಯಗಳನ್ನು ಕಲಿಸುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ. ಬದಲಾಗಿ ಇಡೀ ಬಿಜಿಎಸ್ ಶಿಕ್ಷಣ ಸಂಸ್ಥೆ ಪರಿಸರದ ಕುರಿತು ಕಾಳಜಿಯನ್ನು ಇಟ್ಟುಕೊಂಡಿದೆ. ಮರ, ಗಿಡಗಳ ಜತೆಗೆ ಪರಿಸರ ಪೂರಕ ವಾತಾವರಣ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಪೂರಕವಾಗಿದೆ.

ವಿಶೇಷವಾಗಿ ಬಿಜಿಎಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಹೇಳುವಂತೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಗಿಡ- ಮರ ಬೆಳೆಸುವ ಕಾರ್ಯ ಪ್ರತಿಯೊಬ್ಬರ ಮನೆಯಂಗಳದಿಂದ ಪ್ರಾರಂಭವಾಗಬೇಕು. ಪ್ರಕೃತಿಯು ದೇವರಿಗೆ ಸಮಾನ, ಇದನ್ನು ಕಾಪಾಡಿದರೆ ದೇವರ ಅನುಗ್ರಹ ಲಭಿಸುತ್ತದೆ. ಹೇಗೆ ಮರ, ನದಿ, ಪ್ರಾಣಿ ಪಕ್ಷಿಗಳು ಪರರಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುತ್ತವೆಯೋ ಹಾಗೆ ಮನುಷ್ಯನಾಗಿ ಹುಟ್ಟಿದ ಮೇಲೆ ಸ್ವಾರ್ಥವನ್ನು ಬಿಟ್ಟು ಮರಗಿಡಗಳನ್ನು ಬೆಳೆಸಬೇಕು.

ಜಗತ್ತಿನಾದ್ಯಂತ ಪರಿಸರ ಮಲೀನವಾಗುತ್ತಿದೆ. ಇದರ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಮಕ್ಕಳ ಹುಟ್ಟುಹಬ್ಬದ ದಿನದಂದು ಒಂದೊಂದು ಗಿಡ ನೆಟ್ಟು ಬೆಳಸಬೇಕು ಎನ್ನುವುದು ಅವರ ಮಾತು. ವಿಶೇಷವಾಗಿ ಪರಿಸರದ ದಿನಾಚರಣೆಯ ಅಂಗವಾಗಿ ಈಗಾಗಲೇ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಪರಿಸರ ಜಾಗೃತಿ, ಮಾಹಿತಿ ನೀಡುವ ಕಾರ‍್ಯ ಸಾಗುತ್ತಿದೆ.

ಕೂಳೂರು ಸೇತುವೆ ಕಮಾನು ಶಿಥಿಲ: ಘನ ವಾಹನ ಫುಲ್ ಸ್ಟಾಪ್

ಮಂಗಳೂರಿನ ಕೂಳೂರು ಪಾಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಮಾನು ಸೇತುವೆ ತುಂಬಾ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿರುವುದರಿಂದ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಮುಗಿಯುವವರೆಗೆ ತಾತ್ಕಾಲಿಕವಾಗಿ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗವಾಗಿ ಉಡುಪಿಯಿಂದ ಬೆಂಗಳೂರು ಕಡೆಗೆ ಹೋಗುವ ಮತ್ತು ಬೆಂಗಳೂರಿನಿಂದ ಎಂಆರ್‌ಪಿಎಲ್ ಉಡುಪಿ ಕಡೆಗೆ ಬರುವ ಬುಲೆಟ್ ಟ್ಯಾಂಕರ್‌ಗಳನ್ನು ಪಡುಬಿದ್ರೆ, ಕಾರ್ಕಳ- ಗುರುವಾಯನ ಕೆರೆ- ಧರ್ಮಸ್ಥಳ ಕೊಕ್ಕಡ-ಪೆರಿಯಶಾಂತಿ ಮೂಲಕ ಸಂಚರಿಸುವುದು.

