Tagged: mangalorecity

ಕಿಸ್ ದಿ ಬೊಂಡ ವಿದ್ಯಾರ್ಥಿಗಳ ಅಭಿಯಾನ

ಮಂಗಳೂರಿನಲ್ಲಿ ಹೊಸ ಅಭಿಯಾನವೊಂದು ಆರಂಭವಾಗಿದೆ. ‘ಕಿಸ್ ದಿ ಬೊಂಡ’ ಎನ್ನುವ ಮೂಲಕ ಬೊಂಡವನ್ನು ಪ್ಲಾಸ್ಟಿಕ್ ಸ್ಟ್ರಾ ಇಲ್ಲದೇ ಕುಡಿಯುವ ವಿನೂತನ ಕೆಲಸವಿದು. ಪ್ಲಾಸ್ಟಿಕ್ ಬಳಕೆಯನ್ನೇ ಪೂರ್ಣವಾಗಿ ಬಿಟ್ಟು ಬಿಡೋಣ ಎನ್ನುವ ಸಂದೇಶ ಸಾರುವ ಈ ಅಭಿಯಾನದ ಹಿಂದೆ ವಿದ್ಯಾರ್ಥಿಗಳ ತಂಡವೊಂದು ಕೆಲಸ ಮಾಡಿದೆ.
ಜ್ಯೂಸ್ ಅಂಗಡಿ ಸೇರಿದಂತೆ ಪ್ರತಿಯೊಂದು ಕಡೆಯಲ್ಲೂ ಜ್ಯೂಸ್ ಸೇರಿದಂತೆ ತಂಪು ಪಾನೀಯಗಳನ್ನು ಪ್ಲಾಸ್ಟಿಕ್ ಸ್ಟ್ರಾ ಬಿಟ್ಟು ಉಳಿದ ರೀತಿಯಲ್ಲಿ ಕುಡಿಯಲು ಮುಂದಾಗಿ ಎನ್ನುವುದೇ ಈ ಅಭಿಯಾನದ ಮೂಲ ಉದ್ದೇಶ. ವಿದ್ಯಾರ್ಥಿಗಳ ಈ ಚಾಲೆಂಜ್‌ಗೆ ನೀವು ಸಹಕರಿಸಿ.

ಮಂಗಳೂರಿನಲ್ಲಿ ಗಾಂಧೀಜಿ ದೇವರು, ನಿತ್ಯವೂ ಪೂಜೆ

ಗರಡಿಯ ವಿವಿಧ ದೈವಗಳ ಹಾಗೆಯೆ ಗಾಂಧೀಜಿಯವರ ಪ್ರತಿಮೆಗೆ ಆರತಿ ಬೆಳಗಲಾಗುತ್ತದೆ, ಪೂಜೆ ಮಾಡಲಾಗುತ್ತಿದೆ. ದೈವಸ್ಥಾನಕ್ಕೆ ಬಂದ ಭಕ್ತರೂ ಗಾಂಧೀಜಿಯನ್ನು ದೇವರ ಸ್ಥಾನದಲ್ಲಿಯೇ ಇಟ್ಟು ನಮಿಸುತ್ತಾರೆ.

ಸತ್ಯವೇ ದೇವರು ಎಂದ ರಾಷ್ಟ್ರಪಿತ ಗಾಂಧೀಜಿಗೆ ಮಂಗಳೂರಿನ ದೈವಸ್ಥಾನದಲ್ಲಿ ನಿತ್ಯವೂ ತ್ರಿಕಾಲ ಪೂಜೆ ನಡೆಯುತ್ತಿದೆ. ಮಂಗಳೂರಿನ ಕಂಕನಾಡಿಯಲ್ಲಿರುವ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಗಾಂಧೀಜಿಯವರ ಶ್ವೇತ ವರ್ಣದ ವಿಗ್ರಹವನ್ನು 1948ರಲ್ಲಿಯೇ ಸ್ಥಾಪಿಸಲಾಗಿತ್ತು.

ಅಂದಿನಿಂದ ಇಂದಿನ ವರೆಗೆ ಗರಡಿಯ ವಿವಿಧ ದೈವಗಳ ಹಾಗೆಯೆ ಗಾಂಧೀಜಿಯವರ ಪ್ರತಿಮೆಗೆ ಆರತಿ ಬೆಳಗಲಾಗುತ್ತದೆ, ಪೂಜೆ ಮಾಡಲಾಗುತ್ತಿದೆ. ದೈವಸ್ಥಾನಕ್ಕೆ ಬಂದ ಭಕ್ತರೂ ಗಾಂಧೀಜಿಯನ್ನು ದೇವರ ಸ್ಥಾನದಲ್ಲಿಯೇ ಇಟ್ಟು ನಮಿಸುತ್ತಾರೆ. ಅನೇಕ ಯುವಕ ಯುವತಿಯರೂ ಸಹ ಗಾಂಧೀಜಿಯಿಂದ ಪ್ರೇರಣೆ ಪಡೆಯುವ ಸಲುವಾಗಿಯೇ ಆಗಾಗ ಈ ಮೂರ್ತಿಗೆ ನಮಿಸಿ ಹೋಗುತ್ತಾರೆ.

