ಕಾವೂರಿನಲ್ಲಿರುವ ಬಿಜಿಎಸ್ ಶಿಕ್ಷಣ ಸಂಸ್ಥೆಯ ವಿಶೇಷ ಎಂದರೆ ಅಲ್ಲಿ ಶಿಕ್ಷಣ, ಮಾನವೀಯ ಮೌಲ್ಯಗಳನ್ನು ಕಲಿಸುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ. ಬದಲಾಗಿ ಇಡೀ ಬಿಜಿಎಸ್ ಶಿಕ್ಷಣ ಸಂಸ್ಥೆ ಪರಿಸರದ ಕುರಿತು ಕಾಳಜಿಯನ್ನು ಇಟ್ಟುಕೊಂಡಿದೆ. ಮರ, ಗಿಡಗಳ ಜತೆಗೆ ಪರಿಸರ ಪೂರಕ ವಾತಾವರಣ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಪೂರಕವಾಗಿದೆ.
ವಿಶೇಷವಾಗಿ ಬಿಜಿಎಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಹೇಳುವಂತೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಗಿಡ- ಮರ ಬೆಳೆಸುವ ಕಾರ್ಯ ಪ್ರತಿಯೊಬ್ಬರ ಮನೆಯಂಗಳದಿಂದ ಪ್ರಾರಂಭವಾಗಬೇಕು. ಪ್ರಕೃತಿಯು ದೇವರಿಗೆ ಸಮಾನ, ಇದನ್ನು ಕಾಪಾಡಿದರೆ ದೇವರ ಅನುಗ್ರಹ ಲಭಿಸುತ್ತದೆ. ಹೇಗೆ ಮರ, ನದಿ, ಪ್ರಾಣಿ ಪಕ್ಷಿಗಳು ಪರರಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುತ್ತವೆಯೋ ಹಾಗೆ ಮನುಷ್ಯನಾಗಿ ಹುಟ್ಟಿದ ಮೇಲೆ ಸ್ವಾರ್ಥವನ್ನು ಬಿಟ್ಟು ಮರಗಿಡಗಳನ್ನು ಬೆಳೆಸಬೇಕು.
ಜಗತ್ತಿನಾದ್ಯಂತ ಪರಿಸರ ಮಲೀನವಾಗುತ್ತಿದೆ. ಇದರ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಮಕ್ಕಳ ಹುಟ್ಟುಹಬ್ಬದ ದಿನದಂದು ಒಂದೊಂದು ಗಿಡ ನೆಟ್ಟು ಬೆಳಸಬೇಕು ಎನ್ನುವುದು ಅವರ ಮಾತು. ವಿಶೇಷವಾಗಿ ಪರಿಸರದ ದಿನಾಚರಣೆಯ ಅಂಗವಾಗಿ ಈಗಾಗಲೇ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಪರಿಸರ ಜಾಗೃತಿ, ಮಾಹಿತಿ ನೀಡುವ ಕಾರ‍್ಯ ಸಾಗುತ್ತಿದೆ.