ಕೇರಳ ರಾಜ್ಯದಿಂದ ಉಡುಪಿ ಕಡೆಗೆ ಬರುವ ಬುಲೆಟ್ ಟ್ಯಾಂಕರ್‌ಗಳು ಕೆಪಿಟಿ ಯಿಂದ ಕಾವೂರು ಬಜಪೆ ಕಾನ ಸುರತ್ಕಲ್ ಮೂಲಕ ಸಂಚರಿಸುವುದು. ಘನ ವಾಹನಗಳಾದ ಲಾರಿ ಬಸ್ ಟ್ಯಾಂಕರ್‌ಗಳಿಗೆ ಕೂಳೂರು ಹೊಸ ಸೇತುವೆಯ ಮೂಲಕ ದ್ವಿಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಲಘು ವಾಹನಗಳಾದ ಕಾರು ಜೀಪು, ಟೆಂಪೊ, ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನಗಳನ್ನು ಹಳೆಯ ಕಮಾನು ಸೇತುವೆಯ ಮೂಲಕ ದ್ವಿಮುಖವಾಗಿ ಸಂಚರಿಸುವ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯ ಬಗ್ಗೆ ಅವಶ್ಯವಿರುವ ಸೂಚನಾ ಫಲಕ ಅಳವಡಿಸಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಯೋಜನಾ ನಿರ್ದೇಶಕರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳೂರು ಅವರಿಗೆ ಸೂಚಿಸಲಾಗಿದೆ. ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕಗೊಳಿಸಲು ಪೊಲೀಸ್ ಆಯುಕ್ತರು, ಮಂಗಳೂರು ನಗರ ಅವರು ಮತ್ತು ಪೊಲೀಸ್ ಅಧೀಕ್ಷಕರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಅವರು ತಮ್ಮ ವ್ಯಾಪ್ತಿಯಲ್ಲಿ ಮೋಟಾರ್ ವಾಹನ ಕಾಯಿದೆ ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಾವಳಿ ಪ್ರಕಾರ ಅಧಿಕಾರವುಳ್ಳವರಾಗಿರುತ್ತಾರೆ.

ಪಿಲಿಕುಳದ ಪ್ರಾಣಿ, ಪಕ್ಷಿಗಳಿಗೆ ಫ್ಯಾನ್ ಟ್ರೀಟ್‌ಮೆಂಟ್

ಮಂಗಳೂರು ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಈಗ ಪ್ರಾಣಿ, ಪಕ್ಷಿಗಳಿಗೆ ಈಗ ಯಾಂತ್ರೀಕೃತ ಫ್ಯಾನ್‌ಗಳ ಆಹ್ಲಾದಕರ ಗಾಳಿ, ಜತೆಗೆ ಅಲ್ಲಲ್ಲಿ ತಣ್ಣೀರ ಸಿಂಚನದ ಖುಷಿ… ಬಿಸಿಲಿನ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಮನುಷ್ಯರು ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳಿಗೂ ಸೆಕೆ ತಡೆಯಲಾಗುತ್ತಿಲ್ಲ. ಹೀಗಾಗಿ ಪಿಲಿಕುಳ ಉದಾನವನದಲ್ಲಿರುವ ಪ್ರಾಣಿಗಳಿಗೆ ಬಿಸಿಲಿನ ತಾಪ ತಣಿಸಲು ಫ್ಯಾನ್, ನೀರು ಸಿಂಪಡಣೆ, ಜತೆಯಲ್ಲಿ ಶೀಟ್‌ಗಳಿಗೆ ಬಿಳಿ ಪೈಂಟ್ ಬಳಿಯುವ ಮೂಲ ಹೊಸ ಪ್ರಯತ್ನವನ್ನು ಮಾಡಲಾಗುತ್ತಿದೆ.