‘ಪಿಲಿ ಚಡ್ಡಿ’ಗೆ ವಿಶ್ವನಾಥರ ಹೊಲಿಗೆ ಶೈನಿಂಗ್ !

ಹುಲಿವೇಷ ಎಂದಾಕ್ಷಣ ಪುಟ್ಟದಾದ ಚಡ್ಡಿ ಜತೆಗೆ ಮೈ ತುಂಬಾ ಹುಲಿ ಬಣ್ಣ ತಲೆಗೊಂದು ಹುಲಿಯ ಟೋಪಿ ಎಲ್ಲವೂ ಇದ್ದರೆ ಮಾತ್ರ ಹುಲಿವೇಷಕ್ಕೊಂದು ಖದರ್. ಅದರಲ್ಲೂ ಮುಖ್ಯವಾಗಿ ಹುಲಿ ವೇಷಧಾರಿಗಳು ಹಾಕುವ ಚಡ್ಡಿ ನಿಜಕ್ಕೂ ವಿಶೇಷ. ಕಾರಣ ಸರಿಯಾದ ಆಳತೆಯ ಚಡ್ಡಿ ಇಲ್ಲದೇ ಹೋದರೆ ಹುಲಿವೇಷಧಾರಿ ಪಾತ್ರದೊಳಗೆ ಇಣುಕಿ ಕುಣಿಯಲಾರ ಹುಲಿವೇಷದ ಘನತೆ ಹೆಚ್ಚಿಸಲಾರ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ಅಂದಹಾಗೆ ಕರಾವಳಿಯಲ್ಲಿ ಅದರಲ್ಲೂ ಮುಖ್ಯವಾಗಿ ಮಂಗಳೂರಿನಲ್ಲಿ ‘ಪಿಲಿತ ಚಡ್ಡಿ’ ಹೊಲಿಯುವ ಮಂದಿ ತೀರಾ ಕಡಿಮೆ. ಇದ್ದರೂ ಕೂಡ ಎರಡು ಮೂರು ಮಂದಿ ಮಾತ್ರ ಅದರಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುವವರು ವಿಶ್ವನಾಥ ಪೂಜಾರಿ. ಕಳೆದ 20 ವರ್ಷಗಳಲ್ಲಿ ಹುಲಿವೇಷಧಾರಿಗಳಿಗೆ ಅತೀ ಹೆಚ್ಚು ಪ್ರಮಾಣದಲ್ಲಿ ಪಿಲಿತ ಚಡ್ಡಿ ಹೊಲಿದವರು ಮಂಗಳೂರಿನ ಭವಂತಿ ಸ್ಟ್ರೀಟ್‌ನಲ್ಲಿರುವ ವಿಶ್ವನಾಥ ಪೂಜಾರಿ ಅವರು ಎನ್ನುವುದು ರೆಕಾರ್ಡ್‌ನಲ್ಲಿ ದಾಖಲಾಗಿರುವ ವಿಷ್ಯಾ.

ವಿಶ್ವನಾಥ ಪೂಜಾರಿ ಅವರು ತಯಾರಿಸುವ ಪಿಲಿ ಚಡ್ಡಿಯಲ್ಲಿ ಎರಡರಿಂದ ಮೂರು ವಿಧಗಳಿವೆ. ಮುಖ್ಯವಾಗಿ ಪಟ್ಟೆ, ಚಿಟ್ಟೆ, ಗ್ರೀನ್ ಬಣ್ಣದ ಚಡ್ಡಿ ಜತೆಗೆ ಕಪ್ಪು ಬಣ್ಣದ ಚಡ್ಡಿಗಳು ಸೇರಿದಂತೆ ಮತ್ತಷ್ಟೂ ಬಣ್ಣಗಳಲ್ಲಿ ಹುಲಿಗಳಿಗೆ ಚಡ್ಡಿ ಹೊಲಿದು ಕೊಡುತ್ತಾರೆ. ಮುಖ್ಯವಾಗಿ ಮುಂಬಯಿಯಿಂದ ಬರುವ ವೆಲ್‌ವೆಟ್ ಬಟ್ಟೆ ಹಾಗೂ ತಮಿಳುನಾಡಿನಿಂದ ಬರುವ ಕೋರಾ ಬಟ್ಟೆಗಳನ್ನು ಬಳಸಿಕೊಂಡು ಪಿಲಿ ಚಡ್ಡಿಗಳನ್ನು ಮಾಡಲಾಗುತ್ತದೆ.

