ಹುಲಿವೇಷ ಎಂದಾಕ್ಷಣ ಪುಟ್ಟದಾದ ಚಡ್ಡಿ ಜತೆಗೆ ಮೈ ತುಂಬಾ ಹುಲಿ ಬಣ್ಣ ತಲೆಗೊಂದು ಹುಲಿಯ ಟೋಪಿ ಎಲ್ಲವೂ ಇದ್ದರೆ ಮಾತ್ರ ಹುಲಿವೇಷಕ್ಕೊಂದು ಖದರ್. ಅದರಲ್ಲೂ ಮುಖ್ಯವಾಗಿ ಹುಲಿ ವೇಷಧಾರಿಗಳು ಹಾಕುವ ಚಡ್ಡಿ ನಿಜಕ್ಕೂ ವಿಶೇಷ. ಕಾರಣ ಸರಿಯಾದ ಆಳತೆಯ ಚಡ್ಡಿ ಇಲ್ಲದೇ ಹೋದರೆ ಹುಲಿವೇಷಧಾರಿ ಪಾತ್ರದೊಳಗೆ ಇಣುಕಿ ಕುಣಿಯಲಾರ ಹುಲಿವೇಷದ ಘನತೆ ಹೆಚ್ಚಿಸಲಾರ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.
ಅಂದಹಾಗೆ ಕರಾವಳಿಯಲ್ಲಿ ಅದರಲ್ಲೂ ಮುಖ್ಯವಾಗಿ ಮಂಗಳೂರಿನಲ್ಲಿ ‘ಪಿಲಿತ ಚಡ್ಡಿ’ ಹೊಲಿಯುವ ಮಂದಿ ತೀರಾ ಕಡಿಮೆ. ಇದ್ದರೂ ಕೂಡ ಎರಡು ಮೂರು ಮಂದಿ ಮಾತ್ರ ಅದರಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುವವರು ವಿಶ್ವನಾಥ ಪೂಜಾರಿ. ಕಳೆದ 20 ವರ್ಷಗಳಲ್ಲಿ ಹುಲಿವೇಷಧಾರಿಗಳಿಗೆ ಅತೀ ಹೆಚ್ಚು ಪ್ರಮಾಣದಲ್ಲಿ ಪಿಲಿತ ಚಡ್ಡಿ ಹೊಲಿದವರು ಮಂಗಳೂರಿನ ಭವಂತಿ ಸ್ಟ್ರೀಟ್‌ನಲ್ಲಿರುವ ವಿಶ್ವನಾಥ ಪೂಜಾರಿ ಅವರು ಎನ್ನುವುದು ರೆಕಾರ್ಡ್‌ನಲ್ಲಿ ದಾಖಲಾಗಿರುವ ವಿಷ್ಯಾ.
ವಿಶ್ವನಾಥ ಪೂಜಾರಿ ಅವರು ತಯಾರಿಸುವ ಪಿಲಿ ಚಡ್ಡಿಯಲ್ಲಿ ಎರಡರಿಂದ ಮೂರು ವಿಧಗಳಿವೆ. ಮುಖ್ಯವಾಗಿ ಪಟ್ಟೆ, ಚಿಟ್ಟೆ, ಗ್ರೀನ್ ಬಣ್ಣದ ಚಡ್ಡಿ ಜತೆಗೆ ಕಪ್ಪು ಬಣ್ಣದ ಚಡ್ಡಿಗಳು ಸೇರಿದಂತೆ ಮತ್ತಷ್ಟೂ ಬಣ್ಣಗಳಲ್ಲಿ ಹುಲಿಗಳಿಗೆ ಚಡ್ಡಿ ಹೊಲಿದು ಕೊಡುತ್ತಾರೆ. ಮುಖ್ಯವಾಗಿ ಮುಂಬಯಿಯಿಂದ ಬರುವ ವೆಲ್‌ವೆಟ್ ಬಟ್ಟೆ ಹಾಗೂ ತಮಿಳುನಾಡಿನಿಂದ ಬರುವ ಕೋರಾ ಬಟ್ಟೆಗಳನ್ನು ಬಳಸಿಕೊಂಡು ಪಿಲಿ ಚಡ್ಡಿಗಳನ್ನು ಮಾಡಲಾಗುತ್ತದೆ.
ಆರಂಭದಲ್ಲಿ ಕೋರಾ ಬಟ್ಟೆಯ ಮೇಲೆ ವೆಲ್‌ಬಟ್ಟೆಯನ್ನು ಹಾಕಲಾಗುತ್ತದೆ. 300 ರೂ.ಗಳಲ್ಲಿ ಒಂದು ಪಿಲಿ ಚಡ್ಡಿ ಸಿದ್ಧವಾಗುತ್ತದೆ. ಹೆಚ್ಚಾಗಿ ಬಟ್ಟೆಯನ್ನು ವೇಷಧಾರಿಗಳು ತಂದರೆ ಅದನ್ನು ಆಳತೆಗೆ ತಕ್ಕಂತೆ ಕಟ್ ಮಾಡಿ ಚಡ್ಡಿಯನ್ನು ಸಿದ್ಧ ಮಾಡಲಾಗುತ್ತದೆ. ವಿಶ್ವನಾಥರು ಹೇಳುವಂತೆ ಈ ಹಿಂದೆ ಹುಲಿವೇಷಧಾರಿಗಳು ಕಡಿಮೆ ಪ್ರಮಾಣದಲ್ಲಿದ್ದರು. ಈಗ ವರ್ಷದಿಂದ ವರ್ಷಕ್ಕೆ ಏರುತ್ತಿದ್ದಾರೆ.
ಹುಲಿವೇಷಧಾರಿಗಳಿಗೆ ಚಡ್ಡಿ ಹೊಲಿದು ಕೊಡುವ ಟೈಲರ್‌ಗಳು ಸಿಗುತ್ತಿಲ್ಲ. ಮಂಗಳೂರಿನಲ್ಲಿ ಒಂದೆರಡು ಮಂದಿ ಇದ್ದಾರೆ. ನಾನು ಈಗ ನಾಲ್ಕೈದು ಮಂದಿಗೆ ಆಳತೆ ಕಟ್ ಮಾಡಿ ನೀಡುವ ಮೂಲಕ ಅವರಿಗೆ ತರಬೇತಿ ನೀಡುತ್ತಿದ್ದೇನೆ. ನಾನು ಈ ಕೆಲಸ ಬಿಡಬೇಕು ಎಂದರೂ ಕೂಡ ಹುಲಿವೇಷಧಾರಿಗಳು ನನ್ನನ್ನು ಬಿಡುತ್ತಿಲ್ಲ. ತುಂಬಾನೇ ಸೂಕ್ಷ್ಮ ಹಾಗೂ ತಾಳ್ಮೆಯ ಕೆಲಸವಿದು ಯಾರು ಕೂಡ ಇಂತಹ ಕೆಲಸಕ್ಕೆ ಮುಂದಾಗುತ್ತಿಲ್ಲ ಎನ್ನುತ್ತಾರೆ ಅವರು. ಒಟ್ಟಾರೆ ಪಿಲಿವೇಷಕ್ಕೆ ಚಡ್ಡಿಯ ಮೂಲಕ ವಿಶ್ವನಾಥ ಪೂಜಾರಿ ಅವರು ಹೊಸ ಮೆರಗು ನೀಡುವ ಕೆಲಸವಂತೂ ಮೆಚ್ಚುಗೆ ಪಡೆಯುತ್ತದೆ.