ಆರಂಭದಲ್ಲಿ ಕೋರಾ ಬಟ್ಟೆಯ ಮೇಲೆ ವೆಲ್‌ಬಟ್ಟೆಯನ್ನು ಹಾಕಲಾಗುತ್ತದೆ. 300 ರೂ.ಗಳಲ್ಲಿ ಒಂದು ಪಿಲಿ ಚಡ್ಡಿ ಸಿದ್ಧವಾಗುತ್ತದೆ. ಹೆಚ್ಚಾಗಿ ಬಟ್ಟೆಯನ್ನು ವೇಷಧಾರಿಗಳು ತಂದರೆ ಅದನ್ನು ಆಳತೆಗೆ ತಕ್ಕಂತೆ ಕಟ್ ಮಾಡಿ ಚಡ್ಡಿಯನ್ನು ಸಿದ್ಧ ಮಾಡಲಾಗುತ್ತದೆ. ವಿಶ್ವನಾಥರು ಹೇಳುವಂತೆ ಈ ಹಿಂದೆ ಹುಲಿವೇಷಧಾರಿಗಳು ಕಡಿಮೆ ಪ್ರಮಾಣದಲ್ಲಿದ್ದರು. ಈಗ ವರ್ಷದಿಂದ ವರ್ಷಕ್ಕೆ ಏರುತ್ತಿದ್ದಾರೆ.

ಹುಲಿವೇಷಧಾರಿಗಳಿಗೆ ಚಡ್ಡಿ ಹೊಲಿದು ಕೊಡುವ ಟೈಲರ್‌ಗಳು ಸಿಗುತ್ತಿಲ್ಲ. ಮಂಗಳೂರಿನಲ್ಲಿ ಒಂದೆರಡು ಮಂದಿ ಇದ್ದಾರೆ. ನಾನು ಈಗ ನಾಲ್ಕೈದು ಮಂದಿಗೆ ಆಳತೆ ಕಟ್ ಮಾಡಿ ನೀಡುವ ಮೂಲಕ ಅವರಿಗೆ ತರಬೇತಿ ನೀಡುತ್ತಿದ್ದೇನೆ. ನಾನು ಈ ಕೆಲಸ ಬಿಡಬೇಕು ಎಂದರೂ ಕೂಡ ಹುಲಿವೇಷಧಾರಿಗಳು ನನ್ನನ್ನು ಬಿಡುತ್ತಿಲ್ಲ. ತುಂಬಾನೇ ಸೂಕ್ಷ್ಮ ಹಾಗೂ ತಾಳ್ಮೆಯ ಕೆಲಸವಿದು ಯಾರು ಕೂಡ ಇಂತಹ ಕೆಲಸಕ್ಕೆ ಮುಂದಾಗುತ್ತಿಲ್ಲ ಎನ್ನುತ್ತಾರೆ ಅವರು. ಒಟ್ಟಾರೆ ಪಿಲಿವೇಷಕ್ಕೆ ಚಡ್ಡಿಯ ಮೂಲಕ ವಿಶ್ವನಾಥ ಪೂಜಾರಿ ಅವರು ಹೊಸ ಮೆರಗು ನೀಡುವ ಕೆಲಸವಂತೂ ಮೆಚ್ಚುಗೆ ಪಡೆಯುತ್ತದೆ.

ನವದೇವತೆ- 4 ಕೂಷ್ಮಾಂಡಾ

ಒಂದು ಸಮಯದಲ್ಲಿ ದುರ್ಗಾಮಾತೆ ಸೂರ್ಯನ ಒಳಗೆ ವಾಸಿಸಲು ಆರಂಭಿಸುತ್ತಾಳೆ. ಆಗ ಸೂರ್ಯನಿಂದ ವಿಶ್ವಕ್ಕೆ ಶಕ್ತಿ ಬಿಡುಗಡೆಯಾಗುತ್ತದೆ. ಸೊರ್ಯನೊಳಗೆ ನೆಲೆಸುವಷ್ಟು ಪ್ರಖರವಾದ ದೇವತೆಯಾಕೆ. ಎಂಟು ಕೈಗಳಿರುವ, ಸಿಂಹದ ಮೇಲೆ ಸಂಚರಿಸುವ ಈಕೆ ತನ್ನ ಭಕ್ತರಿಗೆ ಸಿದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಾಳೆಂಬ ನಂಬಿಕೆಯಿದೆ. ಕೂಷ್ಮಾಂಡಾ ದೇವಿಯ ಪ್ರಸಿದ್ಧ ದೇವಸ್ಥಾನ ಉತ್ತರ ಪ್ರದೇಶದ ಕಾನ್ಪುರ ನಗರದ ಜಿಲ್ಲೆಯ ಘಟಾಂಪುರದಲ್ಲಿದೆ.

ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಕೂದಲು ದಾನ

ಮಂಗಳೂರು: ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಮರುಗಿದ ನಗರದ ವಿದ್ಯಾರ್ಥಿನಿಯೊಬ್ಬರು ತನ್ನ ಕೇಶಯನ್ನೇ ದಾನ ಮಾಡಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಬಿಎ ಎಲ್‌ಲ್‌ಬಿ ಕಲಿಯುತ್ತಿರುವ ಪವಿತ್ರಾ ಶೆಟ್ಟಿ ಎನ್ನುವ ವಿದ್ಯಾರ್ಥಿನಿ ಕ್ಯಾನ್ಸರ್ ಪೀಡಿತ ಮಕ್ಕಳ ಮುಖದಲ್ಲಿ ನಗು ಮೂಡಿಸುವುದಕ್ಕಾಗಿ ತನ್ನ ಕೂದಲು ದಾನ ಮಾಡಿದ್ದಾರೆ. ಮೂಲತಃ ಮಹಾರಾಷ್ಟ್ರದ ಕೊಲ್ಹಾಪುರದ ಪವಿತ್ರಾ ವ್ಯಾಸಂಗಕ್ಕಾಗಿ ನಗರದಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಅನಾರೋಗ್ಯದ ಚಿಕಿತ್ಸೆಗೆಂದು ಪವಿತ್ರಾ, ನಗರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು.

ಅಲ್ಲಿ ವೈದ್ಯರಿಗೆ ಕಾಯುತ್ತಿದ್ದ ವೇಳೆ ಕೀಮೋಥೆರಪಿಗೆ ಬಂದಿದ್ದ ಇಬ್ಬರು ಪುಟ್ಟ ಮಕ್ಕಳು ಪವಿತ್ರಾ ಅವರನ್ನು ನೋಡಿ ನಿಮ್ಮ ಕೂದಲು ಚೆನ್ನಾಗಿದೆ ಎಂದು ಮುಟ್ಟಿದ್ದಾರೆ. ಇದರಿಂದ ಪವಿತ್ರಾ ಅವರಿಗೆ ತುಂಬಾ ನೋವುಂಟಾಯಿತು, ಮಕ್ಕಳ ಮುಖದಲ್ಲಿದ್ದ ಅಸಹಾಯಕತೆಯ ನೋವಿನಿಂದ ಬೇಸರವಾದರೂ ಮಕ್ಕಳ ಮುಂದೆ ನಸುನಗುತ್ತಾ ವೈದ್ಯರನ್ನು ಭೇಟಿಯಾಗಿ ವಾಪಸ್ ಬಂದಿದ್ದರು.

ಬಳಿಕ ಕ್ಯಾನ್ಸರ್ ಸೇವಾ ಸಂಸ್ಥೆಯನ್ನು ಸಂಪರ್ಕಿಸಿ ಕೇಶದಾನ ಬಗ್ಗೆ ಚರ್ಚಿಸಿ ಕಳೆದ ವಾರ ತಮ್ಮ 18 ಇಂಚು ಉದ್ದದ ಕೂದಲನ್ನು ದಾನ ಮಾಡಿದರು. ಕೂದಲು ಮಹಿಳೆಯರ ಸೌಂದರ್ಯ ಕ್ಕೆ ಮುಖ್ಯ ಹೌದು, ಆದರೆ ಕ್ಯಾನ್ಸರ್ ಪೀಡಿತ ಮಕ್ಕಳ ಮೊಗದಲ್ಲಿ ನಗು ಮೂಡಿಸುವುದರಲ್ಲಿರುವ ಖುಷಿ ಬೇರಿಲ್ಲ. ತಾಯಿಯೊಂದಿಗೆ ಮಾತನಾಡಿ ಕೇಶದಾನ ಮಾಡಿದೆ. ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಬೇಕಾಗಿದೆ ಎಂದು ಪವಿತ್ರಾ ಹೇಳುತ್ತಾರೆ.